ರಾಗ: ದರ್ಬಾರ್ ತಾಳ: ಆದಿ
ಚಿತ್ತಪಹಾರಕನೇ ಅತ್ಯಂತ ಕರುಣಾಳು
ಉತ್ತಮೋತ್ತಮ ಗುರುವೇ ಶ್ರೀ ರಾಘವೇಂದ್ರ ಪ
ನಿತ್ಯ ಮಂತ್ರಾಲಯಕೆ ಎಲ್ಲಿಂದಲೋ ಬಂದು
ಎತ್ತಿ ಕೈಮುಗಿವರಿಗೆ ಉತ್ತಮ ವರವೀವ ಅ. ಪ
ಚಿತ್ತವಹರಿಸುತ ವಿತ್ತಭಾಗ್ಯವನೀವೆ
ಇತ್ತುದವೆಲ್ಲವ ಮತ್ತೆ ನೂರ್ಮಡಿಮಾಡಿ
ಸ್ತುತ್ಯಗುರುವೆ ನಿನಗೆ ಎತ್ತಲೂ ಸರಿಗಾಣೆ
ಸತ್ಯವೋ ಸತ್ಯವೋ ಸತ್ಯ ಭಕ್ತವತ್ಸಲ ಸ್ವಾಮಿ 1
ಈಕ್ಷಿಸಿ ಕರುಣಕಟಾಕ್ಷದಿ ಭಕುತರ
ತಕ್ಷಣ ವರವಿತ್ತು ಪ್ರತ್ಯಕ್ಷವಾಗುತ
ಸೂಕ್ಷ್ಮದೃಷ್ಟಿಯ ಭಕ್ತಪಕ್ಷಪಾತಿಯೇ
ರಕ್ಷಾರಸದ ದಿವ್ಯ ಅಕ್ಷಯ ಪಾತ್ರೆಯೋ 2
ವರುಷಮುನ್ನೂರರಿಂ ನಿನ್ನ ಬೃಂದಾವನ
ವರಗಳ ಧಾರೆಯಸೂಸಿ ಸುರಿಯುತಲಿದೆ
ವರವಾತದೂತನೆ ಮಂತ್ರಾಲಯಪ್ರಭು ನಮ್ಮ
ಮರೆಯಬೇಡವೊ ಸೀತಾರಾಮವಿಠಲದೂತ 3
***