..
ಶ್ರೀವಿಜಯದಾಸಾರ್ಯ ವಿರಚಿತ ಶ್ರೀ ಋಷಭ ದೇವರ ಸುಳಾದಿ
(ಮೇರುದೇವಿಯಲ್ಲವತರಿಸಿದ ಸೌಭರಿಮುನಿವಂದ್ಯ , ಮೇಧಾದಿ ನಿಯಾಮಕ , ವಿಷಯದ ಮಡುವಿನಲ್ಲಿ ವಿಷದಂತನ ಕಸುವಡಗಿಸಿದ, ಋಷಿ ವೇಷಧಾರಿಯಾದ ಋಷಭದೇವನೇ ಸದಾ ಎನ್ನ ಹೃದಯದಲ್ಲಿ ಸುಳಿದು , ದುರಿತವನ್ನು ತರಿದು, ಸಂಸಾರ ಸಾಗರದಿಂದ ದಾಟಿಸು.)
ರಾಗ ವಲಚಿ
ಧ್ರುವತಾಳ
ಸೌಭಾಗ್ಯವಂತ ಜಯತು ಸೌಂದರ್ಯಸಾರ ಜಯತು
ಭೂಭಾರಹರಣ ಜಯತು ಭೂಮಾ ಜಯತು
ಶ್ರೀಭೂರಮಣ ಜಯತು ಶೃಂಗಾರ ಪುರುಷ ಜಯತು
ಶೋಭನಮೂರ್ತಿ ಜಯತು ಸೌಖ್ಯ ಜಯತು
ಲೋಭ ವಿರಹಿತ ಜಯತು ಲೋಕೇಶ ಜನಕ ಜಯತು
ಲಾಭ ಪ್ರದಾತ ಜಯತು ಲಘುವೆ ಜಯತು
ವೈಭೋಗಾನಂದ ಜಯತು ವೈಕುಂಠವಾಸ ಜಯತು
ಭೂ ಭೂಜ ರತ್ನ ಜಯತು ಭೂಷಾ ಜಯತು
ನಾಭಿ ಕಮಲಾ ಜಯತು ನಾಗಾರಿ ಗಮನಾ ಜಯತು
ಗೋ ಭೀತಿನಾಶ ಜಯತು ಗೋತ್ರಜ ಜಯತು
ಶ್ರೀಭಾಗ ಚರಣ ಜಯತು ತ್ರಿದಶ ವಂದಿತ ಜಯತು
ವೈಭವಕೀರ್ತಿ ಜಯತು ವೈದ್ಯ ಜಯತು
ನಾಭಿನಂದನ ಜಯತು ನಾನಾವತಾರ ಜಯತು
ಸ್ವಭಾವ ಲೀಲಾ ಜಯತು ಸ್ವಾಮೀ ಜಯತು
ಸಾಭಿಮಾನನೆ ಜಯತು ಸಮಸ್ತ ಫಲದಾ ಜಯತು
ಸಾಭೀಮ ದೈವ ಜಯತು ಸಮಸ್ತ ಸಾಧು ಜಯತು
ಸುಭಾಷ್ಯಪಾಲ ಜಯತು ಸುಖಸಾಂದ್ರ ಜಯತು
ಕುಭಾವ ವೈರಿ ಜಯತು ಕುಶಲಾ ಜಯತು
ಸೌಭರಿಮುನಿ ವಂದ್ಯ ವಿಜಯವಿಟ್ಠಲ ಋಷಭ
ಈ ಭೋಗದಲ್ಲಿ ನಿಂದು ವಿಜ್ಞಾನವನ್ನೆ ಕೊಡು ॥ 1 ॥
ಮಟ್ಟತಾಳ
ಋಷಭ ಋಷಭ ಮಹಾ ಋಷಿಜನ ಮನೋಹರ
ವೃಷಭವಾಹನ ಪ್ರೀಯ ಹೃಷಿಕೇಶ ಪರಮೇಶ
ಋಷಿ ವೃಷಭ ವಿಷಭಂಜನ ನಿತ್ಯ
ವಿಷಯ ವಿದೂರ ವಿಷಯ ಮಡುವಿನೊಳಗೆ
ವಿಷದಂತನ ತುಳಿದ ವಿಜಯವಿಟ್ಠಲರೇಯಾ
ಋಷಿ ವೇಷವ ಧರಿಸಿ ವಸುಧೆಯೊಳಗೆ ಮೆರೆದೆ ॥ 2 ॥
ತ್ರಿವಿಡಿತಾಳ
ಪಾರತಂತ್ರ ರಹಿತ ಪರಿಪೂರ್ಣ ವಿಜ್ಞಾನ
ಶಾರೀರ ಸತ್ವ ಜಾಗರ ಮೂರುತೀ
ಮೇರು ಗರ್ಭೋದಯ ಮೇಧಾದಿ ನಾಮಕ
ಚಾರು ಪರಮಹಂಸರೂಪ ಭರತ ಜನಕ
ಧಾರುಣಿಯೊಳಗವಧೂತ ವೇಷವ ಧರಿಸಿ
ತೋರಿದೆ ಅಜಗರ ವೃತ್ತಿಯನ್ನು
ಸಾರಿಸಾರಿಗೆ ಮನುಜ ಲೀಲೆಯಿಂದಲಿ ಮೆರೆದೆ
ಆರಾರು ನುಡಿದಿದ್ದೆ ಸೈರಿಸಿಕೊಂಡೆ
ಮೂರು ಭುವನದೊಳು ಆಶ್ಚರ್ಯ ತೋರಿ ಸಂ -
ಸಾರ ಉತ್ತರಿಸುವ ಮಾರ್ಗವ ತಿಳುಪಿ
ಊರ ಪೋರಂಗಳಿಂದ ನೀಚತ್ವ ನುಡಿಸಿಕೊಂ -
ಡೀ ರೀತಿಯಲ್ಲಿ ವಪ್ಪಿದ ನಿರ್ದೋಷನೆ
ಆರುಬಲ್ಲರು ನಿನ್ನ ಆನಂದಾನಂದವ
ವಾರಿಜೋದ್ಬವಾದಿಗಳು ಪೊಗಳಲೊಶವೆ
ಭಾರಕರ್ತ ನಮ್ಮ ವಿಜಯವಿಟ್ಠಲರೇಯಾ
ವಾರವಾರಕೆ ಎನ್ನ ಮನದಲ್ಲಿ ಸುಳಿದಾಡು ॥ 3 ॥
ಅಟ್ಟತಾಳ
ತತುವ ಮೋದಾಂಬುಧಿ ತಪನೀಯ ವರ್ನನೆ
ತತುತಕ್ಕದ್ದು ವ್ಯಾಪಾರವ ಮಾಡುವಿ
ಹುತವಾಹನನೊಳು ಅಂತರ್ಧಾನನಾಗಿ
ಕ್ಷಿತಿಯೊಳು ಷೋಡಶಗಿರಿಯಲ್ಲಿ ಅಡಗಿದೆ
ಮತಿಹೀನ ಮನುಜರು ವಿಪರೀತ ತಿಳಿದು ದು -
ರ್ಗತಿಯಲ್ಲಿ ಪೋಗಿ ಬೀಳುವರು ಶ್ರುತಿಸಿದ್ಧಾ
ಸತತ ನಿಜವೆಂದು ವಲಿಸಿದ ಮನುಜ ಉ -
ನ್ನತ ಪದವಿಯಲ್ಲಿ ಸೇರಿ ಸುಖಿಸುವರು
ಅತಿ ಚಿತ್ರ ವಿಚಿತ್ರ ವಿಜಯವಿಟ್ಠಲ ಋಷಭ
ಯತಿ ಶಿರೋಮಣಿ ಮಧ್ವಮುನಿ ವಂದ್ಯ ಆನಂದಾ ॥ 4 ॥
ಆದಿತಾಳ
ಸುಜನರ ಸಂತಾಪಹರಣ ಅನಾದಿಕಾಯ
ದ್ವಿಜಕುಲ ಸಂರಕ್ಷಣ ಯೋಗಿ ಯೋಗೇಶ್ವರ
ಭಜಿಸುವೆ ನಿನ್ನ ಪಾದ ಕಾಲಕಾಲಕೆ ಎನ್ನ
ವೃಜಿನಗಳು ಪೋಗಾಡಿ ಶುದ್ಧಾತ್ಮನ್ನ ಮಾಡು
ಅಜ ದೇವಾದಿಗಳಿಗೆ ಸಮಸ್ತ ಸಾಧನ
ಸೃಜಿಸಿ ಕೊಡುವೆ ವೇಗ ತಾರತಮ್ಯದಿಂದಲಿ
ಪ್ರಜಾಪಾಲ ಪಾವನ ವಿಜಯವಿಟ್ಠಲರೇಯಾ
ನಿಜಭಕ್ತರ ಕೈಯ್ಯ ಪೂಜೆಗೊಂಬ ಪರಮಾತ್ಮಾ ॥ 5 ॥
ಜತೆ
ಅಂಜನಾಭ ಅಮೃತ ವಪುವೆ ಋಷಭ ನಿ -
ರಂಜನ ಮೂರುತಿ ವಿಜಯವಿಟ್ಠಲ ಸ್ವಾಮೀ ॥
****