....
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀರಾಮಮಂತ್ರ
ಶ್ರೀರಾಮ ಸೀತಾರಮಣ ಮಾಂ ಪಾಹಿ ಪ
ಉರು ಜ್ಞಾನ ಸುಖರೂಪ ನಮೋ ವಾಸುದೇವ ಅ.ಪ
ಶ್ಯಾಮ ರಮಣೀಯ ಉರು ಆಮ್ನಾಯಕೂ ಅಮಿತ
ರಮೆ ಸೀತಾಯುತ ನಮೋ ಹನುಮಾದಿ ಸೇವ್ಯ
ವಾಮಹಸ್ತದಿ ಚಾಪ ಚಿನ್ಮುದ್ರೆ ಶರಬಲದಿ
ಅಮಿತಾರ್ಕಸೋಮ ಸ್ವಕಾಂತಿ ಶ್ರೀರಾಮ 1
ಪರಮೇಶ ಏಕಾತ್ಮ ಅರದೂರ ಪರಿಪೂರ್ಣ
ಉರು ಸುಗುಣವಾರಿನಿಧಿ ನೀನೇ ಸ್ವತಂತ್ರ
ಅರವಿಂದಜಾಂಡಾದಿ ಜಗತ್ಸರ್ವ ಕರ್ತಜ
ಸುರರ ಮೊರೆ ಕೇಳಿ ದಶರಥನ ಸುತನಾದೆ 2
ಚತುರ್ವದನ ಸಂಸೇವ್ಯ ಹಯವದನ ಷಡ್ರೂಪ
ಚತುರ್ವಿಂಶಾಕ್ಷರ ಸುಮಂತ್ರ ಪ್ರತಿಪಾದ್ಯ
ತ್ರಾತ ಪ್ರೇರಕಸ್ವಾಮಿ ರಾಮನೇ ಎಂದರಿತು
ಸಂಧ್ಯಾಸುಮಂತ್ರ ಋಷಿ ಬಂದು ಪ್ರಾರ್ಥಿಸಿದ 3
ಸುದುಪಾಸ್ಯ ನಿನ್ನ ಋಷಿ ಆಶ್ರಮಕೆ ಕರದೊಯ್ಯೆ
ಶ್ರೋತವ್ಯ ಮಂತವ್ಯ ನಿಧಿ ಧ್ಯಾಸಿತವ್ಯ
ಪ್ರತ್ಯಕ್ಷ ಅವತಾರರೂಪ ನೀನೆಂದರಿತು
ಸಿದ್ಧರು ಭಕ್ತಿಯಿಂದಲಿ ವಂದಿಸಿದರು 4
ತತ್ರ ತತ್ರ ಸ್ಥಿತೋ ವಿಷ್ಣುಃ ತತ್ತಚ್ಛಕ್ತಿ ಬೋಧಯನ್
ಅಸ್ತ್ರದೇವತೆಗಳೀ ತತ್ವವನು ಅರಿತು
ಸತ್ತಾದಿದಾತನೇ ಶಾಸ್ತ್ರಸ್ವಾಮಿ ವಿಷ್ಣೋ
ಪ್ರತ್ಯಗಾತ್ಮನೆ ರಾಮ ನಿನಗೆ ನಮಿಸಿದರು 5
ಯಜ್ಞಗೆ ಯಜ್ಞಗೆ ವಿಶ್ವಾಮಿತ್ರಗೆ ನಮೋ
ಯಜ್ಞಭುಕ್ ಯಜಮಾನ ಯಜ್ಞ ಯಜ್ಞೇಶ
ಇಜ್ಯ ಪೂಜ್ಯಗೆ ಸ್ವಾಮಿ ಮನ್ಮನೋವಾಕ್ಸಂಸ್ಥ
ಯಜ್ಞಸ್ಥಯಜ್ಞ ಮಾಂ ಪಾಹಿ ನಮೋ ನಮಸ್ತೆ 6
ವೇದವತಿ ತ್ವದಧೀನೆ ಸರ್ವಜಗದಾಧಾರೆ
ಭೂದೇವಿ ಸುಖಪೂರ್ಣೆ ಅಜೆ ನಿತ್ಯಮುಕ್ತೆ
ವೈದೇಹಿ ಜಾನಕಿ ಸೀತಾನಾಮದಿ ತಾನೆ
ಈ ಧರೆಯೊಳ್ ತೋರಿಹಳು ನಿನ್ನನನುಸರಿಸಿ 7
ಸುರಾಜಗಜ ಇಕ್ಷು ಜಲ್ಲೆಯನು ಮುರಿವಂತೆ
ಪರ ಫಲಿ ಬಲಿ ನೀನು ಶಿವಚಾಪ ಮುರಿಯೆ
ಸುರರು ನರವರ್ಯರು ಹರುಷದಿಂದಲಿ ನೋಡೆ
ಸಿರಿ ಸೀತೆ ವರಮಾಲೆ ನಿನಗೆ ಹಾಕಿದಳು 8
ಶರಭಂಗ ಶಬರಿ ಜಟಾಯು ಮೊದಲಾದವರ
ವರಭಕ್ತಿಗೆ ಮೆಚ್ಚಿ ಯೋಗ್ಯ ಗತಿಯಿತ್ತೆ
ಮಾರುತಿಗೆ ಪ್ರಿಯರೆಂದು ರವಿಜಗೆ ವಿಭೀಷಣಗೆ
ಕರುಣಿಸಿದೆ ನಿರಪೇಕ್ಷ ನೀ ಪೂರ್ಣಕಾಮ 9
ಕ್ರೂರ ಪೌಲಸ್ತ್ಯಾದಿ ರಕ್ಕಸರ ತರಿದು ನೀ
ಧರೆಯಲಿ ಸುಕ್ಷೇಮ ಧರ್ಮ ಸ್ಥಾಪಿಸಿದೆ
ಸರಸಿಜಾಸನ ಲೋಕದಂತಾಯಿತೀ ಲೋಕ
ವರವಿಷ್ಣುಭಕ್ತಿಯು ಸೌಖ್ಯ ಎಲ್ಲೆಲ್ಲೂ 10
ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸನೆ
ಸರಿ ಮಿಗಿಲು ನಿನಗಿಲ್ಲ ಯಾರು ಎಂದೆಲ್ಲೂ
ಸಿರಿಸೀತಾಯುತರಾಮ ಎಂದೂನು ಎಲ್ಲೆಲ್ಲೂ
ಮಾರುತಿ ಸೌಮಿತ್ರಿ ಭರತಾದಿ ಸೇವ್ಯ 11
***