ರಾಗ: ಮಧ್ಯಮಾವತಿ ತಾಳ: ಏಕ/ಆದಿ
ರಥವಾನೇರಿದ ಶ್ರೀ ಗುರುವರ್ಯ ಕೃತಚರ್ಯಾ ಪ
ಪೃಥ್ವಿ ವಿತಳದಳಪ್ರತಿ ಮಹಿಮವ
ನತಜನರಿಗೆ ತೋರಿ ಮನೋರಥ ಪೂರ್ತಿಪೆನೆಂದು ಅ.ಪ
ದಿನದಿನ ಸೇವಾಸಕ್ತರಾ ಮಾಡುವ ಜನರ
ಮನದ ಚಿಂತೆಯ ಪರಿಹಾರಗೈವುತ ಧೀರ
ಅನಿಮಿಷತರು ತೆರ ಉದಾರ ಸದ್ಗುಣ ಗಂಭೀರ
ತನು ಮನೆ ಧನ ವನಿತೆ ಸುತ ಕೃಷಿ
ಜನರಿಗೆ ಈ ಪರಿ ನೀಡುವೆನೆನುತ 1
ಹಿಂದಿನ ಮಹಿಮೆಗಳದ್ಭುತ ಅದರಿಂದೇನೆನುತ
ವಂದಿಪ ಜನರ ಹೃದ್ಗತ ಪೂರೈಸುವೆನೆನುತ
ಇಂದು ಮಾಡಲು ಜನಕೆಹಿತನಾಗುವ ಹರಿ ಪ್ರೀತ
ನಂದಿತ ಸುಜನರ ಸಂದಣಿಯೊಳು ಮುದ-
ದಿಂದಲಿ ನಲಿಯುತ ಬಂದು ತ್ವರದಲಿ 2
ದಿಟ್ಟ ಶ್ರೀ ಗುರುಜಗನ್ನಾಥವಿಠಲದೂತ
ಶಿಷ್ಟೇಷ್ಟಾಭೀಷ್ಟೆಯದಾತಾ ತ್ರಿಲೋಕದಿ ಖ್ಯಾತ
ನಷ್ಟಾಯು ಮೊದಲಾದಖಿಳಾರ್ಥ ನೀಡುವೊ ಕೃತಾರ್ಥ
ಸೃಷ್ಟಿಯೊಳಗೆ ಬಹು ಶ್ರೇಷ್ಠರಾಗಿ ಕರುಣಾ
ದೃಷ್ಟಿಲಿ ನೋಳ್ಪುದು ಶಿಷ್ಟರ ಮತವೆಂದು 3
***