ಶ್ರೀ ವ್ಯಾಸರಾಜ ವಿರಚಿತ ಅಧ್ಯಾತ್ಮ ಸುಳಾದಿ
ರಾಗ ನಾಟ
ಧ್ರುವತಾಳ
ಕಾಮವೆಂಬ ಹೆಚ್ಚಿನ ಕಾಡುಗಿಚ್ಚು
ಒಂದು ಕಡೆಯಲೆನ್ನ ಸುಡುತಲಿದೆ
ಕ್ರೋಧವೆಂಬ ಹೆಬ್ಬುಲಿ ಹಸಿದು
ಒಂದು ಕಡೆಯಲೆನ್ನ ತಿನ್ನುತಲಿದೆ
ಲೋಭವೆಂಬ ಮಹರಕ್ಕಸನು
ಒಂದು ಕಡೆಯಲೆನ್ನ ಹೀರುತೈಧಾನೆ
ಮೋಹವೆಂಬ ಕಗ್ಗತ್ತಲೆಯು ಕವಿದು
ದಿಕ್ಕು ದೆಸೆ ಏನು ತಿಳಿಯದು
ಮದವೆಂಬ ಸೊಕ್ಕಿದ ಕಾಡಾನೆ
ಒಂದು ಕಡೆ ಎನ್ನ ಸೀಳುತಿದೆ
ಮತ್ಸರವೆಂಬ ಮಹ ವಿಷದ ಚೋಳು
ಒಂದು ಕಡೆಯಲೆನ್ನ ಊರುತಿದೆ
ಈ ಪರಿ ಭವವೆಂಬಡವಿಯಲಿ
ನಾನಾ ಪರಿ ಶತ್ರುಗಳಿಗೊಳಗಾದೆ
ಶ್ರೀಪತಿ ಪರಮ ದಯಾನಿಧೆ ದೀನ
ನಾಥೆನ್ನೊಡಿಯ ರಕ್ಷಿಸು ಶ್ರೀಕೃಷ್ಣ ॥ 1 ॥
ಮಠ್ಯತಾಳ
ಆಗದ ಹೋಗದ ಮನೆವಾರುತೆ ಬೇರೊಬ್ಬ
ಲೋಗರಿಗಾಗಿ ಹೊತ್ತು ಭವಾಟವಿಯಲ್ಲಿ
ರಾಗವೆಂಬ ಘನ ತೃಷೆಯಿಂದ ಬಾಯೊಣಗಿ
ಭೋಗವೆಂಬ ಬಯಲ ಮೃಗ ತೃಷ್ಣೆಗೋಡುತ
ಬೇಗೆಯಿಂದ ಬಿದ್ದೆನೊ ನರಕ ಕೂಪದಲಿ
ನಾಗಶಯನ ಎನ್ನನುದ್ಧರಿಸೊ ಸಿರಿಕೃಷ್ಣ ॥ 2 ॥
ರೂಪಕತಾಳ
ಇಂದ್ರಿಯಂಗಳೆಂಬ ಕಳ್ಳರೈವರು
ಬಂಧಿಸಿ ತಮ್ಮ ವಿಷಯಕ್ಕೊಯ್ದೆನ್ನ
ಕಂದಿಸಿ ಜ್ಞಾನವೆಂಬ ದೃಷ್ಟಿಯ
ಎಂದೆಂದಿನ ಧರ್ಮ ಧನವನೊಯ್ವರು ಬಂಧಿಸಿ
ಇಂದಿರೇಶ ಲೋಕಪತಿ ಶ್ರೀಕೃಷ್ಣ ಎನ್ನ ತಂದೆ
ವಿಚಾರಿಸಲೊಲ್ಲದ್ಯಾಕೆ ಬಾಧಿಪೆ ॥ 3 ॥
ಝಂಪೆತಾಳ
ನಾನಾ ಗರ್ಭವೆಂಬ ಕಂಪಿಲೊಮ್ಮೊಮ್ಮೆ
ಹೀನೋಚ್ಚ ಜನ್ಮವೆಂಬ ತಗ್ಗು ಮಿಟ್ಟಿಯಲೊಮ್ಮೆ
ಸ್ವರ್ಗವೆಂಬ ಪರ್ವತಾಗ್ರದಲೊಮ್ಮೊಮ್ಮೆ
ದುರ್ಗತಿಯೆಂಬ ಕಮರಿಯಲಿ ತಾನೊಮ್ಮೆ
ಬಂದೆ ಭವಾಟವಿಯಲಿ ನಿನ್ನ ಪಾದಾರ -
ವಿಂದದ ನೆರಳಲಿರಿಸೆನ್ನ ಸಿರಿಕೃಷ್ಣ ॥ 4 ॥
ತ್ರಿಪುಟತಾಳ
ಹರಿದಾಸರಾರೆಂಬ ನೆರವಿಲ್ಲದೆ
ಹರಿಸೇವೆಯೆಂಬ ಪಥವ ಕಾಣದೆ
ಹರಿಪದವೆಂಬ ಜನುಮ ಭೂಮಿಯ
ಪರಿದು ದೂರದಲ್ಲಿ ತಪ್ಪೀಗ ಕಾಣದಲೆ
ಮರುಳಾದೆ ಭವಾಟವಿಯಲ್ಲಿ
ಸಿರಿಪತಿ ನಿನ್ನ ಸೇರಿಸೊ ಸಿರಿಕೃಷ್ಣ ॥ 5 ॥
ಅಟ್ಟತಾಳ
ಮಾಯಯೆಂಬ ದುಷ್ಟರಾಯ
ಮಾನವೆಂಬ ಬಿನಗು ಮಂತ್ರಿ
ಇಂದ್ರಿಯಗಳೆಂಬ ತಿಂದೋಡುವ ಪರಿವಾರ
ಬಿಗಿದು ಕಟ್ಟಿ ಎನ್ನ ಹಗೆಗಳಿಗಿತ್ತರು
ಬಾಧೆಗೆ ಶ್ರೀ ಮಾಧವ ಎನ್ನ
ಕಾಮಾದಿ ಹಗೆಗಳ ಶಿಕ್ಷಿಸಿ
ರಕ್ಷಿಸೆನ್ನ ಸ್ವಾಮಿ ಸಿರಿಕೃಷ್ಣ ॥ 6 ॥
ಆದಿತಾಳ
ತಾಪತ್ರಯವೆಂಬ ದಾವಾನಲದಿಂದ
ಪಾಪಾತ್ಮರ ಸಂಗವೆಂಬ ವಿಷವೃಕ್ಷದಿಂದ
ಕಾಪಥವೆಂಬ ಬಹು ತಪ್ಪು ಗತಿಗಳಿಂದ
ಕೋಪವೆಂಬಟ್ಟುವ ಕಾಳೋರಗದಿಂದ
ಈ ಪರಿಯಲಿ ನೊಂದೆ ಭವಾಟವಿಯಲಿ
ನೀ ಪಾಲಿಸಲು ಬೇಕೆನ್ನನು ಸಿರಿಕೃಷ್ಣ ॥ 7 ॥
ಜತೆ
ಅತ್ತಿತ್ತ ಸುತ್ತಿ ಭವಾಟವಿಯಲಿ ನೊಂದೆ
ಇತ್ತ ಬಾರೆಂದು ನಿನ್ನ ಹತ್ತಿಲಿರಿಸೊ ಸಿರಿಕೃಷ್ಣ ॥
**********