ಶ್ರೀಗೋಪಾಲದಾಸಾರ್ಯ ವಿರಚಿತ
ಸಾಧನ ಸುಳಾದಿ
(ಶ್ರೀಹರಿ ಸ್ವಾತಂತ್ರ , ಜೀವ ಪಾರತಂತ್ರ್ಯ ವಿಷಯ , ಅನೇಕ ಶಾಸ್ತ್ರಾರ್ಥ
ವಿಚಾರ, ಹರಿ ಕರ್ತೃತ್ವ ತಿಳಿದು ತಾರತಮ್ಯ ಪಂಚಭೇದವರಿತವರಿಗೆ
ಹರಿಯು ತಾನೊಲಿವ.)
ರಾಗ ಹಂಸಾನಂದಿ
ಧ್ರುವತಾಳ
ಚ್ಯುತರಹಿತವಾದಂಥ ಗತಿಯ ಬೇಕೆಂಬವರಿಗೆ
ಜಿತ ಜ್ಞಾನ ಭಕುತಿ ವಿರಕುತಿಯು ಬೇಕು
ಪತಿವೃತ ತಾನೆಂಬೋದು ಮನಕೆ ಲೇಶ ತಾರದೆ
ಪತಿತನಾಗಿರಬೇಕು ಅಂತರದಿ
ಪತಿತ ಬಾಹ್ಯರ ಕಂಡು ಪರವೆ ಮಾಡದೆ ತನ್ನ
ಮತಿಯಲಿ ತಿಳಿದುಕೊಂಡು ಮೌನ ಧರಿಸಿ
ಅತಿ ಆಯಾಸವು ಬಡದೆ ಅಲ್ಪ ಬಂದರು ತಾ ಪೂ -
ರ್ಣತಿಯನು ಮಾಡಿಕೊಂಡು ತುಷ್ಟನಾಗಿ
ಮತಿ ಎರಡು ಪ್ರಕಾರ ಮಾಡದೆ ಸಗುಣದಿಂದ
ಅತಿ ವೇಗ ಬಿಡಿಸಿ ನಿರ್ಗುಣಕೆ ನಿಲ್ಲಿಸಿ
ಹಿತಾಹಿತದಿ ದಾರಿ ವಿವರವನ್ನೆ ಅರಿದು
ಸತಿಸುತರರ ಮನಕೆ ಸಿಕ್ಕದಲೆ
ವ್ಯಥೆ ಬಂದ ಕಾಲದಲ್ಲಿ ಹರುಷ ಮನಕೆ ತಂದು
ಅತಿಸುಖ ಬಂದಾಗಲೂ ವ್ಯಥಿಯ ತಿಳಿದು
ಸತತ ನಿತ್ಯವಾದ ವಸ್ತ ಆವದು ಅದಕೆ
ಪ್ರತಿಬಿಂಬ ತಾನು ಎಂದು ತಿಳಿದುಕೊಂಡು
ಸ್ವತಂತ್ರಾಸ್ವತಂತ್ರ ವಿವೇಕವನ್ನೆ ತಿಳಿದ
ಸ್ವಾತಂತ್ರ ಧೃಡವ ತನ್ನಲ್ಲಿರವ ನೋಡಿ
ಚತುರ ವಿಧ ವುಪಾಯದಿಂದ ತನ್ನ ಸ್ವರೂಪ
ಚ್ಯುತನಲ್ಲವೆಂದು ತನ್ನ ಸ್ಥಿತಿಯನರಿತು
ಪತನಾಗೊದೆಲ್ಲ ತನಗೆ ಬಂದ ದೇಹಗಳೆಂದು
ಹಿತ ಮಾಡದೆ ಅಲ್ಲಲ್ಲಿ ಮಮತೆ ಬಿಟ್ಟು
ತತುವ ವಿವೇಕ ಜ್ಞಾನ ವುಳ್ಳವನಾಗಿ ಶಾ -
ಶ್ವಿತವೆಂಬ ಜ್ಞಾನ ಸಂಸಾರದಲ್ಲಿ ಬಿಟ್ಟು
ಕೃತು ಮೊದಲಾದ ಕರ್ಮ ಹರಿ ಮಾಡಿ ಮಾಡಿಸಿದ
ಸ್ಥಿತಿಯನರಿದು ತನ್ನ ಕೃತಿಯ ಮರೆದು
ದ್ವಿತಿಯ ತೃತಿಯು ತತ್ವ ಚತುರವಿಂಶತಿ ದಶ
ತೃತಿಯು ಮಂಡಲ ತತ್ವಭಾಗವರಿದೂ
ಅತಿ ದೂರನಾಗಿ ಅದಕ್ಕೆ ತತು ವಿಲಕ್ಷಣ ತನ್ನ ಜಡವಸ್ತುವಿನಕಿಂತ
ಶತಗುಣ ವಿಲಕ್ಷಣನೆಂದು ಮತಿ ಮಾತ್ರದದರಲ್ಲಿ
ಸತತ ತಾನಾಗೆ ಶಾಶ್ವತ ವಸ್ತವಿನ್ನು
ಜಿತವಾಗಿ ಪಿಡಿದುಕೊಂಡು ಪತಿತಪಾವನನಾದ ಗೋಪಾಲವಿಟ್ಠಲನಲ್ಲಿ
ರತಿ ವುಳ್ಳವನಾದರೆ ಪಥ ಪೊಂದುವನು ಗತಿಗೆ ॥ 1 ॥
ಮಟ್ಟತಾಳ
ಪ್ರಥಮ ಸಾಧನ ಜೀವ ಅಸ್ವತಂತ್ರ
ದ್ವಿತಿಯ ಸಾಧನ ಹರಿ ಸ್ವತಂತ್ರ ಸ್ಮೃತಿ
ತೃತಿಯ ಸಾಧನ ಜಡ ಚೇತನ ಜ್ಞಾನ
ಚತುರ ಸಾಧನ ಪೂರ್ಣ ಅಪೂರ್ಣವು
ಮತಿ ಇಂದಲಿ ಇದನೆ ಮತ್ತೆ ವಿಸ್ತರಿಸಲು
ಶತ ಸಾಹಸ್ರವು ಆಗಿ ಸಾಧನ ಕಾಣಿಪವು
ಸತುವ ಜೀವ ಮಾತ್ರಕ್ಕೀ ಸಾಧನ ಹೊರ್ತು
ಗತಿ ಆಗದು ಕಾಣೊ ಎಷ್ಟು ಸಾಧನ ಮಾಡೆ
ಗತಿ ಅಗತಿ ಗಮನ ಸ್ವರ್ಗ ನರಕಗಳಲಿ
ಮಿತಿ ಇಲ್ಲದೆ ಪುನಹಾ ಸುತ್ತುತಲೆ ಇರುವ
ಚ್ಯುತದೂರ ಚಲುವ ಗೋಪಾಲವಿಟ್ಠಲ
ಸ್ವತಃ ವೊಲಿದರೆ ವೊಲಿವ ಯತನಕ್ಕಗೋಚರಾ ॥ 2 ॥
ರೂಪಕತಾಳ
ಕರ್ತು ನಾನೆಂದರೆ ದೋಷ ಫಲವು ಪ್ರಾಪ್ತಿ
ಕರ್ತುನಲ್ಲೆಂದರೆ ಸಾಧನಕ್ಕೆ ಫಲವಿಲ್ಲ
ವ್ಯರ್ಥ ಸುಮ್ಮನಿಪ್ಪುವದಕ್ಕಿಂತ ಜಡನಲ್ಲ
ಕರ್ತ ಜೀವೆಂಬುವದು ಶ್ರುತಿ ಸ್ಮೃತಿಗಳಲಿ ಸಿದ್ಧಾ
ಕರ್ತ ಜೀವೆಂಬುವದು ಜೀವ ಸ್ವಾಧೀನಲ್ಲಾ
ಕರ್ತು ನಿಷ್ಠಾ ಧರ್ಮ ಕೊಟ್ಟರಿವರಿಗೆ ಉಂಟು
ಕೊರ್ತೆ ಮಾಡುವನಲ್ಲ ಕೊಟ್ಟ ಕರ್ತುತ್ವಂನ್ಯಾ
ನಿಷ್ಟವಾಗಿ ಜೀವಕ್ಹತ್ತಿ ತಾ ಇಪ್ಪದು
ಸ್ಪೂರ್ತಿ ಬಂದರೆ ಅರಿವಾ ಸ್ಪೂರ್ತಿ ಬರದಿರೆ ಮರೆವ
ಗಾತ್ರ ಹಸಿದರೆ ಅಳುವ ಗಾತ್ರ ತುಂಬಲು ನಲಿವಾ
ಕೀರ್ತಿ ಅಪಕೀರ್ತಿ ತನ್ನದೆಂದ್ಹಿಗ್ಗುವಾ
ವ್ಯರ್ಥ ಇದರಿಂದ ಆನಂದ ಆಚರಿಸುವ
ಸ್ವಾರ್ಥ ಸುಖವನರಿಯಾ ಹರಿ ಕರ್ತುಕನಾಗಿ
ಸ್ಫೂರ್ತಿ ತಂದಿತ್ತರೆ ಸುಖವೆ ಬಡುವಾ
ಮರ್ತರೆ ಮರೆವುವನು ಸ್ವಾರ್ಥ ಪುಟ್ಟದೊ ಹರಿಯು ತಿಳಿಸದಿರಲು
ಕರ್ತು ಕಾರ್ಯತಾ ವಿಷ್ಣು ಗೋಪಾಲವಿಟ್ಠಲ
ಪಾತ್ರಪಾತ್ರವರಿತು ಫಲವನೀವಾ ॥ 3 ॥
ಝಂಪೆತಾಳ
ಅನಾದಿ ಇಂದಲೆ ಹರಿ ತನ್ನ ಸ್ವಾತಂತ್ರ್ಯ
ನಾನಾ ಜೀವರಲಿ ವಿವರ ಮಾಡಿ ಇಟ್ಟಿರುವ
ತಾನು ಅಭೇದನಾಗಿ ಸರ್ವಂತರದಿದ್ದು
ನ್ಯೂನಾಧಿಕವೆನಿಪಾ ಅಧಿಕಾರಾನುಸಾರ
ಶ್ರೀನಾರಿಯಲ್ಲಿ ಶತಸಹಸ್ರ ಭಾರವು ನಿಟ್ಟ
ಅನಿಲಾನಲ್ಲಿ ಶತವು ಇಟ್ಟು
ತಾನು ಇಟ್ಟನು ರುದ್ರನಲ್ಲಿ ತದರ್ಧವು
ನ್ಯೂನ ಇದರೊಳಗರ್ಧ ಇಂದ್ರಗಿತ್ತಾ
ಅನಿಮಿಷ ಗಂಧರ್ವ ಋಷಿ ಕ್ಷಿತಿಪರರು ಕ್ರ -
ಮಾನುಸಾರವು ಇತ್ತಾ ಮಾನುಷ್ಯರಿಗೆ
ಏನಿತ್ತ ಸ್ವಾತಂತ್ರ ತಾನೆ ಇಟ್ಟುಕೊಂಡು
ನಾನಾ ಪರಿಯನಾಟಾನಾಡಿಸುವ
ಆನಿಯಲ್ಲಿ ಇದ್ದು ಗೋಣಿಯ ಹೊರಿಸುವಾ
ಹೇನಿನಲ್ಲಿದ್ದರು ತೃಣವು ಭಾರಾ
ಇನಿತಿಘೆಚ್ಚಿಗೊಡ ಅಲ್ಲಲ್ಲಿ ಸ್ವಾತಂತ್ರ
ತಾನು ಸಮ ಸರ್ವತ್ರ ದ್ರವ್ಯಪೂರ್ಣ
ಪ್ರಾಣಿಗಳಿಗೆ ಮಾತ್ರ ತಿಳಿಯಗೊಡದೆ ತನ್ನ
ತಾನು ಬಡಿದಾಡಿಸುವ ಜೀವಿಗಳನ
ತಾನು ಜ್ಞಾನ ಬಲ ಪೂರ್ಣನು ಆದರು
ಪ್ರಾಣಿಗಳ ಸ್ಥಿತಿಯ ಅರಿತು ಚರಿಯ ಮಾಳ್ಪ
ಆನಂದ ಸುಖಸಾಂದ್ರ ಗೋಪಾಲವಿಟ್ಠಲ
ಜ್ಞಾನಿಗಳಿಂದೀಗೆ ತಿಳಿಯಪಡುವಾ ॥ 4 ॥
ತ್ರಿವಿಡಿತಾಳ
ನೋಡು ಕರ್ಮಗಳಿನ್ನು ಅನಂತವಾಗ್ಯುಂಟು
ಮಾಡಿ ಪೂರೈಪದೆ ಅಂತೆ ಇಲ್ಲ
ಮಾಡಿದೆನೆಂಬ ಅಹಂಕಾರ ಬಂದೊದಗಿದರೆ
ಮಾಡಿದವು ನಷ್ಟ ಮೇಲಿನ್ನು ದೋಷಾ
ಮಾಡದಿಪ್ಪವೆ ನಡಿಯದ ಕರ್ಮ ಮಾಡೋದಕಿಂತ
ಮೂಢನಾಗಿಪ್ಪುವದೆ ಜಡನು ಲೇಸು
ನೋಡು ಸಕಲ ಕರ್ಮ ಆವಾದರೊಳು ಅಡಕ
ಮಾಡಿದರೆ ಪುರುಷ ಕೊಡುವಂಥದೂ
ಮಾಡು ಹರಿಕಥಾ ಶ್ರವಣಾಖ್ಯ ಕರ್ಮವು ಮನಕೆ
ಕೂಡಿದರೆ ಪುನಹ ಪುನಹ ಮಾಡಬೇಕೊ
ಮಾಡಿದಂತೆ ಮನನ ಮಾಡಿ ಮನದಲ್ಲಿ ಗುರುತು
ಮಾಡಬೇಕಿನ್ನು ಮಹಾ ಶ್ರದ್ಧೆಯಿಂದ
ಮಾಡಿ ಮಾಡಿಸುವಂಥ ಹರಿಯ ತಿಳಿದರೆ ಕೈಯ್ಯ
ಗೂಡುವದು ಒಂದಕಾನಂತ ತಿಳಿಪಾ
ಮಾಡಿ ಮಾಡಿ ಹೀಗೆ ಅರ್ಪಣ ಬುದ್ಧಿಯಲಿ
ಮಾಡದೆ ಕರ್ಮ ಫಲ ಕೊಡುವವಲ್ಲಾ
ನೋಡು ಒಂದು ಜನ್ಮ ಶ್ರವಣವ ಮಾಳ್ಪ
ನೋಡು ಒಂದು ಜನ್ಮ ಮನನ ಮಾಳ್ಪ
ನೋಡು ಶತ ಜನ್ಮವು ನಿಧಿಧ್ಯಾಸವು ಮಾಡಿ
ನೋಡುವ ಸಂಪ್ರಜ್ಞಾ ಸ್ಥಿತದಿ ಹರಿಯ
ಮಾಡುವನು ಆಮೇಲೆ ಅಸಂಪ್ರಾಜ್ಞ ಸಮಾಧಿ
ಕೂಡುವನು ಅನ್ಯ ಎಚ್ಚರವ ಮರೆದು
ನೋಡುವ ಜನರಿಗೆ ಜಡನಂದದಿ ಕಾಂಬಾ
ಮಾಡನು ಬಾಹಿರ ವಿಷಯದಲ್ಲಿ ಮನವಾ
ಪಾಡಿದವರ ಪ್ರಾಣ ಗೋಪಾಲವಿಟ್ಠಲ
ನೀಡುವನು ಗತಿ ಅವರ ಯೋಗ್ಯತರಿತು ॥ 5 ॥
ಅಟ್ಟತಾಳ
ತಿಳುವನಾಗಲಿ ಬೇಕು ತನಗಿಂದುತ್ತಮರಿಂದ
ತಿಳಿದಾಡುತಿರಬೇಕು ತನ್ನ ಸಮಾನಿಕರಿಂದ
ತಿಳಿಯ ಪೇಳಲಿಬೇಕು ತನಗಿಂದವರಾರಿಗೆ
ತಿಳಿದವರವರ ಸ್ಥಿತಿಗಳು ಅರಿದಿನ್ನು
ತಲೆವಾಗಿ ಸತ್ವರಿಗಭಿಮುಖವಾಗಿ ಸಂಚರಿಸು -
ತಲಿರಬೇಕು ಚಲಿಸದೆ ನೀಚರ್ಗೆ
ಆಲ್ಪರಿಯದೆ ಅರ್ಧ ಬಲವಂತರ ಕಂಡು
ಹಳಿದು ತನ್ನ ನಿಜ ಬಡತನ ಪೇಳದೆ
ಘಳಿಸಿ ದ್ರವ್ಯದಿ ಪೂಜೆ ಹರಿಯ ಒಲಿಸೆನೆಂಬ
ಕಳವಳವನು ಬಿಟ್ಟು ಮಲರಹಿತನಾಗಿ
ಸಲಿಲದಿಂದಲೆ ಹರಿ ಸಂತೋಷ ಬಡಿಸಿನ್ನು
ಕಿಲಿಕಿಲಿ ನಗುತಲಿ ದುಷ್ಟರ ಎದುರಿಗೆ
ಶಿಲುಕದೆ ಅವರಿಂದರ್ಚನೆ ಒಮ್ಮೆ ಆದರೂ
ಬಲ ರಹಿತರ ಬಳಿಯಲಿ ಇದ್ದ ತನ್ನ ಭಾಗ
ತಿಳಿದುಕೊಂಡು ಹರಿಗೆ ಅರ್ಪಣೆ ಮಾಡಿ
ಜಲದಲ್ಲಿ ಇದ್ದ ಕಮಲದಂತೆ ಸಂಸಾರ
ಸುಳಿಗೆ ಸಿಕ್ಕದೆ ಬಯಲಿಗೆ ಬೀಳೊ ಬಗೆ ಇದೇ
ಮಲತಮಲ್ಲರ ಗಂಡ ಗೋಪಾಲವಿಟ್ಠಲ
ಸುಲಭನು ಈ ಪರಿ ತಿಳಿವಿಕಿದ್ದವಗೆ ॥ 6 ॥
ಆದಿತಾಳ
ದ್ವೇಷಿಯಾದವರಿಗೆ ದ್ವೇಷಿಯಾಗಿರುವ
ದಾಸನಾದವರಿಗೆ ಪೋಷಿಯಾಗಿರುವ
ದೋಷರಹಿತನೆನ್ನೆ ದೋಷ ಕೆಡಿಸುವ
ನಾಶರಹಿತನೆನ್ನೆ ನಾಶ ದೇಹವನೀಯಾ
ದೋಷಕ್ಕೆ ಕ್ಲೇಶ ತಾ ಉಣಿಸಿ ಬಿಡುವದು
ದ್ವೇಷಕ್ಕೆ ದುಃಖ ಶಾಶ್ವಿತವೆಂದೆಂದು
ದ್ವೇಷಕ್ಕೆ ಪ್ರಭೇದ ನಾನಾ ಬಗೆ ಉಂಟು
ದೋಷವಲ್ಲದೆ ನೋಡು ಅನೃತವೆಂಬೋದು
ಈ ಸಮಸ್ತ ಜನ ಬಿಡದಲೆ ಆಡೋದು
ನಾಶವಿಲ್ಲದ ಛೇದ್ಯ ಭೇದ್ಯ ಜೀವರಿಗಿತ್ತ
ನಾಶನಾದೆನಲ್ಲ ಯೆಂದಳುವದು ತಾನು
ಮೃಷ ಕಾಣತ್ವಾದಿಗಳನೆಲ್ಲ ತನಗೆ
ಶಾಶ್ವಿತವೆಂದು ತಾ ಕ್ಲೇಶವ ಬಡುವದು
ನಾಶ ತಿಳಿದು ತನ್ನ ತಾನೆವೆ ಭೇದಿಸಿಕೊಂಡು
ಮೋಸ ಹೋಗುವ ತನ್ನ ವಾಸಿಯಾ ಅರಿಯದಾ
ದೋಷ ಇನ್ನಿದರಿಂದೆ ಹೇಸಿ ಸಂಸಾರದಿ
ಬೇಸರದಲೆ ಇದ್ದು ಬೆಂದು ಬೆಂಡಾಗುವ
ಏಸೇಸು ಜನುಮವು ಬಂದರು ದುರ್ವಿಷಯ -
ದಾಸಿಯ ಬಿಡದಲೆ ಲೇಸು ದೊರಿಯದಿನ್ನು
ಶ್ರೀಶನ ಕರುಣವು ಸಂಪಾದಿಸಲಾಯಿತೆ
ಏಸೇಸು ಜನುಮದಿ ಮಾಡಿದಘವು ತೂಲ -
ರಾಶಿಗೆ ವನ್ಹಿ ಸ್ಪರ್ಶವಾದಂತೆ ವಿ -
ನಾಶನವಾಗೋವು ದೋಷಕಾರ್ಯಗಳೆಲ್ಲ
ಭಾಸುರ ಮೂರುತಿ ಗೋಪಾಲವಿಟ್ಠಲ
ಶಾಶ್ವತನಾಗಿನ್ನು ಸಾಕುವ ಬಿಡದೆ ॥ 7 ॥
ಜತೆ
ಹರಿ ಕರ್ತೃತ್ವ ತಿಳಿದು ತಾರತಮ್ಯ ಪಂಚಭೇದ
ಅರಿದವರಿಗೆ ವೊಲಿವ ಗೋಪಾಲವಿಟ್ಠಲ ॥
****