Showing posts with label ನ್ಯಗ್ರೋಧೋದುಂಬರನೆ ಕರ್ಮ ಫಲದಾತನು prasannashreenivasa. Show all posts
Showing posts with label ನ್ಯಗ್ರೋಧೋದುಂಬರನೆ ಕರ್ಮ ಫಲದಾತನು prasannashreenivasa. Show all posts

Thursday, 5 August 2021

ನ್ಯಗ್ರೋಧೋದುಂಬರನೆ ಕರ್ಮ ಫಲದಾತನು ankita prasannashreenivasa

..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಸರ್ವ ವಿಪತ್ ಪರಿಹಾರ ಸ್ತುತಿ


ನ್ಯಗ್ರೋಧೋದುಂಬರನೆ ಕರ್ಮ ಫಲದಾತನು

ಅಘೃಣಿ ಅಲ್ಲ ಹರಿ ವೈಷಮ್ಯ ಶೂನ್ಯ ಪ


ಭೂಕಂಪ ಮಾರಿಕಾವ್ಯಾಧಿ ವಾಹನ ಪತನ

ಉಕ್ಕಿ ಪ್ರವಹಿಸುವ ನದಿ ಮೊದಲಾದ್ದರಿಂದ

ಏಕ ಕಾಲದಿ ಸಂಗ ಮರಣ ಸಂಭವಿಸುವುದು

ಏಕೆಂದು ಶಂಕಿಸುತಿ ಕೇಳು ಶ್ರದ್ಧಾಳು 1

ಏಕ ಕಾಲದಿ ನಾನಾ ಜನರು ಸಂಗದಿ ಕೂಡಿ

ಸುಖಿಸುವರು ಮಂದ ಮಾರುತ ಪುಷ್ಪವನದಿ

ಶ್ರೀಕರ ಕಥಾ ಶ್ರವಣ ನಾಟಕ ಕೇಳಿಕೆಯು

ಹೀಗೆ ಜನ ಸಂಘದಲಿ ನಾನಾ ಸಂಭವವು 2

ಒಂದೊಂದು ಮನುಜನಿಗು ಇಂಥಾ ಕಾಲದಿ ಇಂಥಾ

ರೀತಿಯಲಿ ಇಂಥಾ ಸ್ಥಳದಲ್ಲಿ ಇಂಥಾ

ಹಿತಕರವೊ ಅಹಿತವೊ ಕರ್ಮಗತಿ ಸಂಭವವು

ಶ್ರೀದ ನಿಯಮಿಸುವ ವೈಷಮ್ಯವಿಲ್ಲದಲೆ 3

ಮಳೆ ಬಿಸಿಲುಭೂಕಂಪ ಚಂಡಮಾರುತ ಸುಳಿಸುಳಿದು

ಪ್ರವಹಿಸುವ ನದಿ ಹರಡುವ ದಾವಾಗ್ನಿ

ಎಲ್ಲ ಇಂಥಾ ಅಹಿತ ಸಂಭವದಿ ಸಿಲುಕುವರು

ಅಲ್ಲಲ್ಲಿ ಬಹುಜನರು ಕರ್ಮಗತಿಯಲ್ಲಿ 4

ಘೋರ ಭೂಕಂಪದ ಪೀಡೆಗೆ ಯೋಗ್ಯರು

ಯಾರು ಯಾರೊ ಒಳ್ಳೆವರೋ ಕೆಟ್ಟವರೊ

ಹರಿಯು ಆ ಜನರನ್ನು ಕಂಪನಕೆ ಒಳಮಾಡಿ

ಮರಣಾಂಗ ಹೀನತೆಯು ರಕ್ಷಣೆಯು ಈವ 5

ಭಿನ್ನ ಜೀವರು ಭಿನ್ನ ಕರ್ಮಗತಿ ಉಳ್ಳವರು

ಭಿನ್ನ ಫಲಯೋಗ್ಯರು ಆದ ಕಾರಣದಿ

ಕ್ಷೋಣಿ ಕಂಪನದಲ್ಲಿ ಮರಣ ಕೆಲವರಿಗೆ

ಅಂಗ ಹೀನತೆ ಕೆಲವರಿಗೆ ರಕ್ಷಣೆ ಕೆಲವರಿಗೆ 6

ಘೃಣಿ ಹರಿಯು ಭೂಕಂಪ ಆಗುವ ಪೂರ್ವದಲೆ

ಜನರು ಕೆಲವರನ್ನು ಬೇರೆ ಊರಿಗೆ ಕಳುಹಿ

ಹಾನಿಗೊಳಿಸುವ ಕಂಪನಕೆ ಸಿಲುಕದಂತೆ

ಇನ್ನು ಕೆಲವರನ್ನು ಅಲ್ಲಿ ಬಾರದೇ ಮಾಳ್ಪ 7

ಅಮಲ ಗುಣಗಣ ಸಿಂಧು ವಿಜ್ಞಾನಂದ ಹರಿಯೇ

ಕರ್ಮಾಧ್ಯಕ್ಷನು ಕರ್ಮಫಲದಾತ

ಕರ್ಮಜಡವಾದುದರಿಂ ಕರ್ಮ ಕೊಡದು ಫಲ

ಕರ್ಮಾಧ್ಯಕ್ಷ ಶ್ರೀಹರಿಯೇ ಫಲದಾತ 8

ಸಂಘ ಸುಖ ಪ್ರಾಪ್ತಿಯು ಹ್ಯಾಗೆ ದೊರೆಯುವುದೊ

ಸಂಘ ದುಃಖ ಪ್ರಾಪ್ತಿಯು ಹಾಗೆ ಭವಿಸುವುದು

ಸುಖ ದುಃಖ ಐಹಿಕ ವಿಷಯಜವು ಉದಾನಿಸಿ

ಅಘದೂರ ಗುರುಗ ಶ್ರೀ ಹರಿಯ ಸ್ಮರಿಸು 9

ನರಜನ್ಮ ಹೊಂದಿದವ ಹರಿನಾಮ ಸರ್ವದಾ

ಸ್ಮರಿಸುವುದು ಕರ್ತವ್ಯ ದೊರಕಿದ ಸ್ಥಳದಿ

ಹರಿನಾಮ ಭಕ್ತಿ ಪೂರ್ವಕದಿ ನುಡಿಯಲೇ ಬೇಕು

ನರಪಶÀು ಜಡಮತಿ ಮೂಢನು ನುಡಿಯ 10

ಹರಿಯೇ ಸರ್ವೋತ್ತಮನು ಮುಖ್ಯಕಾರಣ ವಿಷ್ಣು

ಶ್ರೀರಮಾಪತಿಯೇ ಸ್ವತಂತ್ರ ಜಗನ್ನಾಥ

ಸರಸಿಜೋದ್ಭವ ಶಿವ ಶಕ್ರಾದಿ ಸರ್ವರಿಗೂ

ಪ್ರೇರಕನು ಸ್ವಾಮಿಯು ಚಿತ್ ಅಚಿತ್ ನಿಯಂತ 11

ವಿಹಿತ ಸಾಧನಕ್ಕೊದಗೆ ನ್ಯಗ್ರೋಧೋದುಂಬರ ಹರಿ

ದೇಹ ಬೆಳಸುವ ಪೋಷಿಸುವ ರಕ್ಷಿಸುವನು

ಅಹರ್ನಿಶಿ ಪಾಲಿಸುವ ಭಕ್ತವಾತ್ಯಲ್ಯದಿ

ಮಹಾರ್ಹರ ರಕ್ಷಿಸಿದ ಪ್ರಹ್ಲಾದ ಗಜಪತಿಯ 12

ಹರಿಯ ಪಾದಕೆ ಅಭಿಷೇಕ ಮಾಡಿದ ಬ್ರಹ್ಮ

ಹರನು ಕೈಲಾಸ ವಾಸನು ಆ ತೀರ್ಥ

ಸಹಸ್ರನಾಮ ಬೃಹತೀ ಸಹಸ್ರ ಸಹ ಪಠಿಸುತ್ತಾ

ಶಿರದಲ್ಲಿ ಧರಿಸಿ ಸತಿ ಪಾರ್ವತಿಗೆ ಎರೆದ 13

ಹರಿನಾಮ ಸಂಸ್ಮರಣೆ ಪೂರ್ವಕದಿ ಈ ನುಡಿಯ

ಬರೆಯುವ ಪಠಿಸುವ ಕೇಳುವ ಭಕ್ತರನ್ನು

ಶ್ರೀರಮಾಯುತ ಹರಿ ಸುರವೃಂದ ಸಹ ಬಂದು

ಸಂರಕ್ಷಿಸುವ ಸರ್ವವಿಪತ್ ದೂರ ಮಾಡಿ 14

ಸತ್ತಾ ಪ್ರವೃತ್ತಿ ಪ್ರತೀತಿ ಪ್ರದ ಶ್ರೀ ಪತೇ

ವೃತತಿಜಾಸನ ಪಿತ ವರಾಹ ನರಸಿಂಹ

ಭೂತಿದ ದಯಾಬ್ಧಿ ಶ್ರೀ ಪ್ರಸನ್ನ ಶ್ರೀನಿವಾಸ ನಮೋ

ಸದಾ ಶರಣು ಮಾಂಪಾಹಿ ಸಜ್ಜನರ 15

***