..
ಗುರುರಾಘವೇಂದ್ರ ಶರಣರ ಸುರ
ತರುವೆ ಕರುಣಸಾಂದ್ರ ಪ
ಧರೆಯೊಳು ನಿನ್ನ ಶ್ರೀ ಚರಣಕಮಲ ಪ್ರಭೆ
ಮೆರೆವೋದು ಬಹು ಪರಿ ಉದ್ಧರಿಸು ಈ ಶರಣನ್ನ ಅ.ಪ.
ವಿಮಲ ಸುಕೃತ ಸ್ವರೂಪ ದರುಶನ ಮಾತ್ರದಿ ಭವ
ಶ್ರಮ ಹರಿಸುವ ಪ್ರತಾಪ
ರಮೆ ಅರಸನ ಗುಣ ಸಮುದಾಯದೊಳು ಮಗ್ನ
ಭ್ರಮೆರಹಿತ ಸ್ಥಿರಚಿತ್ತ ನಮೋ ನಮೋ ನಿನಗೆ
ಅಮಿತ ಮತಿಯ ಕರುಣ ಕವಚವ
ಅಮಿತಕಾಲದಿ ಕೊಟ್ಟು ಮೆರೆಯುವ
ಅಮಿತ ಮಂಗಳದಾಯಿ ತತ್ವದ
ಕಮಲ ವೈಭವ ಸಲಹಲೆನ್ನನು 1
ಪಾವನ ಸುಯತಿ ರನ್ನ ಲಾಲಿಸು ವಾಕು
ಸಾವಧಾನದಿ ಘನ್ನ
ಭೋವಿಧ ಭವ ಭವಣೆ ದಾವಾಗ್ನಿಯೊಳು ನೊಂದೆ
ಶ್ರೀ ವರನ ದಾಸ ಕಾವ ದೃಷ್ಟಿಯಲಿ ನೋಡೊ
ದೇವದೇವನೆ ನಿತ್ಯ ಮಂಗಳ
ಭಾವರೂಪ ಗುಣತ್ರಯಗಳ
ಆವ ಕಾಲಕು ಬಿಡದೆ ನೋಡುವ
ಭೂವಿ ಬುಧಮಣಿ ಪಾಲಿಸೆನ್ನನು 2
ತುಂಗಾತೀರ ನಿವಾಸ ರಾಘವೇಂದ್ರ ಗುರು
ತುಂಗ ಮಹಿಮ ನಿರ್ದೋಷ
ಮಂಗಳಾಸಮಹರಿ ಗಂಗಾಪಿತನ ಕೂಡಿ
ತುಂಗಪೂಜೆಯ ಕೊಂಡ್ವರಂಗಳ ಬೀರುವ
ತಿಂಗಳಾಸ್ಯನ ಪಾದ ತೀರ್ಥದಿ ಭವ
ಭಂಗ ಬಗೆಯನು ಬಲ್ಲ ಮಹಾತ್ಮ
ರಂಗ ಜಯೇಶವಿಠಲ ದೇವನ
ಸಂಗ ನೀಡುವ ಕೃಪೆಯ ಮಾಳ್ಪ 3
***