ಈತ ಅಂಜನೆಸುತನು ಭೀಮರಾಯನು ಪ.
ಈತ ರಾಮರ ಬಂಟನು
ಈತ ಕೋಟಿಲಿಂಗವನ್ನು ರೋಮರೋಮದಿ ಧರಿಸಿದವನು
ಈತ ಲೋಕ ಪ್ರಖ್ಯಾತನು ಭೀಮರಾಯನು ಅ.ಪ.
ಪುಟ್ಟಿದಾಗಲೆ ಗಗನಮಂಡಲವನ್ನು ಮುಟ್ಟಿ ರವಿಯನು ತುಡುಕಿ
ಇಟ್ಟ ಕೈಪ ಕುಂಡಲವನ್ನು ತೊಟ್ಟು ಮೆರೆವಂಥ ದಿಟ್ಟ
ಹನುಮರಾಯನು 1
ಮುಂಚೆ ಸ್ವಾಮಿಯ ಕಂಡು ಅಂದು ಸೇವೆಯ
ವಂಚನಿಲ್ಲದೆ ಮಾಡಿದ
ಅಂಚೆಗಮನೆ ಸೀತಾದೇವಿಗುಂಗುರವಿತ್ತು ಮಿಂಚುಳ್ಳ
ವನವ ಕಿತ್ತನು ಭೀಮರಾಯನು 2
ಲಂಕಿಣಿಯನೆ ತುಡುಕಿ ಮಾಯಾಜಾಲವ ಶಂಕೆಯಿಲ್ಲದೆ ಗೆಲಿದ
ಲಂಕಾಪಟ್ಟಣವ ಸುಟ್ಟು ರಾವಣೇಶ್ವರನ ಅಹಂಕಾರವಳಿದ ಧೀರ
ಭೀಮರಾಯನು 3
ತಂತ್ರದರಸ ಶೂರನು ಸಂಗ್ರಾಮದಿ ಮಾರಾಂತ
ವೀರರ ಗೆಲಿದ
ಪಂಥದಿ ಸಂಜೀವನವ ತಂದು ಲಕ್ಷ್ಮಣನ ಅಂತರÀವಳಿದ
ಶೂರನು ಭೀಮರಾಯನು 4
ಲೆಕ್ಕವಿಲ್ಲದೆ ಖಳರ ಗೆಲಿದು ಬಂದು ಕೊಕ್ಕನೂರೊಳುನಿಂತನು
ರಕ್ಕಸಾಂತಕ ಹೆಳವನಕಟ್ಟೆ ರಂಗಯ್ಯನ ಅಕ್ಕರುಳ್ಳತಿದಾಸನು
ಭೀಮರಾಯನು 5
***