..
ಭಾರತಿ ಪಾಲಿಸು ನಿತ್ಯ ಪ
ಭಾರತಿ ಭಾಸ್ವರಕಾಂತೆ ನಿನ್ನ
ಸಾರುವೆ ಸತತ ನಿಶ್ಚಿಂತೆ ಆಹಾ
ವಾರಿಜಸಮಪಾದ ತೋರಿಸು ಮಮ ಸುಹೃ -
ನ್ನೀರಜದೊಳು ನಿತ್ಯ ಗಾರುಮಾಡದೆ ಜನನಿ ಅ.ಪ
ಹರಿಯ ಪಟ್ಟದ ನಿಜರಾಣಿ ಎನಗೆ
ಹರಿಯ ತೋರಿಸೆ ಹೇ ಕಲ್ಯಾಣಿ ನಿನಗೆ
ಶರಣೆಂಬೆ ಕಾಲಾಹಿವೇಣಿ ಪರಮ
ಕರುಣಿಯೆ ಕೋಕಿಲವಾಣಿ ಆಹಾ
ಹರಿಹರಾದ್ಯನಿಮಿಷ ಕರಕಮಲಪೂಜಿತೆ
ವರಭಾಗವತರಗ್ರೇಸಳೆಂದು ನಮಿಸುವೆ 1
ಮೂರೇಳು ತತ್ತ್ವಾಭಿಮಾನಿ ಎನಿಸಿ
ಮೂರಾರು ಭಕುತಿಯಿಂದಲಿ ನೀ ಸತತ
ಮೂರು ಜೀವರೊಳು ಪ್ರೇರಣಿಯಾಗಿ
ಮೂರೊಂದು ಮೊಗನ ಕಲ್ಯಾಣಿ ಆಹಾ
ಮೂರು ಬಗೆಯ ಜನಕೆ ಮೂರು ವಿಧದಿ ಗತಿ
ಮೂರು ಕಾಲಕೆ ಇತ್ತು ಮೂರುಮಾಡುವಿ ದೇವಿ 2
ಮಾತರಿಶ್ವನ ಪಾದಕಮಲ ಯುಗಕೆ
ನೀತಷಟ್ಟದಳೆ ನಿರ್ಮಲ ಮನಸು
ಆತುರದಲಿ ಮಾಡು ವಿಮಲೆ ನಮಿಪೆ
ಕಾತರಭವಶ್ರಮಶಮಲಾ ಆಹಾ
ಜಾತರೂಪೋದರತಾತ ಶ್ರೀ ಗುರುಜಗ -
ನ್ನಾಥವಿಠಲಗೆ ನೀ ದೂತನೆನಿಸು ಎನ್ನ 3
***