ನಮೋ ನಾರಸಿಂಹ ನಖವಜ್ರಧರ ಅರಿಪಾಟನಪಟೋ
ತಮೋಜಾಲವ ಛೇದಿಸು ವಿದ್ಯಾಕಿರಣದಿ ಜ್ಞಾನದಿವಾಕರ ll ಪ ll
ಪಾಪಪರ್ವತವ ಛೇದಿಸು ತವಾನುಸ್ಮೃತ ನಖವಜ್ರದಿ
ವಿಪದಾತಪವ ತಣಿಸು ದಯಾರ್ದ್ರನೇತ್ರಶೀತಲಾಂಶುದಿ
ಸೋಪಾನದಲಿ ಏರಿಸೆನ್ನ ಚಿನ್ಮಯ ಚಿನ್ನದಶುಭಕಾಯ
ಉಪಾಸನಾ ದಾರಿಯಲಿ ಹಸನಾಗಿ ಮುನ್ನಡೆಸು ಸಿಂಹ ನಮೋ ನಮಸ್ತೇ ll 1 ll
ಅರಿಧರ-ದರಧರ-ಜಾನುವಿನ್ಯಸ್ತ ಹಸ್ತಕಂಜದ್ವಯ
ಪರಮಾಲಿಂಗಿತಸುಂದರಾಂಗ ರವಿಪ್ರದೀಪ್ತನೇತ್ರತ್ರಯ
ಅರಿಚಕ್ರವನು ಚಕ್ರಮಾನಿನಿಮುಖದಿ ದೂರ ಓಡಿಸು
ಗರಾಭಿಚಾರಿಕಮಂತ್ರಾದಿಕಾಟವ ಖಂಡಿಸು ಹುಂಕಾರದಿ ನಮೋ ನಮಸ್ತೇ ll 2 ll
ಹಿರಣ್ಯಕನ ಸೀಳಿ ಕರಳನುಧರಿಸಿದ 'ಋತಂಬರ'
ತರಳ ಭಾಗವತನ ಶಿರದಲಿಟ್ಟೆ ಪ್ರಬೋಧಹಸ್ತವ
ಸುರಮುನಿಸುಜನಸ್ತೋಮಕೆ ಯಥೇಷ್ಟ ನೀಡಿದ 'ಮಂದಾರ'
ಸಿರಿ ವಿದ್ಯೇಶವಿಟ್ಠಲ ಗೌರೀಸೌಭಾಗ್ಯದಾತ ವಿಘ್ನಹರ್ತ ನಮೋ ನಮಸ್ತೇ ll 3 ll
***