ಶ್ರೀವಿಜಯದಾಸಾರ್ಯ ವಿರಚಿತ ಸರ್ವಸಾರಭೋಕ್ತ ಸುಳಾದಿ
ರಾಗ ಪಂತುವರಾಳಿ
ಧ್ರುವತಾಳ
ಪುಣ್ಯವೆ ಪೋಯಿತೆಂಬ ನುಡಿಸಲ್ಲಾ ಎಲೊ ನಲ್ಲಾ
ಪುಣ್ಯವೆಂಬೊದು ಎಂತೊ ತಿಳಿಯದಯ್ಯಾ
ಪುಣ್ಯ ಪೋಗುವದೆಂತೊ ಆವಾಗ
ಕಣ್ಣಿಗೆ ಕಾಣಿಸದು ಶಬ್ದಮಾತ್ರ
ಇನ್ನಿತು ಪುಣ್ಯವೆಲ್ಲ ಜ್ಞಾನಕಾರ್ಯವು ಮತ್ತೆ
ಘನ್ನ ಪಾಪಗಳು ಅಜ್ಞಾನ ಕಾರ್ಯ
ಅನ್ನಂತ ಕಾಲಕ್ಕೆ ದ್ವಿವಿಧ ರೂಪಕೆ ನೋಡೆ
ಉನ್ನತವಾಗಿ ನೀನೆ ಸರ್ವದಲ್ಲಿ
ಬನ್ನ ಬಡಿಸುವ ಅಜ್ಞಾನ ಜ್ಞಾನಕ್ಕೆ ಸಂ -
ಪನ್ನ ನಿರ್ದೋಷ ಮೂರ್ತಿ ನೀನೆ ವಿಷಯಾ
ಇನ್ನಿತಾಗಿರಲಿಕ್ಕೆ ಮಾಡಿದಾ ಪುಣ್ಯ
ಮುನ್ನೆ ಪೋಯಿತೆಂಬ ವಿನೋದವೆ
ಇನ್ನು ನಾನೇನೆಂಬೆ ಈ ಮಾತಿಗೆ ಪ್ರ -
ಸನ್ನ ವದನಾಂಭೋಜ ವಿಮಲ ನಯನಾ
ಅನ್ಯ ಜನರಿಂದ ಪಾಪ ಪುಣ್ಯವೆ ತಂದು
ಉಣ್ಣಿಪದಾಗುವದೆ ವಿಚಾರಿಸೇ
ಜನ್ಮಾದಿಗಳು ನಿನ್ನ ಅಧೀನವಾಗಿರಲೂ
ಇನ್ನೇನೊ ಇನ್ನೇನೊ ಮುಂದಣ ವಾರ್ತಿ
ಎನ್ನ ಮೊದಲು ಮಾಡಿ ಸರ್ವಜೀವರ ಮಧ್ಯ
ಚಿನ್ಮಯ ರೂಪದಿಂದ ಪ್ರವೇಶಿಸಿ
ಚೆನ್ನಾಗಿ ಅವರವರ ಸ್ವಭಾವದಂತೆ ಕಾ -
ರುಣ್ಯದಿಂದಲಿ ನೀನೆ ಚೇಷ್ಟಿಗಳ
ಬಣ್ಣ ಬಣ್ಣದಲಿಂದ ಮಾಡಿಸುವನೆಂದು
ಅನಂತ ವೇದಗಳು ತುತಿಪವಲ್ಲೊ
ಬಿನ್ನಣದಲಿ ಅಂದು ಭೀಷ್ಮನಿಂದಲಿ ಧರ್ಮಾರಾಯಾ -
ನನ್ನು ಒಡಂಬಡಿಸಿದೆ ಪ್ರಶ್ನೋತ್ತರಾ
ಬಣ್ಣಿಸ ಬಲ್ಲೆನೆ ನಿನ್ನ ಲೀಲೆಗೆ ಕೆಲವ -
ರನ್ನ ಗೆಲಿಸುವೆ ಕೆಲವರನ ಸೋಲಿಸಿ
ನಿನ್ನೊಳು ನೀನೆ ಕ್ರೀಡೆಯಾಡುವೆ ಎಲ್ಲ ಕಾಲ
ಮನ್ನುಜ ನಾನಾ ವಿಧ ರೂಪ ಧರಿಸಿ
ಅನ್ನಗೋಸುಗ ತಿರುಗ ಬೇಕಾದರೆ ರಾ -
ಜನ್ನ ತನಕ ಪೋಗಿ ಕೇಳಲ್ಯಾಕೆ
ಮನೆ ಮನೆ ಬೇಡಿಕೊಂಡು ಪೊಟ್ಟಿಯ ಪೊರೆದು
ಧನ್ಯನಾದೆನೆಂದು ಇರಬಾರದೆ
ನಿನ್ನ ಸ್ಮರಣೆ ಮಾಡಿ ನಿನ್ನಾಧೀನವೆಂದು
ಬಿನ್ನಹ ಮಾಡಿಕೊಳಲ್ಯಾಕೆ ಜೀಯಾ
ಪುಣ್ಯ ಶ್ಲೋಕಮೂರ್ತಿ ವಿಜಯವಿಟ್ಠಲರೇಯಾ
ಮನ್ನಿಸು ಮುದದಿಂದ ಅಪರಾಧವೆಣಿಸಾದೆ ॥ 1 ॥
ಮಟ್ಟತಾಳ
ತೃಣ ಔಷಧ ಗುಲ್ಮ ವನಸ್ಪತಿ ಮೊದಲಾದ
ಇನಿತು ಪದಾರ್ಥದಲ್ಲಿ ತತ್ವೇಶರ ಒಡನೆ
ವನಿತೆ ಸಂಗಡ ಬಿಡದೆ ವಾಸವಾಗಿ ಇದ್ದು
ದಿನದಿನಕೆ ಅದರ ಕಾರ್ಯ ನಡಿಸಿ ಕೊಡುವಾ
ಗುಣ ನಿಯಾಮಕ ಸದ್ಗುಣಗಣ ಸಂಪೂರ್ಣ
ವನಧಿ ಪಾಲಕ ಹರಿ ವಿಜಯವಿಟ್ಠಲರೇಯಾ
ಜನರ ಕುಣಿಸಿ ಜಗವ ಜೋಕೆ ಮಾಡುವ ದೈವಾ ॥ 2 ॥
ತ್ರಿವಿಡಿತಾಳ
ನೀನುಂಡು ಮಿಕ್ಕದ್ದು ನಿನ್ನೊಡನೆ ಉಣುತಿಪ್ಪ
ಮಾನವ ವೈಷ್ಣವಗೆ ವಿಕಾರವೆ
ಮಾನುಷ್ಯನ್ನ ದೋಷವೆಂದಿಗಾದರು ಇಲ್ಲಾ
ಜ್ಞಾನಕ್ಕೆ ತಿರೋಹಿತ ವಾಗದಿದಕೋ
ಆನಂದ ಚಿತ್ತಕೆ ಆವಾಗ ಇದ್ದ ಅ -
ಜ್ಞಾನ ಓಡುವದಯ್ಯಾ ಸಾರೆ ಇರದೂ
ಧ್ಯಾನ ಪುಟ್ಟಿಸಿ ಕೊಟ್ಟು ಹರಿಯ ಪೂಜಿಸುವ ವಿ -
ಜ್ಞಾನ ತಂದೀವದೂ ಕೊಂಡಾಡಲೂ
ಪ್ರಾಣೇಂದ್ರಿಯಂಗಳ ತೃಪ್ತಿ ಸಂತೋಷ ಮನಸಿಗೆ
ಕಾಣ ಬಾರದ ಫಲವು ಪ್ರಾಪ್ತಿಯುಂಟು
ಇನಿತು ಇರಲಿಕ್ಕೆ ಜಡದಿಂದ ತೃಪ್ತಿಯೆಂದು
ನಾನಾ ಭವಣಿ ಬಡುವ ಮೂರ್ಖನವನೋ
ದೀನ ವೃತ್ತಿಯಿಂದ ಇಂತು ಭೋಜನ ಗೈಯ್ಯೆ
ಹಾನಿ ಎಂಬೊದಿಲ್ಲ ಪುಣ್ಯಗತಿಗೆ
ಮಾಣದೆ ಬಿನ್ನೈಪೆ ತನ್ನ ಸಹಿತ ಸರ್ವ
ಪ್ರಾಣಿಗಳು ಉಂಬ ವಿಹಿತವೆಲ್ಲಾ
ನೀನೆ ಇತ್ತದ್ದು ಎಂದು ನೀನೆ ಉಂಡವನೆಂದು
ಮಾನವನೀ ಪರಿ ತಿಳಿದನಾಗೆ
ಏನೆಂಬೆ ಸಂಸ್ಕಾರ ಪುಟ್ಟಿದ ಮಾತುರದಿಂದ
ಮೇಣು ಸತ್ಪುಣ್ಯವು ಬರುವದೂ
ಭಾನು ಒಂದೆಸೆಯಲ್ಲಿ ಉದಯವಾದ ಮೇಲೆ
ನಾನಾ ಠಾವಿಗೆ ರವಿಯ ಉದಯವ್ಯಾಕೆ
ಜ್ಞಾನಿಯಾದವ ನೋಡು ನಿಶ್ಚಯದಲಿ ತನ್ನ
ಮಾನಸದಲಿ ತಿಳಿದು ಜಪಿಸಬೇಕೂ
ಈ ನುಡಿಯಂತೆ ಸಮಸ್ತರಲ್ಲಿ ಸಿದ್ಧಾ
ಏಣಿಸಿ ತನ್ನಂತೆ ಗುಣಿಸುವರೂ
ದಾನವಾಂತಕ ರಂಗ ನಾನುಂಡ ಅನ್ನಕ್ಕೆ
ಹೀನಾಯಾವಾಹುದೇನೊ ಸೋಜಿಗವೊ
ದಾನಿಗಳರಸ ಸಿರಿ ವಿಜಯವಿಟ್ಠಲ ನಿ -
ದಾನಿಸಲು ವಸ್ತ ನೀನಿಲ್ಲದೊಂದಿಲ್ಲಾ ॥ 3 ॥
ಅಟ್ಟತಾಳ
ಮೊದಲು ನಮ್ಮವರಿಗೆ ಬಾಲಕನಾಗಿ ಪೋಗಿ
ಉದ್ದರಿಸಿದ ಮಾತಿಗೆ ನಗುತಲಿ ಅಂದೂ
ಪದವಿಯ ಒಲಿದಿತ್ತೆ ನಾನಾ ಪ್ರಕಾರದಲಿ
ಅದು ಅಂಗೀಕರಿಸದೆ ತಿರುಗಿ ಬಿಡಲು ನೀನೆ
ಮುದದಿಂದ ಇತ್ತದ್ದು ಒದಗಿ ಭೋಗಿ -
ಸದೆ ಪೋಗದು ಎಂಬೊ ಕಥೆಯಿಂದ
ವಿಧಿಯನ್ನೆ ತಿಳಿದು ಮತ್ತಾವ ಭಾಗ್ಯ ಉಣಿಪನೆ
ಪದೋಪದಿಗೆ ಎನ್ನ ಪುಣ್ಯದಿಂದಾಗೋದೆ
ಪದುಮನಾಭ ನಿನ್ನ ಸಂಕಲ್ಪಕೆ ಎಂದು
ಎದುರಿಲ್ಲ ಮಹಾ ಜ್ಞಾನಿಗಳ ನಿಷ್ಠಾ ಪುಣ್ಯ
ನಿಧಿಯಾಗಿ ಬಂದು ಸಹಾಯವಾಗಿದೆ ಕೃಪಾ -
ನಿಧಿಯೆ ನಿನ್ನ ಭಕ್ತರ ದಯದಿಂದ
ಬದಿಯಲ್ಲಿಪ್ಪದು ಕೆಲಸಾರದೆ ಇದಕ್ಕೆ
ತ್ರಿದಶರಭಿಮಾನಿಗಳಾಗಿ ಇಪ್ಪರು
ಕ್ಷುಧೆಯ ಗೋಸುಗ ತುತ್ತುಮೆದ್ದ ವಂದರಲ್ಲಿ
ತದತದ ರಸಗಳು ಏಸಕ್ಕು ಮೆಲುವಾಗ
ವದನದೊಳಗೆ ವದನ ಪೊಂದಿ ಕೊಂಡಿಪ್ಪದು
ಮಧುರಾನ್ನದಲಿ ನಾರಾಯಣನಿರುದ್ಧ
ಇದರಂತೆ ನಿನ್ನ ಮೂರ್ತಿಗಳು ಸರ್ವವು ಉಂಟು
ಉದಯಾರ್ಕ ಸನ್ನಿಭ ವಿಜಯವಿಟ್ಠಲ ನೀನೆ
ಅಧಿಷ್ಠಾನದಲಿ ನಿಂದು ಮಾಡಿಸಲು ದೋಷವಾಹುದೆ ॥ 4 ॥
ಆದಿತಾಳ
ಸ್ವಮೂರ್ತಿ ಗಣ ಮಧ್ಯಗನೆಂಬೊ ವಾಕ್ಯ ತಿಳಿದು
ಅಮಲ ಸಂತತಿಯೆಲ್ಲ ಪರಿವಾರ ಎಂದು ತಿಳಿದು
ಸಮ ಬುದ್ಧಿಯಲಿ ತಾನು ತರತಮ್ಯವನುಸರಿಸಿ
ಕ್ರಮದಿಂದ ನೋಡುತ್ತ ಆಧ್ಯಾತ್ಮ ನಿಷ್ಠನಾಗಿ
ಶಮೆ ದಮೆ ಗುಣದಲಿ ಆವಾಗಲಿದ್ದು ಅಜ್ಞ
ಮಮತೆಯ ತೊರೆದು ಮಹಾಭಕುತಿಯಿಂದ ನಲಿದು
ಅಮಿತ ಪದಾರ್ಥಂಗಳ ಭುಂಜಿಸಿದ ಮನುಜಂಗೆ
ಅಮೃತವಾಗಿಪ್ಪದು ಅಪೇಕ್ಷಾರಹಿತನೊ
ಅಮೃತ ಸಿದ್ಧಿಸುವದು ಇದಕೆ ಸಂಶಯವಿಲ್ಲಾ
ಕ್ಷಮಾ ಸಂಬಂಧವೊಂದು ಸಾಕ್ಷಾದ್ಭೂತ ವೊಂದು
ರಮಣೀಯವಾಗಿದ್ದ ನಾಲ್ಕು ವಿಧ ರಸಂಗಳು
ಸುಮನೋಹರದಿಂದ ಬಗೆ ಬಗೆಯಲಿ ನಿನಗೆ
ಸಮರ್ಪಣೆ ಮಾಡುವಲ್ಲಿ ಚಾತುರ್ಯವಂತನಾಗಿ
ಕುಮತಿಯ ಒದ್ದು ಕಳೆದು ಸೇವಿಸಿದವ ಧನ್ಯ
ಯಮನ ಬಾಧೆಯೆ ಇಲ್ಲ ಪುಣ್ಯವೆ ಅಭಿವೃದ್ಧಿ ಈ
ಪ್ರಮೇಯ ತಿಳಿದ ನರಗೆ ಆವದೊ ದುಷ್ಕರ್ಮ
ರಮೆಯರಸನೆ ಕೇಳು ಮನೊ ವಾಚಾ ಕಾಯದಲ್ಲಿ
ನಮಿಸುವೆ ಇಂಥಾದ್ದೆ ಬಯಸಿ ಇದ್ದರೆ ಎನಗೆ
ಭ್ರಮೆಗೊಳಿಸುವ ಪಾಪ ಪ್ರಾಪ್ತವಾಗೋದೆ ನಿಜವು
ಉಮೆಯರಸನ್ನ ಪ್ರೀಯ ನೀನೆ ಅನುಗ್ರಹ ಮಾಡಿ
ಅಮರಿಸಿ ಕೊಟ್ಟದ್ದು ಭುಂಜಿಸುತಿಪ್ಪೆನೊ
ಬುಧವಂದ್ಯ ವಿಜಯವಿಟ್ಠಲರೇಯಾ ನೀ ಎನ್ನ
ಹೃದಯದೊಳಗೆ ಇದ್ದು ಸರ್ವ ವ್ಯಾಪಾರ ಮಾಳ್ಪೆ ॥ 5 ॥
ಜತೆ
ಸತ್ಯಸಂಕಲ್ಪ ನೀನೆ ಮಾಡಿದ ಮರಿಯಾದೆ
ನಿತ್ಯ ಅನುಭವಿಪೆನೊ ವಿಜಯವಿಟ್ಠಲ ತಂದೆ ॥
*******