ಪಾಲಿಸೆನ್ನ ದಧಿಪಾಲ ಚೋರ ಗೋಪಾಲ
ಬಾಲ ಕೃಪಾಲ ಯೇ ಹರಿಯೇ l ಪಾಲಿಸೆನ್ನ ll ಪ ll
ಅಂಡಜಾಧಿಪ ಪ್ರಕಾಂಡ ಪೀಠ ಕೋ
ದಂಡಪಾಣಿ ಬ್ರಹ್ಮಾಂಡ ನಾಯಕ ll 1 ll
ಪುಂಡರೀಕ ಭವ ರುಂಡಮಾಲ ಮೇ
ಷಾಂಡ ಪ್ರಮುಖ ಸುರಷಂಡ ಮಂಡನಾ ll 2 ll
ಗೋಪಿ ಗೋಪ ಗೋಪಾಲ ವೃಷ್ಣಿಕುಲ
ದೀಪ ಶ್ರೀಪ ಶಿವಚಾಪ ಭಂಜನಾ ll 3 ll
ವ್ಯಾಪ್ತ ಗೋಪ್ತ ಜಗದಾಪ್ತ ದೋಷ ನಿ
ರ್ಲಿಪ್ತ ಪ್ರಾಪ್ತ ಗತ ಸುಪ್ತ ಸುಷುಪ್ತಾ ll 4 ll
ವೇದವೇದ್ಯ ಬ್ರಹ್ಮಾದಿವಂದ್ಯ ಚಿ
ನ್ಮೋದಪೂರ್ಣ ಬ್ರಹ್ಮೋದನ ಭೋಕ್ತಾ ll 5 ll
ಅಧ್ವರೇಶ ಲೋಕೋದ್ಧಾರ ಪಾಣಿ ಸ
ರಿದ್ವರಪಿತ ಗುರುಮಧ್ವವಲ್ಲಭಾ ll 6 ll
ಪೋತ ವೇಷದರ ಪೂತನಾರಿ ಪುರು
ಹೂತಮದಹ ಜಗನ್ನಾಥವಿಟ್ಠಲ ll 7 ll
***