Showing posts with label ಬಂದರು ನಾರದರ್ಹರುಷದಲಿ ನಿಂದು ಯಜ್ಞ ನೋಡುತ ಮುದದಿ kamalanabha vittala. Show all posts
Showing posts with label ಬಂದರು ನಾರದರ್ಹರುಷದಲಿ ನಿಂದು ಯಜ್ಞ ನೋಡುತ ಮುದದಿ kamalanabha vittala. Show all posts

Thursday 5 August 2021

ಬಂದರು ನಾರದರ್ಹರುಷದಲಿ ನಿಂದು ಯಜ್ಞ ನೋಡುತ ಮುದದಿ ankita kamalanabha vittala

 ..

kruti by Nidaguruki Jeevubai

ಬಂದರು ನಾರದರ್ಹರುಷದಲಿ

ನಿಂದು ಯಜ್ಞ ನೋಡುತ ಮುದದಿ

ಇಂದು ಯಾರಿಗರ್ಪಣೆ ಮಾಡುವಿರೆನೆ

ಬಂದಿತು ಸಂಶಯ ಋಷಿಗಳಿಗೆ

ಮಂಗಳಂ ಜಯ ಮಂಗಳಂ ಪ


ತ್ವರದಿಭೃಗು ಮುನಿಗಳು ಹೊರಡುತಲಿ

ಹರಬ್ರಹ್ಮರು ಸರಿಯಲ್ಲೆನುತ

ಹರಿವೈಕುಂಠದಿ ಮಲಗಿರೆ ನೋಡುತ

ಭರದಿಂದೊದೆಯೆ ವಕ್ಷಸ್ಥಳಕೆ

ಮಂಗಳಂ ಜಯ ಮಂಗಳಂ 1


ನೊಂದಿತು ಪಾದವೆಂದುಪಚರಿಸೆ

ಇಂದಿರಾದೇವಿ ಕೋಪಿಸಿ ತೆರಳೆ

ಬಂದು ಋಷಿಗಳಿಗರುಹಿದರು ಶ್ರೀಗೋ-

ವಿಂದಗೆ ಸಮರಿಲ್ಲೆಂದೆನುತಾ

ಮಂಗಳಂ ಜಯ ಮಂಗಳಂ 2

ಮಡದಿ ಇಲ್ಲದೆ ಬೇಸರ ಪಡುತಾ

ಪೊಡವಿಗಿಳಿದು ಹುತ್ತದೊಳಗಿರಲು

ಕೊಡಲಿಯ ಗಾಯಕೌಷಧ ಹುಡುಕುತ ಹರಿ

ಅಡವಿಗಳಲಿ ಸಂಚರಿಸಿದಗೆ

ಮಂಗಳಂ ಜಯ ಮಂಗಳಂ3

ಭೂಮಿಗೊಡೆಯ ವರಹನನು ನೋಡಿ

ಕಾಮಿನಿ ಬಕುಳೆ ಸೇವೆಗೆ ಮಾಡಿ

ಕಾಮಜನಕ ಬೇಟೆಗೆ ಹೊರಟನು ಬಹು

ಪ್ರೇಮದಿಂದಲಂಕರಿಸಿದ ಹರಿಗೆ

ಮಂಗಳಂ ಜಯ ಮಂಗಳಂ4


ವನವನ ಚರಿಸಿ ಸ್ತ್ರೀಯರ ನೋಡಿ

ವನಜಾಕ್ಷೇರು ನಡುಗುತ ಭಯದಿ

ಘನಮಹಿಮಗೆ ಕಲ್ಲು ಕಲ್ಲೆಸೆಯೆ ಹಯ

ವನದಿ ಮೃತಿಸೆ ಗಿರಿ ಏರಿದಗೆÉ

ಮಂಗಳಂ ಜಯ ಮಂಗಳಂ 5


ಕಾಮಿನಿ ಬಕುಳೆಗೆಲ್ಲವ ಪೇಳಿ

ಕೋಮಲೆ ಕೊರವಿ ರೂಪವ ತಾಳಿ

ವ್ಯೋಮರಾಜನ ಪುರದಲಿ ಧರಣಿಗೆ

ಸಾಮುದ್ರಿಕೆ ಪೇಳಿದ ಹರಿಗೆ

ಮಂಗಳಂ ಜಯ ಮಂಗಳಂ 6

ವಶಿಷ್ಟ ಕಶ್ಯಪರು ಶುಕರುಗಳು

ವಿಶಿಷ್ಟ ಬಂಧುಗಳ ಕರೆಸುತಲಿ

ಪಟ್ಟದರಸಿ ಲಕುಮಿಯು ಬರೆಹರುಷದಲಿ

ಕಟ್ಟಿ ಮಾಂಗಲ್ಯ ಹರಿ ಪದ್ಮಿನಿಗೆ

ಮಂಗಳಂ ಜಯ ಮಂಗಳಂ 7


ಜಯ ಜಯ ವೆಂಕಟ ಪದ್ಮಿನಿಗೆ

ಜಯ ಜಯ ಪದ್ಮಾವತಿಪ್ರಿಯಗೆ

ಜಯ ಜಯ ಕಮಲನಾಭ ವಿಠ್ಠಲಗೆ

ಜಯ ಜಯ ಶ್ರೀ ಶ್ರೀನಿವಾಸನಿಗೆ

ಮಂಗಳಂ ಜಯ ಮಂಗಳಂ 8

***