Showing posts with label ಕಂಕಣಾಕಾರವನ್ನು ಬರೆದು vijaya vittala ankita suladi ಕಂಕಣಾಕಾರ ಸುಳಾದಿ KANKANAKAARAVANNU BAREDU KANKANAKAARA SULADI. Show all posts
Showing posts with label ಕಂಕಣಾಕಾರವನ್ನು ಬರೆದು vijaya vittala ankita suladi ಕಂಕಣಾಕಾರ ಸುಳಾದಿ KANKANAKAARAVANNU BAREDU KANKANAKAARA SULADI. Show all posts

Monday 9 December 2019

ಕಂಕಣಾಕಾರವನ್ನು ಬರೆದು vijaya vittala ankita suladi ಕಂಕಣಾಕಾರ ಸುಳಾದಿ KANKANAKAARAVANNU BAREDU KANKANAKAARA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಕಂಕಣಾಕಾರ ಸುಳಾದಿ 

 ರಾಗ ಸಾವೇರಿ 

 ಧ್ರುವತಾಳ 

ಕಂಕಣಾಕಾರವನ್ನು ಬರೆದು ಅದರ ಮಧ್ಯ 
ಓಂಕಾರ ಎರಡು ಎಡ - ಬಲದಿ ರಚಿಸಿ 
ಶಂಕೆ ಇಲ್ಲದೆ ನಡುವೆ ಘೃಣಿಯೆಂದು ಲಿಪಿಸಿ ಮೀ - 
ನಾಂಕನಯ್ಯನ ಪೀಠಸ್ಠಳವಿದೆಂದು 
ಬಿಂಕದಲಿ ಸ್ವರದೊಳಗೆ ಕಡಿಯಣಾ ಸ್ವರವೆರಡಾ - 
ಲಂಕಾರವನೆ ಮಾಡಿ ಅದರ ಬಳಿಯ 
ಕಂಕಣಾಕಾರವನ್ನು ಒಳಗೆ ಮಾಡಿಕೊಂಡು 
ಮಂಕುಮತಿಯ ತೊರೆದು ತ್ರಿಕೋಣಸುತ್ತಿಸಿ 
ಶ್ರೀಂಕಾರ ಇಚ್ಛಾಶಕ್ತಿ ಕ್ಲೀಂಕಾರ ಕ್ರಿಯಾಶಕ್ತಿ 
ಹ್ರೀಂಕಾರ ಜ್ಞಾನಶಕ್ತಿ ಮೂರು ಮೂಲೆಗೆ ಬರೆಯೊ
ಪಂಕಜ ಪಾಣಿಯು ಶ್ರೀ - ಭೂ - ದುರ್ಗಾನಾಮಕಳು 
ಪಂಕಜಾಕ್ಷನ ರೂಪ ಮೂರು ಉಂಟು 
ಕಂಕಣಾಕಾರ ಮರಳೆ ತ್ರಿಕೋಣ ಮೇಲೆ ಬರೆದು
ಸಂಕೋಚವಾಗಿ ಇದೆ ದ್ವಿತೀಯ ವಲಯ 
ಪಂಕಜ ಮಿತ್ರ ಸೋಮ ಅಗ್ನಿ ಜನರ ನಾಗ 
ಕಂಕಣ ಅನಲ ವರುಣ ದಿಕ್ಕಿಗೆ ರಚಿಸಿ 
ಕಿಂಕರ ಜನಪಾಲ ವಿಜಯವಿಠ್ಠಲ ಅಕ - 
ಳಂಕನ ಭಜಿಸುವುದು ಹೃದಯದಲ್ಲಿ ತಿಳಿದು ॥ 1 ॥

 ಮಟ್ಟತಾಳ 

ಕರಿ ಅಜ ರಥ ವೀಥಿ ಎಂದೆಂಬುವ ಮೂರು 
ಬರೆದು ಇದಕೆ ಹನ್ನೆರಡು ರಾಶಿಗಳು ವಿ - 
ಸ್ತರವಾಗಿ ಉಂಟು ಎರಡೆರಡೊಂದು ಕಡೆ 
ಅರಿವದು ಸ್ಥಿಮಿತ ಸಮಗತಿ ತ್ವರಗತಿ ಸೂರ್ಯನ್ನ 
ಎರಡು ನಾಲಕು ಕೋಣೆ ವಿರಚಿಸದರ ಮೇಲೆ 
ಮರಳೆ ಮಧು - ಮಾಧವಾ ಕರೆಸುವ ಋತು ಒಂದು 
ಬರೆದು ಪ್ರಣವ ವಿವರ ಹೃದಯದಲ್ಲಿ ನಮ - 
ಸ್ಕರಿಸು ಜ್ಞಾನಾತ್ಮನೆಂದು ಧರಿಸು ಈ ಪರಿ ಮೂರು ಎರಡು ಕೋಣೆಯ ಮಧ್ಯ 
ತರುವಾಯ ಮಾಸ - ಋತು ವರುಷ ತಾರಕ ಸಂ - 
ಸ್ಮರಿಸಿ ಕ್ರಮ ವರ್ಣ ಹರಿ ಐಶ್ವರ್ಯಾದಿ 
ಪರಮ ಮೂರ್ತಿಗಳನ್ನು ಶಿರಸು ಮೊದಲು ಮಾಡಿ 
ಕರತಳ ಪದತನಕ ಚರಿತೆಯಾ ಕೊಂಡಾಡು 
ಗುರುತು ಆರು ಕೋಣೆ ಸರಿ ಉಪರಿಭಾಗ 
ಎರೆಡರ ಮಧ್ಯ ವರಣಂಗಳು ಉಂಟು 
ಅರಹುವೆ ಪ್ರಥಮದಲ್ಲಿ ಎರಡೆರಡು ನಾಲ್ಕು 
" ಅ , ಆ , ಕ , ಖ , ಡ , ಢ , ಮ , ಯ " 
ಎರಡನೆಯ ಮನಿಯಲ್ಲಿ ವರಣಗಳಿಪ್ಪವಯ್ಯ 
" ಇ , ಈ, ಉ , ಊ, ಗ , ಘ , ಣ , ತ, ರ , ಲ " 
ಸ್ಮರಿಸು ಮೂರನೆ ಮನಿಯಲ್ಲಿರುತಿಪ್ಪ ಮಾತ್ರ 
" ಋ , ೠ , ಲೃ , ಲೄ ,ಙ , ಚ , ಥ , ದ , ವ , ಶ " 
ಕರಿಸಿಕೊಂಡವು ಇನಿತು ನಾಲ್ಕನೆ ಸ್ಥಾನದಲಿ 
"ಎ , ಐ, ಛ , ಜ , ಧ , ನ , ಷ , ಸ " 
ವರಣಂಗಳು ಗ್ರಹಿಸು ಐದನೆ ಮನಿಯಲ್ಲಿ 
" ಓ , ಔ , ಝ , ಞ, ಪ , ಫ , ಹ , ಳ " 
ನಿರುತ ಇಪ್ಪದು ಕೇಳಿ ಕಡಿಯಣ ಮನಿಯಲ್ಲಿ 
" ಅಂ , ಅಃ , ಟ , ಠ , ಬ , ಭ, ಕ್ಷ " ಬರೆದು 
ಈ ಪರಿಯಲ್ಲಿ ಆರು ಮನಿಯ ಮಧ್ಯ 
ಸರಿ ಇಲ್ಲಿಗೆ ಎನ್ನಿ ತರುವಾಯ ನಾಲ್ಕು 
ಎರಡೂ ವಲಯಾಕಾರ ಎರಡು ಕೋಣಿಯ ಗಣಿತ 
ನಿರೀಕ್ಷಿಸಿ ಮನದಲ್ಲಿ ಪರಿಶುದ್ಧನಾಗಿ 
ಪರಮಪುರುಷ ನಮ್ಮ ವಿಜಯವಿಠ್ಠಲ ಮೂರ್ತಿಯ 
ಸ್ಮರಿಸು ಅಜ್ಯಾದಿಗಳ ನರಸಿಂಹ ಪರಿಯಂತ ॥ 2 ॥

 ರೂಪಕತಾಳ 

ಆರು ಕೋಣಿಯ ಮೇಲೆ ವರ್ತುಳಾಕಾರವನ್ನು 
ಚಾರುವಾಗಿ ಬರೆದು ಅದರ ಸುತ್ತಲು ಎಂಟು 
ವಾರಿಜ ದಳವನ್ನು ರಚಿಸಿ ರಮ್ಯವಾಗಿ 
ಸೌರಿ ಸ್ವರ್ಭಾನು ಗುರು ಬುಧ ಶುಕ್ರ ಚಂದ್ರಮ 
ಧಾರುಣಿಸುತ ಕೇತು ಇವರನ್ನ ಮಧ್ಯ 
ಹಾರೈಸಿ ಬರೆದು ಇವರಿವರ ಬಳಿಯಲ್ಲಿ ಓಂ - 
ಕಾರ ಸಹಿತವಾಗಿ ನಮೋನಾರಾಯಣಾನೆಂಬೊ 
ಈರೆರಡು ನಾಲ್ಕು ವರ್ಣಗಳು ವೊಂದೊಂದರಲ್ಲಿ 
ಆರಾಧಿಸಿ ಬರೆದು ಬೀಜಾಕ್ಷರವನ್ನು 
ಸಾರವನ್ನು ತಿಳಿ ಎಂಟು ವರ್ಣಮಿಳಿತ 
ತಾರಮಂತ್ರವೆ ಸತ್ಯ ಇದರ ನಿಯಾಮಕ ವಿಶ್ವ 
ಮೂರುತಿ ಮೊದಲಾದ ಅಷ್ಟ ರೂಪಂಗಳುಂಟು 
ಸೌರಿ ರಾಹು ಮಧ್ಯ ಆದಿ ವರ್ಣವೆ ಲಿಪಿಸಿ
ದ್ವಿರಷ್ಟ ಮಾತ್ರಾ ವರ್ಗವ ಇದಕೆ ಇಂದಿರಾ 
ಮಾರುತ ದೇವನ್ನ ಬರೆದು ಶ್ರುತಿ ಕಾಲಗಳ 
ಈ ರೀತಿಯಿಂದಲಿ ವಿಶ್ವನ್ನ ಸ್ಮರಿಸೆ 
ಕಾರುಣ್ಯ ಮಾಡುವನು ಮುಂದೆ ಕ ವರ್ಗ ಉ - 
ಕಾರ ತೈಜಸ ದೇವನ ಬರೆದು ಕ ವರ್ಗಕ್ಕೆ 
ಧಾರುಣಿ ಉದಕಾಗ್ನಿ ವಾಯು ಗಗನ ಭೂತ 
ಮೂರೆರಡು ಸ್ಥಾಪಿಸಿ ಅಲ್ಲಿ ಮಾನಿಗಳನ್ನು 
ತಾರೇಶ - ಸ್ವರ್ಭಾನು ಮಧ್ಯದಲ್ಲಿ ಸಿದ್ಧಾ 
ಆ ರೋಹಿಣಿಯ - ಗುರು ಈರ್ವರ ನಡುವೆ ಮ - 
ಕಾರ ಪ್ರಾಜ್ಞ ಮೂರುತಿ ಚ ವರ್ಗ ಒಂದೊಂದಕೆ 
ಈರೆರಡು ಮೇಲೊಂದು ಜ್ಞಾನೇಂದ್ರಿಯಗಳುಂಟು 
ವಾರ ವಾರಕೆ ಬಿಡದೆ ತತ್ತ್ವೇಶರುಗಳ ವಾಸ 
ತೋರುವ ತುರ್ಯದೇವನು ಟ ವರ್ಗಕೈದು 
ಮೀರದೆ ಕರ್ಮೇಂದ್ರಿಯ ಪಾಣಿ ಪಾದದಿ ಪಂಚ 
ಕಾರಣಿಕರಲ್ಲಿ ವಸ್ವಾದಿ ನಿರ್ಜರರೂ 
ಸಾರಿರೈ ಬುಧ - ಶುಕ್ರ ಅಂತರಾಳದಲ್ಲಿ ವಿ - 
ಸ್ತಾರ ಇದನೆ ತಿಳಿದು ಶುಕ್ರ - ಚಂದ್ರನ ನಡುವೆ 
ಭೋ ರನ್ನ ಆತ್ಮಾಮೂರುತಿ ಬಿಂದು ತ ವರ್ಗ 
ಪೂರೈಸು ಪಂಚ ತನ್ಮಾತ್ರಗಳು ಶಬ್ದಾದಿ 
ಮಾರುತಗಳೈದು ಪ್ರಾಣಾದಿ ನಾಮದಲ್ಲಿ 
ಸೇರಿಕೊಂಡಿಪ್ಪರೈ ಮುಂದೆ ಲಾಲಿಸಿ ಕೇಳಿ 
ಗೌರೀಶನ ಶಿರದಲ್ಲಿ ಇಪ್ಪ ಕುಜನ ನಡುವೆ 
ಮೂರುತಿ ಅಂತರಾತ್ಮನು ಘೋಷ ಪ ವರ್ಗ 
ಆರನೇ ಮನೆ ಎನ್ನಿ ಇಲ್ಲಿಪ್ಪದು ಅಹಂ - 
ಕಾರ - ಬುದ್ಧಿ - ಚಿತ್ತ - ಮನಸು - ಚೇತನ ತತ್ವ 
ಮಾರಾರಿ ಮಿಗಿಲಾದ ದೇವತಿಗಳಕ್ಕು 
ಧಾರುಣಿಸುತ ಕೇತು ಇವರ ಮಧ್ಯದಲ್ಲಿ 
ಶ್ರೀರಮಣ ಪರಮಾತ್ಮ ಶಾಂತವೆಂಬೋದು ಓಂ - 
ಕಾರದೊಳಗಿನ ವರ್ಣ ಯ ವರ್ಗ ಚತುರ್ವಿಧಾ 
ಆರೊಂದು ಧಾತುಗಳು ತ್ವಕ್ - ಚರ್ಮ - ರಕ್ತಾದಿ 
ವಾರಿಜ ಮಿತ್ರನ್ನ ಮುಸುಕುವನ ಶನಿ ಮಧ್ಯ 
ಬೀರುವೆನು ಜ್ಞಾನಾತ್ಮ ಅತಿಶಾಂತ ಶ ವರ್ಗ - 
ಕ್ಷಾಂತ ಸತ್ವ ರಜ ತಮ ತ್ರಯಾವಸ್ಥಿಗಳು 
ತಾರ ನಮೋನಾರಾಯಣವೆಂಬೊ ವೆಂಟು 
ಸೌರಿ ಮಿಕ್ಕಾದೆಂಟು ದಳದಲ್ಲಿ ಲಿಖಿಸೋದು
ವಾರಿಜಭವನಯ್ಯಾ ವಿಜಯವಿಠ್ಠಲರೇಯಾ 
ಶರೀರದೊಳಗಿದ್ದು ತನ್ನವಗೆ ತಿಳಿಪುವಾ ॥ 3 ॥

 ಝಂಪೆತಾಳ 

ಹನ್ನೆರಡು ದಳವುಳ್ಳ ಕಮಲ ವಲಯಾಕಾರ 
ಚನ್ನಾಗಿ ಬರೆಯುವುದು ಇದರ ಮೇಲೆ 
ಇನ್ನು ಒಂದೊಂದು ದಳದೊಳಗೆ ಲಿಖಿಸಲಿಬೇಕು 
ಮನ್ನಿಪದು ಜ್ಞಾನಿಗಳು ಬಾಲಬೋಧ 
ಮುನ್ನಾದಿ ದಳದಲ್ಲಿ ಮೇಷರಾಶಿಯ ಬರೆದು 
ಬಿನ್ನಣದಲಿ " ಓಂ ಓಂ " ಇದಕೆ ಕೇಶವಮೂರ್ತಿ 
ಭಿನ್ನ ವರ್ಣಂಗಳು " ಅ ಕ ಡ ಮ " ವೆಂಬವು ನಾಲ್ಕು 
ಇನ್ನಿತು ರಚಿಸಿ ಎರಡನೇ ದಳದಲ್ಲಿ 
ಸನ್ನುತಿಸು ವೃಷಭ " ಆ ಖ ಢ ಯ " ಚತುರವರ್ಣಗಳು 
" ಓಂ ನಂ " ನಾರಾಯಣಮೂರ್ತಿ ನೆನೆದು 
ಘನ್ನ ಮೂರನೆ ದಳದಿ ಮಿಥುನ ರಾಶಿಯ ಬಳಿಯ 
ವರ್ಣಿಸಿ " ಓಂ ಮೋಂ " ಮಾಧವದೇವನ್ನ 
ಗಣ್ಯ " ಇ ಗ ಣ ರ " ನಾಲ್ಕು ಮಾತ್ರಗಳ ಬರೆದು ನಿಜ - 
ವೆನ್ನಿ ನಾಲ್ಕನೆ ದಳಕೆ ಮನಸು ಮಾಡಿ 
ಪುಣ್ಯವೇ ಉಂಟು ಕರ್ಕರಾಶಿ " ಈ ಘ ತ ಲ " 
ವನ್ನು " ಓಂ ಭಂ " ವರ್ಣ ಗೋವಿಂದನು 
ನಿನ್ನೊಳಗೆ ತಿಳಿವುದೂ ಐದನೆ ಪತ್ರದಲಿ 
ಪೆಣ್ಣುಗಳ ಮಧ್ಯದಾ ಪೆಸರಿನ ರಾಶಿ 
" ಉ ಊ ಙ ಥ ವ " " ಓಂ ಗಂ " ಇದಕೆ ವಿಷ್ಣುಮೂರ್ತಿ 
ಕನ್ಯೆಯಲಿ "ಋ ೠ ಚ ದ ಶ" "ಓಂ ವಂ" ವರ್ಣ ಮಧುಸೂ - 
ದನ ದೇವನ ಭಜಿಸು ಷಡ್ ದಳದಲ್ಲಿ 
ಸನ್ಮತವಹುದು ತುಲಾರಾಶಿ " ಲೃ ಲೄ ಛ ಧ ಷ " ಗಳು 
ಇನ್ನು ತ್ರಿವಿಕ್ರಮ " ಓಂ ತೇಂ " (ಓಷ್ಠಾ) ಸಪ್ತಮ ದಳದಿ 
ಮಣ್ಣು ಭಕ್ಷಿಪ ಕ್ರಿಮಿ " ಏ ಐ ಜ ನ ಸ " ವರ್ಣ 
ವನ್ನು " ಓಂ ವಾಂ " ವಾಮನ ಅಷ್ಟಮ ದಳದಿ 
ಹೊನ್ನಿನಂಥ ಮಾತು ಧನುರಾಶಿ ಲಿಪಿಸೆ ಸಂ - 
ಪನ್ನ " ಓ ಝ ಪ ಹ " " ಓಂ ಸುಂ " ಶ್ರೀಧರ 
ಇನ್ನು ನೋಡು ಪತ್ರ ನವಮದಲಿ ಈ ಪರಿ 
ಎನ್ನು ಗ್ರಹಿಸುವುದು ಹತ್ತು ದಳದಿ 
ಇನಿತಾದರು ಸತ್ಯ ಮಕರ " ಜ ಞ ಫ ಳ " 
" ಓಂ ದೇಂ " ಅನಂತ ರೂಪಾತ್ಮಕ ಹೃಷಿಕೇಶ 
ಹನ್ನೊಂದನೆ ದಳದಲ್ಲಿ ಕುಂಭ " ಅಂ ಟ ಭ ಕ್ಷ " "ಓಂ" 
ಎನ್ನು " ವಾಂ " ಇದಕೆ ಶ್ರೀಪದ್ಮನಾಭ 
ಹನ್ನೆರಡನೇ ದಳದಿ ಮೀನ " ಅಃ ಠ ಭ " 
ಚೆನ್ನಾಗಿ ರಚಿಸಿ " ಓಂ ಯಂ " ದಾಮೋದರ 
ಹನ್ನೆರಡು ದಳದೊಳಗೆ ಇಷ್ಟೆ ಭಗವದ್ರೂಪ 
ಹನ್ನೆರಡು ಮಾತೃಕೆಯ ಕೂಡಿಸಲು 
" ಓಂ ನಮೊ ಭಗವತೆ ವಾಸುದೇವಾಯ " ಪ್ರ -
ಸನ್ನ ದೇವನ್ನ ನೋಡಿ ಏಕ ಪಂಚಾಶ - 
ದ್ವರ್ಣ ಒಂದೊಂದರಲಿ ಹಂಚಿ ಹಾಕಿ 
ಹನ್ನೆರಡು ರಾಶಿಗಳ ಬರೆದು ಸ್ತುತಿಸಿ 
ಧನ್ಯನಾಗೆಲೊ ಮುಂದೆ ದಳದ ಸಂಧಿಗಳಲ್ಲಿ 
ರನ್ನ ತಾರ ಯೋಗ ಒಂಭತ್ತು ಪದದಂತೆ 
ಹನ್ನೆರಡು ರಾಶಿಗೆ ವಿಭಾಗ ಮಾಡಿ 
ಪನ್ನಗಶಾಯಿ ಸಿರಿ ವಿಜಯವಿಠ್ಠಲನ ಕಾ - 
ರುಣ್ಯವನು ಪಡೆದು ಚಿಂತಿಸು ಸುಹೃದಯದೊಳಗೆ ॥ 4 ॥

 ತ್ರಿವಿಡತಾಳ 

ದ್ವಾದಶದಳವುಳ್ಳ ಕಮಲದ ಮೇಲೆ 
ದ್ವಿದ್ವಾದಶ ಪತ್ರದ ಕಮಲ ಬರೆದು 
ಸಾಧಿಸು ಒಂದೊಂದು ದಳದ ಮಧ್ಯದಲ್ಲಿ ವಿ - 
ನೋದ ಚತುರವಿಂಶತಿ ವರ್ಣಗಳ 
ವೇದ ಮಾತಾ ಮಂತ್ರ ಇದೆ ಎನ್ನು ಕೇಶವ 
ಮಾಧವಾದಿ ವರ್ಣ ಮೂರ್ತಿಗಳ 
ಪಾದವೇ ಸ್ಮರಿಸುತ್ತ ಮತ್ತೆ ಸೂರ್ಯನ ಗಮನ 
ಭೇದದಿಂದಲಿ ತಿಳಿ ನವ ವೀಥಿಯ 
ಐದಿಸು ಒಂದೊಂದು ಕಡೆ ಮೂರರ ಪ್ರಕಾರ 
ಆದಾವಿಲ್ಲಿಗೆ ತಾರೆ ಇಪ್ಪತ್ತೇಳು 
ಐದೇಳು ರಾಶಿಗಳು ಹಂಚಿ ಹಾಕಲಾಗಿ 
ಪಾದ ಪಾದಾರ್ಧ ತ್ರಿಪಾದವಹುದು 
ಪಾದ ತ್ರಿಮಂತ್ರ ತತ್ಸವಿತುಃ ವರೇಣ್ಯಂ ಭ - 
ರ್ಗೋದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾ 
ಆದಿ ಮೂರುತಿ ನಮ್ಮ ವಿಜಯವಿಠ್ಠಲನ ಶ್ರೀ - 
ಪಾದವ ನೆರೆನಂಬು ಓಂ ಕಾರ ನುಡಿಯುತ್ತಾ ॥ 5 ॥

 ಅಟ್ಟತಾಳ 

ಇದರ ಮೇಲೆ ಏಕ ಪಂಚಾಶದ್ದಳವುಳ್ಳ 
ಪದುಮವ ಬರೆದು ಪ್ರದಕ್ಷಿಣೆ ಮಾಡಿ 
ಮುದದಿಂದ ದ್ವಿರಷ್ಟ ಮಿಕ್ಕ ಮೂವತ್ತೈದು 
ಇದೆ ಇದೆ ದಳದೊಳು ಲಿಪಿಸಿ ಅಜಾದಿಯ 
ವೊದಗಿ ಸ್ತೋತ್ರವ ಮಾಡು ವರ್ಣದೇವತವೆಂದು 
ತುದಿ ಮೊದಲಿದರ ವಿಸ್ತಾರವೆ ಈ ಪರಿ 
ಇದೆ ಚಕ್ರಾಂಬುಜವೆಂದು ಕರೆಸುತಿಪ್ಪುದು 
ಹೃದಯಾಕಾಶ ವಾರಿ ಸ್ಠಂಡಿಲ ಗಗನ ಸೂರ್ಯ 
ವಿಧುಮಂಡಲ ಸಮಸ್ತ ಉತ್ತಮಸ್ಠಾನ 
ಇದೆ ನಿರ್ಮಾಣ ಮಾಡಿ ಸತ್ಕರ್ಮದಲಿ ನಿತ್ಯ 
ಪದೋಪದಿಗೆ ಶ್ರೀ ಹರಿಯ ಧ್ಯಾನ ಮಾಡಲಿಬೇಕು 
ಇದರೊಳು ಏಳು ಕೋಟಿ ಮಂತ್ರಾರ್ಥವೆ ಉಂಟು 
ಅಧಿದೈವ ಅಧಿಭೂತ ಅಧ್ಯಾತ್ಮವೇ ಉಂಟು 
ಅಧಿಕಾರತನ ಭೇದ ತಿಳಕೊಂಬ ಜೀವಿಗಳಿಗೆ 
ಸದಮಲಾನಂದ ನಮ್ಮ ವಿಜಯವಿಠ್ಠಲರೇಯಾ 
ಬದಿಯಲ್ಲಿ ಇರುತಿಪ್ಪ ಚಕ್ರಾಬ್ಜ ಬಲ್ಲವನಿಗೆ ॥ 6 ॥

 ಆದಿತಾಳ 

ಸ್ನಾನ ಉದಕ ಆಚಮನಿಯ ಸಂಧ್ಯಾರ್ಘ್ಯ ತ್ರಿಪದ 
ಎಣಿಸುವಾಗ ನಾನಾ ಮಂತ್ರ ಜಪಿಸುವಾಗ 
ಮೇಣು ಅರ್ಚಾ ಅರ್ಚನೆ ಪಾವಕಾಹುತಿ ಯಜ್ಞ 
ಕ್ಷೋಣಿ ಸುರರ ಪೂಜೆ ಆತ್ಮ ಸಂತೋಷ ಅನ್ನ 
ಪಾನಾದಿ ಕೊಡುವಾಗ ಇದನೆ ಚಿಂತಿಸಬೇಕು 
ಏನೆಂಬೆನಯ್ಯ ಅವ ಅಪರೋಕ್ಷಿ ಎಂದಿಗೇ 
ಧ್ಯಾನ ಸಂಪೂರ್ಣ ಸಿದ್ಧ ಜ್ಞಾನವಂತನಾಹಾ 
ಪ್ರಾಣನಾಗಿ ಇಪ್ಪರು ಹರಿ - ಸಿರಿ - ಪ್ರಾಣಾದ್ಯರು
ಕಾಣಿಸಿ ಕೊಂಬರು ಒಂದೊಂದು ಮಂಡಲದಲ್ಲಿ
ಆನಂದ ಗತಿಗೆ ಸಾಧನ ಬೇಕಾದರೆ
ಮಾನವಾ ಇದನೆ ಕೈಕೊಂಡು ಆಲೋಚಿಸು
ಸ್ಥಾನ ಸ್ಥಾನಕೆ ನಿನಗೆ ಶುಭವಕ್ಕು ಪುಸಿ ಅಲ್ಲ
ದೀನನಾಥನಾದ ವಿಜಯವಿಠ್ಠಲರೇಯನ್ನ 
ಗಾನವ ಮಾಡಿರೊ ಗ್ರಹಿಸಿ ಈ ಪರಿಯಿಂದ ॥ 7 ॥

 ಜತೆ 

ಸಿದ್ಧ ಸಾಧನವಿದು ಬಿಂಬ ಕಾಣುವುದಕ್ಕೆ 
ಪದ್ಮಿವಲ್ಲಭ ನಮ್ಮ ವಿಜಯವಿಠ್ಠಲ ಪ್ರಾಪ್ತಿ ॥
*********
read vyakhyana
  KANKANAKARA SULADI CHINTANE 

************