Showing posts with label ಪ್ರತಿಗಾಣೆ ನಿಮ್ಮ ಮಹಿಮೆಗೆ ಸತ್ಯಭೋಧ jagannatha vittala PRATIGAANE NIMMA MAHIMEGE SATYABODHA TEERTHA STUTIH. Show all posts
Showing posts with label ಪ್ರತಿಗಾಣೆ ನಿಮ್ಮ ಮಹಿಮೆಗೆ ಸತ್ಯಭೋಧ jagannatha vittala PRATIGAANE NIMMA MAHIMEGE SATYABODHA TEERTHA STUTIH. Show all posts

Saturday, 14 December 2019

ಪ್ರತಿಗಾಣೆ ನಿಮ್ಮ ಮಹಿಮೆಗೆ ಸತ್ಯಭೋಧ ankita jagannatha vittala PRATIGAANE NIMMA MAHIMEGE SATYABODHA TEERTHA STUTIH

Audio by Vidwan Sumukh Moudgalya

ಶ್ರೀ ಜಗನ್ನಾಥದಾಸರು ಸತ್ಯಬೋಧತೀರ್ಥರನ್ನು ಕುರಿತು ಮಾಡಿರುವ ಕೃತಿ 

 ರಾಗ : ಹಂಸಾನಂದಿ    ಆದಿತಾಳ


ಪ್ರತಿಗಾಣೆ ನಿಮ್ಮ ಮಹಿಮಿಗೆ ಸತ್ಯಬೋಧ
ಯತಿಕುಲವರನೆ ನಿತ್ಯಾ ॥ಪ॥

ತುತಿಸಿ ವಂದಿಸುವೆ ತಾವಕರೊಳು ಗಣಿಸು ಅ-
ರ್ಥಿತ ಜನ ಚಿಂತಾಮಣಿ ಸತ್ಕರುಣೀ ॥ಅ.ಪ॥

ಶ್ರೀನಿವಾಸನ ಗುಣ ಸಾನುರಾಗದಲಿ 
ವ್ಯಾಖ್ಯಾನ ಪೇಳುವ ಕಾಲದೀ 
ಶ್ವಾನರೂಪದಿ ಪವಮಾನ ಜನರು ನೋಡಾ
ಕಾಣಿಸಿಕೊಂಡನಂದು ತಾ ಬಂದು ॥೧॥

ಬವರಗೋಸುಗ ಬಂದ ಯವನಾಧಿಪತಿ ನಿಮ್ಮ
ಸುವಿಚಿತ್ರ ಮಹಿಮೆ ಕಂಡೂ
ಪ್ರವಿನೀತನಾಗಿ ಕಪ್ಪವ ಕೊಟ್ಟು ನಮಿಸೀದ
ಕವಿ ಆವಾ ಈ ವಿಭವಾ ವರ್ಣಿಸುವಾ ॥೨॥

ಇವರು ದೇವಾಂಶರೆಂದರಿಪುಗೋಸುಗ ಬಂದು
ದಿವಿಜ ತರಂಗಿಣಿಯೂ
ಸವನಂಗ ಭೂರುಹ ಮೂಲಭಾಗದಲ್ಲಿ ಉ-
ದ್ಭವಿಸಿ ಕಂಗೊಳಿಸಿದಳೂ ಕೃಪಾಳೂ ॥೩॥

ಸ್ವಾಂತಸ್ಥ ಮುಖ್ಯಪ್ರಾಣಾಂತರಾತ್ಮಕ ಭಗ-
ವಂತನಂಘ್ರಿ ಕಮಲಾ
ಸಂತತ ಸರ್ವತ್ರ ಚಿಂತಿಸುತಿಪ್ಪ ಮ-
ಹಂತರೀಗೇನಚ್ಚರಾ ವಿಚಾರಾ ॥೪॥

ಮರುತಮತಾಬ್ಧಿ ಚಂದಿರ ಚಾರು ಚರಿತ ಭೂ -
ಸುರವರಸನ್ನುತನೇ
ಪರಮಪುರುಷ ಜಗನ್ನಾಥವಿಟ್ಠಲ ನಿಮ್ಮ
ಪರಿಪರಿಮಹಿಮೆ ಎಲ್ಲಾ ತಾ ಬಲ್ಲಾ ॥೫॥
*******
ಲಘುಟಿಪ್ಪಣಿ : 
 ಹರಿದಾಸರತ್ನಂ ಶ್ರೀಗೋಪಾಲದಾಸರು 

 ಪಲ್ಲವಿ : 

 ಪ್ರತಿಗಾಣೆ ನಿಮ್ಮ ಮಹಿಮೆಗೆ = (ಈಗಿರುವ ಶ್ರೀಪಾದಂಗಳವರುಗಳಲ್ಲಿ) ನಿಮ್ಮ ಮಹಿಮೆಗೆ ಹೋಲಿಕೆಯುಳ್ಳವರನ್ನು ನೋಡಲಿಲ್ಲ. 

 ಅನುಪಲ್ಲವಿ : 

 ತಾವಕರೊಳು = ನಿಮ್ಮ ಅನುಗ್ರಹ ಪಾತ್ರರಲ್ಲಿ ;
 ಅರ್ಥಿಜನಚಿಂತಾಮಣಿ = ಚಿಂತಾಮಣಿಯಂತೆ ಭಕ್ತಾಭೀಷ್ಟದಾಯಕರೇ ; 

 ನುಡಿ 1 : 

ಶ್ರೀಪಾದಂಗಳವರು ಭಕ್ತಜನಸಮೂಹವನ್ನು ಕುರಿತು ನಿತ್ಯವೂ ಶ್ರೀಹರಿ ಮಹಿಮೋಪನ್ಯಾಸ ಮೂಲಕ , ಪಾಠ ಹೇಳುವ ಮೂಲಕ , ವಿಷ್ಣು ಸರ್ವೋತ್ತಮತ್ವ ಸಂಸ್ಥಾಪನೆ ಮಾಡಿ , ಯತಿಗಳ ಪರಮ ಮುಖ್ಯಧರ್ಮವನ್ನು ನಡೆಸಿಕೊಂಡು  ಬರುತ್ತಿದ್ದರು. ಶ್ರೀವಾಯುದೇವರ ಅಂತರ್ಯಾಮಿಯನ್ನಾಗಿಯೇ ಶ್ರೀಹರಿಯನ್ನು ಜೇವರು ಉಪಾಸಿಸಬೇಕು ; ಶ್ರೀವಾಯುದೇವರಂತಹ ಮತ್ತೊಂದು ಅಧಿಷ್ಠಾನವು ಶ್ರೀಲಕ್ಷ್ಮೀನಾರಾಯಣಗಿಲ್ಲ ಎಂದು ಹೇಳುವಾಗ , ಶ್ರೀವಾಯುದೇವರು ಜೀವೋತ್ತಮರಾದ ಕಾರಣ - ಶ್ರೀವಾಯುದೇವರ ಗುಣಗಣಗಳು ಹೀಗಿವೆಯಾದ ಕಾರಣ, ಶ್ರೀವಾಯುದೇವರಲ್ಲಿ ಶ್ರೀಹರಿಯ ಪೂರ್ಣಾನುಗ್ರಹವಿದೆ. ಲಕ್ಷ್ಮೀಪತಿಯನ್ನು ಒಲಿಸುವ ಮನವುಳ್ಳವರು ಶ್ರೀವಾಯ್ವಂತರ್ಯಾಮಿಯನ್ನೇ ಭಜಿಸಬೇಕೆಂದು ಹೇಳುತ್ತಿದ್ದುದರಿಂದ , " ಶ್ರೀವಾಯುದೇವರನ್ನು ನಾವು ಒಮ್ಮೆಯಾದರೂ ನೋಡಬೇಕೆಂದು" ಭಕ್ತರು ಹಂಬಲಿಸಿದರಂತೆ. ಶ್ರೀಗಳವರು ಮುಗುಳುನಗೆಯಿಂದ ಕೂಡಿ , " ಆಗಲಿ , ಆ ಪ್ರಭುವನ್ನು ಪ್ರಾರ್ಥಿಸುತ್ತೇವೆ . ಅವನ ಚಿತ್ತಕ್ಕೆ ಬಂದರೆ ದರ್ಶನ ನೀಡುವುದೇನಾಶ್ಚರ್ಯ " ಎಂದಿದ್ದರಂತೆ. ಇದ್ದಕ್ಕಿದ್ದಂತೆಯೇ ಉಪನ್ಯಾಸಕಾಲದಲ್ಲಿ ಒಮ್ಮೆ ಒಂದು ಸುಂದರ ಮುಖದ ನಾಯಿ ಸಭಾಮಧ್ಯೆ ನುಗ್ಗಿಬಂತು. ಶ್ರೀಗಳವರ ಅತಿ ಸಮೀಪಕ್ಕೆ ಬಂದು ನಿಂತ ಆ ನಾಯಿಯನ್ನು ಜನರು ಹೊಡೆಯಲು ಓಡಿದರು. ಓಡಿತು ನಾಯಿ. ಅಲ್ಲೇ ಆ ದಿವ್ಯ ನಾಯಿಯನ್ನು ಕಂಡು ಹಿಗ್ಗಿದ ಜ್ಞಾನಿವರ ಶ್ರೀಜಗನ್ನಾಥದಾಸರಾಯರು ಹಾಡಿದರು. " ಪ್ರತಿಗಾಣೆ ನಿಮ್ಮ ಮಹಿಮೆಗೆ ಸತ್ಯಬೋಧ ಯತಿಕುಲವರನೆ ನಿತ್ಯ " ಎಂದು - " ಜನರು ನೋಡೆ ಪವಮಾನ ಶ್ವಾನರೂಪದಿ ಅಂದು ತಾ ಬಂದು ಕಾಣಿಸಿಕೊಂಡನು " ಎಂದು ಹಿಗ್ಗಿದರು. 

 ನುಡಿ 2 : 

 ಬವರ = ಯುದ್ಧ ; 
ಮೈಸೂರಿನ ಹೈದರಾಲಿ ಸವಣೂರ ಮೇಲೆ ದಂಡೆತ್ತಿ ಬಂದಾಗ, ನವಾಬನಲ್ಲಿ ಅವನು ಕೇಳಿದಷ್ಟು ಕಪ್ಪ ಕೊಡಲು ಹಣವಿರಲಿಲ್ಲ. ಶ್ರೀಗಳವರು ತಮ್ಮ ಭಂಡಾರದಿಂದ ತಾವೇ ತಮ್ಮ ಟಂಕಸಾಲೆಯಲ್ಲಿ ಮುದ್ರಿಸಿದ ಬಂಗಾರದ ನಾಣ್ಯಗಳನ್ನು ಕಪ್ಪ ಕೊಡಲು ಕೊಟ್ಟರು. ಹೈದರಾಲಿ ಶ್ರೀಗಳವರ ಭಾವಚಿತ್ರ ಹಾಗೂ ಹೆಸರಿದ್ದ ಆ ನಾಣ್ಯಗಳನ್ನು ನೋಡಿಯೇ , ಶ್ರೀಗಳವರಲ್ಲಿ ಗೌರವ - ಭಕ್ತಿ ಹೊಂದಿ ಅದನ್ನು ಹಿಂತಿರುಗಿಸಿ, ಯುದ್ಧದಿಂದ ನಿವೃತ್ತನಾದ - ತನ್ನ ಕಾಣಿಕೆಯನ್ನೂ ಪ್ರತ್ಯೇಕವಾಗಿ ಶ್ರೀಗಳವರಿಗೆ ಅರ್ಪಿಸಿ ಕೃತಕೃತ್ಯನಾದ.
 ಪ್ರವಿನೀತನಾಗಿ = ಬಹಳ ನಮ್ರಭಾವದಿಂದ; 

 ನುಡಿ 3 : 

 ಅರಿಪುಗೋಸುಗ = (ಭಕ್ತರಿಗೆ) ತಿಳಿಸಲು ;
 ದಿವಿಜತರಂಗಿಣಿಯು = ದೇವನದಿ - ಗಂಗೆಯು ;
 ಸವನಂಗಭೂರುಹ = (ದೇವರ) ಪೂಜಾಂಗ (ಪೂಜಾಸಾಧನ)ವಾದ ಅತ್ತಿಮರ ;
ಶ್ರೀಗಳವರೊಮ್ಮೆ ಕಾಶೀಕ್ಷೇತ್ರಕ್ಕೆ ಹೋಗಿ ಗಂಗಾಸ್ನಾನ ಮಾಡಲು ಬಯಸಿದರಂತೆ. " ಶ್ರೀಮಧ್ವಶಾಸ್ತ್ರ ಪ್ರವಚನವನ್ನು ಬಿಟ್ಟು ಬರಬೇಡಿ , ನಾನೇ ತಮ್ಮಲ್ಲಿ ಬರುತ್ತೇನೆ ; ಇಂತಹ ಅತ್ತಿಗಿಡದ ಬುಡದಲ್ಲಿ ತಮ್ಮ ನಿತ್ಯ ಸ್ನಾನದ ವೇಳೆಗೇ ಬಂದು ಬಿಡುತ್ತೇನೆ " ಎಂದು ಭಾಗೀರಥೀದೇವಿ ಶ್ರೀಗಳವರಿಗೆ ಸೂಚನೆ ಇತ್ತಳಂತೆ ! ನೂರಾರು ಜನರೊಡನೆ ವಾದ್ಯವೈಭವ ಸಮೇತ ತೆರಳಿದ ಶ್ರೀಗಳವರು ಒಂದು ಕುಂಟೆಯ ದಂಡೆಯಲ್ಲಿ ಇದ್ದ (ಸೂಚಿತ) ಅತ್ತಿಗಿಡದ ಬುಡದಲ್ಲಿ ವೇಗವಾಗಿ ನುಗ್ಗಿಬರುತ್ತಿದ್ದ ಗಂಗೆಯಲ್ಲಿ ಭಕ್ತರೊಡನೆ ಮಿಂದು ಆನಂದಪಟ್ಟು "ವಿಷ್ಣುತೀರ್ಥ"ವೆಂದು ಆ ಕುಂಟೆಗೆ ನಾಮಕರಣ ಮಾಡಿದರು. ಅಂದಿನಿಂದ ಪ್ರಸಿದ್ಧವಾಯಿತು. 

🙏 ಶ್ರೀಕೃಷ್ಣಾರ್ಪಣಮಸ್ತು 🙏
*******

ಜಗನ್ನಾಥ ದಾಸರ ವಿರಚಿತ ಒಂದು ಸತ್ಯಬೋಧರಾಯರ ಕೃತಿ ಅದರಲ್ಲಿ ಹೈದರಲಿ ಖಾನ್ ಗುಡಿಗಳನ್ನು ನಾಶ ಮಾಡಲು ಬಂದಾಗ ಇವರ ಮಹಿಮೆ ಹೇಳಿದ್ದಾರೆ ಆ ಹಾಡು.

ಶ್ರೀ ಜಗನ್ನಾಥದಾಸರ ಕೃತಿ 

 ರಾಗ ಯದುಕುಲಕಾಂಬೋಧಿ      ಛಾಪುತಾಳ 

ಪ್ರತಿಗಾಣೆ ನಿಮ್ಮ ಮಹಿಮೆಗೆ ಸತ್ಯಭೋಧ ।
ಯತಿಕುಲವರನೆ ನಿತ್ಯ ॥
ತುತಿಸಿ ವಂದಿಸುವೆ ತಾವಕರೊಳು ಗಣಿಸು ।
ಅರ್ಥಿಜನ ಚಿಂತಾಮಣಿ - ಸತ್ಕರುಣಿ ॥ ಪ ॥

ಶ್ರೀನಿವಾಸನ ಗುಣ ಸಾನುರಾಗದಲಿ ವ್ಯಾ - ।
ಖ್ಯಾನ ಪೇಳುವ ಕಾಲದಿ ॥
ಶ್ವಾನರೂಪದಿ ಪವಮಾನ ಜನರು ನೋಡೆ ।
ಕಾಣಿಸಿಕೊಂಡನಂದು ತಾ ಬಂದು ॥ 1 ॥

ಬವರಗೋಸುಗ ಬಂದ ಯವನಾಧಿಪತಿ ನಿಮ್ಮ ।
ಸುವಿಚಿತ್ರ ಮಹಿಮೆ ಕಂಡು ॥
ಪ್ರವಿನೀತನಾಗಿ ಕಪ್ಪವ ಕೊಟ್ಟು ನಮಿಸಿದ ।
ಕವಿ ಆವಾ ಈ ವಿಭವ - ವರ್ಣಿಸುವ ॥ 2 ॥

ಇವರು ದೇವಾಂಶರೆಂದರಿಪುಗೋಸುಗ ಬಂದು ।
ದಿವಿಜ ತರಂಗಿಣಿಯು ॥
ಸವನಂಗ ಭೂರುಹ ಮೂಲಭಾಗದಲ್ಲಿ ಉ - ।
ದ್ಭವಿಸಿ ಕಂಗೊಳಿಸಿದಳು - ಕೃಪಾಳು ॥ 3 ॥

ಸ್ವಾಂತಸ್ಥ ಮುಖ್ಯ ಪ್ರಾಣಾಂತರಾತ್ಮಕ ಭಗ - ।
ವಂತನಂಘ್ರಿ ಕಮಲ ॥
ಸಂತತ ಸರ್ವತ್ರ ಚಿಂತಿಸುತಿಪ್ಪ ಮ - ।
ಹಾಂತರಿಗೇನಚ್ಚರ - ವಿಚಾರ ॥ 4 ॥

ಮರುತ ಮತಾಬ್ಧಿ ಚಂದಿರ ಚಾರುಚರಿತ ಭೂ - ।
ಸುರವರ ಸನ್ನುತನೇ ॥
ಪರಮಪುರುಷ ಜಗನ್ನಾಥವಿಠ್ಠಲ ನಿಮ್ಮ ।
ಪರಿಪರಿ ಮಹಿಮೆಯೆಲ್ಲ - ತಾ ಬಲ್ಲ॥ 5 ॥
**********