ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ
(ಸಂಸಾರ ಅಸಾರ. ಸಂಸಾರಾಂಬುಧಿಗೆ ಹರಿನಾಮವೇ ನಾವೆ ಎಂಬ ವಿಷಯ.)
ರಾಗ ಚಾರುಕೇಶಿ
ಧ್ರುವತಾಳ
ಸಾರವನು ಮರೆದು ಬೇಸರದಲೆ ನಾನು ಸಂ -
ಸಾರವೆಂದೆಂಬ ಅಸಾರದಲ್ಲಿ
ಸಾರಮೇಯಾನಂತೆ ಸಾರಿಸಾರಿಗೆ ಕೆಲ
ಸಾರುತ ತಿರುಗಿದೆನು ಸರಿ ಸರಿದು ಹೇ -
ಸರಗತ್ತೆಯಂತೆ ಸಾರಡಿಯ ಪೊತ್ತು ನಿ -
ಸ್ಸಾರದವನಾದೆನೊ ಸರಿಯರೊಳಗೆ
ಸಾರಣಿ ಅರಿವೆಗಿಂತ ಸ್ವಾರಸ್ಯವಿಲ್ಲದಲೆ
ಸಾರ ದುರಿತ ಪ್ರಸಾದವನು ಉಂಡೆ
ಸರಸಿಜನಯನ ನಾಮ ನಾರದ ನಿನ್ನ ದಾ -
ಸರ ಸಂಗತಿಯನು ಸಾರದಲೆ
ಸಾರಲಿಲ್ಲವೊ ನಿನ್ನ ಸಾರಸುಧಾ ನಾಮ ಲೋಕ
ಸಾರಂಗ ನಾಮ ಶಿರಿ ವಿಜಯವಿಟ್ಠಲನೇ ॥ 1 ॥
ಮಟ್ಟತಾಳ
ತತ್ವಗುಣದಲ್ಲಿ ಇತ್ತಂಡದಿಂದ
ಉತ್ತಮ ಮಾರ್ಗಕ್ಕೆ ಹತ್ತುವ ಸೋಪಾನ
ಮತ್ತೆ ರಜೋತಮ ಮತ್ತವ ಬಿಡದಲೆ
ಚಿತ್ತದೊಳಗೆ ನಿತ್ಯ ಸುತ್ತಿಕೊಂಡಿರಲು
ಹತ್ತಿ ಮೊಸರು ಹಾಕಿ ಬುತ್ತಿ ಕಲಿಸಿದಂತೆ
ಎತ್ತಲು ಪೊಂದದಲೆ ಬತ್ತುವದು ಬುದ್ಧಿ
ಜತ್ತ ವಿಜಯವಿಟ್ಠಲಾತ್ತುಮ ಮೂರುತಿ
ಸತ್ತಮ ಬಿನ್ನಹ ಚಿತ್ತವ ಧರಿಸು ॥ 2 ॥
ತ್ರಿವಿಡಿತಾಳ
ಸುಚಿತ್ತದಲ್ಲಿ ನಿನ್ನ ಸಚ್ಚರಿತ್ರವನು
ಅಚಲ ಭಕ್ತಿಯಲ್ಲಿ ಪೂಜಿಸಲಿಲ್ಲವೋ
ರಚಿಸಿ ಮೇಳವ ನೆನಿಸಿ ವಚನ ಹಾರದಲಿ
ರುಚಿ ಪದಾರ್ಥವ ಬಯಸಿ ಬರಿದಾದೆನೋ
ಹುಚ್ಚು ಬಿಟ್ಟ ಶ್ವಾನೊಂದು ಉಚಿತಾರ್ಥ ತಿಳಿಯದೆ
ಅಚಲಕ್ಕೆ ಬೊಗಳಿ ಬಾಯಾರಿದಂತೆ
ಕುಚಿತನು ನಾನಾದೆ ಶುಚಿ ವಿಜಯವಿಟ್ಠಲ
ನಿಚಯಘಾರಣ್ಯಕ್ಕೆ ಶುಚಿಯಾಗಿ ನಿಲ್ಲೋ ॥ 3 ॥
ಅಟ್ಟತಾಳ
ಪೂರ್ತಿಯಾಗಲಿ ಎಂದು ಒಡಲಿಗೆ ನಾನಾ ಕು -
ವಾರ್ತಿಯ ಕಲಿತು ನೆರೆ ಹೊರೆಯವರಿಗೆ
ಆರ್ತಿಯ ಬೆಳಗಿ ಅವರವರಂಶದ
ಕೀರ್ತಿಯ ಕೊಂಡಾಡಿ ಕಿರಿದಾಗಿ ಕರ ನೀಡಿ
ಸ್ವಾರ್ಥವಲ್ಲದೆ ಪರರುಪಕಾರ ವಂದಿಲ್ಲ
ನರ್ತನದವರಂತೆ ಕೈಯ್ಯ ಮೈಯ್ಯನು ತೋರಿ
ಅರ್ಥವ ಘಳಿಸಿ ಭಾಗವತನೆನಿಸಿದೆ
ತೀರ್ಥಂಕರ ನಾಮ ವಿಜಯವಿಟ್ಠಲ ಪ್ರೇಮ
ಕರ್ತು ನಿನ್ನ ಯಥಾರ್ಥ ನೆನಿಯದೆ ॥ 4 ॥
ಆದಿತಾಳ
ಬೇಡುವ ಮನವೀಯೊ ನಿನ್ನನು
ಕಾಡುವ ಮನವೀಯೋ
ಗಾಢವಾದ ರಜೋತಮ ಗುಣಗಳ
ಓಡಿಸಿ ಶುದ್ಧಾತ್ಮನ ಮಾಡಿ ಪ್ರತಿದಿನ
ಬೇಡುವ ಮನವೀಯೊ ನಿನ್ನನು
ಕಾಡುವ ಮನವೀಯೋ
ಪಾಡುವೆ ನಿನ್ನಯ ಸಾಸಿರ ನಾಮವ
ವಾಮನ ನಾಮ ವಿಜಯವಿಟ್ಠಲ
ಬೇಡುವ ಮನವೀಯೊ ನಿನ್ನನು
ಕಾಡುವ ಮನವೀಯೋ ॥ 5 ॥
ಜತೆ
ಸಂಸಾರಾಂಬುಧಿಗೆ ನಿನ್ನ ನಾಮವೆ ನಾವಿ
ಹಂಸ ವಿಜಯವಿಟ್ಠಲ ನಿನ್ನ ಚರಣವೆ ದಡಿ ॥
***