ಬಾರೊ ಹನುಮ ಬಾರೊ ಭೀಮ ಬಾರೊ ಮಧ್ವಮುನಿಪ ಪ.
ಬಾರೊ ರಾಮಕೃಷ್ಣ ವೇದವ್ಯಾಸರ ಪ್ರಿಯ ಭಕ್ತ ಅ.ಪ.
ಅಂಜನೇಯ ಸುತನು ಆಗಿ
ಸಂಜೀವನ ಗಿರಿಯ ತಂದೆ
ಕಂಜಲೋಚನೆಯ ವಾರ್ತೆ
ಮಂಜುಭಾಷಣ ರಾಮನಿಗರುಹಿದೆ 1
ಪಾಪಿ ಕೌರವ ಕುಲವ ಕೊಂದು
ದ್ರೌಪದಿಯ ಕಾಯ್ದ ಮಹಿಮ
ಶ್ರೀಪತಿ ಶ್ರೀ ಕೃಷ್ಣನ ಭಜಿಸಿದ
ಭೂಪ ಭೀಮಸೇನ ಬೇಗ 2
ಭೂಸುರ ಜನ್ಮದಲಿ ಬಂದು
ಆಸೆಯಿಂದ ಆಶ್ರಮ ಕೊಂಡು
ದೋಷಿ ಅನ್ಯಮತವ ಮುರಿದು
ಭೂಸುರರ ಕಾಯ್ದ ಮಧ್ವ 3
ಸಕಲ ಸುಜನರ ಸೇವೆ ಕೊಂಡು
ಮುಕುತಿಮಾರ್ಗಪ್ರದ ನೀನಾಗಿ
ಭಕುತಿಮಾರ್ಗವ ತೋರಿ ಎನ್ನ
ಹೃತ್ಕಮಲ ಮಧ್ಯದಲಿ ನಿಲ್ಲೊ 4
ಗೋಪಾಲಕೃಷ್ಣವಿಠ್ಠಲನ
ರೂಪ ನೋಡುವ ಕೃಪೆಯ ಮಾಡೊ
ಶ್ರೀಪತಿ ಶ್ರೀ ಶ್ರೀನಿವಾಸಗೆ
ನೀ ಪ್ರೀತಿಕರನೆಂದು ನಮಿಪೆ 5
****