ರಾಗ: ಆನಂದಭೈರವಿ ತಾಳ: ಆದಿ
ಕೈಯ ಬಿಡುವರೇ ಗುರು ರಾಘವೇಂದ್ರ
ಕೈಯ ಬಿಡುವರೇ ಪ
ಕೈಯ ಬಿಡುವರೇನೊ ಗುರುವೆ
ಹೇಯ ಭವದಿ ನೋಯುವವನ
ಕಾಯದಿರೆ ಇನ್ಯಾರು ಎನಗೆ
ಜೀಯ ನಿನ್ನನೆ ಮೊರೆಯ ಹೊಕ್ಕನೊ ಅ.ಪ
ತೊಳಲಿ ಬಳಲಿದೆ ಬೇಸತ್ತು ಬಂದೆ
ನೆಲೆಯ ಕಾಣದೆ ಕೃಪಾಳೊ ನಿನ್ನ ನೆಳಲ ಸೇರಿದೆ
ಹಲವು ಜನರ ಹಂಬಲಗಳ
ಸಲಿಸಿ ಪೊರೆವ ಗುರುವೆ ನಿನ್ನ
ಬಳಿಗೆ ಬಂದ ಬಳಿಕ ಇನ್ನು
ಒಲಿದು ಸಲಹದಿರಲಿನ್ಯಾರು 1
ಎಷ್ಟು ಪೊಗಳಲಿ ನಿಮ್ಮ ಕೀರುತಿ
ಕೃಷ್ಣ ಕೃಪೆಯಲಿ ಮೆರೆಯುತಿದೆ ಯಥೇಷ್ಟ ಜಗದಲಿ
ಶಿಷ್ಟಪೋಷಕ ನಿನ್ನ ಪದವ
ಮುಟ್ಟಿ ಬೇಡಿಕೊಂಬೆ ಎನ್ನ
ಕಷ್ಟಗಳನು ಕಳೆಯದಲೆ ಕ-
ನಿಷ್ಠನೆಂದು ಎಣಿಸಬೇಡ 2
ಲೆಕ್ಕವಿಲ್ಲದೆ ಆರ್ತಜನರ ದುಃಖ ಹರಿಸಿದೆ
ಇದಕೇಳಿ ಬಂದಿಹೆ ದಿಕ್ಕು ತೋಚದೆ
ಅಕ್ಕರೆಯಲಿ ಕರೆದು ನಿಮ್ಮ
ಮಕ್ಕಳಲ್ಲಿ ಒಬ್ಬನೆಂದು
ರಕ್ಷಿಸೊ ರಮಾಕಾಂತವಿಠಲನ
ಭಕ್ತಾಗ್ರಣಿ ಶ್ರೀ ಯತಿಶಿರೋಮಣಿ 3
*****