Showing posts with label ದಯಮಾಡೊ ಎನ್ನೊಡೆಯಾ vijaya vittala suladi ಜ್ವರ ಪರಿಹಾರ ಸುಳಾದಿ DAYAMAADO ENNODEYA JWARA PARIHARA SULADI. Show all posts
Showing posts with label ದಯಮಾಡೊ ಎನ್ನೊಡೆಯಾ vijaya vittala suladi ಜ್ವರ ಪರಿಹಾರ ಸುಳಾದಿ DAYAMAADO ENNODEYA JWARA PARIHARA SULADI. Show all posts

Sunday 8 December 2019

ದಯಮಾಡೊ ಎನ್ನೊಡೆಯಾ vijaya vittala suladi ಜ್ವರ ಪರಿಹಾರ ಸುಳಾದಿ DAYAMAADO ENNODEYA JWARA PARIHARA SULADI

Audio by Mrs. Nandini Sripad

ಶ್ರೀವಿಜಯದಾಸರು ತಮ್ಮ ಧರ್ಮಪತ್ನಿಯಾದ ಅರಳಮ್ಮನವರಿಗೆ ಚಾತುರ್ಥಿಕ ಜ್ವರ ಪರಿಹಾರಗೋಸುಗ ದೇವರ ಪ್ರಾರ್ಥನೆ ಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 

ದಯಮಾಡೊ ಎನ್ನೊಡೆಯಾ ದಾಸಿಗೊಲಿದು ಇಂದು
ಭಯವೆ ಪರಿಹರಿಸಿ ವೇಗದಿಂದಲಿ ಬಿಡದೆ
ಬಯಲಾಸೆಮಾಡಿ ಮುಂಗಾಣದೆ ಕಂಡ ಕಡೆಗೆ
ಪಯಣಗತಿಯಲ್ಲಿ ಪ್ರಯಾಸ ಬಡಲ್ಯಾಕೆ
ಅಯುತ ಅಪರಾಧಗಳು ಮಾನವರು ಎಸಗಿದರು
ಪಯೋನಿಧಿಸುತೆ ರಮಣ ನಿನ್ನ ನಾಮ -
ತ್ರಯದಿಂದ ದೂರಾಗಿ ನಿರ್ಮಳದಲ್ಲಿ ನಿತ್ಯ
ಜಯಪ್ರದವಾಗುವುದು ಜಗವರಿಯೆ
ವಿಯದ್ಗಂಗಾ ಮೊದಲಾದ ನದ ನದಿಗಳಿಗೆ ಪೋಗಿ
ಮೀಯಬೇಕೆಂದು ಪೇಳುವ ಉಕ್ತಿಯು ನಿ -
ಶ್ಚಯವಲ್ಲ ನಿನ್ನ ಶ್ರೀಪಾದಪದ್ಮದಲ್ಲೀಗ
ತ್ರಯಕೋಟಿ ಸಾರ್ಧ ತೀರ್ಥಂಗಳು ನಿರುತಾ -
ಶ್ರಯವಾಗಿ ದೇವಗಣದೊಡನೆ ನಿ -
ರಯದೂರನೆ ಕೇಳು ಮಹಾಸೋಜಿಗ
ವ್ಯಯವಾಗವೆ ಮಹಾತಾಪ ಜ್ವರ ವ್ಯಾಧಿಗಳು
ತ್ರಯ ಬಗೆಯಿಂದಟ್ಟಿದ ಮಾಯಾ
ಹೊಯಲಿಡುವೆ ನಿಂದು ಸೊಲ್ಲು ಲಾಲಿಸಾದಿರೆ ನಿ -
ರ್ದಯವಂತನೆಂದು ಸರ್ವದ ದೂರುವೇ
ನಯನದಲಿ ನೋಡು ಉಡುಪಿಲಿ ಇತ್ತ ಮಾತನು ಹೃ -
ದಯದೊಳಗೆ ಮರೆದಿಲ್ಲ ಎನಗೆ ಸ್ವಾಮಿ ಉ -
ದಯಾಸ್ತಮಾನ ತನಕ ಇದೇ ಸ್ಮರಿಸುತ್ತ
ಹಯದಂತೆ ಕುಣಿಕುಣಿದು ನಲಿದಾಡುವೇ
ಶ್ರೀಯರಸ ವಿಜಯವಿಠ್ಠಲ ಎಂದವಗೆ
ಜಯಂಗಳಲ್ಲದೆ ಪ್ರತಿಕೂಲವಲ್ಲ ॥ 1 ॥

 ಮಟ್ಟತಾಳ 

ಈ ರೋಗವು ನಿನ್ನ ಮೂರು ನಾಮಗಳೊಮ್ಮೆ
ಸಾರಿದರೆ ಇರದೆ ಬೇರರಸಿ ಕಿತ್ತಿ
ಕ್ರೂರರ ಸಹಿತದಲಿ ದೂರಾಗಿ ಪೋಗುವುದು
ಆರಿಗೆ ಪೇಳದಲೆ ಹಾರವೀವುದು ನಮಗೆ
ಭಾರಕರ್ತನಾದ ವಿಜಯವಿಠ್ಠಲ ನಿನ್ನ
ಆರಾಧಿಪನರ್ಧಾ ಶರೀರಕೆ ಪೀಡೇ ॥ 2 ॥

 ತ್ರಿವಿಡಿತಾಳ 

ಉಪೇಕ್ಷೆ ಮಾಡದಿರು ಉತ್ಕೃಷ್ಟ ಮಹಿಮನೆ
ಅಪೇಕ್ಷಾ ಎನಗುಂಟು ಅನುದಿನದಲ್ಲಿ
ಆಪಗಾ ಯಾತ್ರಿಗೆ ಈರ್ವರನ ಕರೆದೊಯ್ದು
ಪಾಪ ಮುಕ್ತರ ಮಾಡು ಮುಂದೆ ಬರುವ
ಆಪತ್ತುಗಳ ತಡಿ ತಡಮಾಡದೆ ಜ್ಞಾನ -
ದೀಪ ಪ್ರಕಾಶದಲಿ ಚರಿಸುವಂಥ
ಸೂಪಂಥವೆ ಕೊಡು ಶುದ್ಧ ಮನಸು ಉಳ್ಳ
ತಾಪಸ ಸಜ್ಜನರ ಸಮೀಪವೀಯೋ
ಆಪಾದಮಸ್ತಕ ಪರಿಯಂತ ಭವವ್ಯಾಧಿ
ಲೇಪಿಸಿಕೊಂಡಿರೆ ನಿನ್ನ ನೆನಸೆ
ಪೋಪದೆ ನಿಲ್ಲುವದೆ ಕಾಲಾ ಕ್ಲಪ್ತಿಯುಂಟೆ
ನೀ ಪಾಲಿಸದಿರೆ ಕಾಣೆ ಪರರಾ
ಆಪಾರ ಔಷಧ ನಾನಾ ಮಾತ್ರಿಗಳ್ಯಾಕೆ
ಮಾಪತಿ ನಿನ್ನ ನಾಮವೆ ವ್ಯರ್ಥವೆ
ವ್ಯಾಪಾರ ನಿನಗಿದೆ ಎಲ್ಲೆಲ್ಲಿ ಇದ್ದರೂ
ಆಪನ್ನ ಜನರ ಸಾಕುವದಲ್ಲದೆ
ಭೂಪಾರದೊಳಗೆ ಮತ್ತೊಂದು ಮಾತೆ ಇಲ್ಲ
ಕೋಪವಿಲ್ಲದ ದೈವಾ ದೀನಬಂಧೂ
ಚಾಪಧರಾಗ್ರಣಿ ವಿಜಯವಿಠ್ಠಲ ನಿನ್ನ
ರೂಪ ದೇಹದೊಳಿರೆ ಅನ್ಯ ಪ್ರತಿಮೆ ಪೂಜೆ ॥ 3 ॥

 ಅಟ್ಟತಾಳ 

ಶ್ವಾನನ್ನ ಕೊಲಿಗೆ ಬಣ್ಣದ ಕೋಲು ಬೇಕೇನೊ
ಆನಂದ ಪದವೀವ ನಿನ್ನ ನಾಮಗಳೀ
ಬ್ಯಾನಿಗೆ ಬೇಕೇನೊ ಭಕ್ತರ ಮನೋರಥ
ಏನೆಂಬೆನಯ್ಯ ನಿನ್ನ ಭಕ್ತರ ಪಾದ
ಧ್ಯಾನದೊಳೊಮ್ಮಿಡೆ ತಿರುಗಿ ನೋಡದೆ ಪಲಾ -
ಯಾನವಾಗೋದು ಬಲು ಕಾಲದ ರೋಗ
ಹಾನಿಯಾಗಿ ಪೋಗಿ ಹಿತವಕ್ಕು ಕಾಯಕ್ಕೆ
ಈ ನಿರಂತರ ಅನುಭವಿಸಿದ್ದು ಸಾಲದೆ
ನೀನೊಲಿದು ರೋಗ ಪೋಗುವ ಕಾರಣ
ನಾನು ತಿಳುಹಿದ ಕಾಲ ಕ್ಲಪ್ತಿ ನೋಡಿ
ನಾನೆ ತುತಿಸಿದೆ ಗುರುಗಳ ದಯದಿಂದ
ಧಾನಪತಿ ವಂದ್ಯ ವಿಜಯವಿಠ್ಠಲ ಎನ್ನ
ಮಾನಸಾ ನುಡಿ ಕಾಯೊ ಮನ್ನಿಸಿ ಬಿಡದೆ ॥ 4 ॥

 ಆದಿತಾಳ 

ಆಲಸ್ಯ ಮಾಡದಿರು ಅತಿದೂರಕೆ ಹಾಕಿ
ವ್ಯಾಳಿ ವ್ಯಾಳಿಗೆ ನಿನ್ನ ಚರಣ ಸೇವಿಗೆ ಅನು -
ಕೂಲವಾಗಲಿ ಬೇಕು ಮನಸು ಇತ್ತಾಗ
ಭೂಲೋಕದೊಳು ತಿಳಿದು ಸಾಧನ ಮಾಡುತ
ನಾಲಿಗೆಯಿಂದಲಿ ಹರಿ ಶರಣರ ಸ್ತೋತ್ರ
ವಾಲಯ ಪಠಿಸುತ್ತ ಸುಖದಲ್ಲಿಪ್ಪಂತೆ ಮಾಡು
ಬಾಲ ಭಾಷೆಗಳೆಲ್ಲ ಮನಸಿಗೆ ತಾರದೆ
ಪಾಲಿಸಬೇಕು ಎನ್ನ ದೇಹ ಸಂಬಂಧವ
ಕಾಲಿಗೆ ಎರಗುವೆ ಕಠಿಣತನವೆ ಬಿಡು
ಬಾಳುವಂತೆ ಮಾಡಿ ಭಕ್ತಿ ಮಾರ್ಗವೆ 
ಇತ್ತು
ಮೂಲೋಕ ಪರಿಪಾಲಾ ವಿಜಯವಿಠ್ಠಲರೇಯ 
ಆಳಾಗಿ ಎಲ್ಲರ ಅತಿ ಮೋಹದಲ್ಲಿ ಕಾವಾ ॥ 5 ॥

 ಜತೆ 

ಅಟ್ಟಿದೆ ನಿನ್ನ ನಾಮಗಳಿಂದ ಮಹಾವ್ಯಾಧಿ
ವಿಠ್ಠಲಾ ವಿಠ್ಠಲ ವಿಜಯವಿಠ್ಠಲ ಕರುಣೀ ॥
********