Showing posts with label ಶ್ರೀನಿವಾಸನೆ ಪೂರ್ಣ gurushreesha vittala ankita suladi ಶ್ರೀನಿವಾಸ ಪ್ರಾರ್ಥನಾ ಸುಳಾದಿ SRINIVASANE POORNA PRARTHANA SULADI. Show all posts
Showing posts with label ಶ್ರೀನಿವಾಸನೆ ಪೂರ್ಣ gurushreesha vittala ankita suladi ಶ್ರೀನಿವಾಸ ಪ್ರಾರ್ಥನಾ ಸುಳಾದಿ SRINIVASANE POORNA PRARTHANA SULADI. Show all posts

Monday 4 January 2021

ಶ್ರೀನಿವಾಸನೆ ಪೂರ್ಣ gurushreesha vittala ankita suladi ಶ್ರೀನಿವಾಸ ಪ್ರಾರ್ಥನಾ ಸುಳಾದಿ SRINIVASANE POORNA SRINIVASA PRARTHANA SULADI

 

Audio by Mrs. Nandini Sripad

ಶ್ರೀ ಗುರುಶ್ರೀಶವಿಟ್ಠಲ ದಾಸಾರ್ಯ ವಿರಚಿತ  ಶ್ರೀನಿವಾಸನ ಪ್ರಾರ್ಥನಾ ಸುಳಾದಿ 


 ರಾಗ ನಾಟಿ 


 ಧ್ರುವತಾಳ 


ಶ್ರೀನಿವಾಸನೆ ಪೂರ್ಣಜ್ಞಾನನಂದನೆ ಸ್ವಾಮಿ

ದೀನವತ್ಸಲ ಕರುಣಿ ಜ್ಞಾನಿಗಳರಸನೆ

ಭಾನುಕೋಟಿತೇಜ ಜ್ಞಾನಗಮ್ಯ ಎನ್ನ

ಹೀನಮತಿಯ ಬಿಡಿಸಿ ಕಾಯೊ ಕೃಷ್ಣ

ಅನಾದಿಕಾಲದಿಂದ ನಾನು ನಿನ್ನವರವ

ನೀನೆನರಿಯೆ ಜಗದಂತರ್ಯಾಮಿ

ಏನು ಮಾಡುವದೆಲ್ಲ ಹೊರ ಒಳಗೆ ನಿಂತು

ನೀನೆ ಮಾಡಿಸುತಿಪ್ಪೆ ತಿಳಿಸದಲೆ

ನಾನು ನನ್ನದು ಎಂಬೊ ಹೀನ ಜ್ಞಾನ ಪುಟ್ಟಿಸಿ

ಕಾಣಿಸಿಕೊಳುವಲ್ಲಿ ಜಾಣತನದಿ

ಕಾಣದ ಕುರುಡಗೆ ಕನ್ನಡಿ ಕೊಟ್ಟಂತೆ

ನಾನಾ ಶಾಸ್ತ್ರವು ಓದಿ ಪೇಳಲೇನು

ನೀನು ನಿನ್ನವರಿಂದ ಕೂಡಿ ಮಾಡುವ ಚೇಷ್ಟೆ

ತಾನರಿಯದ ಮನುಜ ಜ್ಞಾನಿ ಏನೋ

ಏನು ಓದಿದರೇನು ಏನು ಪೇಳಿದರೇನು

ನೀನೊಲಿಯದಿರೆ ಆನಂದ ಪುಟ್ಟುವದೆ

ಜ್ಞಾನಿಗಳು ಹಿಂದೆ ಕೇಳಿಕೊಂಡಂತೆ ಸ್ವಾಮಿ

ಆ ನುಡಿಗಳಲ್ಲಿ ದೃಷ್ಟಿಯಿಟ್ಟೂ

ನಾನು ಕೇಳಿದಂತೆ ತರತಮ ಪಂಚಭೇದ

ಜ್ಞಾನ ಪುಟ್ಟಿಸಿ ನಿನ್ನ ಮೂರ್ತಿಗಳ

ಧ್ಯಾನವ ಮಾಡಿಸೊ ಅನುದಿನ ತಪ್ಪದಲೆ

ಶ್ರೀನಾಥ ಎನ್ನ ಹೃದ್ಗುಹನಿವಾಸೀ

ದಾನವಾಂತಕ ಗುರುಶ್ರೀಶವಿಟ್ಠಲರೇಯಾ 

ದೀನ ರಕ್ಷಕನೆಂಬೊ ಬಿರದು ತೋರೋ ॥ 1 ॥ 


 ಮಟ್ಟತಾಳ 


ಪದುಮನಾಭನೆ ಎನ್ನ ಮದಡ ಬುದ್ಧಿಯ ನೋಡಿ 

ಗದಗದ ನಡುಗುವೆನೊ ಹೃದಯದೊಳಗೆ, ನಿನ್ನ

ಪದಗಳ ಪೂಜಿಸದೆ ಅಧಮ ಕರ್ಮಗಳಲ್ಲಿ

ಒದಗಿ ಪೋಗುವದಯ್ಯಾ ಬುಧರ ಸಂಗದಲ್ಲಿದ್ದು

ಮುದದಿಂದ ನಿನ್ನ ಮಹಿಮೆ ವದನದಲಿ ಪೊಗಳದಲೆ 

ಮದ ಮತ್ಸರವಿಡಿದು ಕದುವದು ಸುಗುಣಗಳ

ವಿಧಿಪಿತ ನಿನ್ನಗಲಿ ಸುಖವ ಕಾಣೆನೊ ಪದೋ -

ಪದಿಗೆ ನಿನ್ನಯ ಸ್ಮರಣೆ ವೊದಗಿಸೊ ನರಹರಿ

ಮದನಜನಕ ಭವದ ಉದಧಿ ದಾಟಿಸೋ ತಂದೆ

ಉದಭವಿಸಲಾರೇ ನಾನಾ ಯೋನಿಗಳಲ್ಲಿ

ಒದಗಿ ಪಾಲಿಸೋ ಈಶ ಗುರುಶ್ರೀಶವಿಟ್ಠಲ ॥ 2 ॥ 


 ತ್ರಿವಿಡಿತಾಳ 


ದಾಸನೆನಿಸಿದೆ ಅಭಾಸಕ ನಾನಾಗೀ

ಹೇಸಿಕಿ ಮಾರ್ಗವ ಆಚರಿಸೀ

ಕಾಸುವೀಸದ ಲಾಭಗೋಸುಗ ತಿರುಗಿದೆ

ದೇಶದೇಶಂಗಳ ಹೇಸಿಕಿ ಜನರಲ್ಲಿ

ಆ ಸುಜನರು ನುಡಿದ ದಿವ್ಯ ಉಕ್ತಿಗಳನ್ನು

ಸಾಸಿವಿ ಕಾಳಷ್ಟು ತಿಳಿಯದಲೇ

ಕಾಸಿಗೆ ಬಾರದ ಕಥೆಗಳನ್ನೇ ಪೇಳಿ

ಲೇಸಾಗಿ ಪೊಟ್ಟಿಯ ಪೊರದೆನಯ್ಯಾ

ಶ್ರೀಶ ನಿನ್ನಯ ಪಾದ ಧ್ಯಾಸದಲ್ಲಿದ್ದು ವಿ -

ಶ್ವಾಸ ಸಜ್ಜನರಲ್ಲಿ ಮಾಡಲಿಲ್ಲ

ಈಸು ಬಗೆಯಲಿ ನರದಾಸನಾಗಿ ಹರಿ -

ದಾಸನೆಂದೆನಿಸಿದೇ ಬಾಹೀರದಿ

ಶ್ರೀಶ ನಿನ್ನಯ ನಿಜದಾಸರಂತೆ ತೋರಿ

ಮೋಸಗೊಳಿಸುವೆನೋ ಅಲ್ಪಜ್ಞರ

ಈಸಪರಾಧವ ನೀನೆಣಿಸದೆ ಗುರು - 

 ಶ್ರೀಶವಿಟ್ಠಲನೆ ಉದ್ಧಾರ ಮಾಡೋ ॥ 3 ॥ 


 ಅಟ್ಟತಾಳ 


ತಾಮಸ ಜನರೊಳು ಪಾಮರ ನಾನಾಗಿ

ನೇಮ ನಿತ್ಯಗಳೆಲ್ಲ ನಾ ಮರೆದೆನೋ ರಂಗ

ಭ್ರಾಮಕ ತನದಿಂದ ಸತಿಸುತರಲಿ ಸ್ನೇಹ

ನಾ ಮಾಡುವೆನೊ ನಿನ್ನ ಲೀಲೆಯ ತಿಳಿಯದೆ

ಈ ಮಹಾ ದುರ್ಮತಿ ಹೇಗೆ ಬಿಡುವದೈಯ್ಯಾ

ನಾಮ ಸುಧಿಯ ಪಾನವ ಮಾಳ್ಪರಲ್ಲಿಟ್ಟು

ಮಾಮನೋಹರ ಗುರುಶ್ರೀಶವಿಟ್ಠಲ ನಿನ್ನ

ನಾಮವ ನುಡಿಸೈಯ್ಯಾ ದಿವ್ಯಜ್ಞಾನವನಿತ್ತು ॥ 4 ॥ 


 ಆದಿತಾಳ 


ನಿನ್ನ ಮೂರುತಿ ತೋರೊ ಕಣ್ಣುಗಳಿಗೆ

ನಿನ್ನ ಕಥೆ ಎನ್ನ ಕಿವಿಗಾಗಲೊ ಸ್ವಾಮಿ

ನಿನ್ನ ಮಂಗಳಗುಣ ಪೊಗಳಲೊ ಜಿಹ್ವೆ

ನಿನ್ನವರಂಗ ಸಂಗ ತ್ವಗೇಂದ್ರಿಗೆ

ನಿನ್ನಾಲೋಚನೆ ಮನದೊಳಗಿರಿಸಯ್ಯಾ

ನಿನ್ನ ನೋಡಿ ನಿನ್ನನೆ ಪಾಡಿಸೋ

ನಿನ್ನಾನಂದವೆ ತುಂಬಿ ತುಳಕಲಯ್ಯಾ

ಇನ್ನೊಂದು ಬಯಕೆನಗಿಲ್ಲ ಶ್ರೀಹರಿ

ಮನ್ನಿಸಬೇಕು ಗುರುಶ್ರೀಶವಿಟ್ಠಲ 

ಪನ್ನಗಾಚಲ ಶ್ರೀವೆಂಕಟೇಶ ॥ 5 ॥ 


 ಜತೆ 


ಅನ್ಯ ವಿಷಯದಾಸೆಯನ್ನೆ ಬಿಡಿಸಿ , ಭಕ್ತಿ

ನಿನ್ನಲ್ಲಿ ಕೊಡು ಸ್ವಾಮಿ ಗುರುಶ್ರೀಶವಿಟ್ಠಲ ॥




 ಶ್ರೀ ಗುರುಶ್ರೀಶವಿಟ್ಠಲದಾಸರ ಕಿರುಪರಿಚಯ : 


ರಾಯಚೂರು ಜಿಲ್ಲೆಯ ಗಂಗಾವತಿ ತಾಲೂಕಿನ ಕನಕಗಿರಿ ಗ್ರಾಮದಲ್ಲಿ ಜನಿಸಿದ ಶ್ರೀನರಸಿಂಹದಾಸರು , ಶ್ರೀಜಗನ್ನಾಥದಾಸರಲ್ಲಿ 12 ವರ್ಷ ಶಿಷ್ಯತ್ವ ವಹಿಸಿ ಅವರನ್ನು ಸೇವಿಸಿದರು. ಗುರುಗಳು ಅನುಗ್ರಹಿಸಿ , ಅವರ ಆಜ್ಞೆಯ ಪ್ರಕಾರ ಶ್ರೀ ಶ್ರೀಶವಿಠಲಾಂಕಿತ ಹುಂಡೇಕಾರ ದಾಸರಿಂದ  " ಗುರುಶ್ರೀಶವಿಠಲ " ಎಂಬ ಅಂಕಿತ ಪಡೆದರು. ಗಂಗಾವತಿ ತಾಲೂಕಿನ ಕುಂಟೋಜಿ ಎಂಬ ಗ್ರಾಮದಲ್ಲಿ ಇದ್ದುದರಿಂದ ಇವರಿಗೆ ಕುಂಟೋಜಿ ದಾಸರೆಂದೂ ಕರೆಯುವರು . ಇವರು 6 ಸುಳಾದಿಗಳನ್ನು ರಚಿಸಿದ್ದಾರೆ. ಸಂಖ್ಯೆ ಕಡಿಮೆಯಾದರೂ ಅಸಂಖ್ಯ ಅಂತಃಶಕ್ತಿ ಈ ಸುಳಾದಿಗಳಲ್ಲಿ ಅಡಗಿದೆ.

*******