ಕರಪಿಡಿದು ಕಾಯೊ ಶ್ರೀ ಕರುಣಾಳು ಧನ್ವಂತ್ರಿ
ವರ ವೆಂಕಟಾದ್ರಿವಾಸ ಪ.
ತರಳೆ ಸೇವೆಯ ಕೊಂಡು ಪರಿಪರಿಯ ಬಗೆಯಿಂದ
ವರ ಕೃಪೆಯ ಮಾಡೊ ಸ್ವಾಮಿ ಪ್ರೇಮಿ ಅ.ಪ.
ಆವ ಪರಿಯಿಂದ ಜಗದೊಳು ನೋಡೆ ಕಾವರಿ
ನ್ನಾವರುಂಟೆಲೊ ದೇವನೆ
ಪಾವಮಾನಿಯ ಪ್ರೀಯ ಪರಿಪರಿಯ ಪಾಪ ಫಲ
ದೀವಿಧದ ಬವಣೆಯನ್ನೇ
ನೀ ವಿಚಾರಿಸಿ ಕಾಯೊ ನಿನ್ನ ಶರಣ್ಹೊಕ್ಕಮೇ-
ಲಾವ ಸಂಶಯ ಕಾವನೇ
ಪಾವಕನ ತೆರದಿ ಭಸ್ಮವ ಮಾಡಿ ದುಷ್ಕರ್ಮ
ಜೀವಕ್ಹಿತ ಕೊಡು ಪ್ರೀತನೇ | ಇನ್ನೇ 1
ಸುರರ ವ್ಯಾಕುಲ ಬಿಡಿಸಿ ಅಮರ ಪಕ್ಷವ ವಹಿಸಿ
ವರ ಸುಧೆಯನವರಿಗುಣಿಸೀ
ದುರುಳ ಸಂಘವ ಕೊಲಿಸಿ ಸುರ ರಾಜ್ಯಸ್ಥಿರಪಡಿಸಿ
ಪರಿಪರಿಯ ಸೌಖ್ಯ ಸುರಿಸೀ
ಮೆರೆದೆಯೋ ಗುಣಸಿಂಧು ನಿನ್ನ ಸೇವಕಳೆಂದು
ಪರಿಕರಿಸಿ ನೀನೀಕ್ಷಿಸೀ
ಪೊರೆಯದಿದ್ದರೆ ನಿನ್ನ ಬಿರುದುಳಿವ ಪರಿ ಕಾಣೆ
ಹರಿಸು ಭಯ ಶ್ರೀ ನರಹರೇ | ಶೌರೇ 2
ಬರಿದು ಮಾಡದೆ ಎನ್ನ ಬಿನ್ನಪವ ಪೊರೆಯ ಬೇ-
ಕರವಿಂದ ದಳ ನೇತ್ರನೇ
ಗುರು ಹಿರಿಯರುಕ್ತಿಯಲ್ಲದೆ ಎನ್ನದೆಂಬುವೋ
ಗರುವ ನುಡಿಯಲ್ಲ ನೀನೇ
ಚರಣ ಸೇವಕರ ಪೊರೆವಂಥ ವಿಶ್ವಾತ್ಮಕನೆ
ಪರಿಹರಿಸು ಕ್ಲೇಶಗಳನೇ
ಕರುಣಿ ಶ್ರೀ ಗೋಪಾಲಕೃಷ್ಣವಿಠ್ಠಲ ಶೇಷ-
ಗಿರಿನಿಲಯ ಭಕ್ತ ಪ್ರೀಯಾ | ಜೀಯಾ 3
****