ಆದ ವಿಷಯಗಳು ಬಾಧಿಸದಂತೆನ್ನ l
ಮಾಧವ ನೀ ಪೊರೆಯೋ ದಯಾನಿಧೇ ll ಪ ll
ಕ್ರೋಧವ ಬಹುತರ ಸಾಧಿಸಿ ಮನದಲಿ l
ಖೇದವ ಪೊಂದಿದೆನೋ ರಮಾಧವ ll ಅ ಪ ll
ಹೆಜ್ಜೆಯನರಿಯದೆ ಗೆಜ್ಜೆ ಕಟ್ಟಿಹೆನೆಂದು l
ಗರ್ಜಿಸುತಿರುವರು ದುರ್ಜನರೆಲ್ಲರು l
ಮರ್ಜಿಯನರಿಯುವ ಸಜ್ಜನರೆನ್ನನು l
ವರ್ಜಿಸಬಿಡದಿರೋ ಮೂರ್ಜಗದೊಡೆಯನೇ ll 1 ll
ರೀತಿಯನರಿಯದೆ ಆತುರದಲಿ ಮನ l
ಸೋತೇನೆನ್ನುತಿಹರೋ ದುರಾತ್ಮರು l
ಖ್ಯಾತಿಗಾಗಿ ಧನಪ್ರೀತಿಗಾಗಿ ಸಭ್ಯ l
ನೀತಿಯ ಮಾರ್ಗದಿಂ ಚಲಿಸದೆ ಪೊರೆಯೋ ll 2 ll
ನಿನ್ನ ನಾನರಿತೆನೋ ಎನ್ನನರಿತು ನೀ ಪ್ರ l
ಸನ್ನನಾಗಿ ನಿನ್ನ ಸೇವೆಯ ನೀಡಲು l
ಅನ್ಯರಂತಿರಲಿ ನಿನ್ನ ಮನಕೆ ನಾ l
ಅನ್ಯನಾಗದಂತೆ ಸತತವು ಕರುಣಿಸೋ ll 3 ll
***