Showing posts with label ಬಾರಯ್ಯ ಬಾರಯ್ಯ ಭಕ್ತವತ್ಸಲ ಹರಿ ಶ್ರೀಕೃಷ್ಣ kamalanabha vittala. Show all posts
Showing posts with label ಬಾರಯ್ಯ ಬಾರಯ್ಯ ಭಕ್ತವತ್ಸಲ ಹರಿ ಶ್ರೀಕೃಷ್ಣ kamalanabha vittala. Show all posts

Thursday, 5 August 2021

ಬಾರಯ್ಯ ಬಾರಯ್ಯ ಭಕ್ತವತ್ಸಲ ಹರಿ ಶ್ರೀಕೃಷ್ಣ ankita kamalanabha vittala

 ..

kruti by Nidaguruki Jeevubai

ಬಾರಯ್ಯ ಬಾರಯ್ಯ ಭಕ್ತವತ್ಸಲ ಹರಿ ಶ್ರೀಕೃಷ್ಣ ಪ


ಭಕ್ತರು ಬಂದು ದ್ವಾರದಿ ನಿಂದು

ಭಕ್ತಿಲಿ ಹಾಡುತ ಪಾಡುತಲಿರುವರು

ಮುಕ್ತಿದಾತ ನೀನಲ್ಲದೆ ಸರ್ವ-

ಶಕ್ತರಿನ್ಯಾರಿಹರೈ ಎನ್ನುತ ಪೊಗಳ್ವರು 1


ತಾಳಮೇಳದವರೆಲ್ಲರು ನಿನ್ನಯ

ಊಳಿಗ ಮಾಡಬೇಕೆನುತಲಿ ಬಂದು

ವೇಳೆ ವೇಳೆಗೆ ತಮ್ಮ ಸೇವೆಯ ಸಲಿಸುತ

ಭಾಳ ಸಂಭ್ರಮದಿಂದ ಹಾರೈಪರೊ ಹರಿ 2


ತುಂಬುರು ನಾರದರ್ವೀಣೆಯ ನುಡಿಸಲು

ರಂಭಾದ್ಯಪ್ಸರ ಸ್ತ್ರೀಯರು ನರ್ತಿಸೆ

ಅಂಬುಜನಾಭನೆ ನಂಬಿಹ ವಿಶ್ವ ಕು-

ಟುಂಬಿಯೆ ಬಾ ಬಾರೆನ್ನುತ ಸ್ತುತಿಪರು3


ಅಂಬರದಲಿ ದೇವತೆಗಳೆಲ್ಲರು ನೆರೆದು

ತುಂಬಿ ಪುಷ್ಪವೃಷ್ಟಿಗಳನೆ ಮಾಡುತ

ಇಂಬಿಲ್ಲದೆ ಪಾರಿಜಾತ ಕುಸುಮ ಮಳೆ

ಗಂಭೀರದಿ ಸುರಿಸುತ ಪ್ರಾರ್ಥಿಸುವರು 4


ಅತ್ರಿ ವಸಿಷ್ಠ ಗೌತಮ ಮೊದಲಾಗಿ

ರಾತ್ರಿಹಗಲು ಎಡೆಬಿಡದಲೆ ಸ್ತುತಿಸುತ

ವೃತ್ರಾರಿಯ ಸುತನಿಗೆ ಸಾರಥಿಯೆ ವಿ-

ಚಿತ್ರ ವ್ಯಾಪಾರಿ ಶ್ರೀಹರಿ ಎಂದು ಪೊಗಳ್ವರು 5


ಅಣುಮಹದ್ರೂಪನೆ ಘನಮಹಿಮನೆ ನಿನ್ನ

ಮಣಿದು ಬೇಡಿ ಕೈಮುಗಿಯುತ ಸ್ತುತಿಪರು

ಪ್ರಣವ ಪ್ರತಿಪಾದ್ಯನೆ ನಿನ್ನ ಗುಣಗಳ

ಎಣಿಸಲಸಾಧ್ಯವೆನುತ ಕೊಂಡಾಡ್ವರು 6


ನವನವ ರೂಪದಿ ನಲಿಯುವ ದೇವನೆ

ನವವಿಧ ಭಕುತರು ನಮಿಸುತ ಕರೆವರು

ಭುವನ ಮೋಹನ ಸುಂದರಮೂರ್ತಿಯೆ ಎಂದು

ಕವಿಗಳು ಪೊಗಳುತ ಕುಣಿಯುತಲಿರುವರು 7


ಎಡಬಲದಲಿ ಶ್ರೀ ಭೂದೇವಿಯರಿರೆ

ಬಿಡದೆ ಛತ್ರಚಾಮರಗಳಿಂದೊಪ್ಪುತ

ತಡಮಾಡದೆ ಬಾ ಮಡದಿಯರ ಸಹಿತದಿ

ದಡ ದಡ ಬಾರೆಂದು ಬಡ ಬಡ ಕರೆವರು 8


ವಿಶ್ವರೂಪಕ ವಿಶ್ವನಾಮಕ

ವಿಶ್ವತೋಮುಖ ವಿಶ್ವನಾಟಕ

ವಿಶ್ವವ್ಯಾಪಕ ವಿಶ್ವಾಧಾರಕ

ವಿಶ್ವ ಕುಟುಂಬಿಯೆ ವಿಶ್ವಾಸದಿ ಬಾ 9


ವಿರೋಧಿಕೃತು ಸಂವತ್ಸರ ಬರುತಿರೆ

ಪರೋಪಕಾರವ ಮಾಡುತ ಸುಜನರು

ವಿರೋಧಿಗಳ ದೂರಿಡುತಲಿ ಶ್ರೀ ಹರಿ

ಸರೋಜದಳ ನೇತ್ರನÀ ಸ್ತುತಿಸುವರು 10


ಕಮಲಾಕ್ಷಿಯ ಒಡಗೂಡುತ ಬಾ ಬಾ

ಕಮಲಾಸನ ಜನಕನೆ ಹರಿ ಬಾ ಬಾ

ಕಮಲನಾಭ ವಿಠ್ಠಲ ಬೇಗ ಬಾರೆಂದು

ಸುಮನಸ ವಂದ್ಯನ ಸ್ಮರಿಸುತ ಕರೆವರು11

***