Showing posts with label ಸೃಷ್ಟಿಗೊಡೆಯನೇ ನಿನ್ನ ದೃಷ್ಟಿಯಿಂದಲಿ ಎನ್ನ ಕಡೆ ನೋಡವಲ್ಲಿ hanumesha vittala. Show all posts
Showing posts with label ಸೃಷ್ಟಿಗೊಡೆಯನೇ ನಿನ್ನ ದೃಷ್ಟಿಯಿಂದಲಿ ಎನ್ನ ಕಡೆ ನೋಡವಲ್ಲಿ hanumesha vittala. Show all posts

Tuesday, 1 June 2021

ಸೃಷ್ಟಿಗೊಡೆಯನೇ ನಿನ್ನ ದೃಷ್ಟಿಯಿಂದಲಿ ಎನ್ನ ಕಡೆ ನೋಡವಲ್ಲಿ ankita hanumesha vittala

ಸೃಷ್ಟಿಗೊಡೆಯನೇ ನಿನ್ನ ದೃಷ್ಟಿಯಿಂದಲಿ ಎನ್ನ ಕಡೆ ನೋಡವಲ್ಲಿ ಪ


ಘಟ್ಯಾಗಿ ನೀ ಗತಿಯೆಂದು ನಾ ನಂಬಿದರೆ

ಸೊಟ್ಟಗಿಹ ಮೊಗವಟ್ಟವೇರುತಲಿದೆ

ಇಷ್ಟಿಲ್ಲವೆಂದು ನೀ ಬಿಟ್ಟ ರಾಜವನಲ್ಲಾ

ಕಟ್ಟುವೆನೋ ಇಟ್ಟು ಮನ ತವ ಪದದಿ ಬಿಡದೆ 1


ಅಷ್ಟ ಸೌಭಾಗ್ಯ ಮದವೆಷ್ಟೋ ಅದರಿಂದ ದಯ

ದೃಷ್ಟಿ ಇಲ್ಲದೇ ನಯನ ಮುಚ್ಚಿ ತೆರೆಯುವುದೋ

ಭ್ರಷ್ಟನೆಂದು ದೂರ ದೃಷ್ಟೀಲಿ ನೋಡಿದರೆ

ಬಿಟ್ಟು ಕೊಡೊ ಭಕುತವತ್ಸಲನೆಂಬೋ ಬಿರುದು 2


ಕಷ್ಟ ಸಂಸಾರದಾ ಸೂಳೆಯಾ ಬೀದಿಯಲಿ

ಇಟ್ಟು ನೋಡುವುದು ನಿನಗೆಷ್ಟು ಸುಖವೋ

ಅಟ್ಟಿ ಬಹ ದುರಿತಗಳ ಮೆಟ್ಟಿನೀ ತುಳಿಯದಿರೆ

ಬಿಟ್ಟು ಕೊಡೊ ಕರುಣಾಸಾಗರನೆಂಬೊ ಬಿರುದು 3


ಕೆಟ್ಟ ಜನ್ಮವ ಕೊಡು ಕನಿಷ್ಟದಿಂದಲಿತು

ಹೊಟ್ಟೆಗನ್ನವು ದೊರೆಯದಂತೆ ಮಾಡೋ

ಪುಟ್ಟಿ ಭಕುತಿ ಮಾತ್ರ ಥಟ್ಟನೆ ಕೊಟ್ಟು ಮನ-

ದಿಷ್ಟ ಪೂರೈಸಿ ತವ ದಾಸನ ಮಾಡೋ 4


ಶ್ರೇಷ್ಠ ಸಾತ್ವೀಕನಾಗಿದ್ದರೆ ಹರಿ ನಿನಗೆ

ಇಷ್ಟು ಬಾಯ್ದೆರದು ನಾ ಬೇಡಲ್ಯಾಕೊ

ಕೆಟ್ಟ ಪಾಪಿಷ್ಟನಾದುದಕೆ ಶ್ರೀ ಹನುಮೇಶ

ವಿಠಲನೇ ತವ ಚರಣ ತೋರಿಸಲಿ ಬೇಕೊ 5

****