ಶ್ರೀ ಗುರು ಶ್ರೀಶವಿಠ್ಠಲರು 30 ಪದಗಳನ್ನೂ; 4 ಸುಳಾದಿಗಳನ್ನೂ, ಹರಿಕಥಾಮೃತಸಾರಕ್ಕೆ ಫಲಶ್ರುತಿಯನ್ನು, ಪ್ರಮೇಯ ರತ್ನಮಾಲಾ ರಚಿಸಿದ್ದಾರೆ.
ಅದರಲ್ಲಿ " ಸ್ತುತಿರತ್ನ ಮಾಲಾ ಸ್ತೋತ್ರ " ಪ್ರಸಿದ್ಧಿಯಾಗಿದೆ.
ರಾಗ : ಮೋಹನಕಲ್ಯಾಣಿ ರಾಗ : ಅಟ್ಟ
ಶ್ರೀನಿವಾಸ ದಯಾನಿಧೇ ।। ಪಲ್ಲವಿ ।।
ಭಾನುಕೋಟಿತೇಜ ಲಾವಣ್ಯ ಮೂರುತಿ ।
ಶ್ರೀ ವೆಂಕಟೇಶಗೆ ನಮೋ ನಮೋ ।। ಚರಣ ।।
ಶೇಷಾಚಲ ನಿವಾಸ ದೋಷ ದೂರನೇ । ಭಕುತ ।
ಪೋಷಕ ಶ್ರೀಕಾಂತ ನಮೋ ನಮೋ ।। ಚರಣ ।।
ಖಗರಾಜ ವಾಹನ ಜಗದೊಡೆಯನೆ ನಿನ್ನ ।
ಅಗಣಿತ ಮಹಿಮೆಗ ನಮೋ ನಮೋ
ಶ್ರೀನಿವಾಸಾ ದಯಾನಿಧೇ ।। ಚರಣ ।।
ನೀಲಮೇಘಶ್ಯಾಮ ಪಾಲಸಾಗರ ಶಯನ ।
ಶ್ರೀ ಲಕುಮೀಶನೆ ನಮೋ ನಮೋ
ಶ್ರೀನಿವಾಸಾ ದಯಾನಿಧೇ ।। ಚರಣ ।।
ಶಂಖ ಚಕ್ರಧರ ವೆಂಕಟರಮಣ । ಅಕ ।
ಳಂಕ ಮೂರುತಿ ದೇವ ನಮೋ ನಮೋ
ಶ್ರೀನಿವಾಸಾ ದಯಾನಿಧೇ ।। ಚರಣ ।।
ಪನ್ನಂಗಶಯನ ನಿನ್ನಂಥ ದೇವರು ।
ಇನ್ನುಂಟೆ ಅಜಭವಸುರ ವಂದ್ಯ ನಮೋ ನಮೋ
ಶ್ರೀನಿವಾಸಾ ದಯಾನಿಧೇ ।। ಚರಣ ।।
ಸೃಷ್ಟಿಯಿಲ್ಲದೆಲೆ ಒತ್ತಟ್ಟಿದಿದ್ದವರನ್ನು ।
ಸೃಷ್ಟಿಸಿ ಜೀವರನ್ನು ಸಲಹುವೀ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ತನುಮನಕರಣಗಳನ್ನು ಕೊಟ್ಟು ।
ಅನಿಮಿಷರನು ಅಭಿಮಾನಿಗಳೆನಿಸಿದೀ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ದೀನವತ್ಸಲ ನಿನ್ನಧೀನದೊಳಗಿಟ್ಟು ।
ಜ್ಞಾನ ಕರ್ಮಗಳ ಮಾಡಿಸಿದೆಯೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಕ್ಷಣ ಬಿಡದಲೆ ಭಕ್ತ ಜನರ ರಕ್ಷಿಸುವಿ । ದು ।
ರ್ಜನರಿಗೆ ದುರ್ಲಭ ನೆನಿಸುವೀ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ವೈಷಮ್ಯ ನೈರ್ಘ್ರುಣ್ಯ ಲೇಶವಿಲ್ಲದವರು ।
ಪಾಸನದಂತೆ ಫಲಗಳೀವಿ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಒಂದೇ ರೂಪದಿ ಬಹು ಮಂದಿರದೊಳಿದ್ದು ।
ಬಂಧ ಮೋಕ್ಷಪ್ರದ ನೆನಿಸುವೀ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಜ್ಞಾನಿಗಳರಸ ಅಜ್ಞಾನಿಗಳೊಳು ನಾ । ಅ ।
ಜ್ಞಾನಿ ಸುಜ್ಞಾನವ ಪಾಲಿಸೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ನಂಬಿದೆ ನಿನ್ನ ಬಿಂಬ ಮೂರುತಿ ಯೆನ್ನ ।
ಡಿಂಬದೊಳಗೆ ಪೊಳೆ ಅನುದಿನಾ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ನಿನ್ನ ಹೊರತು ಎನಗನ್ಯರಿಂದೇನಯ್ಯಾ ।
ನಿನ್ನ ಸ್ತುತಿಪ ಸುಖಕ್ಕೆಣೆಗಾಣೆ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಘನ್ನ ಮಹಿಮಾ ಎನಗಿನ್ನೊಂದು ಬಯಕಿಲ್ಲ ।
ನಿನ್ನ ಧ್ಯಾನದೊಳಿಡು ಮರೆಯದೇ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ದುರ್ಜನ ಸಂಗ ವಿವರ್ಜ ಮಾಡಿಸಿ ಸಾಧು ।
ಸಜ್ಜನರ ಸೇವೆಯೊಳಗಿಡೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಏಸು ಜನ್ಮಗಳೀಯೋ ಲೇಸು ಚಿಂತಯು ಇಲ್ಲ ।
ದಾಸನೆಂದೆನಿಸೋ ದಾಸ್ಯವನಿತ್ತು ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಎನ್ನಪ್ಪ ಎನ್ನಣ್ಣ ಎನ್ನ ಕಾಯುವ ದೇವ ।
ನಿನ್ನ ವಿಸ್ಮರಣೆಯ ಕೊಡದಿರೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಮನಸಿನ ಚಂಚಲವನು ತೊಲಗಿಸಿ ಪಾದ ।
ವನಜದಲ್ಲಿರಿಸಯ್ಯ ಜಿತವಾಗಿ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಕಾರಣಗಳಿಂದ ಚರಿಸುವ ಆ ವಿಷಯ । ಶ್ರೀ ।
ಹರಿ ನಿನ್ನ ಸೇವೆಯಾಗಲಿ ಸ್ವಾಮೀ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಹರಿಯು ಸರ್ವೋತ್ತಮ ಸುರರೆಲ್ಲ ದಾಸರು ।
ತಾರತಮ ಭೇದ ಜ್ಞಾನವನೀಯೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಬುದ್ಧಿ ಪೂರ್ವಕ ಗುರು ಮಧ್ವಮತ । ತಿಳಿ ।
ದಿದ್ದವನೆ ಜ್ಞಾನ ವೃದ್ಧನೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಗುರುಗಳ ಕರುಣ ಸುಸ್ಥಿರವಾಗಿದ್ದವರಿಗೆ ।
ಹರಿ ನಿನ್ನ ಅನುಗ್ರಹವಾಗ್ವದೋ ।। ಚರಣ ।।
ನಿನ್ನ ಚಿತ್ತಕ್ಕೆ ಬಂದದ್ದೆನ್ನ ಚಿತ್ತಕೆ ಬರಲಿ ।
ಅನ್ಯಥ ಬಯಕೆಯ ಕೊಡದಿರೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ನಿನ್ನವರಲ್ಲದೆ ಅನ್ಯರು ಬಲ್ಲರೆ ।
ಘನ್ನ ಮಾತಿನ ಸುಖಸವಿಯನ್ನು ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಸ್ತುತಿರತ್ನಮಾಲಾ ಸಂಸ್ತುತಿಸಿ ಹಿಗ್ಗುವರಿಗೆ ।
ಪ್ರತಿದಿನ ಸುಖ ಅಭಿವೃದ್ಧಿಯೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
ಗುರುಗಳು ಮಧ್ವರಾಯರು ಮೂರು ಲೋಕಕ್ಕೆ ।
ಧೊರೆ ಗುರು ಶ್ರೀಶ ವಿಠ್ಠಲ ನಮೋ ನಮೋ ।
ಶ್ರೀನಿವಾಸಾ ದಯಾನಿಧೇ ।। ಚರಣ ।।
****