ಲಾಲಿ ಲಾಲೀ ಲಾಲಿ ಮೊದಲಗಟ್ಟೇಶ
ಲಾಲಿ ಲಾಲೀ ಲಾಲಿ ತುಂಗಭದ್ರ ತೀರೇಶಾ ಪ.
ಆಂಜನೆಯ ಸುತನಾಗಿ ಅಂಬರಕೆ ಹಾರಿ
ಕಂಜಾಕ್ಷ ರಾಮರಂಘ್ರಿಗಳನ್ನು ಸಾರಿ
ಮಂಜುಭಾಷಿಣಿಗೆ ಹರಿ ಮುದ್ರಿಕೆಯ ತೋರಿ
ಸಂಜೀವನವ ತಂದ ರಣಧೀರ ಶೌರಿ 1
ಕುರುಕುಲದಿ ಜನಿಸಿದ ಕುಂತೀ ಕುಮಾರ
ರಣಧೀರನೆನಿಸಿದ ಕುರುಪ ಸಂಹಾರ
ಧರೆಯ ಭಾರವ ಕಳೆದೆ ಗದೆಯಿಂದ ಶೂರ
ಧುರಧೀರ ಶ್ರೀ ಕೃಷ್ಣನಂಘ್ರಿ ಪರಿಚಾರ 2
ಅನ್ಯಮತಗಳ ಮುರಿದ ಧನ್ಯಮುನಿವರನೆ
ಮಾನ್ಯ ಸುರರಿಂದ ಹರಿಗುನ್ನಂತಪ್ರಿಯನೆ
ನಿನ್ನ ನಂಬಿದವರ ಭವ ಬನ್ನ ಬಿಡಿಸುವನೆ
ಘನ್ನ ಗೋಪಾಲಕೃಷ್ಣವಿಠ್ಠಲನ ಸೂನೆ 3
****