Showing posts with label ನಾರಸಿಂಹನೆ ಧೀರ ನಂಬಿದೆನೊ ಪೊರೆಯೊ gopala vittala. Show all posts
Showing posts with label ನಾರಸಿಂಹನೆ ಧೀರ ನಂಬಿದೆನೊ ಪೊರೆಯೊ gopala vittala. Show all posts

Friday, 13 December 2019

ನಾರಸಿಂಹನೆ ಧೀರ ನಂಬಿದೆನೊ ಪೊರೆಯೊ ankita gopala vittala

ನಾರಸಿಂಹನೆ ಧೀರ | ನಂಬಿದೆನೊ ಪೊರೆಯೊ
ಶ್ರೀ ರಮಾಪತಿ ವೀರ | ಕರಿಗಿರಿ ವಿಹಾರ ||ಪ.||

ಸಾರಿದೆನೊ ನಿನ್ನ ಪದವ ಅನುದಿನ
ಸೇರಿಸೆನ್ನನು ಭಕ್ತಕೂಟದಿ
ಗಾರು ಮಾಡುವುದುಚಿತವೇ ಹರಿ
ಪಾರುಗಾಣಿಸೊ ಭವ ಸಮುದ್ರದಿ ||ಅ.ಪ.||

ತಡೆಯಲಾರೆನೊ ತಾಪ | ನಾನಾರಿಗುಸುರಲೊ
ಒಡಲ ದುಃಖವ ಭೂಪ | ನೀನಲ್ಲದಿಲ್ಲವೊ
ಕಡೆಮಾಡು ಭವ ಶ್ರೀಪ | ತೋರದಿರು ಕೋಪ
ಘುಡು ಘುಡುಸಿ ನೀ ಎನ್ನ ಬೆದರಿಸೆ
ತಡೆವೆನೇ ನಿನ್ನ ಕೋಪದಗ್ನಿಗೆ
ಬಿಡು ಬಿಡು ಬಿಂಕ ಎನ್ನೊಳು
ತಡೆಯೊ ಎನ್ನ ದುರುಳತನಗಳ
ಕಡುಕರುಣಿ ನೀನಲ್ಲವೆ ಹರಿ
ಒಡಲೊಳಗೆ ಪ್ರೇರಕನು ನೀನೆ
ನಡಸಿದಂದದಿ ನಡೆವೆನಲ್ಲದೆ
ಒಡೆಯ ಎನ್ನ ಸ್ವತಂತ್ರವೇನೊ? ||1||

ದುರುಳತನದಲಿ ದೈತ್ಯ | ಭೂವಲಯವೆಲ್ಲವ
ಉರವಣಿಸಿ ದುಷ್ಕುತ್ಯ | ಎಸಗುತಿರೆ ದುಃಖದಿ
ಸುರರು ಮೊರೆಯಿಡೆ ಸತ್ಯ | ದೃಢಮನದಿ ಭೃತ್ಯ
ಕರಕರೆ ಪಿತ ಬಡಿಸುತಿರಲು ದೊರೆಯೆ ನೀ
ಪೊರೆ ಎಂದು ಮೊರೆಯಿಡೆ
ಸರ್ವವ್ಯಾಪಕನೆಂದು ತೋರಲು
ತ್ವರಿತದಲಿ ಕಂಭದಲಿ ಬಂದು
ಸರಸಿಜವು ಕಂಗೆಡುವೊ ಕಾಲದಿ
ಧರಿಸಿ ತೊಡೆಯ ಮೇಲಸುರ ಕಾಯವ
ಕರುಳ ಬಗೆದು ಮಾಲೆ ಧರಿಸಿ
ಪೊರೆದೆಯೊ ಸ್ತುತಿ ಕೇಳಿ ಬಾಲನ ||2||

ಅಜಭವಾದಿಗಳೆಲ್ಲ | ಸ್ತುತಿಸಿದರೆ ಮಣಿಯದ
ಭುಜಗಶಾಯಿ ಶ್ರೀ ನಲ್ಲ | ನಾ ನಿನ್ನ ಸ್ತುತಿಸಿ
ಭಜಿಸಲಾಪೆನೆ ಕ್ಷುಲ್ಲ | ಮಾನವನ ಸೊಲ್ಲ
ನಿಜಮನವ ನೀ ತಿಳಿದು ಸಲಹೊ
ಧ್ವಜವಜ್ರಪದ ಕಮಲ ತೋರಿ
ಕುಜನನಲ್ಲವೊ ಹಿರಿಯರೆನಗೆ
ನಿಜಗತಿಯ ಪಥ ತೋರುತಿಹರೊ
ರಜ ತಮವ ದೂರಟ್ಟಿ ಶುದ್ಧದಿ
ಭಜಿಸುವಂದದಿ ಕೃಪೆಯ ಮಾಡಿ
ಸುಜನರೆನ್ನನು ಪಾಲಿಸುತ್ತಿರೆ
ನಿಜದಿ ಗೋಪಾಲಕೃಷ್ಣವಿಠ್ಠಲ ||3||


********