ಶ್ರೀ ರಘುಪತಿವಿಟ್ಠಲದಾಸಾರ್ಯರ ಕೃತಿ
ರಾಗ ಆರಭಿ ಆದಿತಾಳ
ವಿಜಯರಾಜ ಗುರುರಾಜಾಧಿರಾಜ ಮಹ -
ರಾಜಶಿರೋರತುನ ॥ ಪ ॥
ತ್ಯಜಿಸದೆ ನಿಮ್ಮ ಪದಬುಜವ ಬಿಡೆನೆಂಬೊ
ಸುಜನರ ಪಾಲಿಸಯ್ಯ ॥ ಅ ಪ ॥
ಜ್ಞಾನಭಕುತಿ ಕೊಡು ಗಾನಶೀಲನ ಮಾಡು
ಹೀನಮನವ ಕೆಡಿಸೋ ।
ನಾನೆಂಬೊ ಅಹಂಕಾರವನ್ನೆ ತೊಲಗಿಸೋ
ನಿನ್ನವರವನೆನಿಸೋ ।
ಧೇನಿಸುವಂದದಿ ಹರಿಯ ಪದಬುಜವ
ಮಾನಸದಲಿ ಸರ್ವದಾ ।
ಕಾಣಿಸಿಕೊಡು ನಾನು ಜೀವನು ನಿಜವೆಂಬೊ
ಜ್ಞಾನ ಮನಕೆ ಬರಲಿ ॥ 1 ॥
ಮೌನವಾಗಿರಲಾರು ಹೀನತಿ ನುಡಿಯಲು
ಪ್ರಾಣಪ್ರೇರಕರಿಂದಲಿ ।
ಆನೇನಾಡುವುದೆಲ್ಲ ಆನೆ ಎನ್ನುವೆನೆಲ್ಲ
ಆನೆ ಸ್ವತಂತ್ರನಲ್ಲ ।
ದೀನನಾಗೆರಗಿ ಸಜ್ಜನರ ಪದಾಬ್ಜಕ್ಕೆ
ರೇಣುವಾಗಿ ನಡೆದು ।
ನೀನೇ ಗತಿಯೆಂದು ನಿನ್ನ ಮೊರೆಹೊಕ್ಕೆನೊ
ಕ್ಷೋಣಿಯೊಳಗೆ ಬಳಲಿ ॥ 2 ॥
ನಿಮ್ಮ ಕೊಂಡಾಡುವ ಬುಧರು ಕಾಣಲು ಅವ -
ರೆಮ್ಮಾಪ್ತನೆಂದೆನಲಿ ।
ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು
ನಮ್ಮ ರಕ್ಷಕರಾಗಲಿ ।
ಇಮ್ಮಹಿಯೊಳಗೇಸು ಕಾಲವಾದರೂ ಪುಣ್ಯ -
ಸಂಬಂಧ ಕೆಡದಿರಲಿ ।
ಸುಮ್ಮನಸರೀಶ ರಘುಪತಿವಿಠಲ
ನಮ್ಮ ಸ್ವಾಮಿಯಾಗಲಿ ॥ 3 ॥
***
ವಿಶೇಷಾಂಶ :
ಅನುಪಲ್ಲವಿ :
" ನಿಮ್ಮ ಪದಬುಜವ ಬಿಡೆನೆಂಬೊ ಸುಜನರ ತ್ಯಜಿಸದೆ ಪಾಲಿಸಯ್ಯಾ ! " ಅಂತ ಅನ್ವಯ ಮಾಡಬೇಕು.
ಶ್ರೀವಿಜಯದಾಸಾರ್ಯರ ಶಿಷ್ಯರಾದ ಶ್ರೀವೇಣುಗೋಪಾಲವಿಠಲದಾಸರಿಗೂ (ಶ್ರೀಪಂಗನಾಮ ತಿಮ್ಮಣ್ಣಯ್ಯನವರು) ಮತ್ತು ಶ್ರೀವೇಣುಗೋಪಾಲವಿಠಲದಾಸರಿಂದ ಅಂಕಿತಪಡೆದ ಶ್ರೀವ್ಯಾಸವಿಠಲದಾಸರಿಂದ (ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರಿಂದ) ಅಂಕಿತೋಪದೇಶ ಪಡೆದ ರಘುಪತಿವಿಠಲಾಂಕಿತ ತಿಮ್ಮಣ್ಣದಾಸರಿಗೂ ಒಂದೇ ನಾಮಧೇಯ ' ತಿಮ್ಮಣ್ಣ ' ಎಂದು. ಇವರ ವೈರಾಗ್ಯಭಾಗ್ಯಕ್ಕೆ ಮೆಚ್ಚಿ ' ವೈರಾಗ್ಯಶಾಲಿ ತಿಮ್ಮಣ್ಣ ' ಎಂದು ಶ್ರೀವಿಜಯದಾಸಾರ್ಯರು ಸಂಭೋದನೆ ಮಾಡುತ್ತಿದ್ದರಂತೆ. ಇವರಿಗೆ ತಮ್ಮ ಗುರುಬಾಂಧವರಾದ ಶ್ರೀಗೋಪಾಲದಾಸರಾಯರಲ್ಲಿಯೂ ಪರಮಭಕ್ತಿ. ಆದ್ದರಿಂದ ' ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು ನಮ್ಮ ರಕ್ಷಕರಾಗಲಿ ' ಎಂಬ ವರವನ್ನು ಶ್ರೀವಿಜಯದಾಸರಾಯರಲ್ಲಿ ಯಾಚಿಸಿದ್ದಾರೆ !
ವಿವರಣೆ :
ಹರಿದಾಸರತ್ನಂ ಶ್ರೀಗೋಪಾಲದಾಸರು
****
ರಾಗ : ಆರಭಿ ತಾಳ : ಆದಿ
ವಿಜಯರಾಜಗುರು ರಾಜಾಧಿರಾಜ । ಮಹ ।
ರಾಜ ಶಿರೋರತುನ ।। ಪಲ್ಲವಿ ।।
ತ್ಯಜಿಸದೆ ನಿಮ್ಮ ಪದಾಬ್ಜವ ಬಿಡೆನೆಂಬೋ ।
ಸುಜನರ ಪಾಲಿಸಯ್ಯ ।। ಅನು ಪಲ್ಲವಿ ।।
ಜ್ಞಾನ ಭಕುತಿ ಕೊಡು ಗಾನ ಶೀಲನ ಮಾಡು ।
ಹೀನ ಮನವ ಕೆಡಿಸೋ ।
ಆನೆಂಬೋ ಅಹಂಕಾರವನ್ನೇ ತೊಲಗಿಸೋ ।
ನಿನ್ನವರವ ನೆನಿಸೋ ।।
ಧೇನಿಸುವಂದದಿ ಹರಿಯ ಪಾದಾಂಬುಜ ।
ಮಾನಸದಲಿ ಸರ್ವದ ।
ಕಾಣಿಸಿ ಕೊಡುವನು ಜೀವನು ನಿಜವೆಂಬ ।
ಧ್ಯಾನ ಮನಕೆ ಬರಲಿ ।। ಚರಣ ।।
ಮೌನಿಯಾಗಿರಲಾರು ಹೀನತೆ ನುಡಿಯಲು ।
ಪ್ರಾಣ ಪ್ರೇರಕರಿಂದಲಿ ।
ಆನೇನಾಡುವನಲ್ಲ ಆನೆನೆನಿಪನಲ್ಲ ಆನೆ ಸ್ವತಂತ್ರನಲ್ಲ ।
ದೀನನಾಗೆರಗಿ ಸಜ್ಜನರ ಪಾದಾಬ್ಜಕೆ ।।
ರೇಣುನಾಗಿ ನಡೆದು ।
ನೀನೇವೆ ಗತಿಯೆಂದು ।
ನಿನ್ನನೇ ಮೊರೆ ಹೊಕ್ಕೆ ।
ಕ್ಷೋಣಿಯೊಳಗೆ ಬಳಲಿ ।। ಚರಣ ।।
ನಿಮ್ಮ ಕೊಂಡಾಡುವ ಬುಧರ ನೋಡಲು ಅವ ।
ರೆಮ್ಮಾಪ್ತರೆಂದೆನಲಿ ।
ನಿಮ್ಮ ಪುಣ್ಯದ ಪುತ್ರ ಗೋಪಾಲದಾಸರು ।
ಎಮ್ಮ ರಕ್ಷಕರಾಗಿರಲಿ ।।
ಇಮ್ಮಹೀಯೊಳಗೇಸು ಕಾಲವಾದರು ಪುಣ್ಯ ।
ಸಮ್ಮಂದ ಕೆಡದಿರಲಿ ।
ಸುಮ್ಮನಸರೀಶ ರಘುಪತಿ ವಿಠ್ಠಲನು ।
ನಮ್ಮ ಸ್ವಾಮಿಯಾಗಲಿ ।।
****