Showing posts with label ಮರುಳತನವು ಬಂದು ಎನ್ನ ಕೊರಳ ಕೊಯ್ವುದು varaha timmappa. Show all posts
Showing posts with label ಮರುಳತನವು ಬಂದು ಎನ್ನ ಕೊರಳ ಕೊಯ್ವುದು varaha timmappa. Show all posts

Friday, 27 December 2019

ಮರುಳತನವು ಬಂದು ಎನ್ನ ಕೊರಳ ಕೊಯ್ವುದು ankita varaha timmappa

by ನೆಕ್ಕರ ಕೃಷ್ಣದಾಸರು
ರಾಗ ಸೌರಾಷ್ಟ್ರ ಆದಿತಾಳ

ಮರುಳತನವು ಬಂದು ಎನ್ನ ಕೊರಳ ಕೊಯ್ವುದು
ದುರುಳನಾಗಿ ಇರುಳುಹಗಲು ಒರಲುತಿಪ್ಪುದು ||ಪ||

ಮಾರಿಯನ್ನು ಮನೆಗೆ ತಂದು ತೋರಿಯಿಡುವುದು
ಚೋರರನ್ನು ತಂದು ತನಗೆ ಸೇರಿ ಕೊಡುವುದು
ದೂರುಬಪ್ಪ ದಾರಿಯನ್ನು ಸೇರಿ ನಡೆವುದು
ಸಾರಿ ಪರನಾರಿಯನು ಸೂರೆಗೊಂಬುದು ||೧||

ಹೆಂಡತಿಯ ಸುಲಿದು ತನ್ನ ಮಿಂಡಿಗಿಡುವುದು
ಕಂಡುಕಂಡು ಹರುಷ ತಾಳಿಕೊಂಡು ಇರುವುದು
ಭಂಡತನದಿ ಕೊಂದು ದೂರಕೊಂಡು ಪೋಪುದು
ಉಂಡು ಉಡುವ ಹರುಷ ಸರಿಯ ಮಿಂಡಿಗಪ್ಪುದು ||೨||

ಸೂಳೆಯನ್ನು ಕಂಡು ಹರುಷತಾಳಿ ಇರುವುದು
ವೇಳೆಗವಳು ಬಾರದಿರಲು ಚೀರಿ ಅಳುವುದು
ಹಾಳು ಬದುಕಿನೊಳಗೆ ಬಹಳ ಚಾಳು ತೋರ್ಪುದು
ಖೂಳರನ್ನು ಕರೆದು ಅನ್ನಪಾಲನೆರೆವುದು ||೩||

ಇಲಿಯು ಹೆಚ್ಚಿತೆಂದು ಮನೆಗೆ ಉರಿಯನಿಡುವುದು
ಚಳಿಯು ಹೋಯಿತೆಂದು ಮನದಿ ನಲಿವುತಿರುವುದು
ಬಿಳಿದು ಬೂದಿಯನ್ನು ಕೊಂಡು ಹೊಳೆಗೆ ಬಿಡುವುದು
ಸ್ಥಳವ ಕೆಡಿಸಿ ಕುಲವನೆಲ್ಲ ಬಳಕೆ ತೀರ್ಪುದು ||೪||

ಹೆತ್ತ ಮಗನ ತೊರೆದು ತಾನು ದತ್ತ ತರುವುದು
ಸತ್ತ ಎಮ್ಮೆ ಹಾಲುಹತ್ತು ಸೇರಿಗಳುವುದು
ಕತ್ತಿಯನ್ನು ಬಿಟ್ಟು ಒರೆಯ ಹತ್ತಿರಿಡುವುದು
ಶತ್ರುವಾಗ ಬಂದು ತನ್ನ ಒತ್ತಿ ನಿಲುವುದು ||೫||

ಗಾಳವಿಲ್ಲದೆ ಮೀನುಗಳ ಮೇಲೆ ತೆಗೆವುದು
ಕೋಲು ಇಲ್ಲದ ಕೊಲೆಗಳೆನ್ನ ಮೇಲೆ ಬೀಳ್ವುದು
ಸಾಲವನ್ನು ಕೊಟ್ಟವರು ಸಾಯಲೆಂಬುದು
ಕಾಲನೊಳು ಕೈಯ ಕಟ್ಟಿ ಶೂಲೆ ತಪ್ಪುದು ||೬||

ಸರ್ವತಂತ್ರವೆಲ್ಲ ಹರಿಯ ಹತ್ತಿರಿಡುವುದು
ಗರ್ವವನ್ನು ತೋರಲವನ ಸುತ್ತಿ ಬರುವುದು
ಇರುವೆಯಂತೆ ಮೈಯನೆಲ್ಲ ಕುತ್ತಿ ತರಿವುದು
ತೋರ ವರಾಹತಿಮ್ಮಪ್ಪನ ಎತ್ತಿ ನೆನೆವುದು ||೭||
******