ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ
ರಾಗ ಸಾರಂಗ
ಧ್ರುವತಾಳ
ಚಿತ್ತವೆ ಚಲಿಸದಿರು ಚನ್ನಾಗಿ ಲಾಲಿಸು
ಹೊತ್ತು ಹೊತ್ತಿಗೆ ನೀನು ಕಂಡ ಕಂಡ ಕಡಿಗೇ
ಸುತ್ತದಿರು ಸುತ್ತದಿರು ಬರಿದೆ ಹಂಬಲಿಸಿ ಪೂ -
ರ್ವೋತ್ತರ ಜ್ಞಾನವನ್ನು ಮರೆದು ಮರೆದು
ಎತ್ತ ಪೋಗಲತ್ತ ಗ್ರಾಸ ವಾಸಕ್ಕೆ ನಿನಗೆ
ಹೊತ್ತುಕೊಂಡು ಬಂದು ಕೊಡುತಿಪ್ಪನೋ
ಹತ್ತದೆಂದರೆ ಬದಿಯಲ್ಲಿ ನಿಂದು ಒಂದೊಂದು
ತುತ್ತು ಮಾಡಿ ಬಾಯಿಯೊಳಗೆ
ನೆತ್ತಿಯ ಮೇಲೆ ಠೊಣದು ವಾಂಛಲ್ಯದಿಂದ ಪುರು -
ಷೋತ್ತಮನೆ ಉಣಿಸುವನು ಷಡುರಸನ್ನ
ಚಿತ್ತವೆ ಚಲಿಸದಿರು ಹತ್ತುದಿಕ್ಕಿಗೆ ನೀನು ಪೋಗಲೇನು ಅಲ್ಲಲ್ಲಿ
ಉತ್ತಮೋತ್ತಮ ಹರಿ ಇರುತಲೇ ಇಪ್ಪ
ತೆತ್ತಿಗ ತಾನಾಗಿ ಆವಾವ ಕಾಲಕ್ಕೆ
ಪೆತ್ತ ಪಿತಾ ಮಾತೆಯಂದದಿ ಸಾಕುವ
ಇತ್ತ ಮುಂದಾಗಿ ಈ ಮಾತು ಮನ್ನಿಸು ನಿತ್ಯ
ತತ್ತಳಗೊಳ್ಳದಿರು ಧೈರ್ಯವಿರಲಿ
ಸತ್ಯಸಂಕಲ್ಪ ಸಿರಿ ವಿಜಯವಿಟ್ಠಲ ನಿನ್ನ
ಹತ್ತಿಲಿ ಇಪ್ಪನು ಗುಣಿಸಿ ಕಾಣೋ ॥ 1 ॥
ಮಟ್ಟತಾಳ
ಕಾಶಿಗೆ ಪೋದರೇನು ಕಲ್ಲೊಳಗಿದ್ದರೇನು
ದೇಶ ದೇಶ ತಿರುಗಲೇನು ದೀನನಾದರೇನು
ದೇಶಿಕನಾದರೇನು ವೇಷ ಧರಿಸಲೇನು ವೇದ ಓದಿದರೇನು
ವಾಸುದೇವನೆ ವಾಸಗ್ರಾಸವೆ ವಹಿಸಿ
ಲೇಶಕಾಲ ಬಿಡದೆ ಲೇಸು ಕೊಡುತಲಿಪ್ಪ
ಈಶನು ತ್ರಿಭುವನಕೆ ಈತನು ಕಾಣೆಲವೊ
ವಾಸರ ಕಳೆಯದಿರು ವಾಣಿ ಬರಿದೆ ಮಾಡಿ
ದೇಶ ಕಾಲ ಪೂರ್ಣ ವಿಜಯವಿಟ್ಠಲರೇಯ
ದಾಸನೆಂದವರಿಗೆ ದತ್ತ ಪ್ರಾಣನು ಕಾಣೊ ॥ 2 ॥
ತ್ರಿವಿಡಿತಾಳ
ಎಲ್ಲಿಯ ವೈಕುಂಠ ಎಲ್ಲಿ ಅನಂತಾಸನ
ಎಲ್ಲಿ ನಾರಾಯಣಪುರವೊ ಎನಗೆ
ಎಲ್ಲೆ ಬ್ರಹ್ಮಾಂಡ ಮತ್ತೆಲ್ಲಿ ಲೋಕಗಳು ಅವು
ಎಲ್ಲೋ ಅಲ್ಲೋ ಇಲ್ಲೋ ಲಕುಮೀ -
ವಲ್ಲಭ ಇರುತಿಪ್ಪ ಕುರುಹ ತಿಳಿಯದೆಂದು
ತಲ್ಲಣಿಸಿ ತಾಪದಲಿ ಬಳಲದಿರು
ಸೊಲ್ಲು ಕೇಳಲೊ ಚಿತ್ತ ಏಕಾಗ್ರದಲ್ಲೀ ನಿಂದು
ಬಲ್ಲಿದನಾಗೊ ನಿಜ ಭಕುತಿಯಿಂದ
ಬಲ್ಲವರನು ಕೇಳು ಅನುಭವ ಉಂಟು ಪುಸಿ -
ಯಲ್ಲವೋ ಎಂದಿಗೂ ಸಿದ್ಧಾಂತವೋ
ಎಲ್ಲ ವ್ಯಾಪುತವೊ ಹರಿಯೆ ನಿತ್ಯವೊ ಇದಕೆ
ಪ್ರಲ್ಹಾದ ದೇವನು ಸಾಕ್ಷಿ ಸಿದ್ಧ
ಸಲ್ಲದೊ ನಿನಗೆ ಈ ಸಂಶಯ ಸಾರಿದೆನೊ
ನಿಲ್ಲೊ ಚಂಚಲ ಬಿಟ್ಟು ಮಾರ್ಗ ಮೆಟ್ಟು
ಮೆಲ್ಲ ಮೆಲ್ಲನೆ ತತ್ವಜ್ಞಾನ ಸಂಪಾದಿಸಿ
ಗೆಲ್ಲೊ ಕಾಮ ಕ್ರೋಧ ವಿಷಯಂಗಳ
ಸಲ್ಲುವದೊ ನಿನಗೆ ವೈಕುಂಠ ಪಟ್ಟಣ
ಅಲ್ಲಿ ನೋಡು ನಾನಾ ಪರಿ ಸೌಖ್ಯವ
ಮಲ್ಲಮರ್ದನ ನಮ್ಮ ವಿಜಯವಿಟ್ಠಲನಂಘ್ರಿ
ಪಲ್ಲವ ನಿನ್ನೊಳಗೆ ಇಡೊ ದುಷ್ಕೃತವ ಸುಡೊ ॥ 3 ॥
ಅಟ್ಟತಾಳ
ಸುರರಿಂದ ಕೊಡುವನು ನರರಿಂದ ಕೊಡುವನು
ಗಿರಿ ತರು ಕರಿ ವಾಜಿ ರಥದಿಂದ ಕೊಡುವನು
ಉರಗ ವೃಷಭ ಗೋವು ಜಲದಿಂದ ಕೊಡುವನು
ಧರೆ ಗಗನ ವಾಯು ಪಾವಕ ಕೋಡಗ
ಕರಡಿ ಕೌತುಕ ನಾಟಕದಿಂದ ಕೊಡುವನು
ಶರ ಚಾಪ ನಾನಾ ಶಸ್ತ್ರದಿಂದ ಕೊಡುವನು
ವರ ಮಂತ್ರ ಸತ್ಕಥಾ ತಂತ್ರ ತಂತು
ತೃಣ ತರುಣಿ ನೆಳಲು ನಾದದಿಂದಲಿ ಕೊಡುವನು
ಪರಿಯಿಂದ ಪೇಳುವದೇನು ಕಸ ಕು -
ಪ್ಪೇರುತಿಪ್ಪ ತಿಪ್ಪೇ ಬೋರಿಗೆ ಇಂದ ಕೊಡುವನು
ಹರಿ ಕಲ್ಪಿಸಿದ ವೃತ್ತಿ ಆವಾವ ಬಲ್ಲನು
ಸಿರಿ ಅಜ ಭವರೆಲ್ಲ ಎಣಿಸಿ ಗುಣಿಸುವರು
ಹರಿ ಅನಂತ ಹಸ್ತದಲ್ಲಿ ಕೊಡುತಿಪ್ಪ
ಅರೆ ಮರೆಗೊಳದಿರು ಅನಾದಿ ಇಂದಲಿ
ವಿರಚಿಸಿದ ಕ್ಲೃಪ್ತಿ ಕಡಿಮೆಯಾಗದು ಕಾಣೊ
ಸರುವೋತ್ತಮ ನಮ್ಮ ವಿಜಯವಿಟ್ಠಲರೇಯ
ಕರೆದು ಕೊಡುವ ಬಹು ಅಮೃತಕರನು ॥ 4 ॥
ಆದಿತಾಳ
ಊರಿಗೆ ಹೋದ ಮಗನ ನೋಡುವಾತುರದಿಂದ
ಸಾರಿಸಾರಿಗೆ ಜನಕ ಕಾಂಬೆನೆಂದು
ಸಾರುತಲಿ ತನ್ನ ಹೆಂಡತಿಯ ಒಡಗೂಡಿ
ದಾರಿಯ ಅರಸುತ್ತ ಹಿರಿಯ ಮಗನ ಕೂಡ
ವಾರ ವಾರಕೆ ಯೋಚನೆ ಮಾಡುವಂತೆ ಸಾಕುವ
ಭಾರಕರ್ತನಾಗಿದ್ದು ಗುಣಪೂರ್ಣ
ಹರಿ ಲಕುಮಿ ಮಾರುತ ದೇವನೊಡನೆ
ಧಾರುಣಿಯೊಳಗೊಬ್ಬ ಚಾರುವಾಕನಾಗಿ ಒಮ್ಮೆ ನೆನೆದವನ
ವಾರುತಿ ಕೇಳೇನೆ ಕಂಡೇನೆ ಎಂದು ಇನಿತು
ಪಾರತಂತ್ರನಾಗಿ ತಿರುಗುವ ನಮ್ಮ ಸ್ವಾಮಿ
ಆರಾದರಿಂದ ಉಂಟೆ ಅನುಕಂಪನೊ ಹರಿ
ಹಾರೈಸುವನು ತನಗೆ ಭಕ್ತರೆ ಗತಿ ಎಂದು
ಪುರಾಣಗಳಲಿ ಕೇಳಿ ಕೇಳುತಲಿರುವ
ಕಾರುಣ್ಯಮೂರ್ತಿಯೆ ಕರುಣಾಳೊ ದಯಾಂಬುಧಿಯೆ
ಸೂರೆ ಕಾಣೊ ಭಕ್ತರಗೋಸುಗ ಚಿತ್ತ
ಮೀರದಿರೆಲೊ ಯಿದೆ ಇಷ್ಟಾರ್ಥವೆನ್ನು ಉ -
ದ್ಧಾರನಾಗು ಹಲವು ಹಂಬಲವನ್ನು ತೊರೆದು
ಘೋರ ಕ್ಲೇಶ ನಾಶ ವಿಜಯವಿಟ್ಠಲ ನಿನ್ನ
ತಾರಕ ಮಾಡುವ ಭವ ಸಾಗರದಿಂದ ॥ 5 ॥
ಜತೆ
ಎಲ್ಲಿಗೆ ಪೋದರೇನು ಎಲ್ಲಿ ಇದ್ದರೇನು
ಒಲ್ಲೆನೆಂದರೆ ಅಭಯ ಕೊಡುವ ವಿಜಯವಿಟ್ಠಲಾ ॥
***