Showing posts with label ಯಾತರ ವಳಗೆ vijaya vittala ankita suladi ಪುರಂದರದಾಸ ಮಹಾತ್ಮ್ಯೆ ಸುಳಾದಿ YATARA VALAGE PURANDARA DASA MAHATME SULADI. Show all posts
Showing posts with label ಯಾತರ ವಳಗೆ vijaya vittala ankita suladi ಪುರಂದರದಾಸ ಮಹಾತ್ಮ್ಯೆ ಸುಳಾದಿ YATARA VALAGE PURANDARA DASA MAHATME SULADI. Show all posts

Saturday, 13 February 2021

ಯಾತರ ವಳಗೆ vijaya vittala ankita suladi ಪುರಂದರದಾಸ ಮಹಾತ್ಮ್ಯೆ ಸುಳಾದಿ YATARA VALAGE PURANDARA DASA MAHATME SULADI

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ ಶ್ರೀಪುರಂದರದಾಸರ ಮಹಾತ್ಮ್ಯೆ ಸುಳಾದಿ 


 ರಾಗ ಕಮಾಚ್ 


 ಧ್ರುವತಾಳ 


ಯಾತರ ವಳಗೆ ಗಣನೆ ಎನ್ನಯ ಸ್ವರೂಪ ಬಲು

ಜಾತಿಯಲ್ಲಿ ಪುಟ್ಟಿ ಬಂದದಿದಕೋ

ಪಾತಕ ಪುಂಜವಾದ ಪಾಮರ ನಾನಾಗಿ

ಪೋತತನದಾರಭ್ಯ ಪುಣ್ಯವರಿಯೇ

ಯಾತಕ್ಕೆ ಬಾತಿಯಲ್ಲಾ ಮೂರಕ್ಕೆ ವಶವಾಗಿ

ಸೋತು ತಿರುಗುತಿಪ್ಪೆ ಚಾತುರದಲ್ಲಿ

ಚೇತನ ಮತ್ತಾವದೋ ಅವಿದ್ಯಾವರ್ಕವಾಗಿ

ಈ ತೆರದಲ್ಲಿ ಬಿಡದೆ ಸುತ್ತುತಿಪ್ಪದದಕೊ

ಮಾತು ಒಂದು ಪೇಳುವ ಸ್ವಾತಂತ್ರತನ ಕ್ಷಣ

ಮಾತುರ ಎನಗುಂಟೆ ಪೇಳಿರಯ್ಯಾ

ಭೂತಳದೊಳಗಾನು ಜನುಮ ಜನುಮ ಪಂ -

ಡೀತ ವ್ಯಾಖ್ಯಾತ ವಿದ್ಯಾವಂತನಲ್ಲಾ ಸಂ -

ಗೀತ ಗಾಯಕನಲ್ಲಾ ಧರ್ಮದಾನಂಗಳಿಲ್ಲಾ

ಗಾತುರ ದಂಡಿಸಿ ಯಾತ್ರಿ ತೀರ್ಥ -

ವಾ ತಿರುಗಲಿಲ್ಲ ಆಚಾರವಂತನಲ್ಲಾ

ಚಾತುರ್ಮಾಸಾದಿ ವ್ರತಗಳೊಂದೂ ಇಲ್ಲ

ಯಾತಕ್ಕೆ ಪೊಂದದ ಕೇವಲ ಮೂಢ ನಾನು

ಆತುಮ ಯಾತರದೊ ಆದಿಯಲ್ಲಿ

ಮಾತಿಗುತ್ತರನರಿಯೆ ಆರಾರರ್ಚಿಸುವ ಮೂ -

ರುತಿಯ ನೀಕ್ಷಿಸಿ ಪೇಳಲೊಶವೇ

ಸೋತ್ತಮಾನವನಯ್ಯಾ ಈ ಪರಿ ನಿರ್ಣಯ

ವಾರ್ತೆ ತಿಳಿದು ಪೇಳುವನಾಗೆ ಗು -

ಪೂತದಲ್ಲಿಪ್ಪನು ಬಾಹಿರಕ್ಕೆ ಬಾರನು

ಖ್ಯಾತಿಯಾಗನು ಕಾಣೊ ಜಗದೊಳಗೆ

ಆತುಮ ಸ್ತುತಿ ಇಲ್ಲ ಒಬ್ಬರ ನಿಂದಿಸಾನು

ವಾತದೇವನ್ನ ಮತವನುಸಾರಿಯಿಪ್ಪಾ

ಈ ತೆರದಲ್ಲಿ ಕಾಲ ಕಳೆದವನೆ ಧನ್ಯಾ

ದಾತನು ಅವ ನಮ್ಮ ಕುಲಕೋಟಿಗೆ

ಶಾತಕುಂಭವರ್ನಾ ವಿಜಯವಿಟ್ಠಲ ಬೆ -

ನ್ನಾತು ಕಾವುತಲಿಪ್ಪ ಈ ಪರಿ ಉಳ್ಳವರನಾ ॥ 1 ॥ 


 ಮಟ್ಟತಾಳ 


ಮೇದಿನಿಯೊಳಗಂದು ವ್ಯಾಸಮುನಿ ನಿತ್ಯ

ಮೋದ ಮನಸು ಉಳ್ಳಾ ಪುರಂದರದಾಸರು

ವಾದಿರಾಜಸ್ವಾಮಿ ಬಲುಜನ ಆದ್ಯಾರು

ಭೇದ ಸಿದ್ಧರು ಶ್ರೀ ನಾರಾಯಣಯೋಗಿ

ವೇದ ವೇದಾಂತರು ಇವರಿವರು ಕಾಣೊ

ಸಾಧು ಜನರು ಎನ್ನಿ ಇವರಿವರಿಂದಲಿ

ಆದ ಶಿಷ್ಯರು ಮತ್ತೆ ಕೆಲವರು ನಂದನರು

ಮೇಧಾದಿಗೆ ಅಧಿಕಾರಿ ಎನಿಸುವ ಶ್ರೀ ಹರಿಯ -

ಪಾದ ಸ್ಮರಣೆ ಎಂಬೊ ಪರಿ ಪರಿ ಬಗೆಯಾ -

ರಾಧನೆಯ ಮಾಡಿ ಭಕುತಿಯಿಂದಲಿ ಬೇ -

ಕಾದುದನೆ ಸವಿದು ಮಿಕ್ಕ ಪದಾರ್ಥ

ಈ ಧರಿ ಮೇಲಿಟ್ಟು ಮುಂದಣಾಗಮ ತಿಳಿದು ಪೋದರು ಸದ್ಗತಿಗೆ

ಮಾಧವಮೂರುತಿ ವಿಜಯವಿಟ್ಠಲ ಜಗಕೆ

ಆದಿದೈವವೆಂದು ಕೊಂಡಾಡಿ ನಗುತಾ ॥ 2 ॥ 


 ತ್ರಿವಿಡಿತಾಳ 


ಹರಿನಾಮ ರಸವೆಂಬೋ ರುಚಿ ಪದಾರ್ಥಂಗಳು

ಗುರುವ್ಯಾಸಮುನಿ ಮಿಕ್ಕಾ ದಾಸ ಜನರು

ಮರುತ ಪ್ರೇರಣೆಯಿಂದ ಸುರಿದು ಮದವೇರಿದ

ಕರಿವಿಂಡಿನಂತೆ ಚರಿಸಿದರು ಕಾಣೊ

ದುರುಳರೆದೆಯ ಮೆಟ್ಟಿ ದುಸ್ಸಂಗವನು ಜರಿದು

ಹರಿ ಸರ್ವೋತ್ತಮನೆಂದು ಕೂಗುತಲಿ

ಹರಿದಾಡಿ ಓಡಾಡಿ ಬೀದಿ ಬೀದಿಯೊಳಗೆ

ತಿರುಗುತಲಿಪ್ಪರು ಕರಿಗಳಂದದಲಿ

ಧರೆ ಮ್ಯಾಲೆ ಸುರಿದ ಆ ಪದಾರ್ಥವ ಚೂರು

ಇರುವು ಮೊದಲಾದ ಜೀವರಾಶೀ

ಹರಿದು ಪೋಗುತ ನಿಂದಾರಿಸಿಕೊಂಡು ಸವಿದುಂಡು

ಪರಮ ತೃಪ್ತಿಯಾಗಿ ಬಾಳಿದಂತೆ

ಧರಿ ಮ್ಯಾಲೆ ಕವನ ಪೇಳುವ ಬಲು ಜಾಣರು

ಅರಿಯಾರು ಪೊಸಬಗೆ ಮಾತುಗಳು

ಪರಪರಿ ಚಾತುರ್ಯದಿಂದ ಪೇಳಿದರೇನು

ಹಿರಿಯರಂದದರೊಳಗಿದು ಸಿದ್ಧವೊ

ಇರುವು ಮೆದ್ದುದರಿಂದ ಕರಿವಿಂಡಿಗೆ ಏನು

ಕೊರತೆಯಾಗದು ಕೇಳಿ ಜ್ಞಾನಿಗಳು

ಶರಣರ ಪರಿಪಾಲ ವಿಜಯವಿಟ್ಠಲರೇಯ 

ಎರವು ಮಾಡದೆ ಕಾವಾ ಹಿರಿಯರ ಪೊಗಳಲು ॥ 3 ॥ 


 ಅಟ್ಟತಾಳ 


ವ್ಯಾಸ ಮುನಿ ಮಿಕ್ಕಾದ ಹರಿದಾಸರು

ಬೀಸುರಿಗೆ ಎಣ್ಣೂರಿಗೆ ಶಾವಿಗೆ

ಸೂಸಲುಗಡಬು ಮಂಡಿಗೆ ಭಕ್ಷ ಅಪ್ಪಾಲು

ಲೇಸಾದ ಗುಳ್ಳೂರಿಗೆ ಮೆತ್ತನೆ ದೋಸೆ

ರಾಸಿ ದಧ್ಯಾನ್ನ ಪರಮಾನ್ನ ವಾರನ್ನ

ಆಸರಾಳಿಗೆ ಮತ್ತೆ ಗವಲಿ ಪರಡಿ ಫೇಣಿ

ಸೀ ಶಾಖಾ ಮಿಕ್ಕಾದ ಪದಾರ್ಥಂಗಳು ಎಲ್ಲ

ತಾ ಸವಿದರು ಅದರೊಳಗೆ ಪುರಂದರ -

ದಾಸರು ಗೋಘೃತವೆಂಬೊದೆ ಭುಂಜಿಸಿ

ಈಸು ಜನಂಗಳು ಪರಮ ತೃಪ್ತಿಯಾಗಿ

ದೇಶದೊಳಗಿದ್ದು ಹೆಚ್ಚಾದವರ ಪೀ -

ಯೂಷ ಹರಿನಾಮವೆಂಬೊ ಪದಾರ್ಥ ಉ -

ಳೀಸಿ ಪೋದರು ಕಾಣೊ ಭೇದ ಬಲ್ಲವರಿಗೆ

ಲೇಶ ನಾನದರೊಳಗವರುಂಡದ್ದು

ಮೀಸಲುವಾಗಿರೆ ನೋಡಿ ತೆಗೆದುಕೊಂಡು

ಲೇಸಾಗಿ ಘೃತದ ಸಂಗಡ ಭುಂಜಿಸುವೇನೈಯ್ಯಾ

ಈ ಸುಖ ಕಂಡವರಿಗೆ ದೊರಕುವದೇನೋ

ಶಾಶ್ವತ ಮೂರುತಿ ವಿಜಯವಿಟ್ಠಲರೇಯಾ 

ನಾಶವಿಲ್ಲದ ಜ್ಞಾನಕೊಟ್ಟು ರಕ್ಷಿಸುವ ॥ 4 ॥ 


 ಆದಿತಾಳ 


ಇಂಥ ಹರಿದಾಸರು ಮಿಗಿಸಿದ್ದ ಪ್ರಸಾದ

ಇಂತು ಎನಗೆ ಬಂದು ಪ್ರಾಪುತವಾದ ಮೇಲೆ

ಚಿಂತೆ ಯಾತಕೆ ಮನವೆ ಆನಂದತೀರ್ಥರ

ಗ್ರಂಥದಲ್ಲಿಗೆ ಸಮ್ಮತವಾಗಿ ಇಪ್ಪದು

ಪಂಥವಾಡುವ ಜನರು ಆಡಿಕೊಳ್ಳಲಿ ಅವರ

ಪಂಥ ಪೋಗದಲಿರು ಕಂಡರೆ ಕೆಲಸಾರು

ಕಂತುಜನಕ ರಂಗ ವಿಜಯವಿಟ್ಠಲ ತಾನೆ

ಚಿಂತೆ ಮಾಡುವ ತನ್ನ ನೆನೆಸಿದ ಭಕ್ತನಿಗೆ ॥ 5 ॥ 


 ಜತೆ 


ಹರಿ ಪ್ರಸಾದಾದವಗೆ ಆವದಾದರು ಕಡಿಮೆ

ನರರಿಗೆ ಆಗುವದೆ ವಿಜಯವಿಟ್ಠಲ ಪೊಳೆವಾ ॥

*******