Showing posts with label ವರಕರ್ನಾಟಕ ಸಿಂಹಾಸನ ವಚ್ಚಳಿಯದೆ ನಿಂತಿತು ಈ ಸ್ಥಳದಿ ಲಾವಣಿ ಪದ prasanna. Show all posts
Showing posts with label ವರಕರ್ನಾಟಕ ಸಿಂಹಾಸನ ವಚ್ಚಳಿಯದೆ ನಿಂತಿತು ಈ ಸ್ಥಳದಿ ಲಾವಣಿ ಪದ prasanna. Show all posts

Saturday, 1 May 2021

ವರಕರ್ನಾಟಕ ಸಿಂಹಾಸನ ವಚ್ಚಳಿಯದೆ ನಿಂತಿತು ಈ ಸ್ಥಳದಿ ಲಾವಣಿ ಪದ ankita prasanna

 ಶ್ರೀ ವಿದ್ಯಾ ಪ್ರಸನ್ನ ತೀರ್ಥರು - ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಮೇಲೆ ರಚಿಸಿದ " ಲಾವಣಿ ಪದ "

ವರ ಕರ್ನಾಟಕ ಸಿಂಹಾಸನ-

ವಚ್ಚಳಿಯದೆ ನಿಂತಿತು ಈ ಸ್ಥಳದಿ ।

ದೊರೆಗಳು ಧರೆಯಲಿ ಉರುಳಿ 

ಉರುಳಿತಿರೆ ನಿರುತವು 

ದೊರೆ ಶ್ರೀ ವ್ಯಾಸರಾಜ ।। 1 ।।


ಬಾಲರೆ ಬನ್ನಿ ದರ್ಶನ ಮಾಡಿರಿ 

ಬಾಲ ಬ್ರಹ್ಮಚಾರಿಗಳಿವರು ।

ಉಭಯ ಸಾಮ್ರಾಜ್ಯಕೆ ಚಕ್ರವರ್ತಿಗಳು 

ಅಭಯವನಿತ್ತರು ಜಗಕೆಲ್ಲ ।। 2 ।।


ವಿಜಯವ ಪಡೆದರು ವಾದಗಳಲಿ 

" ಪ್ರತ್ಯರ್ಥಿ ಗಜಕೇಸರಿ " 

ಯೆಂದೆನಿಸಿದರು ।

ಸುಂದರ ಚರಣರು ಸುಜನ 

ಪಯೋನಿಧಿ ಚಂದಿರನಂದದಿ 

ಹೊಳೆಯುವರು ।। 3 ।।


ಅಭಿಷೇಕವು ರತ್ನಗಳಿಂದಿವರಿಗೆ 

ಅಭಿನವ ಪ್ರಹ್ಲಾದರೆ ಇವರು ।

ಗುಣಗಣ ನಿಲಯನ ಗುಣಗಳ 

ತೋರಿದ ಮುನಿತ್ರಯದಲಿ 

ಸೇರಿದರಿವರು ।। 4 ।।


ಜ್ಞಾನಿಗಳಿಗೆ ದೊಡ್ಡ ಜ್ಞಾನ 

ಭಂಡಾರವು ನಾನಾ 

ಶಾಸ್ತ್ರಗಳರಿತವರು ।

ಕುಹುಯೋಗವ ಪರಿಹಾರವ 

ಮಾಡ್ದರು ಇಹ ಲೋಕದಿ 

ಸಮರ್ಯಾರಿಹರು ।। 5 ।।


ಚಂದ್ರಿಕಾ ನ್ಯಾಯಾಮೃತ 

ತರ್ಕತಾಂಡವ ಯೆಂದಿಗೂ 

ಶ್ರೇಷ್ಠದ ಗ್ರಂಥಗಳು ।

ಮುಂದಿಟ್ಟರು ಪರವಾದಿಗಳಿಗೆ 

ಬಂದೊದಗಿತು 

ಗಂಟಲ ಗಾಣಗಳು ।। 6 ।।


ಕಟು ಶಾಸ್ತ್ರಗಳನು ಸ್ಫುಟದಿ 

ವಿವರಿಸೆ ಸ್ಫುಟವಾಯಿತು 

ಈ ಜಗವೆಲ್ಲೂ ।

ಪಟುತಮ ಕನಕ ಪುರಂದರ 

ಶಿಷ್ಯರು ದಿಟ 

ತೋರಿದರಿವರನುಗ್ರಹದೀ ।। 7 ।।


ಮಠಗಳಲುತ್ತಮ ಮಠವಿದು 

ಇತರರಿಗೆಟುಕದ 

ಕೀರುತಿ ಗಳಿಸಿಹುದು ।

ವಾದಿರಾಜ ವಿಜಯೀ೦ದ್ರ 

ಪ್ರಮುಖರು ಪರಮಾದರದಿ 

ಶಿರ ಬಾಗಿದರು ।। 8 ।।


ಓದಿದರೆಲ್ಲರು ಶಿಷ್ಯರೆನಿಸಿದರು 

ಪಾದರಜವ ಶಿರದಿ ಧರಿಸಿದರು ।

ವಾಗ್ಮಿಗಳೆಲ್ಲರು ಪಿಗ್ಮಿಗಳಾದರು 

ವಾಗ್ಮಿವರೇಣ್ಯರ ಎದುರಿನಲಿ ।। 9 ।।


ರುಕುಮಿಣಿ ರಮಣನು ಕುಣಿದನು 

ನಲಿದನು ಅಗ್ಗದಿ 

ಗುರುರಾಜರ ಮುಂದೆ ।

ಪುಣ್ಯಶಾಲಿಗಳು ಆರಾಧಿಸುವ 

ಪ್ರಸನ್ನ ಮಾನಸದಿ ನಡುಗಟ್ಟಿ ।। 10 ।।

*****