37. ಗೊಂದಲ- ಭವಾನಿ ದೇವಿಯ ಭಕ್ತರು ಗೊಂದಲದ ಪದ ಹಾಡಿಸುವರು
ಮಲೆನಾಡಿನಲ್ಲಿ ಹಾಗೂ ಉತ್ತರ ಕರ್ನಾಟಕದ ಕರೆನಾಡಲ್ಲಿ ಭವಾನಿ ದೇವಿಯ ಭಕ್ತರು ಗೊಂದಲದ ಪದ ಹಾಡಿಸುವ ವಾಡಿಕೆಯಿದೆ. ಅಂಬಾ ಭವಾನಿ ಪೂಜೆ ನಡೆದಾಗ ಇಡೀ ರಾತ್ರಿ ಗೊಂದಲ ನಡೆಸುವರು. ಗೊಂದಲದವರ ಪಕ್ಕವಾದ್ಯ ಚೌಡಿಕೆಯಂತಿರುತ್ತದೆ. ತಾಮ್ರದ ಕೊಳಗಕ್ಕೆ ನರದ ತಂತಿ ಕಟ್ಟಿ ಅದನ್ನು ಥೊಯ್ ಥೊಯ್ ಎಂದು ಮೀಟುತ್ತ ದೇವಿಯ ಸ್ತುತಿರೂಪವಾದ ಪದಗಳನ್ನು ಅವರು ಹಾಡುತ್ತಾರೆ.
ಗೊಂದಲ ಹಾಕುವವರು ಗಂಡಸರು. ಕಂಬಳಿ ಹೊದ್ದು ಕವಡೆ ಹಾರ ಹಾಕಿಕೊಂಡು, ಮುಖಕ್ಕೆ ಭಂಡಾರ ಕುಂಕುಮ ಹಚ್ಚಿಕೊಂಡು, ತಲೆಗೆ ಕರಡಿ ಚರ್ಮದ ಟೊಪ್ಪಿಗೆ ಹಾಕಿಕೊಂಡು ಸಿದ್ಧರಾಗುವ ಗೊಂದಲದವರ ವೇಷ ವಿಚಿತ್ರವಾಗಿರುತ್ತದೆ. ಗೊಂದಲ ಮರಾಠಿ ಭಜನೆಯನ್ನು ಹೋಲುತ್ತದೆ. ವಾದ್ಯದ ನಾದ, ಪದಗಳ ಗುಂಗು, ತಾಳ, ಕುಣಿತ- ಎಲ್ಲ ಸೇರಿದಾಗ ಹಾಡುವವರಿಗೂ ನೋಡುವವರಿಗೂ ಭಕ್ತಿಯ ಆವೇಶ ಬಂದಂತಾಗುತ್ತದೆ.
ಪ್ರಕಾರ....
38. ಭೂತನೃತ್ಯ- ತಾವು ನಂಬುವ ಭೂತಗಳ ತೃಪ್ತಿಗಾಗಿ ಕುಣಿತ
ಪಶ್ಚಿಮ ಘಟ್ಟದ ಮಲೆಕುಡಿಯರ ಪಂಗಡಗಳಲ್ಲಿ ವಿಶೇಷ ತರಹದ ಒಂದು ಭೂತನೃತ್ಯವಿದೆ. ಮೂವರು ಯುವಕರು ಖಡ್ಗಾಯುಧರಾಗಿ ಕಹಳೆ-ಕೊಂಬು ವಾದ್ಯಕ್ಕೆ ಹೊಂದಿದಂತೆ ಮೈಮರೆತು ಕುಣಿಯುತ್ತಾರೆ. ಈ ನೃತ್ಯ ಅನಾಗರಿಕರ ಯುದ್ಧನೃತ್ಯವನ್ನು ಹೋಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಗಳ ಕುಣಿತ ಹೆಸರಾದುದು. ಬೇರೆ ಬೇರೆ ಜನರು ಬೇರೆ ಬೇರೆ ಭೂತಗಳನ್ನು ನಂಬಿ ಪುಜಿಸುತ್ತಾರೆ. ವರ್ಷದ ನಾನಾಕಾಲಗಳಲ್ಲಿ ಈ ದೆವ್ವಗಳಿಗೆ ಜಾತ್ರೆ ನಡೆಯುತ್ತದೆ. ದೆವ್ವದ ಆವೇಶ ಪಡೆಯುವವರ ಜಾತಿಯೇ ಬೇರೊಂದಿದೆ. ಈ ನೃತ್ಯಗಳೆಲ್ಲ ಭಕ್ತಿಪ್ರಧಾನವಾದುವು. *ಭಕ್ತರು ತಾವು ನಂಬುವ ಭೂತಗಳ ತೃಪ್ತಿಗಾಗಿ ಅವನ್ನು ಆಹ್ವಾನಿಸಿ, ಉಣಿಸುವರು. ಭೂತದ ಆವೇಶ ಪಡೆಯುವ ಪುಜಾರಿ ವಿಶಿಷ್ಟ ವೇಷಭೂಷಣಗಳನ್ನು ಧರಿಸಿ ಬಣ್ಣ ಲೇಪಿಸಿಕೊಂಡು ವೀರಾವೇಶದಿಂದ ಕುಣಿದು ತನ್ನನ್ನೇ ಮರೆಯುತ್ತಾನೆ. ಆತನ ಬಾಯಿಂದ ಬರುವ ಮಾತುಗಳು ಭೂತದ ಮಾತುಗಳೆಂಬ ಭ್ರಾಂತಿ ಜನರಲ್ಲಿ ಮೂಡುತ್ತದೆ. ಬೇರೆ ಬೇರೆ ಭೂತಗಳಿಗೆ ತಕ್ಕ ನಡೆ, ನೃತ್ಯ, ವೇಷ, ಕಿರೀಟ, ಭೂಷಣಗಳಿರುತ್ತವೆ.
ಸಾಮಾನ್ಯವಾಗಿ ಭೂತಗಳ ಉಗ್ರಸ್ವರೂಪ ಆಯಾ ವೇಷದಲ್ಲಿ ವ್ಯಕ್ತವಾಗುತ್ತದೆ. ಇಂಥ ನೃತ್ಯ ಸಂಪ್ರದಾಯದಲ್ಲಿ ನಾಗನೃತ್ಯ ವಿಚಿತ್ರವಾದುದು. ವೈದ್ಯರೆಂಬ ಪುಜಾರಿಗಳ ಈ ನೃತ್ಯಕ್ಕೆ ನಾಗಮಂಡಲವೆನ್ನುತ್ತಾರೆ. ರಂಗಮಂಟಪದಲ್ಲಿ ಮಹಾಶೇಷನ ರಂಗೋಲಿಯನ್ನು ಹಾಕಿಸುತ್ತಾರೆ. ಪುಜಾರಿ ಕೆಂಪು ರೇಷ್ಮೆಯನ್ನುಟ್ಟು ಚದುರಿದ ಕೂದಲನ್ನು ಬಿಟ್ಟು ಸುಬ್ಬರಾಯನಾಗಿ ಬಂದು ನಿಲ್ಲುತ್ತಾನೆ. ಅವನ ಮುಂದೆ ಪ್ರಕೃತಿ ಪುರುಷ ಸೂಚಕವಾಗಿ ಅರ್ಧ ಗಂಡಸಿನ ಅರ್ಧ ಹೆಂಗಸಿನ ಉಡುಪನ್ನು ಧರಿಸಿದ ನೃತ್ಯಗಾರ ನಿಂತಿರುತ್ತಾನೆ.
ಹಿಮ್ಮೇಳದ ಗಾಯಕರು ದೇವರ ಲೀಲೆಗಳನ್ನು ಹಾಡುತ್ತಾರೆ. ಒಂದು ಡಮರು, ಒಂದು ಜೊತೆ ತಾಳಕ್ಕೆ ಅನುಗುಣವಾಗಿ ನಾಗದ ಆವೇಶ ತಂದುಕೊಂಡು ದೇಹಕ್ಕೆ ಮೂಳೆಗಳೇ ಇಲ್ಲವೆಂಬಂತೆ ನಾಗನರ್ತನ ನರ್ತಿಸುವಾಗ ಅದು ಪ್ರೇಕ್ಷಕರಿಗೆ ರೋಮಾಂಚನಕಾರಿಯಾಗಿ ಪರಿಣಮಿಸುತ್ತದೆ. ನಾಗಬ್ರಹ್ಮನೇ ಪ್ರತ್ಯಕ್ಷವಾಗಿ ಎದುರಿಗೆ ಬಂದಂತೆ ಭಾಸವಾಗುತ್ತದೆ.
end
****
39. ವೀರಗಾಸೆ- ಶೈವ ಸಂಪ್ರದಾಯದ ಧಾರ್ಮಿಕ ವೀರ ನೃತ್ಯ
ವೀರಗಾಸೆ ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ-ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.
ಪ್ರದರ್ಶನ
ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟುಗಳನ್ನು 'ಒಡಪು' ಅಥವಾ 'ಒಡಬು' ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ, ಅಹಹ ರುದ್ರಾ ಅಹಹಾ ದೇವಾ....... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ ಒಂದು ವರ್ಣನೆ ಹೀಗಿದೆ: "ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .........." ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.
ಪೌರಾಣಿಕ ಹಿನ್ನೆಲೆ
ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ: ತಂದೆಯ ಮಾತನ್ನು ಮೀರಿ ಪಾರ್ವತಿ ಶಿವನನ್ನು ವರಿಸುತ್ತಾಳೆ. ಇದೇ ಕಾರಣವಾಗಿ ಪಾರ್ವತಿಯ ತಂದೆ ದಕ್ಷಬ್ರಹ್ಮ ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ.
ಆಚರಣೆ
ಸಾಮಾನ್ಯವಾಗಿ ಜಾತ್ರೆ, ದೇವರ ಮೆರವಣಿಗೆ, ಹಬ್ಬ, ಹುಣ್ಣೆಮೆ, ವೀರಶೈವರ ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.ವೀರಶೈವರಲ್ಲಿ ವೀರಭದ್ರನನ್ನು ಮನೆ ದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು 'ಆಡಣಿ' ಎಂದು ಕರೆಯಲಾಗುತ್ತದೆ.ಇದು ಒಂದು ರೀತಿಯ ವೈಶಿಷ್ಠ್ಯ ಪೂರ್ಣವಾದ ಆಚರಣೆಯೇ ಆಗಿರುತ್ತದೆ. ಸಾಮಾನ್ಯವಾಗಿ ವೀರಭದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ದಿವಸ ಐದು ಜನ ಹೆಣ್ಣು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರನ್ನು ತೆಗೆದುಕೊಂಡು ನಡೆಯುತ್ತಿರುತ್ತಾರೆ. ಹಾಗೆ ಹೋಗುವಾಗ ವೀರಭದ್ರ ದೇವರ ಹಾಗೂ ಹಲವು ದೇವರುಗಳ ಒಡಬುಗಳನ್ನು ಹೇಳುತ್ತಾರೆ. ದೇವಸ್ಥಾನ ಮುಂಬಾಗದಲ್ಲಿ ಒಂದು ಅಡಿ ಆಳ. ಒಂದು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಗುಂಡಿಯನ್ನು ತೆಗೆದು ಅತ್ತಿ, ಆಲ, ಶ್ರೀಗಂಧ ಮರದ (ಈಗ ಗಂಧದ ಮರ ಇರುವುದಿಲ್ಲ) ಹತ್ತು ಹೊರೆ ಕಟ್ಟಿಗೆಗಳನ್ನು ಗುಂಡಿಗೆ ಹಾಕಿ ವೀರಗಾಸೆಯವರಿಂದ ಬೆಂಕಿಯನ್ನು ಹಚ್ಚಿಸುತ್ತಾರೆ, ಈ ಯಜ್ಞಕುಂಡದಲ್ಲಿ ಹಾಲುಕ್ಕಿಸಿ ಎಡೆಕೊಡುತ್ತಾರೆ. ಸ್ವಾಮಿಗಳು, ಪುರವಂತರು, ಮದುಮಕ್ಕಳು, ಮುತ್ತೈದೆಯರು ಯಜ್ಞಕುಂಡವನ್ನು ಹಾಯ‍್ದು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಕೊಂಬಿ ದೇವರು ಈ ಆಚರಣೆಯಲ್ಲಿ ಬಹುಮುಖ್ಯವಾದುದು.
ವೇಷಭೂಷಣ
ವೀರಗಾಸೆ ಕುಣಿತದವರ ವೇಷ ಭೂಷಣಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ, ಕನಿಷ್ಠ ಎಂಟು ಅಥವಾ ಅದಕ್ಕೆ ಮೇಲ್ಪಟ್ಟ ಸಮ ಸಂಖ್ಯೆಯ ಕಲಾವಿದರು ತಲೆಗೆ ಪೇಟ, ಕಿವಿಗೆ ಕಡಕು,ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷಬ್ರಹ್ಮನ ಶಿರ ಕಟ್ಟಿಕೊಳ್ಳುತ್ತಾರೆ. ಕೈಯಲ್ಲಿ ಕತ್ತಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಮೈಗೆ ಕಾವಿ ಜುಬ್ಬ ಮತ್ತು ಕಾವಿಯ ಕಸೆಗಳಿರುತ್ತವೆ. ವೀರಶೈವರಿಗೆ ಮಾತ್ರ ವಿಶಿಷ್ಟವಾದ ಈ ಕಲೆ ಅವರ ವೇಷಭೂಷಣದಿಂದಲೇ ಈ ಹೆಸರು ಪಡೆದುಕೊಂಡಿದೇ ಎನಿಸುತ್ತದೆ. (ವೀರ+ಕಾಸೆ=ವೀರಗಾಸೆಯಾಗಿರುತ್ತದೆ) ಕಾಸೆ ಕಟ್ಟಿದವರೇ ಈ ಕಲೆಯ ಪ್ರಮುಖ ಕಲಾವಿದರು. ವೀರಗಚ್ಚೆಯೇ, ವೀರಕಾಸೆಯಾಗಿ ನಂತರ ವೀರಗಾಸೆಯಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬರುವ ಈ ವೀರಗಾಸೆಯ ವೇಷಭೂಷಣಗಳು ಪ್ರಾದೇಶಿಕತೆಗೆ ತಕ್ಕಂತೆ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿವೆ. ಹಲವು ಕಡೆ ತಲೆಗೆ ಕೂದಲು ಮತ್ತು ರೇಷ್ಮೆದಾರದಿಂದ ತಯಾರಿಸಿದ ಚೌಲಿಯನ್ನು ಧರಿಸಲಾಗುತ್ತದೆ. ಕಾವಿ ಬಣ್ಣದ ಗರಿ ಅಂಚಿನ ಪೇಟವನ್ನು ತಲೆಗೆ ಸುತ್ತಿ, ಅದರ ಮುಂಭಾಗಕ್ಕೆ ಜಯ ಪಟ್ಟಿಯನ್ನು ಕಟ್ಟುತ್ತಾರೆ. ಸೊಂಟಕ್ಕೆ ಕಸೂತಿಗಳಿಂದ ಕೂಡಿದ ಕೆಂಪು ಬಣ್ಣದ ಜೊಲುಗಳಿದ್ದು, ಸೊಂಟದ ಎರಡು ಕಡೆ ಕಪ್ಪು ಬಣ್ಣದ ಚವರಿ ಕುಚ್ಚುಗಳಿರುತ್ತವೆ. ಸೊಂಟಕ್ಕೆ ಬಿಳಿ ಪಂಚೆಯನ್ನು ವೀರಗಚ್ಚೆಯಾಗಿ ತೊಡುತ್ತಾರೆ. ಕೆಂಪು ಬಣ್ಣದ ಪೈಜಾಮ, ಕಾಲಿಗೆ ಗೆಜ್ಜೆ, ಬಲಗೈಯಲ್ಲಿ ಮರದ ಖಡ್ಗ, ಕೊರಳಲ್ಲಿ ಬೆಳ್ಳಿಯ ಲಿಂಗದಕಾಯಿ (ಅಡ್ಗಾಯಿ) ಎಡಗೈಯಲ್ಲಿ ಕರವಸ್ತ್ರಗಳಿರುತ್ತವೆ. ಹಾಗೆಯೇ ಕೆಲವರ ಕೈಯಲ್ಲಿ ತ್ರಿಶೂಲಾಕಾರದ ಶಸ್ತ್ರಗಳಿರುವುದು ಉಂಟು. ಸಮಾಳೆ, ಮುಖವೀಣೆ, ಕಂಚಿನ ತಾಳಗಳು ಈ ಕಲೆಗೆ ಬೇಕಾದ ಮುಖ್ಯ ವಾದ್ಯ ಪರಿಕರಗಳು, ಕಾಸೆ ಕಟ್ಟುವವರು, ಎದೆಯ ಮೇಲೆ ಲಿಂಗಧಾರಣೆ ಮಾಡಬೇಕು. ಹೀಗೆ ವೇಷ-ಭೂಷಣವನ್ನು ಕಲಾವಿದರು ಧರಿಸಿಕೊಂಡು ಸಾಮೂಹಿಕ ನೃತ್ಯವನ್ನು ಅಟ್ಟಹಾಸದಲ್ಲಿ ಕೊಡಬಲ್ಲರು, ಹೀಗಾಗಿ ಈ ಕಲೆಯನ್ನು ಜನರು ಇದೊಂದು ಗಂಡು ಕಲೆ ಎಂದು ಗುರುತಿಸಿರುವರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಣ್ಣುಮಕ್ಕಳೂ ಈ ಕಲೆಯನ್ನು ಕರಗತಮಾಡಿಕೊಂಡು ಪ್ರದರ್ಶನ ನೀಡುವಲ್ಲಿ ಯಶಸ್ಸನ್ನು ಸಾಧಿಸಿರುವರು.
end
****
40. ಪೂಜಾ ಕುಣಿತ- ಇದು ಶಕ್ತಿ ದೇವತೆಗೆ ಸಂಬಂದಿಸಿದಂತಹ ಕುಣಿತ
ಪೂಜಾ ಕುಣಿತವು ಶಕ್ತಿ ದೇವತೆಗೆ ಸಂಬಂದಿಸಿದಂತಹ ಕುಣಿತವಾಗಿರುವುದು. ಬೆಂಗಳೂರು, ಮಂಡ್ಯ, ಕೋಲಾರ,ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತವಾಗಿರುವಂತಹುದು. ಆಯಾ ಗ್ರಾಮದೇವತೆಗಳ ಪ್ರತೀಕವಾಗಿರುವುದು. ಹಬ್ಬ, ಉತ್ಸವದ ದಿನಗಳಲ್ಲಿ ದೇವತೆಯು 'ಪೂಜೆ'ಯ ರೂಪದಲ್ಲಿ ಹೊರಬರುತ್ತಾಳೆ. ಬಿದಿರಿನ ತಳಿ (ತಟ್ಟಿ) ಮದ್ಯೆ ದೇವತೆಯ ಮುಖವಾಡಗಳನ್ನು ಇರಿಸಿಕೊಂಡು ಕುಣಿಯುವುದಕ್ಕೆ ಪೂಜಾ ಕುಣಿತವೆಂದು ಕರೆಯುವರು. ಸುಮಾರು ೫ ಅಡಿ ಉದ್ದ, ೪ ಅಡಿ ಅಗಲವಿರುವ ಬಿದಿರಿನ 'ಗಳು' ಮತ್ತು ಅದರ ಹಚ್ಚೆಗಳನ್ನು ಜೋಡಿಸಿ ಪೂಜೆಯನ್ನು ಸಿದ್ದಪಡಿಸುತ್ತಾರೆ. ಇದಕ್ಕೆ 'ತಳಿ'ಎಂದು ಕರೆಯುವರು. ಇದರ ಮದ್ಯೆ ದೇವರ ಮುಖವಾಡಗಳನ್ನು ಕಟ್ಟಿರುತ್ತಾರೆ. ಎರಡು ಕಡೆ ತಳಿಯ ಭಕ್ತರು ಹರಕೆ ಹೊತ್ತ ಸೀರೆಯನ್ನು ಇಳಿ ಬಿಟ್ಟು, ಮೆಲ್ತುದಿಗೆ ಹಿತ್ತಾಳೆ ಇಲ್ಲವೇ ಬೆಳ್ಳಿಯ ಕಳಸಗಳಿಂದ ಅಲಂಕಾರವನ್ನು ಮಾಡಿರುತ್ತಾರೆ. ಹರಕೆ ಹೊತ್ತ ಭಕ್ತರು ಸಲ್ಲಿಸಿರುವಂತಹ ಕಡಗ, ಕಾಲುಮುರಿ, ಹಸ್ತ, ಓಲೆ, ಡಾಬು ಮೊದಲಾದಂತಹ ಆಭರಣಗಳನ್ನು ಇಟ್ಟು ಅಲಂಕರಿಸಿ ಹೂವಿನ ಮಾಲೆಗಳನ್ನು ಹಾಕಿರುತ್ತಾರೆ. ತಳಿಯ ಹಿಂಭಾಗಕ್ಕೂ 'ಬೆನ್ ಬಟ್ಟೆ' ಹಾಕಿರುತ್ತಾರೆ. ಇದನ್ನು ಹೊರಲು ಅನುಕೂಲವಾಗುವಂತೆ ತಳಿಯ ಕೆಳಭಾಗದಲ್ಲಿ ಮದ್ಯೆ ಕಂಚು ಇಲ್ಲವೇ ಹಿತ್ತಾಳೆಯ ಒಂದು ಗಿಂಡಿಯನ್ನು ಸೇರಿಸಿ ಬಿಗಿದಿರುತ್ತಾರೆ. ತಲೆಯ ಮೇಲೆ ಇಟ್ಟಾಗ ಅಲುಗಾಡದಂತೆ ಸಹಕಾರಿಯಾಗುತ್ತದೆ.
ಪ್ರತಿಯೊಂದು ದೇವರ ಹೆಸರಿನಲ್ಲಿ ಗುಡ್ಡನ್ನು ನೇಮಕಗೊಂಡಿರುತ್ತಾನೆ. ಈತ ಪೂಜಾರಿ ಮಾತ್ರ. ಪೂಜೆಯನ್ನು ಹೊತ್ತು ಕುಣಿಯುವವರು ಬೇರೆಯವರು ಆಗಿರುತ್ತಾರೆ. ಹಬ್ಬ, ಉತ್ಸವ ಮಾತ್ರವಲ್ಲದೆ, ಭಕ್ತರು ಹರಕೆ ಮಾಡಿಕೊಂಡಾಗಲೂ ಪೂಜಾ ಕುಣಿತವನ್ನು ಪ್ರದರ್ಶನ ಮಾಡುವುದುಂಟು. ಹಳ್ಳಿಯ ಗುಡಿ ಮುಂಭಾಗ ಇಲ್ಲವೆ, ವಿಶಾಲವಾದ ಬಯಲಿನಲ್ಲಿ ಕುಣಿತವು ನಡೆಯುತ್ತದೆ. ಪೂಜೆಯನ್ನು ಹೊತ್ತು ಕುಣಿಯುವವರು ಬಿಳಿ ಅಂಗಿ ತೊಟ್ಟು ವೀರಗಾಸೆಯ ರೀತಿಯಲ್ಲಿ ಪಂಚೆ, ಕಾಲಿಗೆ ಗೆಜ್ಜೆ ಹಾಕಿರುತ್ತಾರೆ. ಹಣೆಗೆ ಕುಂಕುಮ ಇಟ್ಟುಕೊಂಡಿರುತ್ತಾರೆ. ತಮಟೆ, ನಗಾರಿ, ಡೋಲು ಬಡಿತಕ್ಕೆ ಅನುಗುಣವಾಗಿ ಮೂರೆಜ್ಜೆ, ನಾಲ್ಕೆಜ್ಜೆ, ಐದು ಹೆಜ್ಜೆ, ಆರು ಹೆಜ್ಜೆ, ಎಂಟು ಹೆಜ್ಜೆ, ಹದಿನಾಲ್ಕೆಜ್ಜೆ ಈ ರೀತಿಯಲ್ಲಿ ಮಟ್ಟಿಗೆ ಅನುಗುಣವಾಗಿ ಕುಣಿಯುತ್ತಾರೆ. ಕೆಲವರು ಸಾಮ್ಯಾನವಾಗಿ ಬೋರಲಿಟ್ಟ ಮಡಿಕೆಗಳ ಮೇಲೆ ಅವು ಒಡೆಯದಂತೆ ತಾಳಕ್ಕೆ ತಕ್ಕಂತೆ ಒಂದೊಂದೇ ಹೆಜ್ಜೆಯಲ್ಲಿ ನಡೆಯುವುದು, ಮುಖವನ್ನು ಒಂದೇ ಕಡೆ ಮಾಡಿಕೊಂಡು ತಲೆಯ ಮೇಲಿರುವ ಪೂಜೆಯನ್ನು ಮಾತ್ರ ಒಂದು ಸುತ್ತು ತಿರುಗುವಂತೆ ಮಾಡುವುದು ಬಹಳ ಸೊಗಸಾಗಿರುವುದು. ಕುಣಿತದ ಹಿನ್ನೆಲೆಯಾಗಿ ವಾದ್ಯಗಳ ಬಾರಿಸುವ ಜೊತೆಗೆ ಗ್ರಾಮದೇವತೆಗಳ ಹಾಡನ್ನು ಹೇಳುವರು.
ನಿಯಮ
ಪೂಜಾ ಕುಣಿತ ಪ್ರಾಥಮಿಕ ನಿಯಮಗಳೇನಂದರೆ, ಕರ್ನಾಟಕದಲ್ಲಿ ದೇವರು ಒಂದು ದೇಹದ ಮೇಲೆ ಪ್ರವೇಶಿಸಿ ವಿವಿಧ ಅವತಾರಗಳನ್ನು ತೋರ್ಪಡಿಸುವಂತಹದ್ದಾಗಿರುತ್ತದೆ. ಇದು ಧಾರ್ಮಿಕ ಮೆರವಣಿಗೆ ಮುಂತಾದ ಕಾರ್ಯಕ್ರಮಗಳಲ್ಲಿ ನಡೆಸಲಾಗುತ್ತದೆ. ಈ ಪೂಜಾ ಕುಣಿತವು ಆಡಂಬರದ ವ್ಯೆಭವವಾಗಿದೆ. ಹಬ್ಬ ಹರಿದಿನಗಳಲ್ಲಿ ಈ ನೃತ್ಯವನ್ನು ಜನ ಅತೀ ಮೆಚ್ಚುಗೆಯಿಂದ ಪ್ರಸ್ತುತಪಡಿಸುತ್ತಾರೆ. ಈ ಸೊಬಗು ನೋಡಲು ಬಲು ಚೆಂದ. ಪೂಜಾ ಕುಣಿತವು ತನ್ನ ಸೆಳೆತವನ್ನು ಇಡೀ ಕರ್ನಾಟಕದಲ್ಲಿ ವಿಜ್ರಂಭಣೆಯಿಂದ ಉಳಿಸಿಕೂಳ್ಳಬೇಕಾಗಿದೆ. ಈ ಕುಣಿತವನ್ನು ರೂಡಿಸಿಕೊಳ್ಳುವವರು ಮುಂಚೆ ಅನೇಕ ರೀತಿಯ ಅಭ್ಯಾಸಗಳನ್ನು ಮಾಡಿಕೊಂಡಿರಬೇಕು. ಹೊರತಾಗಿ ಒಂದು ರಾಜ್ಯದ ಏಳಿಗೆಗೆ ಮತ್ತು ಆ ರಾಜ್ಯದ ಧಾರ್ಮಿಕ ಸಂಪ್ರದಾಯಗಳಿಗೆ ಪೂಜಾಕುಣಿತ ಚ್ಯುತಿ ತರುವುದಿಲ್ಲ. ಕರ್ನಾಟಕದ ಪೂಜಾ ಕುಣಿತಕ್ಕೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಾಕೆಂದರೆ, ಅತ್ಯಂತ ವಿಜೃಂಭಣೆಯಿಂದ ನಡೆಯುವ ಈ ನೃತ್ಯವು ಜನರ ಮನಸ್ಸಿಗೆ ಆಹ್ಲಾದಕರವಾಗಿ ತಲುಪುತ್ತದೆ.
ಕುಣಿತಕ್ಕೆಬೇಕಾದ ಕೌಶಲ್ಯಗಳು
ಈ ಪೂಜಾಕುಣಿತಕ್ಕೆ ಅನೇಕ ರೀತಿಯ ಕೌಶಲ್ಯಗಳು ಬಹಳ ಮುಖ್ಯ. ಅದಾವುದೆಂದರೆ, ಒಂದು ದೇವರ ವಿಗ್ರಹವನ್ನು ತಲೆಯ ಮೇಲೆ ಇಟ್ಟುಕೊಂಡು ದೇಹವನ್ನು ಸಮತೋಲನ ಮಾಡುವಂತಹದ್ದು ತೀರ ಸುಲಭದ ವಿಷಯವೇನಲ್ಲ. ಅನೇಕ ಪರಿಣಿತರ ಸಹಾಯ ಮುಖ್ಯವೆನಿಸುತ್ತದೆ. ಪೂಜಾಕುಣಿತವನ್ನು ನೋಡಲು ಜನ ದೇಶ ವಿದೇಶಗಳಿಂದ ಬರುವುದೂ ಉಂಟು. ಕರ್ನಾಟಕದಲ್ಲಿ ಪೂಜಾಕುಣಿತ ಜನರ ಮನಸ್ಸನ್ನು ಗೆದ್ದಿದೆ. ಧಾರ್ಮಿಕ ಕ್ಷೇತ್ರದಲ್ಲಿ ಪೂಜಾಕುಣಿತ ತನ್ನದೇ ಆದ ವೈಶಿಷ್ಯತೆಗಳನ್ನು ಮೂಡಿಸಿದೆ. ಈ ಕುಣಿತ ಪ್ರದರ್ಶನವು ಹಲವು ರೀತಿಯಲ್ಲಿ ಜನರ ಮನಸ್ಸನ್ನು ಗೆದ್ದಿದೆ. ಸಂಸ್ಕಾರ ಎಂಬ ವಿಶಿಷ್ಡ ಕಲ್ಪನೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಪೂಜಾಕುಣಿತ ಎಂಬ ಕಲೆಯು ಸುಮಾರು ರೀತಿಯ ಭಂಗಿಗಳನ್ನು ಹೊಂದಿದೆ. ಇದೊಂದು ಧರ್ಮವು ಪ್ರಾಮುಖ್ಯತೆಗೆ ಒಲವು ನೀಡುತ್ತದೆ. ಹಾಗೆಯೇ ಕರ್ನಾಟಕದಲ್ಲಿ ಭರತನಾಟ್ಯ, ಡೊಳ್ಳುಕುಣಿತ ಹಾಗೂ ಇನ್ನಿತರ ಕಲೆಗಳ ಜೊತೆಗೆ ಪೂಜಾಕುಣಿತವು ವಿಭಿನ್ನತೆಯಿಂದ ಕೂಡಿದೆ. ಎಲ್ಲವು ತನ್ನದೇ ಆದ ನಿಯಮಾವಳಿಗಳನ್ನು ಹೊಂದಿದೆ. ಮಾನವ ಸಂಸ್ಕೃತಿಯನ್ನು ಜಾನಪದ ವಿದ್ವಾಂಸರು, ಶುದ್ದ ಜನಪದ ಸಂಸ್ಕೃತಿಗಳಾಗಿ ಮಾಡಿದ್ದಾರೆ. ನಗರಗಳು ಬೆಳವಣಿಗೆಯನ್ನು ಪಡೆಯುವ ಪೂರ್ವದಲ್ಲಿ ಬಹಳ ಮಂದಿ ಗ್ರಾಮಾಂತರ ಪ್ರದೇಶಗಳಲ್ಲಿ ಇದ್ದವರು. ಪ್ರಾಣಿ ಸಮುದಾಯದಿಂದ ಮನುಷ್ಯನನ್ನು ಬೇರ್ಪಡಿಸಿರುವುದು ಅವನ ಸಂಸ್ಕೃತಿ. ಇಲ್ಲದಿದ್ದರೆ ಪ್ರಾಣಿಗೂ ಮನುಷ್ಯನಿಗೂ ವ್ಯತ್ಯಾಸ ಇರುತ್ತಿರಲಿಲ್ಲ. ಕಲೆ, ಧರ್ಮ ವಿಜ್ನಾನಗಳು ಸಂಸ್ಕೃತಿಯ ಮುಖ್ಯ ಅಂಗಗಳು. ಇವು ಸಂಪೂರ್ಣವಾಗಿ ಮನುಷ್ಯನ ಬಾಳನ್ನು ಕಲ್ಪಿಸಿಕೊಳ್ಳುವುದಕ್ಕೂ ಆಗುವುದಿಲ್ಲ ಮನುಷ್ಯ ಕಲ್ಪಿಸಿಕೊಂಡ ಧ್ಯೆವಾರಾಧನೆಯ ಜೊತೆಯಲ್ಲಿ ಹಾಡು, ಕುಣಿತ, ಶಿಲ್ಪ, ಚಿತ್ರ ಮೊದಲಾದ ಕಲ್ಪನೆಗಳು ರೂಢಿಗೆ ಬಂದಿವೆ.
ದಕ್ಷಿಣ ಕರ್ನಾಟಕದಲ್ಲಿ ಈ ಕಲೆ ಜೀವಂತ
ಈ ಪೂಜಾ ಕುಣಿತ ದಕ್ಕಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಪೂಜಾಕುಣಿತ ಪೂಜಾ ಮೂಲತ: ಶಕ್ತಿ ದೇವತೆಗೆ ಸಂಬಂಧಿಸಿದ ಕುಣಿತ. ಪೂಜಾ ಕುಣಿತವು ನಂತರದ ದಿನಗಳಲ್ಲಿ ಮನರಂಜನೆ ಕಲೆಯಾಗಿ ವಿಕಸನಗೊಂಡಿದೆ. ಸಾಮಾನ್ಯವಾಗಿ ಪೂಜೆಗಳೆಲ್ಲವೂ ಹೆಣ್ಣು ದೇವರುಗಳಾಗಿರುತ್ತದೆ. ಅಪರೂಪಕ್ಕೆ ಗಂಡು ದೇವರ ಪೂಜೆಗಳುಂಟು. ಪೂಜೆಯಲ್ಲಿ ಎರಡು ವಿಧಗಳಿವೆ. ದೇವರ ಉತ್ಸವಮೂರ್ತಿಯನ್ನು ಒಂದು ಅಡ್ಡೆಗೆ ಬಿಗಿದು ನಾಲ್ಕಾರು ಜನ ಹೆಗಲಮೇಲೆ ಹೊತ್ತು ಮೆರೆಸುವುದು ಒಂದು ಬಗೆಯಾದರೆ, ತಳಿ ಅಥವ ತಟ್ಟಿಯಲ್ಲಿ ಅಲಂಕರಿಸಿದ ಪೂಜೆಯನ್ನು ಒಬ್ಬರೇ ಹೊತ್ತು ಕುಣಿಸುವುದು ಮತ್ತೊಂದು ಬಗೆ. ಬಿದಿರು ಅಥವಾ ಸೀಳಿದ ದಬ್ಬೆಗಳನ್ನು ಬಳಸಿ ಸುಮಾರು ಐದು ಅಡಿ ಉದ್ದ ನಾಲ್ಕು ಅಡಿ ಅಗಲದ ಚೌಕಾಕೃತಿಯ ಹಂದರವನ್ನು ಸಿದ್ದ ಪಡಿಸುತ್ತಾರೆ. ಈ ಹಂದರದ ಮದ್ಯ ಭಾಗಕ್ಕೆ ಮೆರೆದೇವರ ವಿಗ್ರಹವನ್ನಿರಿಸಲು ಅನುಕೂಲವಾಗುವಂತೆ ಪುಟ್ಟದಾದ ಮರದ ಹಲಗೆ ಒಂದನ್ನು ಜೋಡಿಸುತ್ತಾರೆ. ಹಲಗೆಯ ಮೇಲೆ ಕೂರಿಸುವ ಪುಟ್ಟ ಮೆರೆದೇವರ ವಿಗ್ರಹಕ್ಕೆ ಭಕ್ತಾದಿಗಳು ಹರಕೆ ಹೊತ್ತು ಸಲ್ಲಿಸಿದ ಆಭರಣಗಳನ್ನು ತೊಡಿಸುತ್ತಾರೆ.
ಪೂಜಾ ಕುಣಿತದ ವಿಧಗಳು
ತೊಟ್ಟಿಲು ಕುಣಿತ
ಎದುರು ಕುಣಿತ
ಹಾಯ್ಗುಣಿತ
ಹೆಜ್ಜೆ ಕುಣಿತ
ಗೆಜ್ಜೆ ಕುಣಿತ
end
****
41. ಕೀಲು ಕುದುರೆ- ಕುದುರೆಯ ಆಕಾರದಲ್ಲಿ ಸಿದ್ಧಪಡಿಸಿ ಕುಣಿತ
ಕೀಲು ಕುದುರೆಯು ಕರ್ನಾಟಕದ ಬಿಜಾಪುರ, ಬಳ್ಳಾರಿ, ಮಂಡ್ಯ, ಮೈಸೂರು, ಬೆಂಗಳೂರು, ಕೋಲಾರ, ಕೊಡಗು ಮತ್ತು ಇನ್ನು ಹಲವಾರು ಜಿಲ್ಲೆಗಳಲ್ಲಿ ಜನಪ್ರಿಯವಾದ ಕುಣಿತವಾಗಿದೆ. ಕೊಡಗಿನಲ್ಲಿ ಇದನ್ನು 'ಪೊಯ್ ಕುದುರೆ' ಎಂದು ಕರೆಯುವರು. 'ಕುದುರೆ ಕೋಲ' ಹಾಗೂ 'ಮರಗಾಲು ಕುಣಿತ'ಗಳು ಇದಕ್ಕೆ ಸಂವಾದಿಯಾದ ಪದವಾಗಿದೆ. ಜನಪದ ಕತೆಗಳ ಪ್ರಕಾರ ರಾಜಕುಮಾರನು ತನ್ನ ಪ್ರಿಯತಮೆಯನ್ನು ಗುಟ್ಟಾಗಿ ಸಂದರ್ಶಿಸುವಾಗ, ಇಲ್ಲವೆ ಆಕೆಯನ್ನು ಅಪಹರಿಸಿಕೊಂಡು ಹೋಗುವಾಗ ಕೀಲು ಕುದುರೆಯನ್ನು ಬಳಸುವ ಕಲ್ಪನೆಯು ಇದೆ. ಏಳು ಉಪ್ಪರಿಗೆ ಅರಮನೆ ಮೇಲೆ ಜೋಪಾನವಾಗಿರುವಂತಹ ರಾಜಕುಮಾರಿ ಸಾಮೀಪ್ಯವನ್ನು ಆಕೆಯ ಪ್ರಿಯತಮ ಅಂತರಿಕ್ಶ ಮಾರ್ಗವಾಗಿ ಬಂದು ಸೇರಲು ಕೀಲುಕುದುರೆಯನ್ನು ಉಪಯೋಗಿಸುತ್ತಾನಂತೆ!
ಕೀಲು ಕುದುರೆಯ ತಯಾರಿಸುವಿಕೆ
ಬಿದಿರಿನ ದಬ್ಬೆಗಳಿಂದ ರಚಿಸಿರುತ್ತಾರೆ. ಕುದುರೆಯ ಆಕಾರಕ್ಕೆ ತಕ್ಕಂತೆ ಹೊಟ್ಟೆ, ಎದೆ, ಮತ್ತು ಹಿಂಭಾಗವನ್ನು ಎಳೆಗಳಿಂದ ಹೆಣೆದು ರೂಪಿಸಿರುತ್ತಾರೆ. ತಲೆ ಮತ್ತು ಕತ್ತನ್ನು ಕಲಾವಿದರು ಇಲ್ಲವೇ ಆ ಊರಿನ ಗ್ರಾಮಸ್ತರು ಮಾಡಿಕೊಡುತ್ತಾರೆ. ಕುದುರೆಯ ತಲೆಯನ್ನು ಕಾಗದದ ಹಿಟ್ಟಿನಿಂದ ರಚಿಸಿರುತ್ತಾರೆ. ಇದು ಟೊಳ್ಳಾಗಿರುತ್ತದೆ. ಕುಣಿತಕ್ಕೆ ಸೂಕ್ತವಾದ ರೀತಿಯಲ್ಲಿ ಮರಗಾಲನ್ನು ಕಟ್ಟಿಕೊಂಡಿರುತ್ತಾರೆ. ಈ ಮರದ ಕಾಲನ್ನು ಎರಡು ಅಡಿ ಉದ್ದದ ಹಗುರು ಮರದಿಂದ ಮಾಡಿ ಅದರ ಮೇಲೆ ಕಲಾವಿದರ ಕಾಲುಗಳನ್ನು ಕೂರಿಸಲು ಅನುಕೂಲವಾಗುವಂತೆ 'ಕಂಡು' ಮಾಡಿರುತ್ತಾರೆ.'ಕೋಡಿನ್' ಭಾಗವನ್ನು ಕಾಲಿಗೆ ಮದ್ಯೆ ಒತ್ತದಂತೆ ಬಟ್ಟೆ ಇಟ್ಟು ಬಿಗಿಯಾಗಿ ಕಟ್ಟಿರುತ್ತಾರೆ. ಕುದುರೆಗೆ ಸೂಕ್ತವಾದ ಬಣ್ಣವನ್ನು ಹಾಕಲಾಗಿರುತ್ತದೆ.
ಕಲಾವಿದರ ವಸ್ತ್ರದ ಮಾದರಿ
ಕಲಾವಿದರು ಕುದುರೆಯ ಬೆನ್ನಿನಲ್ಲಿ ಸೇರಿಕೊಂಡು ತನ್ನೆರಡು ಹೆಗಲುಗಳಿಗೆ ಕುದುರೆಯ ದಬ್ಬೆಯ ದೇಹವನ್ನು ಬಿಗಿದುಕೊಳ್ಳುತ್ತಾನೆ. ಲಗಾಮು ಕೈಯಲ್ಲಿ ಹಿಡಿದು ಅದರ ತಲೆ ಬಾಲಗಳನ್ನು ಆಡಿಸುತ್ತ ಹಿಂದು ಮುಂದು ಮಾಡಿ ಕುಣಿಯುವಾಗ ಕುದುರೆಯೇ ಸಹಜ ಭಂಗಿಯಲ್ಲಿ ಕುಣಿದಂತೆ ಭಾಸವಾಗುತ್ತದೆ. ರಾಜ ರಾಣಿಯರಂತೆ ಕಿರೀಟ, ಭುಜಕೀರ್ತಿ, ಎದೆಹಾರ, ನಡುಬಿಲ್ಲೆ, ವೀರಗಾಸೆಗಳನ್ನು ತೊಟ್ಟಿರುತ್ತಾರೆ. ಮುಖಕ್ಕೆ ಬಣ್ಣ ಹಾಕಿಕೊಂಡು, ಕಾಲಿಗೆ ಗೆಜ್ಜೆಯನ್ನು ಕಟ್ಟಿ ಕುಣಿಯುತ್ತಾರೆ. ಸಾಮ್ಯಾನವಾಗಿ ಈ ಕುಣಿತದಲ್ಲಿ ಒಬ್ಬರು ಗಂಡು, ಒಬ್ಬರು ಹೆಣ್ಣು ವೇಶ ಹಾಕಿಕೊಂಡು ಜೊತೆಯಾಗಿ ಕುಣಿಯುವ ವಾಡಿಕೆಯು ಇರುವುದು. ಕೆಲವು ಕಡೆ ನವಿಲು ಆಕೃತಿಗಳ ಕಲಾವಿದರು ಸೇರಿಕೊಂಡು ಕುಣಿಯುವಂತಹ ಬಗೆಯು ಇರುವುದು.
ಕೀಲು ಕುದುರೆಯ ವಾದ್ಯಗಳು
ನಾಗಸ್ವರ, ಡೋಲು, ತಮಟೆ ಈ ವಾದ್ಯಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಕರಡಿ ಮಜಲನ್ನು ಬಳಸುವುದುಂಟು. ಇತ್ತೀಚೆಗೆ ಬ್ಯಾಂಡ್ ಸೆಟ್ ಉಪಯೋಗಿಸುವುದು ಕಂಡುಬರುವುದು. ಹಬ್ಬ, ಮದುವೆ, ಉತ್ಸವದ ದಿನಗಳಲ್ಲಿ, ಹಳ್ಳಿಯ ಬಯಲಲ್ಲಿ ಇಲ್ಲವೇ ಅಗಲವಾದ ಹಾಗೂ ನೇರವಾದ ಬೀದಿಯಲ್ಲಿ ಪ್ರದರ್ಶನ ಮಾಡುವರು.
end
****
42. ಪಟದ ಕುಣಿತ- ಹತ್ತು ಅಡಿ ಉದ್ದದ ಪಟದ ಬಿದಿರಿನ ಕೋಲಿಗೆ ರೇಷ್ಮೆ ಬಟ್ಟೆ ಸುತ್ತಿಹಿತ್ತಾಳೆ ಅಥವಾ ಬೆಳ್ಳಿಯ ಛತ್ರಿಯನ್ನು ಅಳವಡಿಸಿ ಕುಣಿತ
ಪಟದ ಕುಣಿತವು ವೈಷ್ಣವ ಸಂಪ್ರದಾಯದ ಕುಣಿತಗಳಲ್ಲಿ ಒಂದು. ಇದು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಂಡುಬರುವುದು. ಈ ಕುಣಿತವನ್ನು ಕಂಡಾಗ ಸುಗ್ಗಿಯ ಕುಣಿತದಂತಿದ್ದರೂ ಕಲಾವಿದರ ಕೈಯಲ್ಲಿ ಹಿಡಿದಂತಹ ಪಟಗಳಿಂದ ವಿಶಿಷ್ಷ ಕಲೆಯೆನಿಸಿರುವುದು. ಹತ್ತು, ಹದಿನೈದು ಅಡಿ ಉದ್ದದ ಪಟದ ಬಿದಿರಿನ ಕೋಲಿಗೆ ಬಣ್ಣದ ರೇಷ್ಮೆ ಜಾಲರಿ ಬಟ್ಟೆಯಿಂದ ಸುತ್ತಿ ಅಲಂಕಾರವನ್ನು ಮಾಡಿರುತ್ತಾರೆ. ಪಟದ ತುದಿಯಲ್ಲಿ ಹಿತ್ತಾಳೆ ಅಥವಾ ಬೆಳ್ಳಿಯ ಛತ್ರಿಯನ್ನು ಅಳವಡಿಸಿ ರುತ್ತಾರೆ. ಪಟದ ಕುಣಿತವು ಸಾಮಾನ್ಯವಾಗಿ ಒಂದೇ ಸಾಲಿನಲ್ಲಿ, ಎದುರು ಬದುರಿನ ಸಾಲಿನಲ್ಲಿ ಕುಣಿತವು ನಡೆಯುವುದನ್ನು ಕಾಣಬಹುದು. ಈ ಕುಣಿತವನ್ನು ಕಂಡಾಗ ವಿಜಯದ ಸಂಭ್ರಮದ ಸಂಕೇತವಾಗಿ ಗೋಚರಿಸುವುದು. ಕೆಲವು ಕಡೆ ಈ ಕುಣಿತವು ಭಾಗವಂತಿಕೆಯ ಜೊತೆಯಲ್ಲಿ ಪಟದ ಕುಣಿತ ನಡೆಯುವುದುಂಟು. ಮಂಡ್ಯ ಜಿಲ್ಲೆಯ ಸ್ಥಳಗಳಲ್ಲಿ ದೀವಳಿಗೆ ತಿಂಗಳಲ್ಲಿ ಮಾತ್ರ ಪಟವನ್ನು ಮುಟ್ಟುವ ಸಂಪ್ರದಾಯವಿದೆ ಎಂದು ಹೇಳುವುದು ತಿಳಿಯುತ್ತದೆ.
ಇತಿವೃತ್ತ
ಒಕ್ಕಲಿಗ ಸಂಪ್ರದಾಯದವರು ಈ ಪಟದ ಕುಣಿತವನ್ನು ಹಬ್ಬ,ಜಾತ್ರೆ, ಉತ್ಸವಗಳಲ್ಲಿ ಮಾಡುವರು. ನಗಾರಿಗಳ ಬಡಿತವು ಈ ಪಟದ ಕುಣಿತಕ್ಕೆ ಹಿನ್ನೆಲೆಯ ವಾದ್ಯವಾಗಿರುವುದು. ಬಿಳಿಯ ಕಾಸೆಪಂಚೆ, ಬಿಳಿಯ ನಿಲುವಂಗಿ, ಬಿಳಿಯ ರುಮಾಲು, ಸೊಂಟಕ್ಕೆ ಬಿಗಿದ ಬಣ್ಣದ ವಸ್ತ್ರ, ಕೊರಳಿಗೆ ಮಣಿಸರ, ಒಂದು ಕೈಯಲ್ಲಿ ಬಿಳಿಯ ಚೌಕ, ಕಾಲಿಗೆ ಗೆಜ್ಜೆಯನ್ನು ಕಲಾವಿದರು ಧರಿಸಿರುತ್ತಾರೆ.
ಹೆಗಲಿಗೆ ಅಡ್ಡವಾಗಿ ಹಾಕಿಕೊಂಡಂತಹ ಬಟ್ಟೆಯ ’ನವಾರ’ದಲ್ಲಿ ಸಿಕ್ಕಿಸಿದ ಪಟದ ಕೋಲನ್ನು ಬಲಗೈಯಲ್ಲಿ ಹಿಡಿದು ವಾದ್ಯದ ದಾಟಿಗೆ ತಕ್ಕಂತೆ ವಿವಿಧ ಭಂಗಿಯಲ್ಲಿ ಕುಣಿಯುವುದು ಕಂಡುಬರುವುದು. ಪಟದ ಕುಣಿತಕ್ಕೆ ಇಷ್ಟೆ ಕಲಾವಿದರೂ ಇರಬೇಕೆಂಬ ನಿಯಮವೇನೂ ಇಲ್ಲ . ಪಟದ ಕುಣಿತದ ಸಂದರ್ಭದಲ್ಲಿ ಪಟದ ಜವಳಿಗಳು ಬಾಗುವಾಗುವುದು.
ವಿಧಗಳು
ಪಟದ ಕುಣಿತದಲ್ಲಿ-
ಗೆಜ್ಜೆ ಕುಣಿತ,
ಎರಡ್ಹೆಜ್ಜೆ ಕುಣಿತ,
ಮೂರು ಹೆಜ್ಜೆ ಕುಣಿತ
ಮೊದಲಾದ ವಿಧಗಳಿರುವುದು.
end
****
43. ಲಂಬಾಣಿ ತಾಂಡ ನೃತ್ಯ- ಲಂಬಾಣಿ ಕುಣಿತ (ತೀಜೆರ್ ನಾಸ್) ದೇವರನ್ನು, ಸಮಾಜವನ್ನು ಕೊಂಡಾಡಿ ಮಾಡುವ ನೃತ್ಯ
ಗದಗ ಜಿಲ್ಲೆಯ ನಾಗಾವಿ ಲಂಬಾಣಿ ತಾಂಡಾ ಕರ್ನಾಟಕದ ಲಂಬಾಣಿ ತಾಂಡಾಗಳಲ್ಲಿ ಪ್ರಮುಖವಾದುದು. ತಮ್ಮ ಆಚಾರ, ವಿಚಾರ, ಸಂಸ್ಕøತಿ ಸಂಪ್ರದಾಯಗಳಿಂದ ಪ್ರಸಿದ್ಧರಾಗಿರುವ ಲಂಬಾಣಿಗಳು ಗದಗ ಜಿಲ್ಲೆಯ ನಾಗಾವಿ ಗ್ರಾಮದಲ್ಲಿ ನೆಲೆನಿಂತಿದ್ದಾರೆ.
ಹಿನ್ನೆಲೆ
ಲಂಬಾಣಿ ವೇಷಭೂಷಣ
ಲಂಬಾಣಿಗಳು ಮೂಲತಃ ರಾಜಸ್ತಾನದವರು. ರಾಜಸ್ತಾನದಲ್ಲಿದ್ದುಕೊಂಡೇ ಇತರ ರಾಜ್ಯಗಳೊಡನೆ ವ್ಯಾಪಾರ ಸಂಬಂಧ ವೃದ್ಧಿಸಿಕೊಂಡರು. ಬ್ರಿಟಿಷರ ಕಾಲದಲ್ಲಿ ಕಾರಣಾಂತರಗಳಿಂದ ಬೇರೆ ಬೇರೆ ಭಾಗಗಳಿಗೆ ಗುಳೆ ಹೋದರು. ಹಾಗೆ ವಲಸೆ ಬಂದವರಲ್ಲಿ ನಾಗಾವಿ ತಾಂಡಾದ ಲಂಬಾಣಿಗಳು ಪ್ರಮುಖರು. ನಾಗಾವಿ ಗ್ರಾಮ ಪವನ ವಿದ್ಯುತ್ ಘಟಕ ಹಾಗೂ ಕೃಷಿ ಪ್ರಧಾನ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಈ ಗ್ರಾಮದ ಸುತ್ತಲೂ ಲಂಬಾಣಿಗಳು ವಾಸವಾಗಿದ್ದರು. 1850ರಲ್ಲಿ ಸಮಾಜದ ಪ್ರಮುಖರ ನೇತೃತ್ವದಲ್ಲಿ ಲಂಬಾಣಿ ಜನರೆಲ್ಲ ಒಂದಾಗಿ ನಾಗಾವಿ ಗ್ರಾಮದಲ್ಲಿತಾಂಡಾ ಕಟ್ಟಿಕೊಂಡರು. ಮೊದಲು ಗುಡಿಸಲು, ಚಿಕ್ಕ ಹಟ್ಟಿಗಳಲ್ಲಿ ಇವರು ವಾಸವಾಗಿದ್ದರು. 1950 ರಲ್ಲಿ ಒಂದು ಗುಡಿಸಲಿನಲಲಿ ನಡೆದ ಆಕಸ್ಮಿಕ ಅಗ್ನಿ ಅವಘಡ ಇಡೀ ತಾಂಡಾವನ್ನು ಬಲಿ ತೆಗೆದುಕೊಂಡಿತ್ತು. ಈ ಘಟನೆಯಿಂದ ಪಾರಾದವರು ಚೇರಿಸಿಕೊಂಡು ಮತ್ತೆ ಅದೇ ಸ್ಥಳದಲ್ಲಿ ತಮ್ಮ ತಾಂಡಾ ರೂಪಿಸಿದರು. ಅಂದು ಅವರು ರೂಪುಗೊಳಿಸಿದ ನೀಲನಕ್ಷೆ ಇಂದು ವಿಸ್ತøತಗೊಂಡಿದೆ. ಗುಡಿಸಲುಗಳು, ಹಟ್ಟಿಗಳು ಮರೆಯಾಗಿ ಇದೀಗ ಆರ್‍ಸಿಸಿ ಮನೆಗಳು ತಲೆಯೆತ್ತಿವೆ. ಜನರ ಕೃಷಿ, ವ್ಯಾಪಾರ, ವ್ಯವಹಾರಗಳೂ ಕೂಡ ವಿಸ್ತಾರಗೊಂಡಿವೆ.
ಮುಖ್ಯ ಕಸುಬು
ಆಧುನಿಕತೆಗೆ ತಕ್ಕಂತೆ ನಾಗಾವಿ ತಾಂಡಾದ ಜನರ ಜೀವನ ಶೈಲಿ ಬದಲಾದರೂ ಆದಾಯ ಗಳಿಕೆಯ ವಿಧಾನ ಮಾತ್ರ ಪುರಾತನವಾದದ್ದು. ಕೃಷಿ ಇವರ ಮುಯ ಕಸುಬು. ನಾಗಾವಿಯ ಹೊರಪ್ರದೇಶಗಳು, ಗುಡ್ಡಗಳೇ ಇವರ ಸಾಗುವಳಿ ಭೂಮಿಗಳು. ಮೊದಲು ಕೃಷಿ ಕಾರ್ಮಿಕತನ, ವಸ್ತು ವಿನಿಮಯ ಸಾಗುವಳಿ ಪದ್ಧತಿಗಳು ರೂಢಿಯಲ್ಲಿದ್ದವು. ಜೋಳ, ಸಜ್ಜೆ, ಹೆಸರು, ನವಣೆ, ಶೇಂಗಾ ಇವರ ಮುಖ್ಯ ಬೆಳೆಗಳು.ಇತ್ತೀಚಿನ ತಲೆಮಾರಿನವರು ವಿದ್ಯಾಭ್ಯಾಸವನ್ನು ಪಡೆದು ಒಳ್ಳೆಯ ಉದ್ಯೋಗಗಳನ್ನು ಪಡೆಯುವ ಪ್ರಯತ್ನ ನಡೆಸಿದ್ದಾರೆ. ಇದರ ಜೊತೆಗೆ ತಾಂಡಾದ ಬಹುತೇಕ ಯುವಕರು ಗೋವಾದಲ್ಲಿ ಸ್ವಂತ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ.
ಧಾರ್ಮಿಕ ಆಚರಣೆಗಳು
ಹಿಂದೂ ಧಾರ್ಮಿಕ ಸಂಪ್ರದಾಯಗಳನ್ನೇ ಆಚರಿಸುತ್ತಿದ್ದು, ಇವುಗಳ ಜೊತೆಗೆ ಕೆಲವು ವಿಶಿಷ್ಟ ಆಚರಣೆಗಳನ್ನೂ ಹೊಂದಿದ್ದಾರೆ. ನವರಾತ್ರಿಯ ಸಮಯದಲ್ಲಿ 5 ಬುಟ್ಟಿಗಳಲ್ಲಿ ಗೋಧಿ ಸಸಿ ನೆಟ್ಟು ಖಂಡೇ ಪೂಜೆಯ ದಿನ ಅದನ್ನು ಮಹಿಳೆಯರು ತಲೆಯ ಮೇಲೆ ಹೊತ್ತು ನರ್ತಿಸುತ್ತಾರೆ. ಹೋಳಿ ಹುಣ್ಣಿಮೆಯ ಸಮಯದಲ್ಲಿ `ಲೇಂಗೀ ಗೀತೆ'ಗೆ ನೃತ್ಯ ಮಾಡಲಾಗುತ್ತದೆ. ಮಕ್ಕಳಿಲ್ಲದ ದಂಪತಿಯ ಮನೆ ಮುಂದೆ ಈ ನೃತ್ಯ ಮಾಡಿ ಓಕುಳಿ ಆಡಲಾಗುತ್ತದೆ. ಈ ಆಚರಣೆಯಿಂದ ಮಕ್ಕಳಿಲ್ಲದವರಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಅವರಲ್ಲಿದೆ. ಮಣ್ಣೆತ್ತಿನ ಅಮವಾಸ್ಯೆಯ ನಂತರ ಬರುವ ಮದಲ ಮಂಗಳವಾರದಂದು ಸಪ್ತಮಾತೃಕೆಯರ ಆಚರಣೆ ಮಾಡಲಾಗುತ್ತದೆ. ತಮ್ಮ ತಾಂಡಾವನ್ನು ಎಲ್ಲಾ ರೋಗರುಜಿನಗಳಿಂದ ಕಾಪಾಡುವಂತೆ ಪ್ರಾರ್ಥಿಸಿ ಸಪ್ತಮಾತೃಕೆಯರನ್ನು ಪೂಜಿಸಲಾಗುತ್ತದೆ. `ಕೋಳಿಹಬ್ಬ' ನಾಗಾವಿ ತಾಂಡಾದ ಪ್ರಸಿದ್ಧ ಹಬ್ಬ. ತಾಂಡಾದ ಹೊರಗೆ ಕೋಳಿಗಳನ್ನು ಬಲಿಕೊಟ್ಟು ದೇವರನ್ನು ತೃಪ್ತಿಪಡಿಸಲಾಗತ್ತದೆ. ಈ ಎಲ್ಲಾ ಹಬ್ಬಗಳನ್ನು ತಾಂಡಾದ ಜನರೆಲ್ಲ ಸೇರಿ ಒಟ್ಟಿಗೆ ಆಚರಿಸುತ್ತಾರೆ.
ಲಂಬಾಣಿ ಕುಣಿತ ಹಾಗೂ ವೇಷಭೂಷಣ
ಲಂಬಾಣಿ ಕುಣಿತ
ಇವರನ್ನು ಕರ್ನಾಟಕದಲ್ಲಿ `ಲಂಬಾಣಿ'ಗಳೆಂದು, ಮಹಾರಾಷ್ಟ್ರದಲ್ಲಿ `ಬಂಜಾರ'ರೆಂದು, ಆಂಧ್ರಪ್ರದೇಶದಲ್ಲಿ `ಲಂಬಡ್'ಗಳೆಂದು ಕರೆಯುತ್ತಾರೆ. ಅವರ ಮಾತೃಭಾಷೆ ಲಂಬಾಣಿ. ಅದು ಮರಾಠಿ, ಹಿಂದಿ ಹಾಗೂ ಪಟೇಗಾರ ಭಾಷೆಗಳ ಗುಂಪಿನಲ್ಲಿಯೇ ಬರುತ್ತದೆ. ರಾಜ್ಯ ಯಾವುದೇ ಇರಲಿ ಆದರೆ ಅವರ ಆಚರಣೆಗಳೆಲ್ಲ ಒಂದೇ ಎಂಬುದು ಮುಖ್ಯ ಅಂಶ. ಲಂಬಾಣಿ ಕುಣಿತಕ್ಕೆ "ತೀಜೆರ್ ನಾಸ್" ಎಂಬ ಹೆಸರಿದೆ. ದೇವರನ್ನು, ಸಮಾಜವನ್ನು ಕೊಂಡಾಡಿ ಮಾಡುವ ನೃತ್ಯವದು. ಸುಮಾರು 400ರಿಂದ 500 ಲಂಬಾಣಿ ಗೀತೆಗಳಿದ್ದು ಅದಕ್ಕೆ ಈ ಲಂಬಾಣಿ ನೃತ್ಯವನ್ನು ಮಾಡಲಾಗುತ್ತದೆ. ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಈ ನೃತ್ಯ ಕಟ್ಟುನಿಟ್ಟಿನ ಸಂಪ್ರದಾಯವೇ ಹೌದು. ನಗಾರಿ, ಕಂಚಿನ ಗಂಗಾಳ, ಹಲಗೆ, ತಾಳದಂತಹ ವಾದ್ಯಗಳನ್ನು ನೃತ್ಯದ ಸಮಯದಲ್ಲಿ ಬಳಸಲಾಗುತ್ತದೆ. ಲಂಬಾಣಿಗಳ ವೇಷಭೂಷಣವೂ ಕೂಡ ಅಷ್ಟೇ ವೈವಿಧ್ಯಮಯವಾದುದು. ಗಂಡಸರು ಕಡ್ಡಾಯವಾಗಿ ರುಮಾಲು ಧರಿಸಬೇಕು. ಇನ್ನು ಹೆಂಗಸರು ಪೇಠಿಯಾ(ಲಹಂಗಾ), ಸಾಠಿಯಾ(ದುಪ್ಪಟ್ಟಾ), ಕಾನ್ಸಳಿ(ಕುಪ್ಪಸ) ಧರಿಸುತ್ತಾರೆ. ಈ ಬಟ್ಟೆಗಳ ಮೇಲೆ ಕನ್ನಡಿ, ನಾಣ್ಯ, ಮುತ್ತು, ಮಣಿಗಳನ್ನು ಸೇರಿಸಿ ಕಸೂತಿ ಕೆಲಸ ಮಾಡಿರುತ್ತಾರೆ. ವಿವಾಹಿತ ಮಹಿಳೆಯರು ರಟ್ಟೆಗೆ ಬಳೆ, ಕೂದಲಿಗೆ ಘುಗ್ಗರಿ ಹಾಕಿರುತ್ತಾರೆ. ಇವನ್ನು ಮುತ್ತೈದೆತನದ ಕುರಹುಗಳೆಂದೇ ಪರಿಗಣಿಸಲಾಗುತ್ತದೆ. ಇನ್ನುಳಿದಂತೆ ಭುರಿಯಾ, ಸೂಡಿ, ಬಲಿಯಾ, ಬಳೆಗಳು, ಕೊರಳಿಗೆ ಬೆಳ್ಳಿಯ ಹಾಸಲಿ, ತರಹೇವಾರಿ ಮಣಿಸರಗಳು, ಕಾಲಿಗೆ ಕಡಗ, ಕಸ್ಯೆ, ಅಂಗೂತ್ಯಾ, ಚಟಿಗೆ, ವಿಸುವಾಗಳನ್ನು ತೊಡುತ್ತಾರೆ. ಲಂಬಾಣಿ ಮಹಿಳೆಯರು ತಮ್ಮ ಉಡುಗೆಗಳನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಒಂದು ಜೊತೆ ಬಟ್ಟೆ ತಯಾರಿಸಲು ಎರಡರಿಂದ ಮೂರು ತಿಂಗಳು ಹಿಡಿಯುತ್ತದೆ. ವಿದೇಶಿಗರಿಗೆ ಈ ಬಟ್ಟೆಗಳ ಮೇಲೆ ವಿಶೇಷ ವ್ಯಾಮೋಹ. ತಮ್ಮ ಪ್ರವಾಸದ ಸಮಯದಲ್ಲಿ ಲಂಬಾಣಿಗಳೆಲ್ಲಾದರೂ ಸಿಕ್ಕರೆ ಈ ಬಟ್ಟೆಗಳನ್ನು ಖರೀದಿಸುವ ವಿದೇಶಿಗರೂ ಇದ್ದಾರೆ.
44. ಹುತ್ತರಿ ಕುಣಿತ - ಹುತ್ತರಿ ಹಬ್ಬದ ಸಂದರ್ಭದಲ್ಲಿ ಕೊಡಗಿನ ಒಂದು ಜನಪದ ನೃತ್ಯ
ಹುತ್ತರಿ ಕುಣಿತ - ಹುತ್ತರಿ ಹಬ್ಬದ ಸಂದರ್ಭದಲ್ಲಿ ನಡೆಯುವ ಕೊಡಗಿನ ಒಂದು ಜನಪದ ನೃತ್ಯ. ಹಬ್ಬದ ಅಂಗವಾಗಿ ಊರಿನ ದೇವಸ್ಥಾನದ ಮಂದಿನಲ್ಲಿ (ಬಯಲಿನಲ್ಲಿ) ಒಂದು ವಾರ ಪರ್ಯಂತ ಕೋಲಾಟ ನಡೆಯುತ್ತದೆ. ಹಬ್ಬಕ್ಕೆ 4-5 ದಿನಗಳಿರುವ ಮೊದಲು ಗ್ರಾಮದ ಯುವಕರು, ಹಿರಿಯರು ಗ್ರಾಮದ ಮಂದಿನಲ್ಲಿ ಸೇರಿ ಕೋಲಾಟ ಅಭ್ಯಾಸ ಮಾಡುತ್ತಾರೆ. ಇದಕ್ಕೆ ಈದ್ ಎಂದು ಹೆಸರು. ಈದ್ ದಿನಗಳಲ್ಲಿ ಮತ್ತು ಹಬ್ಬದ ದಿನಗಳಲ್ಲಿ ಕೋಲಾಟದಲ್ಲಿ ಭಾಗವಹಿಸು ವವರು ಮತ್ತು ಕೋಲಾಟ ನೋಡಲು ಆಗಮಿಸುವವರು ದುಡಿ ಬಾರಿಸುವ ವಾದ್ಯಗಾರರೊಂದಿಗೆ ಮಂದಿಗೆ ಬರುತ್ತಾರೆ. ಅವರು ತಲುಪಿದಾಗ
ಬಾಳ್ ಬಾಳೆನ್ನಡ ಜಬ್ಬೂಮಿ ಬಾಳೋ
ಜಬ್ಬೂಮಿ ಮೀದಲೆ ಪೂಮಂದ್ ಬಾಳೋ
ಪೂಮಂದ್ ಮೀದಲ್ ದೇವಯ್ಯ ಬಾಳೋ
ದೇವಂಗೊತ್ತಾಚಾರ ಪಾಡಿಚೊ ನಂಗ
ಆಚಾರಪಾಡಿತ್ ಪಾಟ್ ಬೆಕ್ಕನ ಎಂಗ
(ಜೀವನ ಮಾಡು ಒಳ್ಳೆಯ ಭೂಮಿಯ ಮೇಲೆ, ಒಳ್ಳೆಯ ಭೂಮಿಯ ಮೇಲೆ ಚೆನ್ನಾಗಿ ಬಾಳು, ಒಳ್ಳೆಯ ಭೂಮಿಯ ಮೇಲೆ ದೇವಯ್ಯ ನೀನು ಬಾಳು, ದೇವರಿಗೆ ಒಪ್ಪುವಂಥ ಆಚಾರವಿಚಾರವನ್ನು ಹಾಡಿದೆವು ನಾವು. ಆಚಾರವನ್ನು ಹಾಡಿ ಪಾಡಿ ಹೇಳುವೆವು ನಾವು) ಎಂದು ಹಾಡಿ ವಾದ್ಯಗಾರರು ಹಾಡು ನಿಲ್ಲಿಸುತ್ತಾರೆ.
ಅನಂತರ ಅನೇಕ ಬಗೆಯ ಕೋಲಾಟ ಪ್ರದರ್ಶಿತವಾಗುತ್ತದೆ. ಬೊಳಕಾಟ, ಪಡೆಕಳಿ ಇತ್ಯಾದಿ ನೃತ್ಯಗಳೂ ನಡೆಯುತ್ತವೆ. ಹಾಡುಗಳ ರೀತಿ ಧಾಟಿಗಳು. ಹಾಡಿನೊಂದಿಗೆ ನೃತ್ಯದ ಹೆಜ್ಜೆಗಳನ್ನೂ ಜೊತೆಜೊತೆಯಾಗಿಡುವಂತೆ ಪ್ರೇರೇಪಿಸುತ್ತವೆ. ಹುತ್ತರಿ ಕೋಲಾಟದ ಹಾಡುಗಳು ಪೊಯಿಲೇ ಪೊಯಿಲೇ ಎಂಬ ಪಲ್ಲವಿಯಿಂದ ಪ್ರಾರಂಭವಾಗುತ್ತವೆ. ಈ ಹಾಡುಗಳಲ್ಲಿ ದೇವರ ಆಶೀರ್ವಾದವನ್ನು ಬೇಡುವ, ವಾದ್ಯದವರಿಗೂ ನೃತ್ಯದವರಿಗೂ ಸಲಹೆಗಳನ್ನು ಕೊಡುವ ವಿಚಾರಗಳೂ ಸರಸ ಮತ್ತು ಹಾಸ್ಯಪ್ರಸಂಗಗಳೂ ನಿರೂಪಿತವಾಗಿರುತ್ತವೆ.
ಪಡೆಕಳಿ ಅಥವಾ ಪರಿಯಕಳಿ ಯುದ್ಧಪರಂಪರೆಗೆ ಸೇರಿದ ನೃತ್ಯ. ಶೂರ ಯುವಕರು ಪೆಟ್ಟುಗಳನ್ನು ತಡೆಯುವ ಗುರಾಣಿಯಂಥ ಸಾಧನವನ್ನು ತಮ್ಮ ಎಡಗೈಯಲ್ಲಿ ಹಿಡಿದು, ಬಲಗೈಯಲ್ಲಿ ಉದ್ದವಾದ ಬೆತ್ತದ ಕೋಲನ್ನು ಹಿಡಿದು, ನಾನ್ ಬಾಳ್, ನೀನ್ ಬಾಳ್, ಏಡಕೂಡ ಇಳಿಯುವ ಜಂಙದಿ ಬಾಳ್. ಇಗ್ಯೆತಪ್ಪ ಬಾಳ್, ಬಯತೂರಪ್ಪ ಬಾಳ್, ಬಾಳ್ ಬಾಳರೇ ಬಾಳ್ ಎಂದು ಹೇಳುತ್ತ ಹೋರಾಟಕ್ಕೆ ಆಹ್ವಾನಿಸುತ್ತಾರೆ. ಈ ಆಟದಲ್ಲಿ ಪರಸ್ಪರ ಯಾರೂ ಕೂಡ ಮೊಣಕಾಲಿನ ಮೇಲೆ ಹೊಡೆಯಬಾರದು. ಆಟ ಒಂದು ಘಟ್ಟಕ್ಕೆ ಮುಟ್ಟಿದಾಗ (ಒಬ್ಬರಿಗಿಂತ ಮತ್ತೊಬ್ಬರ ಕೈ ಮೇಲಾಗಿದೆ ಎಂದು ತಿಳಿದಾಗ) ಆಟವನ್ನು ನಿಲ್ಲಿಸಿ, ಪರಸ್ಪರ ಅಪ್ಪಿಕೊಂಡು ಅಭಿನಂದಿಸಿ ಬೇರ್ಪಡುತ್ತಾರೆ.
ಹುತ್ತರಿ ಹಬ್ಬದ ಸಂಜೆ ಅಥವಾ ಕೋಲಾಟ ನಡೆಯುವಷ್ಟು ದಿನ ಪ್ರತಿ ರಾತ್ರಿ ಗ್ರಾಮದ ಮನೆ ಮನೆಗೆ ಹೋಗಿ ಮನೆಹಾಡು ಹೇಳುವ ಸಂಪ್ರದಾಯವೂ ಇದೆ. ಮನೆಯವರನ್ನು ಹಾಡಿ ಹೊಗಳಿದ ಅನಂತರ ಅವರಿಂದ ಕಾಣಿಕೆಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಒಂದು ಮನೆಯ ಹಾಡು :
ನಂದಾಟ್ ಈ ಮನೆ ನಂದಿ ಮಹದೇವ
ಪತ್ತಾಯ ಚಿತ್ತಾರಿ ತೊನೆಯತಿರಡೊ
ತೊಟ್ಟಿಲ್ ಪಾಕು ಞತಪ್ಪತಿರಡೊ
ಕೊಟ್ಟಿಲ್ ಕರಪತ್ರ ತಪ್ಪತಿರಡೊ
ಪೊಟ್ಟಿಲ್ ಬೀರಾಳಿ ನೀಂಗತಿರಡೊ
ಬೆಪ್ಪಲ್ ಪೊಂಬಣನಂಗತಿರಡೊ
(ಈ ಮನೆಯವರಿಗೆ ಮಂಗಳವನ್ನುಂಟುಮಾಡು ಮಹದೇವ. ಈ ಮನೆ ಎಲ್ಲ ದಿಕ್ಕಿನಲ್ಲೂ ಅಭಿವೃದ್ಧಿ ಹೊಂದಲಿ; ಇದರ ಉಗ್ರಾಣದಲ್ಲಿ ಸಣ್ಣಕ್ಕಿ ತುಂಬಿ ತುಳುಕಾಡುತಿರಲಿ, ಸದಾಕಾಲವೂ ತೊಟ್ಟಿಲಲ್ಲಿ ಹಾಲು ಹಸುಳೆ ನಗುತಿರಲಿ. ಕೊಟ್ಟಿಗೆಯಲಿ ಹಾಲು ಕರೆಯುವ ಹಸು ಇರಲಿ ಇತ್ಯಾದಿ).
others/other categories
ರಂಗದ ಕುಣಿತ
ಕರ್ನಾಟಕ ರಾಜ್ಯದ ಒಂದು ಜನಪದ ಕುಣಿತ. ಇದು ಮಂಡ್ಯ ಜಿಲ್ಲೆಯಲ್ಲಿ ವ್ಯಾಪಕವಾಗಿಯೂ ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿರಳವಾಗಿಯೂ ಕಂಡುಬರುತ್ತವೆ
ಹುಲಿಹೆಜ್ಜೆ ಕುಣಿತ
ಬಹಳ ಹಿಂದೆ ಸಾರಿಗೆ ವ್ಯವಸ್ಥೆ ಇರಲಿಲ್ಲ. ಮಹದೇಶ್ವರನ ಬೆಟ್ಟಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ, ದಟ್ಟ ಕಾಡಿನ ನಡುವೆ ಪ್ರಯಾಣ ಮಾಡಬೇಕಾಗಿತ್ತು. ಕ್ರೂರಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಗುಂಪು ಗುಂಪಾಗಿ ಹೋಗುವಾಗ ಪ್ರಯಾಣದ ಆಯಾಸಕ್ಕೊ, ಪ್ರಾಣಿಗಳ ಮೇಲಿನ ಭಯಕ್ಕೊ, ದೊಡ್ಡ ದೊಡ್ಡ ಹೆಜ್ಜೆ ಇಡುತ್ತಾ ಸಾಗುತ್ತಿದ್ದರಂತೆ.
ಸುಗ್ಗಿಯ ಕುಣಿತ
ಸುಗ್ಗಿಯ ಕುಣಿತ ಅನೇಕ ಕಡೆಗಳಲ್ಲಿ ಪ್ರಚಾರದಲ್ಲಿದೆ. ಅದರಲ್ಲಿ ರಂಗದ ಕುಣಿತ, ಮಾರಿ ಕುಣಿತ ಎಂಬ ವಿಧಾನಗಳಿವೆ. ಸುಗ್ಗಿಯ ಸಂತೋಷ ದುಡಿದ ರೈತನಿಗಲ್ಲದೆ ಇನ್ನಾರಿಗೆ ತಿಳಿದೀತು ? ಅವನ ಕಷ್ಟ, ಶ್ರಮ, ಜಾಗರಣೆ, ಮಳೆಯ ಹಂಬಲ, ಇವೆಲ್ಲ ಕಾಳಿನ ರಾಶಿಯನ್ನು ನೋಡುವಾಗ ಮಾಯವಾಗುತ್ತವೆ. ಹಾಡು, ಕುಣಿತಗಳಲ್ಲಿ ಅವನ ಸಂತೋಷ ಹೊರಹೊಮ್ಮುತ್ತದೆ. ಒಂದು ತಮಟೆಯ ತಾಳಕ್ಕೆ ನಾಲ್ಕಾರು ಜನ ಸಾಲಾಗಿ ನಿಂತು ಹೆಜ್ಜೆಹಾಕಲು ಆರಂಭಿಸುತ್ತಾರೆ. ಒಂದು ಕೈಯಲ್ಲಿ ಬಣ್ಣದ ಚೌಕ ಹಿಡಿದು ಇನ್ನೊಂದು ಕೈಯನ್ನು ಸೊಂಟದ ಮೇಲಿಟ್ಟು ಬಳುಕುತ್ತ, ಕುಪ್ಪಳಿಸುತ್ತ ಕುಣಿಯುತ್ತಾರೆ. ಹಳ್ಳಿಯ ಗುಡಿಯ ಹೊರಾಂಗಣದಲ್ಲಿ ಉರಿಹಾಕಿ ತಮಟೆ ಬಾರಿಸಿ ಕೇಕೆ ಹಾಕುತ್ತಿರುವಾಗ ಹಳ್ಳಿಯ ಜನರೆಲ್ಲ ಸೇರಿ ಇದರಲ್ಲಿ ಭಾಗವಹಿಸುತ್ತಾರೆ. ಹೀಗೆಯೇ ಅನೇಕ ಬಗೆಯ ನೃತ್ಯಗಳು ಕರ್ನಾಟಕದಲ್ಲಿ ಲಭ್ಯವಾಗುತ್ತವೆ.
ಕಂಗಿಲು ಕುಣಿತ ಮತ್ತ ಆಚರಣೆ : ಕಂಗಿಲು ಮಾರಿ ಓಡಿಸುವ ಆಶಯವನ್ನು ಹೊಂದಿರುವ ಒಂದು ಜನಪದ ಕುಣಿತ. ಇದು ತುಳುನಾಡಿನಲ್ಲಿ ಕಂಡುಬರುವ ಪ್ರದರ್ಶನ ಕಲೆ. ಕರಾವಳಿ ಕರ್ನಾಟಕದಲ್ಲಿ ಕಂಗಿಲು ಆಚರಣೆ ಹಾಗೂ ಕುಣಿತ ಪ್ರಕಾರವು ಒಂದು ನಿರ್ದಿಷ್ಟ ಜನವರ್ಗದವರುಗಳ ಆರಾಧನಾ ಪದ್ಧತಿಯಾಗಿದೆ.
ಲಂಬಾಣಿಯರ ಜನಪದ ನೃತ್ಯಗಳು
ಗುಡ್ಡಬೆಟ್ಟಗಳಲ್ಲಿ ವಾಸಿಸುವ ಲಂಬಾಣಿಯರ ಜನಪದ ನೃತ್ಯಗಳು ರಮಣೀಯವಾಗಿವೆ. ಕಸೂತಿ, ಮಣಿ, ಕನ್ನಡಿಗಳಿಂದ ಹೊಲೆದಿರುವ ಬಣ್ಣದ ಲಂಗ, ಕುಪ್ಪಸಗಳನ್ನು ತೊಟ್ಟುಕೊಂಡು, ಕಾಲುಬೆರಳುಗಳಿಂದ ತಲೆಯ ಕೂದಲಿನವರೆಗೂ ಆಭರಣಗಳನ್ನು ಧರಿಸಿ, ಕೈಗಳನ್ನು ಜೋತುಹಾಕಿ ಸಾಮೂಹಿಕವಾಗಿ ಕುಣಿಯುವಾಗ ಈ ನೃತ್ಯದ ಚಲನೆಗಳ ಲಾಲಿತ್ಯ ಎದ್ದುಕಾಣುತ್ತದೆ.
ಕೊಡಗಿನ ಜನಪದ ನೃತ್ಯಗಳು
ಕೊಡಗಿನ ಹುತ್ತರಿ ನೃತ್ಯ ಮತ್ತು ಬೊಳ್ಕಾಟ ನೃತ್ಯಗಳು ಜನಪ್ರಿಯವಾದುವು. ದೇವರ ಪುಜಾವಿಧಾನವಾದ ಈ ನೃತ್ಯವನ್ನು ಧಾರ್ಮಿಕ ಸಂದರ್ಭಗಳಲ್ಲಿ ಗಂಡಸರು ಮಾಡುತ್ತಾರೆ. ಸುಗ್ಗಿಯ ಕಾಲದಲ್ಲಿ, ಉತ್ಸವ, ಮದುವೆ ಸಮಾರಂಭಗಳಲ್ಲಿ ಕೊಡವರು ಕಪ್ಪು ಬಣ್ಣದ ಉದ್ದ ನಿಲುವಂಗಿ, ಧೋತಿ ಧರಿಸಿ, ತಲೆಗೆ ರುಮಾಲು ಸುತ್ತಿ, ಪೀಚ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಆನಂದದಿಂದ ನರ್ತಿಸುತ್ತಾರೆ. ಹಾಡುಗಾರಿಕೆಯ ಜೊತೆಗೆ ಚರ್ಮವಾದ್ಯ ಬಾರಿಸುವವರು ಮಧ್ಯದಲ್ಲಿ ನಿಂತು ತಾಳವನ್ನು ಕೊಡುತ್ತಿರಲು ಸುತ್ತಲೂ ನೃತ್ಯಗಾರರು ಡಮರು ನಾದಕ್ಕೆ ಚಾಮರಗಳನ್ನು ಬೀಸಿ ನರ್ತಿಸುವ ದೃಶ್ಯ ಮೋಹಕವಾದುದು.
ತುಳುನಾಡಿನ ಜನಪದ ನೃತ್ಯಗಳು
ತುಳುನಾಡಿನಲ್ಲಿ ಅನೇಕ ವಿಧದ ಜನಪದ ನೃತ್ಯಗಳು ರೂಢಿಯಲ್ಲಿವೆ. ಅಲ್ಲಿನ ಹರಿಜನರು ಲೇ ಲೇ ಲೇ ಲೋ ಎಂಬ ಪಲ್ಲವಿ ಹಾಡುತ್ತ ದುಡಿಯ ತಾಳಕ್ಕೆ ಕುಣಿಯುತ್ತಾರೆ. ಒಬ್ಬಾತ ದುಡಿಯನ್ನು ಬಾರಿಸುತ್ತಾನೆ. ಹೆಂಗಸರು ಬಳುಕಿ, ಬಾಗಿ, ಕೈ ಅಲುಗಿಸಿ ಹಿಂದೆ ಮುಂದೆ ಸರಿದು ಕೂಟ ನೃತ್ಯದಲ್ಲಿ ಭಾಗವಹಿಸುತ್ತಾರೆ. ಕುಂದಾಪುರ, ಉಡುಪಿಯ ಹರಿಜನರಲ್ಲಿ 5-6 ಯುವಕರು ಚಿಕ್ಕ ಕೋಲುಗಳನ್ನು ಹಿಡಿದು ಸರಳವಾಗಿ ಹೆಜ್ಜೆ ಹಾಕಿ ಕುಣಿಯುತ್ತಾರೆ.
ಹಿನ್ನೆಲೆ ಸಂಗೀತಕ್ಕೆ ಇಬ್ಬರು ಚರ್ಮವಾದ್ಯದವರು, ಒಬ್ಬ ಕೊಳಲು ಬಾರಿಸುವವನು ಇರುತ್ತಾರೆ. ಹೆಂಗಸೊಬ್ಬಳು ದೊಡ್ಡ ತಾಳಗಳನ್ನು ಬಾರಿಸುತ್ತಾಳೆ. ಸಂಗೀತದ ಲಯ ಹೆಚ್ಚಾದಂತೆ ನೃತ್ಯಗಾರರ ಆವೇಶ ಹೆಚ್ಚಾಗುತ್ತದೆ. ಪುತ್ತೂರು ತಾಲ್ಲೂಕಿನ ಮೇರಾ ಜನರಲ್ಲಿ ಹೆಂಗಸರು ಮಾಡುವ ಕೂಟನೃತ್ಯಗಳಿವೆ. ಇಬ್ಬರು ಗಂಡಸರು ದುಡಿಬಡಿದಂತೆ ಬಿಳಿ ಸೀರೆ ಉಟ್ಟ ಹೆಂಗಸರು ಕೈಚಪ್ಪಾಳೆಗಳಿಂದ ಹಿಂದೆಮುಂದೆ ಬಳುಕಿ ಬಾಗಿ ವಾದ್ಯಗಾರರ ಸುತ್ತಲೂ ಕುಣಿಯುತ್ತಾರೆ.
ಅವರ ಸರಳ ಲಲಿತ ಚಲನೆಗಳಲ್ಲಿ ಸ್ನೇಹಪರವಶತೆಯ ಆನಂದ ಉಕ್ಕಿ ಹರಿಯುತ್ತದೆ. ರಾಣಿಯಾರ್ ಪಂಗಡದವರು ಭಕ್ತಿ ಶಕ್ತಿಗಳಿಂದ ಕೋಲಾಟ ಮಾಡುವಾಗ ಅವರ ಕೋಲುಗಳೂ ಕಾಲುಗೆಜ್ಜೆಗಳೂ ಮಾತನಾಡುವಂತೆ ಭಾಸವಾಗುತ್ತದೆ. ಕಾರ್ಕಳ ತಾಲ್ಲೂಕಿನ ಕುಡುಬಿಯರಲ್ಲಿ ಸುಂದರ ಕೂಟ ನೃತ್ಯವಿದೆ. ಗಂಡಸರು ಬಿಳಿ ಬಟ್ಟೆಯುಟ್ಟು ಕೆಂಪು ರುಮಾಲು ಸುತ್ತಿ, ಕೈಯಲ್ಲಿ ಮಣ್ಣಿನ ವಾದ್ಯ ಹಿಡಿದು ಎರಡು ಸಾಲಾಗಿ ನಿಂತು ಹಾಡುತ್ತ ಸಂಭಾಷಣೆ ನಡೆಸುತ್ತಾರೆ.
ಮದುವೆಯ ಹಾಡುಗಳು
ಮದುವೆಯ ಸಂದರ್ಭದಲ್ಲಿನ ಎಣ್ಣೆಯೊತ್ತುವ ಹಾಡು, ಉರುಟಣೆ ಹಾಡು, ಸೋಬಾನೆ ಪದ, ಬೀಗಿತ್ತಿ ಹಾಸ್ಯದ ಪದಗಳು, ಆರತಿ ಪದಗಳು ಹೇರಳವಾಗಿ ಬಳಕೆಯಲ್ಲಿವೆ. ಇವಕ್ಕೆ ಒಂದೊಂದು ಉದಾಹರಣೆ ನೋಡಬಹುದು.
ಎಣ್ಣೆಯೊತ್ತುವ ಪದ
ಎಣ್ಣೆಯನ್ನೊತ್ತಿದರು-ರಘುಕುಲತಿಲಕಗೆ
ದಶರಥ ಸುತನಿಗೆ-ಧರ್ಮ ಪರಿಪಾಲನಿಗೆ
ನಿರ್ಮಲರೂಪ ಶ್ರೀರಾಮಚಂದ್ರನಿಗೆ
ಉರುಟಣೆ ಹಾಡು
ಉರುಟಾಣೆ ಹೇಳೊ ಹರಿಯೆ ಉರಗಶಯನದೊರೆಯೆ
ನಂದಗೋಪಿ ಕುಮಾರ, ನತ ಜಗದುದ್ಧಾರ
ನಂದನಂದನ ಸಿಂಧುಶಯನ ನೀಬಾರೊ
ಬಂದಿರುವೆನು ಮಂಟಪದೊಳು-ಮರದಿಂದಲಿ
ಸೋಬಾನೆ ಪದ
ಬಾಳೆಯಾ ಮರದ ಕೆಳಗೆ ಬಾವನ ಮಗಳು ಮೈನೆರೆದಳು
ನಿಂಬಿಯ ಮರದ ಕೆಳಗೆ ರಂಭೆ ಮೈನೆರೆದಳು
ಸೋಬಾನವೇ ಸೋಬಾನವೇ.
ತಿಂಗಳುಮಾವನ ಪದ
ಹುಣ್ಣಿಮೆ ಹಬ್ಬದ ರಾತ್ರಿ ಬೆಳುದಿಂಗಳ ಆನಂದದಲ್ಲಿ ಕೂಡಿಕೊಂಡು ಹೆಣ್ಣುಮಕ್ಕಳು ಕೈ ಕೈ ಹಿಡಿದುಕೊಂಡು ಗರಗರನೆ ಸುತ್ತು ತಿರುಗುತ್ತ ಈ ಪದಗಳನ್ನು ಹಾಡುವರು.
ತಿಂಗಳು ತಿಂಗಳಿಗೆ ತಿಂಗಳು ಮಾವನ ಪೂಜೆ
ಗರುಡನ ಪೂಜೆ ಗನಪೂಜೆ-ಕೋಲು ಮಲ್ಲಿಗೆ ಕೋಲೆ
ತಿಂಗಳು ಮಾವನಿಗೆ ನಿನ ಪೂಜೆ ಗಂಗೆ ದಡದಾಗೆ
ತಿಂಗಳು ಮಾವನ ತಂಗೇರೇಳು ಮಂದಿ
ಬಂಗಾರದೋಲೆ ಬಳೆಯೋರು-ಕೋಲು ಮಲ್ಲಿಗೆ ಕೋಲೆ
ಹೊಂದೇರ್ ಹಕ್ಕಿ ಬಂದಾವಕ್ಕ ಗರಗರನಾಡಿ ನಿಂದಾವಕ್ಕ
ಕಾಮಾನೂರಾ ಹೊಳೆಯಿಂದಾ ಕುಂತು ನಿಂತು ಬರುತ್ತಿದ್ದ
ಕಾಮನ್ ಯಾರೇ ತಡೆದೋರು
ಭೀಮನ್ ಯಾರೇ ತಡೆದೋರು
ಬಾರಯ್ಯ ಬೆಳುದಿಂಗಳೇ ನಮ್ಮೂರ ಹಾಲಿನಂಥ ಬೆಳುದಿಂಗಳೇ.
ಮಾನವಮಿ ಪದ
ನವರಾತ್ರಿ ನಾಡಹಬ್ಬದಲ್ಲಿ ಮಕ್ಕಳು ಹರಕೆ ಪದ ಹಾಡುವ ಸಂಪ್ರದಾಯ ಹಿಂದಿನಿಂದ ಬಂದಿದೆ. ಚೌಪದಿಯಲ್ಲಿ ನಾಲ್ಕು ಸಾಲು ಬರುತ್ತದೆ.
ಆಶ್ವೀಜ ಶುದ್ಧ ಮಾನವಮಿ ಬರಲೆಂದು
ಲೇಸಾಗಿ ಹರಿಸಿದೆವು ಬಾಲಕರು ಬಂದು
ಈಶ ನಿಮಗಧಿಕ ಸೌಖ್ಯ ಕೊಡಲೆಂದು
ಶಾಶ್ವತದಿ ಹರಸಿದೆವು ನಾವಿಂದು ಬಂದು.
ಮಳೆ ಹೊಯ್ದು ಬೆಳೆಬೆಳೆದು ಇಳೆ ತಣಿಯಲೆಂದು
ತಿಳಿಗೊಳಗಳುಕ್ಕಿ ಗೋಗಳು ಕರೆಯಲೆಂದು
ನಳಿನಮುಖಿಯರು ಸುಪುತ್ರರ ಪಡೆಯಲೆಂದು
ಇಳೆಯೊಳಗೆ ಹರಿಸಿದೆವು ಬಾಲಕರು ಬಂದು
ಅಂತೂ ಲಾವಣಿ, ತ್ರಿಪದಿಗಳು ಹಳ್ಳಿಯ ಹಾಡಿನಲ್ಲಿ ಮಹತ್ತ್ವದ ಸ್ಥಾನ ಪಡೆದಿವೆ. ಹೀಗೆಯೆ ಸಾಂಗತ್ಯ ಮತ್ತು ರಗಳೆಗಳಿಗೂ ಜನಪದ ಸಂಗೀತವೇ ಮೂಲವಾಗಿದ್ದಿರಬಹುದು. ಅಲ್ಲದೆ ಶ್ರಮಜೀವಿಗಳ ಹಾಡುಗಳು, ಹಂತಿ ಪದ, ಡೊಳ್ಳು ಪದ, ಮದುವೆ ಹಾಡು, ಜುಂಜಪ್ಪನ ಪದ, ಸುವ್ವಿ ಪದ, ಲಾಲಿ ಪದ, ಉತ್ತರೆ ಮಳೆ ಹಾಡು, ಕೊರವಂಜಿ ಹಾಡು, ಕಣಿ ಹೇಳೋ ಹಾಡು, ಹಚ್ಚೆ ಕಟ್ಟಿಸಿಕೊಳ್ಳುವ ಹಾಡು- ಈ ಮೊದಲಾದವೂ ಇವೆ. ಜಾತ್ರೆ ಮತ್ತು ಪರಿಷೆಯ ಮಹಾಮೇಳಗಳಲ್ಲಿ ಕೊಂಬು, ಕಹಳೆ, ಉರುಮೆ, ಡೊಳ್ಳು, ಮದ್ದಲೆ, ಕರಡೆ ವಾದ್ಯಗಳ ಸೊಲ್ಲು ಮುಗಿಲು ಮುಟ್ಟುತ್ತದೆ. ಅವಕ್ಕೆ ಅನುಸರಿಸಿ ಜನ ಹಾಡುತ್ತಾರೆ, ಕುಣಿಯುತ್ತಾರೆ ; ನಂದಿಕೋಲು ಕುಣಿಸುತ್ತಾರೆ; ಮನಬಂದಂತೆ ಪದ ಹಾಡುತ್ತಾರೆ ; ಜಯಕಾರ ಮೊಳಗಿಸುತ್ತಾರೆ.
ಕಥನ ಗೀತಗಳು
ನಾಡಿನ ವೀರಾಗ್ರಣಿಗಳ ಹಾಗೂ ವೀರಮಾತೆಯರ ಮಹಾತ್ಯಾಗಜೀವಿಗಳ ಚರಿತೆಯನ್ನು ಸುಲಭವಾಗಿ ಹಾಡುವಂತೆ ರಚನೆ ಮಾಡಿದ್ದಾರೆ. ಅದರಲ್ಲಿ ಕೆರೆಗೆ ಹಾರ ಎಂಬ ನೀಳ್ಗವನದಲ್ಲಿ ಕರುಣರಸ ಮಡುಗಟ್ಟಿ ನಿಂತಿದೆ. ಒಂದು ಹಳ್ಳಿಯ ಮಲ್ಲನಗೌಡರು ಕೆರೆ ಕಟ್ಟಿಸಿದಾಗ ನೀರು ನಿಲ್ಲಲಿಲ್ಲ. ಬಲಿ ಕೊಡಬೇಕೆಂದು ಜೋಯಿಸರು ಸಲಹೆ ಕೊಟ್ಟರು. ಕಿರಿಯ ಸೊಸೆ ಭಾಗೀರಥಿ ಮುಂದೆ ಬಂದು ಕೆರೆಗೆ ಆಹಾರವಾಗುತ್ತಾಳೆ. ಗಂಗೆ ಒಡಮೂಡುತ್ತಾಳೆ. ಅಂಥ ಹೆಂಡತಿಯನ್ನು ಕಳೆದುಕೊಂಡ ಗಂಡನೂ ಪ್ರಾಣಾರ್ಪಣೆ ಮಾಡುತ್ತಾನೆ.
ಸಾವಿರ ಕೊಟ್ಟರೂ ಸಿಗಲಾರದ ಸತಿ ನೀನು
ಬಿಟ್ಟನು ಕಣ್ಣೀರ, ಹಾರಿದ ಕೆರೆ ನೀರಿನಾಗ.
ಈ ಪದ ಖಂಡಜಾತಿ ಚಾಪು ತಾಳದಲ್ಲಿದೆ. ಏಕನಾದದ ಜೊತೆಯಲ್ಲಿ ಹಾಡಿದರೆ ಬಹು ಸ್ವಾರಸ್ಯವಾಗಿರುತ್ತದೆ. ಕೆರೆಗೆ ಹಾರದಂತೆಯೇ ಗೋವಿನ ಕಥೆ ಮತ್ತೊಂದು ಅಮರವಾದ ಪದ-
ಧರಣಿ ಮಂಡಲ ಮಧ್ಯದೊಳಗೆ, ಮೆರೆಯುತಿಹ ಕರ್ನಾಟದೇಶದಿ
ಇರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು
ಕೊಟ್ಟ ಭಾಷೆಗೆ ತಪ್ಪಲಾರೆನು | ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ | ಕಟ್ಟಕಡೆಗಿದು ಖಂಡಿತ
ಸತ್ಯವೆಂಬುದು ತಾಯಿ ತಂದೆ, ಸತ್ಯವೆಂಬುದು ಬಂಧುಬಳಗವು
ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಜಗದೀಶನು.
ಪುಣ್ಯಕೋಟಿ ಎಂಬ ಗೋವು ಹುಲಿರಾಯನಿಗೆ ಭಾಷೆ ಕೊಟ್ಟು, ಅದರಂತೆ ನಡೆದು ಹುಲಿರಾಯನನ್ನು ಸೋಲಿಸಿದ ಕಥೆಯಿದು.
ದಾಸರಪದ ಮತ್ತು ವಚನಗಳೂ ಜನಪ್ರಿಯವಾಗಿ ನಾಡಿನಲ್ಲೆಲ್ಲ ಹಬ್ಬಿವೆ ; ವೇದ, ಪುರಾಣಗಳ ತಿರುಳನ್ನು ತಿಳಿಗನ್ನಡದಲ್ಲಿವು ಸಾರಿವೆ. ಹಾಡಿಕೊಳ್ಳಲು ಯೋಗ್ಯವಾಗಿವೆ. ಇವುಗಳ ಹಾಡುಗಾರಿಕೆಯೇ ಒಂದು ಬಗೆಯ ಸಂಪ್ರದಾಯವಾಗಿದೆ. ರಾಗ, ಭಾವ, ಲಯ ಪ್ರಧಾನವಾದ ಇವಕ್ಕೆ ಸಂಗೀತದಲ್ಲೂ ಸಾಹಿತ್ಯದಲ್ಲೂ ಹಿರಿಯ ಸ್ಥಾನವೇರ್ಪಟ್ಟಿದೆ.
ಆವ ಕುಲವಾದರೇನು ಆವನಾದರೇನು
ಆತ್ಮಭಾವ ಅರಿತಮೇಲೆ ಮನುಜಾ|
ತಲ್ಲಣಿಸದಿರು ಕಂಡ್ಯ ತಾಳು ಮನವೆ
ಎಲ್ಲರನು ಸಲಹುವನು ಇದಕ್ಕೆ ಸಂಶಯ ಬೇಡ|
ದಯವಿಲ್ಲದ ಧರ್ಮ ಆವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳಲ್ಲಿ
ದಯವೇ ಧರ್ಮದ ಮೂಲವಯ್ಯ||
ಹಾಸ್ಯದ ಪದ
ಅಸಂಬದ್ಧ ಪ್ರಲಾಪವಾದಾಗ ನಗು ಸಹಜ. ಹೀಗೆ ನಗು ಉಕ್ಕಿಸುವ ಹಾಡುಗಳಿಗೆ ಜನಪದ ಸಾಹಿತ್ಯದಲ್ಲಿ ಕೊರತೆಯೇನಿಲ್ಲ.
ಸುಳ್ಳೂ ನಮ್ಮಲಿಲ್ಲ ಸುಳ್ಳೇ ನಮ್ಮನಿ ದೇವರು
ಗೊದ್ದ ಗೋಡೆ ಹಾಕಿದ್ ಕಂಡೆ ; ಬೆಕ್ಕು ರೊಟ್ಟಿ ತಟ್ಟಿದ್ ಕಂಡೆ ;
ಮೆಣಸಿಕಾಯಿ ಕಂಡೆ ನಕ್ಕ ಮನಸ್ ತೋರಾವಾ
ಕೋಳಿ ಕೋಟೆ ಗೆದ್ದದ್ ಕಂಡೆ ; ಹಕ್ಕಿ ಕಂಬ್ಳಿ ನೇಯೋದ್ ಕಂಡೆ ;
ಅವರೆ ಕಂಡೇನಕ್ಕ ಆನೇಗಾತ್ರವಾ ;
ಮತ್ತೆ ಪಾರಿವಾಣ ಕೋರಿ ಹುಳು ಚಿಕ್ಕಾಟನ ಮೇಲ್
ಸಬರ್ಹಾಕಿ ಮಲೆನಾಡು ಮಲದೇಶ ತಿರುಗಿ ತಾನು ತಂದು ಕೊಟ್ಟಿತು ಸಣ್ಣಕ್ಕಿ
ಹಾಳಿಹದ್ದು ಬಂದು ಹೋಳಿಗಿ ಮಾಡಿತು ಬಹಳ ಬಹಳ ಹೂರಣಹಾಕಿ
ಮೀನು ಬಂದು ಖರುಬಾನ ಬಸ್ತಿತು. ನೊಣ ಬಂದು ಅರಸಿಣ ಹಚ್ಚಿತು.
ಬೆಕ್ಕು ಬಾಸಿಂಗ ಕಟ್ಟಿತು; ಕಟ್ಟಿರುವೆ ಕಂಕಣ ಕಟ್ಟಿತು.
ಇರುವೆ ಬಂದು ನೀರ ಬಡಿಸಿತು; ಇಲಿ ಬಂದು ಎಲೆ ಅಡಿಕೆ ಕೊಟ್ಟಿತು.
ಮತ್ತೊಂದು ಪದದಲ್ಲಿ ಕಿವುಡನ ಕೂಡೆ ಸರಸದ ಒಂದು ಪ್ರಸಂಗ ಬರುತ್ತದೆ :
ಚಪ್ಪರದೊಳಗೊಬ್ಬ ಕೆಪ್ಪನ ನೋಡಿ ತಪ್ಪದೆ ಮಾತಾಡಿದ ದನಿಗೂಡಿ
ನಾಮಾಂಕಿತವೇನಯ್ಯ, ನಿಮಗೆ ? ಸೋಮವಾರ ಒಪ್ಪತ್ತಯ್ಯ ನಮಗೆ.
ಅವಧಾನಂಗಳಿಗಾವೂರಾಯ್ತು ? ದವಸವು ನಮ್ಮಲಿ ಬಹು ಬೆಲೆಯಾಯ್ತು.
ಹೆಂಡರುಮಕ್ಕಳು ಎಲ್ಲಿದ್ದಾರೆ ? ಪಂಡಿತರಾಸ್ತಿಗೆ ಕ್ರಯಗಳೆ ಬೇರೆ.
ಎಣ್ಣೂರಿಗೆ ತರಿಸಲೆ ನಿಮಗೆ ? ಕನ್ನಿಕೆ ನೆರೆದೊ ಚಿನ್ನದ ಹಾಗೆ.
ಚೆನ್ನಾಗಿದೆಯ ಹುಣಸೆ ಸಾರು ? ಚನ್ನಯ್ಯನ ಅಂಗಡೀಲ್ ಕಡಿಮೆ ಸೇರು.
ಬಾಳೆಹಣ್ಣಿನ ಸೀಕರಣೆ ಬೇಕೆ ? ಸೂಳೇರಾಟ ಇನ್ಯಾತಕೆ ನಮಗೆ ?
ಕೆಪ್ಪರ ಕೂಟ ಮಾತೇ ಹೀಗೆ !
ಮಕ್ಕಳ ಹಾಡು
ಶಿಶುಸಾಹಿತ್ಯದ ರಚನೆ ಬಹಳ ಕಷ್ಟ. ಹಾಡೂ ಅಷ್ಟೆ. ಸಣ್ಣದಾಗಿರಬೇಕು. ಕಂಠಪಾಠ ಮಾಡುವಂತಿರಬೇಕು, ಮಹಾಪ್ರಾಣಾಕ್ಷರಗಳು, ಒತ್ತಕ್ಷರಗಳು ಹೆಚ್ಚಿಗಿರಬಾರದು. ಅವರು ಆನಂದಪಟ್ಟು ಕುಣಿಯುತ್ತ ಹಾಡುವಂತಿರಬೇಕು. ಇದರಲ್ಲೂ ಹಳ್ಳಿಯವರು ಹಿಂದೆ ಬಿದ್ದಿಲ್ಲ.
ಶರಣು ಶರಣುವಯ್ಯ ಗಣನಾಯ್ಕ
ನಮ್ಮ ಕರುಣದಿಂದಲೆ ಕಾಯೊ ಗಣನಾಯ್ಕ ;
ಎಳ್ಳುಂಡೆ ಜೇನುತುಪ್ಪ ಗಣನಾಯ್ಕ
ನಮ್ಗೆ ವಿದ್ಯಾವ ಕಲಿಸಯ್ಯ ಗಣನಾಯ್ಕ
ಎಂಬ ಗಣಪತಿಯ ಕೋಲಾಟದ ಪದವನ್ನು ಯಾವ ಮಗುತಾನೆ ಹಾಡಲು ಒಲ್ಲೆ ಅನ್ನುತ್ತದೆ !
ಈ ಪ್ರಾಸಕ್ಕೆ (ನರ್ಸರಿ ರೈಮ್) ಸಮನಾದ ಮತ್ತೊಂದು ಪದ : ಇದು ಕುಟ್ಟುವಾಗ ಹೇಳುವ ಹಾಡಾದರೂ ಶಿಶುಗಳಿಗೆ ಪ್ರಿಯವಾಗಿದೆ.
ಎಂದೂ ಬಾರದ ಮಳೆ ಬಂದಿತಣ್ಣ.
ಮಳೆ ಬಂದಿದ್ದ ಕಂಡು ಚಿಗುರೊಡೆದಿದ್ದಿತಣ್ಣ.
ಚಿಗುರೊಡೆದಿದ್ದ ಕಂಡು ಬೀರಪ್ಪ ಕುರಿಗಳ ಬಿಟ್ಟನಣ್ಣ.
ಬೀರಪ್ಪ ಕುರಿಗಳ ಬಿಟ್ಟಿದ್ದ ಕಂಡು ಮಾಳವ್ವ ಹಿಟ್ಟಿನ್ ಮುದ್ದೆ ಹೊತ್ತಳಣ್ಣ ;
ಮಾಳವ್ವ ಹಿಟ್ಟಿನ್ ಮುದ್ದೆ ಹೊತ್ತಿದ್ದ ಕಂಡು ಬೀರಪ್ಪ ಉಣ್ಣಲಿಕೆ ಕುಂತನಣ್ಣ ;
ಬೀರಪ್ಪ ಉಣ್ಣಲಿಕೆ ಕುಂತಿದ್ದ ಕಂಡು ತೋಳಪ್ಪ ಕುರಿಗಳ ಕದ್ದನಣ್ಣ.
ತೋಳಪ್ಪ ಕುರಿಗಳ ಕದ್ದಿದ್ದ ಕಂಡು ಬೀರಪ್ಪ ದೊಣ್ಣೆ ತೆಕ್ಕೊಂಡು ಹೊಂಟನಣ್ಣ ;
ಬೀರಪ್ಪ ದೊಣ್ಣೆ ತಕೊಂಡು ಹೊಂಟಿದ್ದ ಕಂಡು ನಾಯಪ್ಪ ಹಿಟ್ಟಿನ್ ಮುದ್ದೆ ತಿಂದನಣ್ಣ ;
ನಾಯಪ್ಪ ಹಿಟ್ಟಿನ್ ಮುದ್ದೆ ತಿಂದಿದ್ದ ಕಂಡು ಬೀರಪ್ಪ ಬಿಕ್ಕಿ ಬಿಕ್ಕಿ ಅತ್ತನಣ್ಣ ;
ಬೀರಪ್ಪ ಬಿಕ್ಕಿ ಬಿಕ್ಕಿ ಅತ್ತಿದ್ದ ಕಂಡು ಮಾಳವ್ವ ಕಿಸಿಕಿಸಿ ನಕ್ಕಳಣ್ಣ !
ಮತ್ತೊಂದು ನವಿಲಿನ ಹಾಡು ; ಕೂಲಿಗಾರರು ಭಾರ ಎತ್ತುವಾಗ ಇದನ್ನು ಹಾಡುತ್ತಾರೆ, ಮಕ್ಕಳಿಗೆ ಚೆನ್ನಾಗಿದೆ.
ನವ್ವಾಲೆ ಬಂದಿತ್ತು ನವ್ವಾಲೆ ಸೋಗೇರಿ ಬಣ್ಣದ ನವ್ವಾಲೆ
ಬರಗನೆ ಮೇಯದು ನವ್ವಾಲೆ ಬರಗದ್ಹೂವನೆ ಮೇಯದು ನವ್ವಾಲೆ ||
ಬರಗದ ಒಡಿಕಾಡು ಬೆನ್ಹತ್ತಿ ಬರುವಾಗ ಬರಬರನೆ ಓಡಿತು ನವ್ವಾಲೆ
ರಾಗೀಯ ಮೇಯೊದು ನವ್ವಾಲೆ ರಾಗಿ ಹೂವನೆ ಮೇಯೋದು ನವ್ವಾಲೆ
ರಾಗೀಯ ಒಡಿಕಾಡು ಬೆನ್ಹತ್ತಿಬರುವಾಗ ರಾಗವ ಪಾಡಿತು ನವ್ವಾಲೆ
ಬತ್ತವ ಮೇಯದು ನವ್ವಾಲೆ ಬತ್ತದ್ಹೂವನೆ ಮೇಯದು ನವ್ವಾಲೆ
ಬತ್ತವ ಒಡಿಕಾಡು ಬೆನ್ಹತ್ತಿ ಬರುವಾಗ ರೆಕ್ಕೆಯನುದುರಿಸಿತು ನವ್ವಾಲೆ.
ಇನ್ನೂ ಒಂದು ಸೊಗಸಾದ ಹಾಡು- ಮಲ್ಲಿಗೆ ಹಾಡು.
ಮಲ್ಲೀಗೆ ಮಲ್ಲಿಗೆ ಬಾಡದಿರುವ ಮಲ್ಲಿಗೆ
ಬಾಡಿದರ ಶಿವನಾ ಪಾದದಾಣೆ ಮಲ್ಲಿಗೆ
ದುಂಡು ದುಂಡು ಮಲ್ಲಿಗೆ ಕೋಲು ಕೋಲುಮಲ್ಲಿಗೆ
ಏಳುಸುತ್ತಿನ್ ಮಲ್ಲಿಗೆ | ಕಾಕಡಾ ಮಲ್ಲಿಗೆ |
ಬಾಲೇರ್ ಮುಡಿಯಾ ಮಲ್ಲಿಗೆ | ಗರತೇರ್ ಮುಡಿಯಾ ಮಲ್ಲಿಗೆ |
ಮಿತ್ರೇರ್ ಮುಡಿಯಾ ಮಲ್ಲಿಗೆ | ರಂಭೇರ್ ಮುಡಿಯಾ ಮಲ್ಲಿಗೆ |
ಬಂಗಾರದ ಮಲ್ಲಿಗೆ | ಸಿಂಗಾರದ ಮಲ್ಲಿಗೆ
ಮೈಸೂರು ಮಲ್ಲಿಗೆ | ಕರುನಾಡ ಮಲ್ಲಿಗೆ ||
ಪಾಡ್ದನ ಮತ್ತು ಓಬೇಲೆ ಪದ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆಯಲ್ಲಿ ಭೂತನನ್ನು ಕುರಿತು ಹಾಡುವ ಪದಗಳಿವು. ಸಾವಿನ ಸಮಯದಲ್ಲೂ ಹಾಡುವುದಿದೆ. ಹಾಡುವವರು ಭೂತ ಮೈಮೇಲೆ ಬಂದಂತೆ ಭಯಾನಕವಾಗಿ ಕುಣಿಯುತ್ತ ದನಿ ಗೈಯ್ಯುವರು. ಓಬೇಲೆ ಪದಗಳನ್ನು ನೇಜಿ (ನೆಲ್ಲು) ನೆಡುವಾಗ ಹೆಣ್ಣು ಮಕ್ಕಳು ಹಾಡುವ ವಾಡಿಕೆ. ದೋಣಿ ನಡೆಸುವಾಗಲೂ ಬಂದರಿನಲ್ಲಿ ಸಾಮಾನು ಹೊರುವಾಗಲೂ ಓಬೇಲೆ ಹಾಗೂ ಐಸಾ ಪದಗಳನ್ನು ಸಾಮಾನ್ಯವಾಗಿ ಹಾಡುತ್ತಿರುತ್ತಾರೆ.
ಬಂಡಿಯ ಪದ
ಗಾಡಿಯನ್ನು ಹೊಡೆಯುತ್ತ ಎತ್ತಿಗೆ ಕಟ್ಟಿದ ಗೆಜ್ಜೆಗಳ ಹಾಗೂ ಬಂಡಿಯ ಚಕ್ರದ ದನಿಯನ್ನು ಮೀರಿ ಎತ್ತರದ ದನಿಯಲ್ಲಿ ಒಬ್ಬನೇ ‘ಬೇಲೂರ ಹೆಣ್ಣೆ ಬೇಗನೆ ರಾಗಿ ಮಾಡೆ | ಕೂರಿಗೆ ನಿಂತಾವೆ ಹೊಲದಾಗೆ ಎಲೆ ಹೆಣ್ಣೆ ಜಾಣ ನಿಂತವ್ನೆ ಬಿಸುಲಾಗೆ’- ಎಂದು ಹಾಡಿ ಕೇಕೆ ಹಾಕಿದಾಗ ಮುಗಿಲು ಮಾರ್ದನಿಸುವುದು. ಬಂಡಿಪದ ಹಾಡಲು, ಹಾಗೇ ಕಪಿಲೆ ನೀರೆತ್ತುವಾಗ ಹಾಡಲು ಎಂಟು ಎದೆ ಬೇಕಾದೀತು. ಬ್ರಹ್ಮಾಂಡಕ್ಕೆ ದನಿಮುಟ್ಟುವಂತೆ ಹಾಡಿ ಕೇಕೆ ಹಾಕುವುದು ಬಂಡಿ ಪದ ಹಾಡುವವರ ಗತ್ತು.
ಕಿನ್ನರಿ ಪದ
ಕಿನ್ನರಿವಾದ್ಯ ಹಿಡಿದು, ಮಧ್ಯಮ ಶೃತಿಯಲ್ಲಿ ತಂತಿಮೀಟುತ್ತ ದನಿಗೂಡಿಸಿ ಬಹಳ ಇಂಪಾಗಿ ಹಾಡುವ ಪದಗಳಿವು.
ಚೆಲುವಯ್ಯ ಚೆಲುವೋ - ತಾನಿತಂದನ್ನಾ | ಚಿನ್ಮಾಯಾರೂಪೇ ಕೋಲೆನ್ನ ಕೋಲೇ
ಬೆಟ್ಟದ ಮ್ಯಾಗಳ ಜಲ್ಲೇಬಿದಿರು - ಬೇಲಿ ಮ್ಯಾಗಳ್ ಸೋರೆ ಬುರುಡೆ
ಲೋಲುಕಿನ್ನುರಿ ನುಡಿಸೋನ್ ಯಾರಯ್ಯ -
ಎಂದು ಹಾಡು ಮೊದಲಾಗುತ್ತದೆ.
ಹಳ್ಳಿಯ ಪದಗಳು
ಸಂಗೀತ, ನೃತ್ಯಗಳ ಜೊತೆಗೆ ಉತ್ತಮ ಸಾಹಿತ್ಯ ಜನಪದ ಸಂಗೀತದಲ್ಲಿ ಹುಲುಸಾಗಿ ಮೂಡಿದೆ. ಮಾಣಿಕ್ಯದಂಥ ಮಾತುಗಳು ನೂರಾರು ಹಳ್ಳಿಯ ಪದಗಳಲ್ಲಿ ಸಿಗುತ್ತವೆ:
ಮಲ್ಲಯ್ಯ ನೀನಡಸು ಸರುವೆಲ್ಲ ;
ಬಂಗಾರದ ಬಿಸಿಲು ಒಡೆದಾದ ;
ತಾವರೆಯ ಗಿಡ ಹುಟ್ಟಿ ದೇವರಿಗೆ ನೆರಳಾದಿ ;
ಹಡದವ್ವ ನೀ ಕೊಟ್ಟ ಮನೆಗೆ ಹೆಸರಾದೆ;
ಹಡದವ್ವ ನೀ ಇದ್ದರೆ ನಮಗೆ ಸರಿರಾಜ್ಯ ;
ಅಡವ್ಯಾಗ ವಸತಿ ಇಳಿದಾಂಗ ;
ಜೋಡಕಿನ್ನರಿ ನುಡಿದಾಂಗ;
ಗಂಜೀಯ ಕುಡಿದರು ಗಂಡನ ಮನೆ ಲೇಸು ;
ಅಣ್ಣಯ್ಯನ ಕುಣಸ್ಯಾಡುತಾಳ ಅತ್ತೀಗಿ;
ನಮ್ಮಣ್ಣ ಬಂದರೆ ನಿಚ್ಚ ದೀವಳಿಗಿ ಮನಿಯಾಗ ;
ಕುಲವೆರಡು ನಮ್ಮ ಮನವೊಂದು ;
ಗುಣಕ ಕಟ್ಟೀನಿ ಗೆಳೆತನ ;
ಆಕಿ ಮಾತು ಬೆಣ್ಯಾಗ ಮುಳ್ಳು ಮುರಿದ್ಹಾಂಗ.
ಗಂಡಹೆಂಡಿರ ಜಗಳ ಗಂಧ ತೀಡೀಧಾಂಗ.
ಮಡದೀನ ಬಡಿದಾನ ಮನದಾಗ ಮರುಗ್ಯಾನ ;
ಸೆರಗ ಹಿಡಿಯೂತ ಕೇಳ್ಯಾನ -
ನಾ ಹೆಚ್ಚೊ ನಿನ್ನ ತವರ್ಹೆಚ್ಚೊ.
ಎಲ್ಲಾ ರೂಪವು ತಾನಂತೆ ಎಲ್ಲೆಲ್ಲಿಯೂ ತಾನಿಹನಂತೆ-
ಎಂಬ ನಾಡಪದದಂತೆ ಹಳ್ಳಿಹಾಡು ಹುಲ್ಲು ಬೆಳೆಯಂತೆ ಇಡೀ ನಾಡಿನಲ್ಲಿ ಸಹಜವಾಗಿ ಬೆಳೆದು ಅಲ್ಲಿನ ಭೂಮಿಯನ್ನೆಲ್ಲ ಆಕ್ರಮಿಸಿದೆ. ಹಳ್ಳಿಹಳ್ಳಿಯಲ್ಲೂ ವಿಧವಿಧವಾದ ಪದಗಳು ಸಿಗುತ್ತವೆ. ಒಟ್ಟಿನಲ್ಲಿ ಜಾನಪದದ ಬಹು ಮುಖ್ಯ ಅಂಗವಾದ ಜನಪದ ಸಂಗೀತ ಈಚೆಗೆ ನಾಡಿನ ಹಿರಿಯರ, ವಿದ್ವಾಂಸರ ಗಮನ ಸೆಳೆದ ವಿಷಯವಾಗಿದೆ.
ಕಣಿ - ಕೊರವಂಜಿ ಹೇಳುವ ಭವಿಷ್ಯ
ಕೊರವಂಜಿ
ಕಣಿ ಹೇಳುವ ಕಾಯಕದಲ್ಲಿ ನಿರತರಾಗಿ, ದವಸಧಾನ್ಯ ಕಾಸು ಸಂಪಾದಿಸುವ ಅಲೆಮಾರಿ ಸ್ತ್ರೀಯರನ್ನು ಕೊರವಂಜಿ ಎಂದು ಕರೆಯುವರು. ಕೊರವಂಜಿ ಶಬ್ದ ದ್ರಾವಿಡ ಭಾಷೆಗಳಲ್ಲಿ ವಿವಿಧ ರೂಪದಲ್ಲಿ ಬಳಕೆಯಲ್ಲಿದೆ. ಕನಾಟಕದ ಎಲ್ಲಾ ಭಾಗಗಳಲ್ಲಿ ಇವರನ್ನು ಕಾಣಬಹುದು. ಉತ್ತರ ಕರ್ನಾಟಕ, ಬೆಳಗಾವಿ, ಬಿಜಾಪುರ, ಧಾರವಾಡಗಳಲ್ಲಿ ಹೇರಳವಾಗಿ ಕಂಡುಬರುತ್ತಾರೆ. ತಮಿಳುನಾಡಿನ ದಕ್ಷಿಣ ಅಕಾಟ್ , ತಂಜಾವೂರು, ತಿರುಚಿರಾಪಳ್ಳಿ, ಸೇಲಂ, ಕೊಯ್ಬತ್ತೂರು ಕಡೆಗಳಲ್ಲೂ ದಟ್ಡವಾಗಿ ಕಾಣಸಿಗುತ್ತಾರೆ. ಇವರು ಕನ್ನಡದ ಜೊತೆಗೆ ತಮಿಳು, ತೆಲಗು, ಮರಾಠಿ ಭಾಷೆಗಳನ್ನು ಕಲಿತು ಮಾತನಾಡುವರು. ಆದ್ದರಿಂದ, ಆಯಾ ಪ್ರದೇಶದ ಜನರಿಗೆ ತುಂಬ ಹತ್ತಿರದವರಾಗಿ ಕಾಣಬರುತ್ತಾರೆ. ಮುಖ ನೋಡಿ, ಕೈಗೆರೆ ನೋಡಿ ಭವಿಷ್ಯ (ಕಣಿ) ನುಡಿಯುವಾಗಿನ ಇವರ ಮಾತಿನ ಮೋಡಿಗೆ ಮರುಳಾಗದವರಿಲ್ಲ. ಈ ಸಂಬಂಧಿಸಿದಂತೆ ಐತಿಹ್ಯ, ಪೌರಾಣಿಕ ಹಿನ್ನಲೆಯನ್ನು ಆರೋಪಿಸಿಕೊಂಡು ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳುವುದನ್ನು ಕಾಣಬಹುದು.
ಕೊರವಂಜಿ ಬಗೆಗಿನ ಪುರಾಣಗಳು
ಪುರಾಣ ೧
ಪಾರ್ವತಿ ತನ್ನ ಮಗುವಿಗೆ ಸರ್ಪವನ್ನು ಸೀಳಿ, ಅದರ ಹೊಟ್ಟೆಯಲ್ಲಿರುವ ವಜ್ರ ವೈಢೂರ್ಯಗಳ್ಳನ್ನು ತುಂಬಿ ಒಂದು ತೊಟ್ಟಿಲನ್ನು ಮಾಡಿಕೊಡುವಂತೆ 'ಮೇದವರ'ನಿಗೆ ಹೇಳಲಾಗಿ, ಆತ ಒಪ್ಪಲ್ಲಿಲ್ಲವಂತೆ. 'ಕೊರಚ'ರವನು ಹೆದರದೆ ಮಾಡಿಕೊಟ್ಟನಂತೆ. ಆಗ ಪಾರ್ವತಿ ಮೆಚ್ಚಿ ತನ್ನಲಿದ್ದ ಮಂತ್ರದಂಡವನ್ನು ಕೇರುವ ಮೊರವನ್ನು ಬಹುಮಾನವಾಗಿ ನೀಡಿ, ಭವಿಷ್ಯ ಹೇಳುವ ಅಧಿಕಾರವನ್ನು ಇವರಿಗೆ ಕರುಣಿಸಿದಳಂತೆ. ಧರ್ಮರಾಯ ವನವಾಸದಲ್ಲಿದ್ದಾಗ ಆತನನ್ನು ಮೋಹಿಸಿದ ಹೆಣ್ಣೊಬ್ಬಳು ತನ್ನ ವೇಷ ಮರಿಸಿಕೊಂಡು ವರಿಸಿದಳಂತೆ. ಆಕೆಯ ಮಕ್ಕಳೇ ಈ ಕೊರವರಂತೆ. ಕೊರವರಿಗೆ ಅದರಲ್ಲೂ ಅವರ ಹೆಂಗಸರಿಗೆ 'ಕಣಿ' ಹೇಳುವ ಹಕ್ಕು ದೈವದತ್ತವಾಗಿ ಬಂದಿದೆ ಎಂದು ಹೇಳಿಕೊಳ್ಳುತ್ತಾರೆ. ಪದ್ಮಾವತಿ ಕಲ್ಯಾಣ ಸಂದರ್ಭದಲ್ಲಿ ಶ್ರೀನಿವಾಸ ಕೊರವಂಜಿ ವೇಷ ಧರಿಸಿ ಬಂದಿದ್ದು ಕೂಡ ಪುರಾಣ ಪ್ರಸ್ಸಿದ್ದ ಕತೆ. ಪ್ರಣಯಿಗಳಲ್ಲಿ ಉಂಟಾಗುವ ಆತಂಕವನ್ನು ಪರಿಹರಿಸಿಕೊಳ್ಳಲು ಕೊರವಂಜಿ ವೇಷ ಪ್ರಮುಖ ಪಾತ್ರವಹಿಸುತ್ತದೆ.
ಪುರಾಣ ೨
ಧರ್ಮರಾಯನು ವನವಾಸದಲ್ಲಿದ್ದಾಗ ಅವನನ್ನು ಮೋಹಿಸಿದ್ದ ಹೆಣ್ಣೊಬ್ಬಳು ಭವಿಷ್ಯಗಾರ್ತಿಯಂತೆ ವೇಷ ಹಾಕಿಕೊಂಡು ಅವನಲ್ಲಿಗೆ ಹೋಗಿ ಅವನನ್ನು ವರಿಸಿದಳು. ಆಕೆಯ ಮಕ್ಕಳೇ ಕೊರವರೆಂದೂ ಮತ್ತೊಂದು ಕಥೆ ಇದೆ. ಶಿವ ಕೊರವಂಜಿ, ವಿಷ್ಣು ಕೊರವಂಜಿ, ಮನ್ಮಥ ಕೊರವಂಜಿಗಳು ಎಂಬ ಪ್ರಭೇದಗಳು ಕಂಡುಬರುವುದರ ಜೊತೆಗೆ ಕೊರವಂಜಿ ಹಾಡು, ಕಾವ್ಯ, ಪಾರಿಜಾತದಂಥ ಬಯಲಾಟಗಳಲ್ಲಿ ಕೊರವಂಜಿಯ ಪಾತ್ರವು ಕಂಡುಬರುತ್ತದೆ. ಕೊರವಂಜಿಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ತಮ್ಮ ಕುಲದೇವತೆಯ ಹೆಸರನ್ನು ಹೇಳುತ್ತಿರುತ್ತಾರೆ.
ಪುರಾಣ ೩
ರಾಮಾಯಣ ಸಂದರ್ಭದಲ್ಲೂ ಆಂಜನೇಯ ಕೊರವಂಜಿ ವೇಷ ಧರಿಸಿ ರಾವಣನ ಪಟ್ಟಣದ ಅಶೋಕವನದಲ್ಲಿ ಸೀತೆಯನ್ನು ಕಂಡು ರಾಮ ಬಂದು ಲಂಕೆಯನ್ನು ಜಯಿಸಿ, ವಿಭಿಷಣನಿಗೆ ಪಟ್ಟ ಕಟ್ಟಿ ನಿನನ್ನು ಕರೆದುಕೊಂಡು ಹೋಗುವುದು ಕಂಡಿತಾ ಎಂದು ಭವಿಷ್ಯ ನುಡಿಯುವ ಪ್ರಸಂಗ ಜನಪದ ರಾಮಾಯಣಗಳಲ್ಲಿ ಬರುತ್ತದೆ. ಹನುಮಂತ ತನ್ನ ತಲೆ ಕೂದಲನ್ನು ಎತ್ತಿ ಕಟ್ಟಿ ಸಿಂಗರಿಸಿಕೊಳ್ಳುವ ಬಗೆಯನ್ನು ಜನಪದ ಕವಿಗಳು ಚಿತ್ರಿಕರಿಸಿರುವುದು ಸೊಗಸಾಗಿದೆ. ರುಕ್ಮೀಣಿಯ ಮನಸ್ಸಿಗೆ ಸಮಾಧಾನವನ್ನು ನೀಡಲು ಕೃಷ್ಣ ಕೊರವಂಜಿ ವೇಷ ಧರಿಸಿ, ಕಣಿ ಹೇಳಿ, ದೇವಮಾನವಾದ್ದರಿಂದ ತನ್ನ ನಿಜ ರೂಪವನ್ನು ತೋರು ರುಕ್ಮಣಿ ನಾಚಿ ನೀರಾಗುವಂತೆ ಮಾಡಿದ್ದು ಉಂಟು. ಕೋಲಾಟದಲ್ಲಿ 'ಕೊರವಂಜಿ ಕೋಲಾಟ' ಒಂದು ಬಗೆ ಹತ್ತು ಹನ್ನೆರಡು ಮಂದಿ ಕೂಡಿ ಕೋಲು ಹುಯ್ಯುವ ಸಂದರ್ಭದಲ್ಲಿ ಅವರ ಮಧ್ಯೆ ಬಾಗುತ್ತಾ ಬಳಕುತ್ತಾ ಬಂದು ಎಡದ ಕಂಕುಳಲ್ಲಿ ಪುಟ್ಟಿ ಒಂದು ಕೈಯಲ್ಲಿ ಕೊರವಂಜಿ ಕೋಲು ಹಿಡಿದು ಬೆನ್ನಟ್ಟಿದ ಗಂಟಿನ ಕೈಗೆ ಸಿಗದಂತೆ ನುಸುಳಿಕೊಂಡು ಆಡುವ ಪರಿಪಾಟವಿತ್ತಂತೆ.
ಪುರಾಣ ೪
ಒಮ್ಮೆ ಪಾರ್ವತಿ ಕೊವರಂಗಜಿಯ ವೇಷ ಧರಿಸಿ ಭವಿಷ್ಯ ಹೇಳಿದಳು ಎಂಬ ಪ್ರತೀತಿ ಇದೆ. ಹಾಗೆಯೇ ತಾವು ಪಾರ್ವತಿಯ ಮಕ್ಕಳೆಂದೇ ಹೇಳಿಕೊಳ್ಳುತ್ತಾರೆ. ಇವರಿಗೆ 'ಕೊರವರು' ಎಂಬ ಹೆಸರು ನಿಂತಿತಂತೆ.
ವೇಷಭೂಷಣ
ಕೊರವಿ ಪದಗಳು ಅಥವಾ ಕುರುತ್ತಿ ಪಾಟ್ಟುಗಳು ಕರ್ನಾಟಕ ತಮಿಳುನಾಡುಗಳಲ್ಲಿ ಹೇರಳವಾಗಿ ಸಿಗುತ್ತದೆ. ಬಹುತೇಕ ಎರಡೂ ಕಡೆ ಅವರ ವೇಷಭೂಷಣಗಳು ಒಂದೆ ಆಗಿವೆ. ತುಂಬ ಢಾಳಾಗಿ ವೈಭವೋಪೇರಿತವಾಗಿಲ್ಲದ ಆದರೆ ಅತ್ಯಾಕರ್ಷಕ ಉಡುಗೆ ತೊಡುಗೆ ಕೊರವಿಯರದು. ಮೈತುಂಬಾ ಹಚ್ಚೆಯಿಂದ ಅಲಂಕಾರ, ಬಣ್ಣ ಬಣ್ಣದ ಸೀರೆ ಕುಬುಸ, ವಾಲಿಸಿ ಕಟ್ಟಿದ ತುರುಬು, ಕಾಲಕಡಗ, ಮೂಗಿಗೆ ಮುಕುರ, ತಲೆಗೆ ದುಪ್ಪಟಿ ಹಾಗೂ ಬುಟ್ಟಿ, ಆ ಬುಟ್ಟಿಯಲ್ಲಿ ಯಲ್ಲಮ್ಮ ದೇವಿಯದೆಂದು ಹೇಳುವ ಚೌಕಾಕಾರದ ಚಿಕ್ಕ ಪೆಟ್ಟಿಗೆ, ಕೈಯಲ್ಲಿ ಉದ್ದವಾದ ಕೋಲು, ಹಣೆಗೆ ಕುಂಕುಮ, ರಟ್ಟೆಗಳಿಗೆ ಬೆಳ್ಳಿ ವಂಕಿಗಳು ಇವು ಕಲಾವಿದರ ವೇಷಭೂಷಣಗಳು. ಹೀಗೆ ಅಲಂಕಾರಗೊಂಡ ಕೊರವಂಜಿಯು 'ಹೇಳುವೆ ಕಣಿ ಹೇಳುವೆ ಕಣಿ' ಎಂದು ಹಾಡುತ್ತಾ ಬರುತ್ತಾಳೆ. ಒಂದು ಕಾಲಕ್ಕೆ 'ಕಣಿ' ಹೇಳುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದು ಇದೀಗ ಬುಟ್ಟಿ, ತಟ್ಟೆ ಹೆಣೆಯುವ ಉಪವೃತ್ತಿಯಲ್ಲಿ ತೊಡಗಿರುವುದು ಕಂಡುಬರುತ್ತದೆ.
ಕೌಶಲ್ಯ
ಕೊರವಂಜಿಗಳು ಹಚ್ಚೆ ಹಾಕುವುದಕ್ಕೂ ಪ್ರಸಿದ್ದರು. ಹಚ್ಚೆ ಹಾಕುತ್ತಾ ನೋವು ಕಾಣಿಸದಂತೆ ಕಣಿ ಹಾಡನ್ನು ಹಾಡುತ್ತಾ, ಮೋಹಕವಾಗಿ ರಾಗದ ಸೊಲ್ಲೆತ್ತುತ್ತ ತಾಸುಗಟ್ಟಲೆ ಹಚ್ಚೆ ಹೊಯ್ದರು. ಬೇಸರ ನೋವುಗಳು ಗಮನಕ್ಕೆ ಬಾರದಂತೆ ನಿಭಾಯಿಸುವುದರಲ್ಲಿ ಇವರು ನಿಪುಣರು. ಸೂಜಿಯಂತಹ ಸಾಧನದಿಂದ ಸೊಪ್ಪಿನ ರಸವನ್ನು ಹಚ್ಚೆ ಹೊಯ್ಯುವ ಜಾಗಕ್ಕೆ ಹಾಕಿ ಕಲಾತ್ಮಕವಾಗಿ ಹಚ್ಚೆ ಹಾಕುತ್ತಾರೆ. ಉತ್ತರ ಕರ್ನಾಟಕದ ಕಡೆಯೆಲ್ಲಾ ಯಕ್ಷಗಾನ ಪ್ರಸಂಗಗಳಲ್ಲಿ ಕೊರವಂಜಿ ಪಾತ್ರಗಳನ್ನೇ ಮುಖ್ಯವಾಗಿಟ್ಟುಕೊಂಡು 'ಬ್ರಹ್ಮ ಕೊರವಂಜಿ', 'ಮನ್ಮಥ ಕೊರವಂಜಿ, 'ಪದ್ಮಾವತಿ ಕೊರವಂಜಿ' ಇತ್ಯಾದಿ ಪ್ರದರ್ಶನಗಳನ್ನು ಮಾಡುವುದಿದೆ.
end
****
ಇತರೆ
- ಬೊಳ್ಕಾಟ ನೃತ್ಯ
- ಕೂಟ ನೃತ್ಯ
- ಕುಮ್ಮಿಗಳ ಕೈ ಚಪ್ಪಾಳೆ ನೃತ್ಯ
- ನಾಗ ನೃತ್ಯ - ನಾಗಮಂಡಲ
- ಅನಾಗರಿಕರ ಯುದ್ಧ ನೃತ್ಯ
***
ಇತರೆ ಉತ್ತರ ಕರ್ನಾಟಕದಲ್ಲಿ ಕಾಣಸಿಗುವುದು
- ಅಲಾವಿ ಕುಣಿತ
- ಕರಡೆ ಮಜಲು ಕುಣಿತ
- ನಂದೀ ಧ್ವಜ ಕುಣಿತ
- ಕೊಡದ ಕುಣಿತ/ ಪುಗಡಿ ಕುಣಿತ
- ಜಗ್ಗಳಿಗೆ ಮೇಳ
- ಜೋಗತಿ ಕುಣಿತ
- ಡೊಳ್ಳಿನ ಕೈ ಪೆಟ್ಟು ಕುಣಿತ
- ದಟ್ಟೀ ಕುಣಿತ
- ದುಮ್ಮಾಲಿ ಮೇಳ/ ದಿಮ್ಮಿ ಮೇಳ/ಶಿವ ಭಜನೆ
- ಪುರವಂತಿಕೆ
- ಬಹುರೂಪಿ/ಹಗಲುವೇಷ ಕಲೆ
- ಭಜನಾ ಬಾರೋಡ್ (ಭಜನೆ + ಬಯಲಾಟ)
- ಭೂತೇರ ಕುಣಿತ
- ಹೆಜ್ಜೆ ಮೇಳ
- ಹೋಳಿ ಕುಣಿತ
ಈ ಮೇಲಿನ 15 ಬಗೆಯ ಉತ್ತರ ಕರ್ನಾಟಕದ ಕಲೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ
ಕ್ಲಿಕ್ click ಮಾಡಿ
ಉತ್ತರ ಕರ್ನಾಟಕದ ಜನಪದ ಪ್ರಕಾರಗಳು
author- ಡಾ. ಚಕ್ಕೆರೆ ಶಿವಶಂಕರ್
end
*****