by yadugiriyamma
ಪಾರ್ಥಸಾರಥಿ ನಿಮ್ಮ ಸೇವೆಯ ಮಾಡಿ ಸಾರ್ಥಕವಾದೆನು ಪ
ವಾರ್ಥಿಪುರುಷನೆ ನಿಮ್ಮ ಕೀರ್ತಿಯ ಕೊಂಡಾಡಲೆನಗೆ
ಶಕ್ತಿಯ ವಿಸ್ತರಿಸೆನಗೆ ಯುಕ್ತಿಯ ಅ.ಪ
ಆಚಾರ್ಯರಿಗೆ ಅಭಿವಂದನೆ ಮಾಡಿ ಅಜನರಾಣಿಯ ಭಜಿಸುವೆ
ಆದಿಮೂರುತಿ ಪಾರ್ಥಸಾರಧಿ ಸೇವೆ ಕ್ರಮವನು ಪೇಳುವೆ
ಅನಾದಿಕ್ರಮವನು ಪೇಳುವೆ 1
ಕೈರವಿಣಿಯಲ್ಲಿ ಸ್ನಾನವಮಾಡಿ ಕೈಮುಗಿದು ಮಾರುತಿಗೆ ನಾ
ಕರುಣಿಆಚಾರ್ಯರಿಗೆ ವಂದಿಸಿ ಕರಿಯಬಳಿಗೆ ನಾ ಬಂದೆನು
ನಾ ಕರಿಯ ಬಳಿಗೆ ಬಂದೆನು 2
ದವನೋತ್ಸವದ ಮಂಟಪಂಗಳು ಭಾಗವತರ ಭವನವು
ಬಲವಬಳಸಿ ಭಕ್ತವತ್ಸಲನ ಚೆಲುವರಥವನು ನೋಡಿದೆ
ನಾ ಶೇಷರಥವನು ಸೇವಿಸಿ 3
ಮೂಡಬೀದಿಯ ಸುತ್ತಿಬಂದು ಮಹದಾಹ್ವಯರನು ಸೇವಿಸಿ
ಮಹಾನುಭಾವನ ವಿಮಾನವನು ನೋಡಿ ಮಾನವನ್ನು ಬಿಟ್ಯೆನೊ
ದೇಹಾಭಿಮಾನವನ್ನು ಬಿಟ್ಯೆನೊ 4
ಕಾರಿಮಾರಿ ಪುತ್ರರಿಗೆ ಬಾರಿಬಾರಿಗೆ ವಂದಿಸಿ
ವಾರಿಜಾಕ್ಷನ ಗೋಪುರವ ನೋಡಿ ಘೋರಪಾಪವ ಕಳೆದೆನೊ
ಯನ್ನ ಘೋರಪಾಪವ ಕಳೆದೆನೊ 5
ಗರುಡಕಂಭವ ದೀಪಸ್ತಂಭವು ವಾಹನದ ಮಂಟಪಂಗಳು
ವಾರಿಜನಾಭನ ಪಕ್ಷಿವಾಹನನ ನೋಡಿ ವಂದನೆಯ ಮಾಡಿದೆ
ಅಭಿವಂದನೆಯ ನಾ ಮಾಡಿದೆ 6
ತೋರಣದ ಬಾಗಿಲನು ದಾಟಿ ವಾರುಣದೆದುರಲಿ ವಂದಿಸಿ
ವಾರಿಜಾಕ್ಷಿ ಶ್ರೀವೇದವಲ್ಲಿಯ ಸಾರೂಪ್ಯವನು ನಾ ಬೇಡಿದೆ
ಸಾಯುಜ್ಯವನು ನಾ ಬೇಡಿದೆ 7
ಭಕ್ತಿಸಾರರ ಚರಣಕೆರಗಿ ಹಸ್ತಗಿರೀಶನ ವಂದಿಸಿ
ಸುತ್ತಿ ಗರುಡಕಂಬವನ್ನು ಮತ್ತೆ ಸಿಂಹನ ಸೇವಿಸಿ
ದಿವ್ಯ ನಾರಸಿಂಹನ ಸೇವೆಸಿ 8
ವಿಷ್ಣುಚಿತ್ತರ ಪುತ್ರಿಯನ್ನು ಅರ್ಥಿಯಿಂದಲೆ ಸೇವಿಸಿ
ಮುಕ್ತಿದಾಯಕ ರಂಗನ ಪಾದಕೆ ಮುದದಿ ವಂದನೆ ಮಾಡಿದೆ
ನಾ ಮುದದಿ ವಂದನೆ ಮಾಡಿದೆ 9
ಯಾಮುನಾಚಾರ್ಯರಿಗೆ ವಂದಿಸಿ ಕಾಂಚೀಪೂರ್ಣರಿಗೆರಗುವೆ
ವೇದಾಂತಾಚಾರ್ಯರ ವಂದನೆ ಮಾಡಿ ಅನಾದಿ ಪಾಪವ ಕಳೆದೆನೊ
ನಾ ಅನಾದಿ ಪಾಪವ ಕಳೆದೆನೊ 10
ಭಾಷ್ಯಕಾರರ ಚರಣಕೆರಗಿ ವರಯೋಗಿಗಳಿಗೆ ವಂದಿಸಿ
ಕುಲೇಶ ದಾಶರಥಿಗೆ ವಂದಿಸಿ ದ್ವಾರಪಾಲಕರ ನೋಡಿದೆ
ನಾ ದ್ವಾರಪಾಲಕರ ನೋಡಿದೆ 11
ಗಂಟೆಬಾಗಿಲ ದಾಟಿ ಶ್ರೀವೈಕುಂಠವಾಸನ ಭಕ್ತರು ಹದಿ
ನೆಂಟು ಆಳ್ವಾರುಗಳ ಸೇವಿಸಿ ಕಂಟಕಗಳ ಕಳೆದೆನೊ
ಭವ ಕಂಟಕಗಳ ಕಳೆದೆನೊ 12
ಕೇಶವ ಮಾಧವ ಅನಂತ ಶ್ರೀಪದ್ಮನಾಭನ ಸೇವಿಸಿ ಶ್ರೀರಾಮ
ಲಕ್ಷ್ಮಣ ಭರತ ಶತ್ರುಘ್ನ ಸೀತೆಯನು ನಾ ನೋಡಿದೆ
ಲೋಕಮಾತೆಯನು ನಾ ಬೇಡಿದೆ 13
ಆದಿಶೇಷನ ಮೇಲೆ ಮಲಗಿದ ಅನಾದಿರಂಗನ ಸೇವೆಗೆ ಕುಲ
ಶೇಖರರ ಸ್ಥಾನದಲಿ ನಿಂದು ಯದುಕುಲೇಶನ ನೋಡಿದೆ
ನಾನೆದುಕುಲೇಶನ ನೋಡಿದೆ 14
ಬಲದಿ ರುಕ್ಮಿಣಿ ಬಲರಾಮ ಪ್ರದ್ಯುಮ್ನ ಅನಿರುದ್ಧ ಸಹಿತಲೆ
ಎಡದಿ ಸಾತ್ಯಕಿ ಪಂಚಮೂರ್ತಿಗಳ ನಡುವೆ ಪಾರ್ಥಸಾರಥಿ
ಯೆಡಬಲದಿ ಶ್ರೀದೇವಿ ಭೂದೇವಿ 16
ಆದಿಶೇಷನ ಮೇಲೆ ತನ್ನಯ ಪಾದವನ್ನು ಪ್ರಸÀರಿಸಿ ವಿ
ನೋದದಿಂದಲೆ ಅಂದುಗೆ ಗೆಜ್ಜೆ ಕುಂದಣದ ಪಾಡಗಗಳು
ಆನಂದದ ಪಾಡಗಗಳು 17
ಕನ್ನಡಿಯಂದದಿ ಕಣಕಾಲುಗಳು ಉನ್ನತವಾದ ಪೀತಾಂಬರವು
ಪನ್ನಗಶಯನನ ವಡ್ಯಾಣದಲಿ ಪರಮಮೂರ್ತಿಯ ಸರಗÀಳು
ಶ್ರೀಮೂರ್ತಿ ಸರವನು ಸಿಕ್ಕಿಸಿ 18
ದುಷ್ಟನಿಗ್ರಹವನ್ನು ಮಾಡಿ ಶ್ರೇಷ್ಠರನ್ನು ಪರಿಪಾಲಿಪ ಶ್ರೀ
ಕೃಷ್ಣಮೂರುತಿಯ ಎಡದ ಭಾಗದಿ ಶ್ರೇಷ್ಠವಾದ ಖಡ್ಗವು
ಸರ್ವಶ್ರೇಷ್ಠವಾದ ಖಡ್ಗವು 19
ಸಿಂಧುರಾಜನ ಕೊಲ್ಲುವುದಕಾಗಿ ಅಂದು ಚಕ್ರವ ಕಳುಹಿದೆ
ಒಂದು ಕೈಯಲಿ ಪಾದವ ತೋರುತ ಮತ್ತೊಂದು ಕೈಯಲಿ ಶಂಖವು
ಅನಂದದಿಂದಲೆ ಶಂಖವು 20
ಸೃಷ್ಟಿಯೆಳಗ್ಹದಿನಾಲ್ಕು ಲೋಕವ ಪಕ್ಷಿವಾಹನವಂ
ಬಿಟ್ಟು ವಕ್ಷಸ್ಥಳದಲಿ ಲಕ್ಷ್ಮಿದೇವಿಯ ರತ್ನಾದ್ಹಾರದಪದಕವು
ನವರತ್ನದ್ಹಾರದ ಪದಕವು 21
ಕಂಠದೊಳಗಿಟ್ಟ ಕೌಸ್ತುಭಮಣಿ ಎಂಟುಪುಷ್ಪದ ಹಾರವು ವೈ
ಕುಂಠವಾಸನ ಸೇವಿಸಿದರೆ ಕಂಟಕಂಗಳು ಕಳೆವುದು
ಭವಕಂಟಕಗಳು ಕಳೆವುದು 22
ಕುಂದಕುಸುಮದಂತೆ ದಂತವು ಪವಳದಂತೆ ಅಧರಕಾಂತಿಯು
[ಚೆಂದದಿ] ಪೊಳೆವ ಕರ್ಣಕುಂಡಲ ಚೆಲುವ ನಾಸಿಕದಂದವು
ತಿಲಕುಸುಮನಾಸಿಕದಂದವು 23
ದೀಪದಂದದಿ ಕರುಣನೇತ್ರವು ಚಾಪದಂದದಿ ಪುಬ್ಬುಗಳಲಿ
ತೋರ್ಪುದಾ ಲೋಕನಾಯಕನ ನಾಮದ ಬೆಳಕು ಅನೇಕವಾಗಿ
ವಿವೇಕವಾಗಿ ತೋರ್ಪುದು 24
ಮುದದಲಂದುಗೆ ಗೆಜ್ಜೆಯು ಮೂರುಲೋಕವನಾಳ್ವ ಕಿರೀಟದ
ಪದುಮನಾಭನ ಸೇವಿಸಿದವರಿಗೆ ಒದಗಿ ಬರುವುದು ಮುಕ್ತಿಯು
ಎಲ್ಲರಿಗೊದಗಿ ಬರುವುದಿಷ್ಟಾರ್ಥವು 25
ಪಾದದಿ ಕೇಶದ ಸೇವೆಯನು ಮಾಡಿ ಅನಾದಿಪಾಪವ ಕಳೆದೆನೊ
ವೇದಮೂರುತಿ ವೆಂಕಟಕೃಷ್ಣನೆ ಪಾದವನ್ನು ತೋರಿಸು
ನಿಮ್ಮ ಶ್ರೀ ಪಾದವನ್ನು ತೋರಿಸು 26
****