" ಶ್ರೀ ಭೀಮೇಶ ದಾಸ ಕೃತ ಸಂಧಿ ಮಾಲಾ ಸಂಧಿ "
ಹರಿಕಥಾಮೃತಸಾರ ಸಂಧಿಗ ।
ಳರಹುವೆನು ತತ್ಕೃನ್ಮಹಾತ್ಮರ ।
ಚರಣ ಕರುಣಾ ಬಲವಿರಲು -
ಸನ್ಮಂಗಳಾಚರಣ ।।
ಸರಸ ಸಂಧಿಯ ಪೇಳ್ದ ಸುಜನರಿಗಿಂ ।
ಹರುಷ ಕೊಡುವದು ಎಂದು । ಪರಮಾ ।
ದರದಿ ಕರುಣಾಸಂಧಿ -
ವ್ಯಾಪ್ತಿಸಂಧಿ ಭೋಜನದ ।। 1 ।।
ಸಂಧಿ ಸುಖದ ವಿಭೂತಿ ಸಿರಿ ಗೋ ।
ವಿಂದನಾಜ್ಞದಿ ಪೇಳಿದರು । ಆ ।
ನಂದ ನೀಡುವ ಪಂಚ -
ಮಹಾಯಜ್ಞದ ಸುಸಂಧಿಯನು ।।
ಚಂದದಿಂದಲಿ ಪಂಚತನ್ಮಾ ।
ತ್ರೆ೦ದು ಕರಿಸುವ ಸಂಧಿ ಪೇಳ್ದರು ।
ಇಂದಿರೇಶನ ಪ್ರೀತಿ -
ಬಡಿಸುವ ಮಾತೃಕಾಸಂಧಿ ।। 2 ।।
ವರ್ಣಪ್ರಕ್ರಿಯಾಸಂಧಿ ಸುಜನರ ।
ಕರ್ಣಗಳಗತಿ ಶ್ರಾವ್ಯವೆನಿಪುದು ।
ತೂರ್ಣದಲಿ ಸರ್ವಪ್ರತೀಕ -
ಧ್ಯಾನಪ್ರಕ್ರಿಯವ ।।
ನಿರ್ಣಯಿಸಿದರು ನಾಡಿಯನು । ಸಂ ।
ಪೂರ್ಣ ಗುಣಾನಾಮಸ್ಮರಣೆಯನು ।
ಸ್ವರ್ಣನಾಭಿಪ್ರಮುಖ -
ಜೀವನಪ್ರಕ್ರಿಯಾ ಸಂಧಿ ।। 3 ।।
ವಾಸುದೇವನ ಕರುಣದಿಂದಲಿ ।
ಶ್ವಾಸಸಂಧಿಯ ಪೇಳಿದರು । ಜಗ ।
ದೀಶನಿಂದಲಿ ದತ್ತ-
ಸ್ವಾತಂತ್ರಾಖ್ಯ ಸಂಧಿಯನು ।।
ಲೇಸೆನಿಪ ಸ್ವಾತಂತ್ರ್ಯ ವಿಭಜನ ।
ದಾಸ ಸಾರಿದರೆಲ್ಲ । ಬಿಂಬೋ ।
ಪಾಸನದ ಸಂಧಿಯನು -
ಹರಿಯ ಸ್ತೋತ್ರ ಸಂಧಿಯನು ।। 4 ।।
ಸುಗುಣ ತರತಮಭಾವಸಂಧಿಯು ।
ಮಿಗಿಲು ಆವೇಶಾವತಾರವನು ।
ನಗಧರನ ಭಕ್ತಾಪರಾಧ-
ಸಹಿಷ್ಣು ಸಂಧಿಯನು ।।
ಹಗಲು ಇರಳೆನ್ನದಲೆ ಪಿರಿಯರು ।
ಬಗೆಬಗೆಯ ಶಾಸ್ತ್ರವನು ಶೋಧಿಸಿ ।
ಸುಗತಿಪ್ರದ ಬೃಹತ್ತಾರತಮ್ಯದ
ಸಾಧನದ ಸಂಧಿ ।। 5 ।।
ದೇವನಂಘ್ರಿಯ ನೆನೆವುತಲಿ ಕ್ರೀ ।
ಡಾವಿಲಾಸವರೋಹ ಸಂಧಿಯ ।
ದೇವತಾನುಕ್ರಮಣಿಕಾ -
ವಿಘ್ನೇಶ ಸಂಧಿಯನು ।।
ಭಾವವುಳ್ಳಣು ತಾರತಮ್ಯವ ।
ತಾ ವಿರಚಿಸುತ ದೈತ್ಯ ತರತಮ ।
ಭಾವ ನೈವೇದ್ಯ ಪ್ರಕರಣದ -
ಸಂಧಿ ಪೇಳಿದರು ।। 6 ।।
ನೀರಜಾಕ್ಷನ ನೆನೆದು । ಕಕ್ಷಾ ।
ತಾರತಮ್ಯದ ಸಂಧಿ ಪೇಳುತ ।
ಶ್ರೀರಮಣಗರ್ಪಿಸುತಲಿರೆ -
ಭೀಮೇಶ ವಿಠ್ಠಲನ ।।
ಚಾರುಚರಣವ ನೆನೆಯುತನುದಿನ ।
ಧಾರುಣೀಯೊಳು ಮೆರೆದ ನಮ್ಮಯ ।
ಗುರು ಧೊರೆ ಜಗನ್ನಾಥದಾಸಾಖ್ಯ -
ದಾಸರ ನೆನೆವೆನನವರತ ।। 7 ।।
***