ರಾಗ - : ತಾಳ -
ವಂದೇ ಮನದಿ ಬೇಡುವೆ ನಿನ್ನ ಇಂದಿರಾಪತಿ ಕೃಷ್ಣಾ l
ನಂದತೀರ್ಥದ್ವಾರಾ ಸಂದರುಶನ ಸುಖ ll ಪ ll
ತಾಯಿ ತಂದೆಗಳೊಲ್ಲೆ ಮಾಯದ ಸತಿಸುತ l
ನೋಯಿಸ ಭವಬಂಧ ಮೊದಲೊಲ್ಲೆನು l
ಸಾವು ಹುಟ್ಟುಗಳನು ಎಷ್ಟೂ ವಲ್ಲೆನೂ ಮಹಾ l
ವಾಯುಮತದ ದಿವ್ಯಜ್ಞಾನ ಭಕ್ತಿ ಭಾಗ್ಯ ll 1 ll
ತಿರುತಿರುಗಿ ಉದರಭರಣ ವೃತ್ತಿಯನೊಲ್ಲೆ l
ಧರೆ ಧನ ಗೃಹಾದ್ಯಷ್ಟ ಭೋಗವೊಲ್ಲೆ l
ಶರೀರ ಚಲ್ವಿಕೆಯೊಲ್ಲೆ ಮರವು ನಿನದು ವೊಲ್ಲೆ l
ತರತಮ ಭೇದ ಸರ್ವೋತ್ತಮ ತವಧ್ಯಾನ ll 2 ll
ದುರುಳ ವಿಷಯಾಸಕ್ತಿ ಕರಣಮನಗಳನೊಲ್ಲೆ l
ಹರಿದಾಸ್ಯರಹಿತನರ ಸಂಗವಲ್ಲೆ l
ಸ್ಮರಣೆ ಸರ್ವದಾ ಕಲಿಸಿ ಕಲಿಸಿ ನಿನ್ನಪರೋಕ್ಷ l
ಕರೆಸು ವೈಕುಂಠಕ್ಕೆ ಸುಖನಿಧಿವಿಟ್ಠಲಾ ll 3 ll
***