Showing posts with label ಒಂದು ದಿವಸ ನಾರಂದ vijaya vittala suladi ವ್ಯಾಸರಾಜರ ಮೇಲೆ ಸ್ತೋತ್ರ ಸುಳಾದಿ ONDU DIVASA NAARANDA STOTRA SULADI ON VYASARAJA. Show all posts
Showing posts with label ಒಂದು ದಿವಸ ನಾರಂದ vijaya vittala suladi ವ್ಯಾಸರಾಜರ ಮೇಲೆ ಸ್ತೋತ್ರ ಸುಳಾದಿ ONDU DIVASA NAARANDA STOTRA SULADI ON VYASARAJA. Show all posts

Sunday, 8 December 2019

ಒಂದು ದಿವಸ ನಾರಂದ vijaya vittala suladi ವ್ಯಾಸರಾಜರ ಮೇಲೆ ಸ್ತೋತ್ರ ಸುಳಾದಿ ONDU DIVASA NAARANDA STOTRA SULADI ON VYASARAJA

Audio by Mrs. Nandini Sripad

ಶ್ರೀವ್ಯಾಸರಾಜರ ಮೇಲೆ  ಸ್ತೋತ್ರ ಸುಳಾದಿ
ರಾಗ ಪೂರ್ವಿಕಲ್ಯಾಣಿ

ಧ್ರುವತಾಳ

ಒಂದು ದಿವಸ ನಾರಂದ ಮುನೀಶ್ವರ

ನಂದಗೋಪನ ಕಂದ ಇಂದಿರಾರಮಣನ
ಸಂದರುಶನ ಮಾಡಿ ಬಂದ ಹರಿ ವರ್ಷ
ವೆಂದೆಂಬೊ ಖಂಡದೊಳಾನಂದ ಗಾಯನದಿಂದ
ನಿಂದು ನರ ಮೃಗಗೆ ವಂದಿಸಿ ತೆರಳುತಿರೆ
ಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿ
ಇಂದು ದ್ವಾರಕಾಪುರದಿಂದ ಪೊರಟು ನಡೆ
ತಂದ ವಾರ್ತೆ ಎನಗೊಂದುಸರಲಿಲ್ಲ
ದೀನಬಂಧು ಎನಿಸಿಕೊಂಬ ವೃಂದಾರಕ ಮುನಿ
ಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕ
ಬಿಂದುಗಳುದರಿಸುತ ನಂದನಂದನ ಚರಿತೆ
ಒಂದೊಂದು ಪೇಳಲದರಿಂದ ಮೈಮರೆದು
ಹೋ ಎಂದು ಶಿರವದೂಗಿ ಮುನಿಗೆ ಎರಗಿ
ಕಂಧರ ಬಾಗಿ ನಾನೆಂದಿಗೆ ಕೃಷ್ಣನ
ವಂದಿಸುವೆನೆನಲು ಮಂದಹಾಸದಿಂದ
ಮಂದರೋದ್ಧರ ವಿಜಯವಿಠ್ಠಲ
ಯಶೋದೆ ಕಂದನ ಲೀಲೆಯಾನಂದ ಪೇಳೆನ್ನೆ
ಮುನಿ ಅಂದು ವಿವರಿಸಿದ ಅಂದವಾಗಿ ನಲಿದು || 1 ||

ಮಟ್ಟತಾಳ


ಸಕಲ ದೇವರೊಳು ರುಕ್ಮಿಣಿ ಅರಸನ್ನ

ಸುಖ ಸಮುದಾಯಕೆ ಅಕಟ ನಾನೇನೆಂಬೆ
ಸಕಲ ಭೂಷಣ ಸುರನಿಕರ ಸಂದಣಿಯಲ್ಲಿ
ಮುಕುತಾ ಮುಕುತರ ಸೇವಕರ ಕರದಿಂದ
ಅಕಳಂಕನಾಗಿ ಸಕಲ ಸೇವೆಯಗೊಂಬ
ಮಕ್ಕಳ ಮಾಣಿಕ ರಂಗ ವಿಜಯವಿಠ್ಠಲನ್ನ
ಭಕುತರೊಳಗ್ರಣಿ ಯುಕುತಿಯಲಿ ಪೇಳಿದನು || 2 ||

ತ್ರಿವಿಡಿತಾಳ


ಹರಿಯ ಪಾದಕ್ಕೆರಗಿ ವರ ಪ್ರಹ್ಲಾದನು

ಎರಡೊಂದು ಮಾರ್ಗದಲ್ಲಿ ಕೃಷ್ಣ ಮೂರುತಿಯ
ಪರಿ ಪರಿಯಲ್ಲಿ ಭಜಿಸಿ ಧನ್ಯನಾಗುವೆನೆಂದು
ಸುರ ಮುನಿಗೆರಗಿ ನಿಂದಿರಲಾಗಿ ನಾರದ
ಕರುಣದಿಂದಲಿ ಉತ್ತರವ ಪೇಳಿದ
ನಾನೀ ಧರೆಯೊಳು ಜನಿಸುವ ವರವ ಪಡೆದು ಇಪ್ಪೆ
ಪರಮ ಭಾಗವತರ ವರಮಣಿಯೆ ನೀನು
ಧಾರುಣಿಯೊಳಗವತರಿಸಿ ಅಧಿಕವಾದ
ಮಾರುತ ಮತದೊಳಗೆ ಚರಿಸಿ ಕೃಷ್ಣನ ಪೂಜೆ
ನಿರುತ ಬಿಡದೆ ಮಾಡಿ ಹರುಷಬಡೆಂದೆನಲು
ಕರುಣವಾರಿಧಿ ನರಹರಿ ವಿಜಯವಿಠಲನ್ನ
ಸ್ಮರಿಸಿ ಶೇಷಾವೇಶ ಧರಿಸಿ ದೇಹವ ತಾಳ್ದಾ|| 3 ||

ಅಟ್ಟತಾಳ


ಬನ್ನೂರು ಸ್ಥಳದಲ್ಲಿ ಜನಿಸಿದರು

ಬ್ರಹ್ಮಣ್ಯ ತೀರ್ಥರ ಪಾವನ್ನ ಕರದಲ್ಲಿ
ಸನ್ಮನವಾಗಿ ಪಾಲನವಾದರು ಮುನಿ
ರನ್ನ ಶ್ರೀ ಪಾದರಾಯನ್ನ ಬಳಿಯಲ್ಲಿ
ಚನ್ನಾಗಿ ವಿದ್ಯಾಸಂಪನ್ನವಾದರು ಬಲು
ಅನ್ಯ ಮತವ ಬೇವಾಟನ್ನ ಮಾಡಿ
ಸುಪ್ರಸನ್ನ ಹರಿಯ ಕಾರುಣ್ಯವ ಪಡೆದರು
ಚನ್ನಾಗಿ ಕೃಷ್ಣ ಶ್ರೀವಿಜಯವಿಠಲನ್ನ
ಸನ್ನುತಿಸಿ ಧ್ಯಾನವನ್ನೆ ಕೈಕೊಂಡ || 4 ||

ಆದಿತಾಳ


ಗುರು ವ್ಯಾಸ ಮುನಿಯೆಂದು ಧಾರುಣಿಯೊಳಗೆ ಪೆಸರಾಗಿ

ನೆರದ ಸಜ್ಜನರಿಗೆ ಎರೆದು ನ್ಯಾಯಶಾಸ್ತ್ರ
ಅರುಹಿ ವೈಷ್ಣವ ಮತ ಅದರಿಂದ ಉದ್ಧರಿಸಿ
ಪೊರೆದು ನಂಬಿದವರ ಎರಡೊಂದು ಜನ್ಮ
ಸುಂದರ ಗರ್ಭದಲಿ ಬಂದು
ಪರಿಪೂರ್ಣ ಜ್ಞಾನ ಭಕ್ತಿ ವೈರಾಗ್ಯದಲ್ಲಿ ನಡೆದು
ಎರಡೊಂದು ಉತ್ತಮ ಗುರು ಸಂತತಿಯೊಳಗೆ
ಚರಿಸಿ ಚತುರಾಶ್ರಮ ಧರಿಸಿ ಚತುರರಾಗಿ
ಭರತ ಖಂಡದೊಳು ಪಸರಿಸಿ ಕೀರ್ತಿಯ ಪಡೆದು
ಭರದಿಂದ ವಾಲಗವ ಸುರರಿಂದ ಕೈಕೊಳುತ
ಪರಲೋಕದಲಿ ಒಪ್ಪಿ
ನಿರಾಮಯ ಗುಣನಿಧಿ ವಿಜಯವಿಠ್ಠಲರೇಯನ
ನೆರೆನಂಬಿ ಪ್ರತಿದಿನ ಮೆರೆದು ಮೂರ್ಧನ್ಯರಾಗಿ || 5 ||

ಜತೆ


ಪ್ರಹ್ಲಾದನೇ ವ್ಯಾಸ ಮುನಿಯೇ ರಾಘವೇಂದ್ರ-

ರಹುದೆಂದು ಭಜಿಸಿರೋ ವಿಜಯ ವಿಠ್ಠಲ ಒಲಿವಾ ||
**********