ನಾಗರಪಂಚಮಿಹಾಡು
ವಾಸುಕಿ ರೂಪನೆ ವೈಯ್ಯಾರದಿಂದ ಸುವಾಸಿನಿಯರು ಅರಿತು | ಪೂಜೆಯ ಮಾಡುವಾ |
ಆ ಶುಭಾ ಚರಿತೆಯ ಕಥೆಯ ನಾ ಪೇಳುವೆ |ಈಶ ಕುಮಾರನೆ ಪಾಲಿಪುದು ಮತಿಯ||
ಬಡ ಬ್ರಾಹ್ಮಣನ ಮಗಳು ಅಕೆಮುಂಚಿ ಎಂಬೋಳು ಗರುಡಪಂಚಮಿ ವೃತವು ತನಗೆನುತಲಿ |
ತರಿಸಿಕೊಡಬೇಕಾದ ಫಲಪುಷ್ಪ ಹ್ಯಾಂಗೆನುತ | ಒಡಹುಟ್ಟಿದಣ್ಣಗೆ ಅರುಹಿದಾಎಲ್ಳು ||
ಅಂದ ಮಾತನು ಕೇಳಿ ಚಂದ್ರಶೇಖರ ತಾನು ಚೆಂದುಳ್ಳ ಕುಸುಮಗಳ ಕೊಯ್ಯುತಿರಲು |
ಒಂದು ಕ್ಯಾದಿಗೆ ಒಳಗೆ ಹೊಂದಿದ್ದ ಶೇಷ ತಾ ಬಂದು ಸೋಕಿದನವನ ಉದರ ಸ್ಥಳವನು ||
ವಿಷವು ತಲೆಗೇರಿ ಪರವಶನಾಗಿ ಬಿದ್ದಿರಲು |ಕುಸುಮಲೋಚನೆಗೆ ಬಂದರುಹಿದರು ಬೇಗ |
ಶಿಶುವತಿ ವಲ್ಲಭ ವಿಷವ ಕೋ ನಾಗರಾ ಭೋಗಿಸು ಎಂದರ್ತಿಯಲಿ ತೆರಳಿದಾಳು ||
ನೆನೆ ಅಕ್ಕಿ, ನೆನೆಗಡಲೆ ಗೊನೆಯ ಬಾಳೆಯ ಹಣ್ಣು, ಚಿಗುಳಿ, ತಂಬಿಟ್ಟು, ತೆಂಗಿನಕಾಯಿಯು |
ಅರಳು, ಹುರಿಕಡಲೆ,ಹುಣಸಿಯಕಾಯಿ | ಮೊದಲಾದ ಫಲಗಳನೆ ತೆಕ್ಕೊಂಡು ತೆರಳಿದಾಳು ||
ರಂಭೆಯರೊಡಗೂಡಿ ಬಂದು ನಿಂತಳೆ ಅನುಜೆ ಚೆಂದದಿ ಅರ್ಘ್ಯಪಾದ್ಯವನೆ ಮಾಡಿ |
ಭಕ್ತಿಯಿಂದಲಿ ಛತ್ರ ಚಾಮರವೆತ್ತಿ ನಿಂತು ಪೂಜಿಸಿದಳು ಕಾಳಿಂಗನ ||
ಹಳದಿಯಾ ವಸ್ತ್ರಗಳು, ಬಿಳಿಯ ಜನಿವಾರಗಳು | ಥಳ ಥಳನೆ ಹೊಳೆಯುವಾ ಮುತ್ತಿನಾ ತೊಡುಗೆ|
ನಳ ನಳಿಸುವಾ ಪುಷ್ಪ ಫಲಗಳನೆ ತಕ್ಕೊಂಡು |ಬೆಳಗಿದರು ಧೂಪ ದೀಪಾರತಿಯನು||
ಹುತ್ತದಾ ಮೃತ್ತಿಕೆಯ ಅಕ್ಷತೆಯ ತಕ್ಕೊಂಡು ಅಣ್ಣನಾ ಬೆನ್ನು ತೊಳೆದಳಾಗ |
ಎಷ್ಟೊತ್ತ್ ಮಲಗಿದೆನೆಂದು | ಎಚ್ಚರದಿ ಮೈಮುರಿದು | ಎಚ್ಚರದಿ ಕಣ್ತೆರೆದು ಕುಳಿತನಾಗ||
ಹರಿಗೆ ಹಾಸಿಗೆಯಾದೆ | ಹರಿಗೆ ಕುಂಡಲವಾದೆ | ಹರಿಯೆ ದ್ರೌಪತಿಯ ಮಾನ ಕಾಯ್ದೆ |
ಒಡಹುಟ್ಟಿದವರ ತಂದೆ ತಾಯಿಯರ | ವಾಲಿಯಾ ಭಾಗ್ಯವಾ ಕಾಳಿಂಗರಾಯ ಕರುಣಿಸು ಎಂದಳು ||
ಈ ಕಥೆಯ ಹೇಳ್ದವರಿಗೆ ಈ ಕಥೆಯ ಕೇಳ್ದವರಿಗೆ | ಒಡ ಹುಟ್ಟಿದವರಾ ವಾಲೆಯಾ ಭಾಗ್ಯವಾ |
ಮತಿಯನೆಂದೆಂದಿಗೂ | ಕಾಳಿಂಗರಾಯನು ಕರುಣಿಸುವನು | ಜಯಮಂಗಳ ಶುಭಮಂಗಳ ||
***