Showing posts with label ಮುಕ್ತಾ ಅಮುಕ್ತಾರಿಂದ vijaya vittala suladi ವೆಂಕಟೇಶ ಮಹಿಮಾ ಅಪಾದಮೌಳಿ ಸುಳಾದಿ MUKTA AMUKTARINDA VENKATESHA MAHIMA SULADI. Show all posts
Showing posts with label ಮುಕ್ತಾ ಅಮುಕ್ತಾರಿಂದ vijaya vittala suladi ವೆಂಕಟೇಶ ಮಹಿಮಾ ಅಪಾದಮೌಳಿ ಸುಳಾದಿ MUKTA AMUKTARINDA VENKATESHA MAHIMA SULADI. Show all posts

Monday, 9 December 2019

ಮುಕ್ತಾ ಅಮುಕ್ತಾರಿಂದ vijaya vittala ankita suladi ವೆಂಕಟೇಶ ಮಹಿಮಾ ಅಪಾದಮೌಳಿ ಸುಳಾದಿ MUKTA AMUKTARINDA VENKATESHA MAHIMA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ಕೃತ  ಶ್ರೀ ವೆಂಕಟೇಶದೇವರ ಮಹಿಮಾ  ಅಪಾದಮೌಳಿ ಸ್ತೋತ್ರಸುಳಾದಿ 

 ರಾಗ : ಭೌಳಿ 

 ಧ್ರುವತಾಳ 

ಮುಕ್ತಾ ಅಮುಕ್ತಾರಿಂದರ್ಚನೆಗೊಂಬ ಚರಣ ವೀ - |
ರಕ್ತಾರ ಮನದಲ್ಲಿ ನಿಂದಿಹ್ಯ ಚರಣ ಸೂ - |
ರಕ್ತಾವರ್ನ ನಖದಿಂದಲೊಪ್ಪುವ ಚರಣ |
ಭಕ್ತಿಗೆ ಒಲಿದೊಲಿದು ಭಾಗ್ಯಕೊಡುವ ಚರಣ |
ಭಕ್ತವತ್ಸಲನೆಂಬೊ ಮಹಾ ಪ್ರತಾಪದ ಚರಣ |
ವ್ಯಕ್ತವಾಗಿ ಲೋಕಾ ಪೂರ್ಣವಾದಾದಿ ಚರಣ |
ಉಕ್ತಿಗೆ ಮೈದೋರದ ಉನ್ನತೋನ್ನತ ಚರಣ |
ಶಕ್ತಿ ಪ್ರದವಾದ ಜ್ಞಾನಾನಂದ ಚರಣ |
ತ್ಯಕ್ತಾ ವೈದಿಕಾ ಸಿದ್ಧ ಸಾರಸುಂದರ ಚರಣ |
ಭಕ್ತಿ ಭೂಷಣವಿತ್ತು ಪಾಲಿಸುವ ಚರಣ |
ಶಕ್ತಿ ಉದರದಲ್ಲಿ ಅಂಕಿತವಾದ ಚರಣ |
ಸಿಕ್ತೋದಕ ಧರಿಸೆ ಸಿರದಲ್ಲಿ ಪೊಳೆವಾ ಚರಣಾ |
ಮುಕ್ತಿ ಕೊಡುತಿಪ್ಪ ಮದನ ಲಾವಣ್ಯ ಚರಣ |
ನಕ್ತೇಶನಂದದಲಿ ಥಳಥಳಿಸುವ ಚರಣ |
ಮುಕ್ತಾಭರಣ ರಂಗಾ ವಿಜಯವಿಠಲರೇಯಾ |
ಮುಕ್ತಗಿರಿಯ ವೆಂಕಟ ಶ್ರೀನಿವಾಸನ ಚರಣ ॥ 1 ॥

 ಮಟ್ಟತಾಳ 

ಈ ಚರಣ ಸಮಸ್ತರಿಗೆ ಸುಲಭಸಾಧ್ಯ |
ಈ ಚರಣ ಜ್ಞಾನ ಭಕುತಿ ಕೊಡುವುದು |
ಈ ಚರಣ ಅಹಂಕಾರ ಬಿಡಿಸುವುದು |
ಈ ಚರಣ ಕರಣಶುದ್ಧಿಯ ಮಾಡುವದು |
ಈ ಚರಣ ದುರಿತ ರಾಶಿಯ ದಹಿಸುವದು |
ಈ ಚರಣದಿಂದ ಪ್ರಸಾದತ್ರಯವೊ |
ಈ ಚರಣಾರ್ಚನೆಯ ಮಾಡಿದ ಅಜಭವರು |
ಗೋಚರಿಸುವರು ತಮ್ಮ ಪದವಿಯಲ್ಲಿ ನಿತ್ಯ |
ಈ ಚರಣ ನೆನಿಸಿದವನ ಭಾಗ್ಯವೆ ಭಾಗ್ಯ |
ಈ ಚರಣ ಕರ್ಮ ಜ್ಞಾನಾನಂದಕೆ |
ಸೂಚನೆ ಕಾಣಿರೊ ಗುರುಗಳ ಕೃಪೆಯಿಂದ |
ಈ ಚರಣವೆ ದೈತ್ಯವನ ಸವರುವ ಕೊಡಲಿ |
ಈ ಚರಣ ದೋಷ ವಿರಹಿತ ಸಂಪೂರ್ಣ |
ಈ ಚರಣೀಚರಣಾ ಆಲೋಚನೆಯ ಮಾಡೆ |
ಮೋಚಕವಾಗುವುದು ಲಿಂಗಾಶರೀರವೂ |
ವಾಚಸ್ಪತಿ ಜನಕ ವಿಜಯವಿಠಲ ವೆಂಕಟ |
ಲೋಚನಕೆ ಪೊಳೆವ ಅಪ್ರಾಕೃತ ಚರಣ ॥ 2 ॥

 ತ್ರಿವಿಡಿತಾಳ 

ಬನ್ನಿ ಬನ್ನಿರೊ ಜನರು ಭಾಗ್ಯಪ್ರದಾತನ್ನ |
ಘನ್ನ ಚರಣಾವಿಡಿದು ಮೌಳಿಯ ಪರಿಯಂತ |
ಚನ್ನಾಗಿ ತಿಳಿದು ಧಾನ್ಯವಮಾಡಿ ವೆಂಕಟನ್ನ |
ರನ್ನ ಮಕುಟ ಕುಂಡಲ ಕರ್ಣನೊಸಲಾನಾಮಾ |
ಬಂಣಿಸಾಲರಿದು ಮುಖನಯನನಾಸಾವದನ |
ಕೆನ್ನೆಕಪೋಲಾ ಸುಲಿಪಲ್ಲು ಸುಧಾಸುರಿಯೆ |
ಚಿನ್ನದ ಸರಿಗೆ ನಾನಾಹಾರ ಕೌಸ್ತುಭಾ |
ಸನ್ನಿಭಾ ರವಿಯನ್ನೆ ಕೊರಳ ತ್ರಿವಳಿಕಾಂತಿ |
ಕನ್ನೆಲಕುಮಿ ಇಪ್ಪ ಉರ ಚತುರ್ಭುಜ ಬಾಹು |
ಉನ್ನತಕೇಯೂರ ಹಸ್ತ ಕಂಕಣಂಗೂಲಿ |
ಹನ್ನೆರಡು ಎರಡುಲೋಕಾ ಉಳ್ಳವುದರ |
ಪನ್ನಂಗನ ಕಾಯ ಸೋಲಿಸುವ ಕಟ್ಟಿಸೂತ್ರಾ |
ಗಣ್ಯಗಣದ ಪೀತಾಂಬರವೂರು ಪಾ - |
ವನ್ನ ಜಾನು ಜಂಘೆ ಪರಡು ಪಾದಾಂಗುಲಿ |
ಬನ್ನಾದಿ ಪಡದ ನಖಾ ರೇಖಾಂಕಿತ ಬಲುಪರಿ |
ಭಿನ್ನಾವಿಲ್ಲದೆ ಇಪ್ಪ ಸರ್ವಾವಯಂಗಳೂ |
ಇನ್ನೂ ಈ ವಿಧದಲಿ ನಿಮ್ಮ ಚಿತ್ತದಲ್ಲಿ ಸಂ - |
ಪನ್ನ ಈ ಮೂರ್ತಿಯ ನಿಲಿಸಿ ಆತ್ಮನೆಂದೂ |
ಬನ್ನಾ ಬಡದಿರಿ ಅಲ್ಲೆಲ್ಲಿ ಇಹನೆಂದೂ |
ಕಣ್ಣು ಮುಂದಾಡುವ ಪರಿಮಳ ಯಸವುತ್ತ |
ಪುಣ್ಯಶ್ಲೋಕರಾಯ ವಿಜಯವಿಠಲ ವೆಂಕಟ |
ಮನ್ನಿಸಿ ಮುದದಿಂದ ಪ್ರಸನ್ನನಾಗುವ ॥ 3 ॥

 ಅಟ್ಟತಾಳ 

ವಿಶ್ವಮಂಗಳನೀತ ವಿಶ್ವಕಾಯನೀತ |
ವಿಶ್ವಕುಟುಂಬ ಪಾಲಕನೀತ ಪ್ರಭುನೀತ |
ವಿಶ್ವಧಾರಕನೀತ ವಿಶ್ವ ವಿಶ್ವನೀತ |
ವಿಶ್ವೇಶ್ವರನೀತ ವಿಶ್ವಾಸುಗುಣನೀತ |
ವಿಶ್ವನಾಟಕನೀತ ವಿಶ್ವಪ್ರೇರಕನೀತ |
ವಿಶ್ವಕರ್ಮನೀತ ವಿಶ್ವಕಾಲನೀತ |
ವಿಶ್ವದ್ರವ್ಯನೀತ ವಿಶ್ವನೀತ |
ವಿಶ್ವವ್ಯಾಪ್ತನೀತ ವಿಶ್ವಭಿನ್ನನೀತ |
ವಿಶ್ವಮೂರುತಿ ಈತ ವಿಲಕ್ಷಣನೀತ |
ವಿಶ್ವಾಂಬರೆಯೊಳಗೆ ವಿಶ್ವಾಸದಲಿ ಶ್ವೇ - |
ತಶ್ವನ್ನ ಮಿತ್ರನ್ನ ಸುಸ್ವರದಲಿ ಪಾಡಿ |
ಈಶ್ವರ ನಾನೆಂಬ ನಶ್ವರ ಮತಿಬಿಟ್ಟು |
ಭಾಸ್ವರ ಸಂಪೂರ್ಣ ಐಶ್ವರ್ಯಾನಾಗೋ |
ವಿಶ್ವಗಿರಿವಾಸ ವಿಜಯವಿಠಲ ವೆಂಕ - |
ಟೇಶ್ವರ ಭಕ್ತರ ವ್ಯಾಧಿಗಳ ಕಳೆವಾ ॥ 4 ॥

 ಆದಿತಾಳ 

ದ್ರವ್ಯ ಪೂರ್ತಿ ಧರ್ಮ ಭವ್ಯಫಲದ ಭಯಹಾರಿ |
ನವ್ಯಾ ಭೂಷಣನಂದ ಪೋಷಣ |
ಅವ್ಯಕ್ತವ್ಯಕ್ತಗಾತ್ರ ದಿವ್ಯತೇಜ ದಿವಿಜರಾಜ |
ಅವ್ಯಯ ಆನಂದಮಯ ಹವ್ಯಾದಿಕ್ರಿಯಾ ನಿಯಾಮಕ |
ಸವ್ಯಸಾಚಿ ಪ್ರೀಯ ಜೀಯ್ಯ ಭವ್ಯಗಿರಿರಾಯ ವಿಜಯವಿಠಲ್ಲಾ |
ಸೇವ್ಯಮಾನನೊ ಸುರರಿಂದ ವೆಂಕಟ ॥ 5 ॥

 ಜತೆ 

ವೆಂಕಟಗಿರಿ ಸ್ವಾಮಿಪುಷ್ಕರಣಿನಿವಾಸ |
ಪಂಕಜಾಪತಿ ವಿಜಯವಿಠಲನ್ನ ಕೊಂಡಾಡು ॥
*****