Showing posts with label ಮೆರೆಯದಿರು ಮೆರೆಯದಿರು ಎಲೆ ಮಾನವ neleyadikeshava. Show all posts
Showing posts with label ಮೆರೆಯದಿರು ಮೆರೆಯದಿರು ಎಲೆ ಮಾನವ neleyadikeshava. Show all posts

Tuesday, 15 October 2019

ಮೆರೆಯದಿರು ಮೆರೆಯದಿರು ಎಲೆ ಮಾನವ ankita neleyadikeshava

ರಾಗ ಮುಖಾರಿ ಝಂಪೆತಾಳ 

ಮೆರೆಯದಿರು ಮೆರೆಯದಿರು ಎಲೆ ಮಾನವ , ನಿನ್ನ
ಸಿರಿಯ ಹವಣೇನು ಹೇಳೆಲೋ ಮಾನವಾ ||ಪ||

ಸಿರಿಯೊಳತಿ ಮಾಧವನೋ ಹಿರಿಯರೊಳು ರೋಮಶನು
ದುರುಳ ರಾವಣನ ಸಂಪದವೊ ನಿನಗೆ
ದುರಿಯೋಧನನವೊಲು ಮಕುಟವರ್ಧನನೋ, ನಿನ್ನ
ಸಿರಿಯ ಹವಣೇನು ಹೇಳೆಲೋ ಮಾನವಾ ||೧||

ಬಲುಹಿನಲಿ ವಾಲಿಯೊ ಚೆಲುವಿಕೆಗೆ ಕಾಮನೊ
ಸಲುಗೆಯಲಿ ನಾರದನೊ ಹೇಳು ನೀನು
ಕಲಿಗಳೊಳು ಭೀಷ್ಮ ದ್ರೋಣಾಚಾರ್ಯ ಫಲುಗುಣನೊ
ಕುಲದೊಳು ವಶಿಷ್ಠನೊ ಹೇಳೆಲೊ ಮಾನವ ||೨||

ತ್ಯಾಗದಲಿ ಕರ್ಣನೊ ಭೋಗದಲಿ ಸುರಪನೋ
ಭಾಗ್ಯದಲಿ ದಶರಥನೋ ಹೇಳು ನೀನು
ರಾಗದಲಿ ತುಂಬುರನೊ ಯೋಗದಲಿ ಸನಕನೋ
ಹೀಗೆ ಯಾರ ಹೋಲ್ವೆ ನೀ ಹೇಳೆಲೊ ಮಾನವ ||೩||

ಯತಿಗಳೊಳು ಅಗಸ್ತ್ಯನೋ ಜೊತೆಗಳೊಳು ಹನುಮನೋ
ವ್ರತಕೆ ಶುಕೇಶ್ವರನೋ ಹೇಳು ನೀನು
ಶ್ರುತಿ ಪಾಠ ವಿಬುಧರೊಳು ಬೊಂಮನೊ ನಿನ್ನ ಶುಭ-
ಮತಿಯ ಹವಣೇನು ಹೇಳೆಲೋ ಮಾನವಾ ||೪||

ವಿದ್ಯೆಯಲಿ ಸುರಗುರುವೋ ಬುದ್ಧಿಯಲಿ ಮನುಮುನಿಯೊ
ಶ್ರದ್ಧೆಯಲಿ ನೀನಾರ ಹೋಲ್ವೆ ಹೇಳು
ಸಿದ್ಧರೊಳು ನವಕೋಟಿಯೊಳಗೊಬ್ಬನೊ ನೀನು
ಕ್ಷುದ್ರ ಮಾನವ ನಿನ್ನ ಸಿರಿಯ ಹವಣೇನು ||೫||

ಸೋಲು ಗೆಲ್ಲುವ ಮಾತು ಸಲ್ಲದೊ ನಿನಗೆ
ಎಲ್ಲವನು ಬಿಡು ಗರ್ವ ನಿನಗೇತಕೊ
ಬಲ್ಲೆಯಾದರೆ ಆದಿಕೇಶವನ ಸ್ಮರಣೆಯನ್ನು
ಸೊಲ್ಲು ಸೊಲ್ಲಿಗೆ ನುತಿಸಿ ಸುಖಿಯಾಗಿ ಬಾಳು ||೬||
********