Showing posts with label ದಾಸನಾಗುವುದು ಅಶೇಷ vijaya vittala suladi ಸಾಧನ ಸುಳಾದಿ DASANAGUVUDU ASHESHA SADHANA SULADI. Show all posts
Showing posts with label ದಾಸನಾಗುವುದು ಅಶೇಷ vijaya vittala suladi ಸಾಧನ ಸುಳಾದಿ DASANAGUVUDU ASHESHA SADHANA SULADI. Show all posts

Sunday, 16 May 2021

ದಾಸನಾಗುವುದು ಅಶೇಷ vijaya vittala ankita suladi ಸಾಧನ ಸುಳಾದಿ DASANAGUVUDU ASHESHA SADHANA SULADI

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ  ಸಾಧನ ಸುಳಾದಿ 

(ಹರಿದಾಸನಾಗುವದು ಮುಖ್ಯ - ಏನು ಶ್ರಮ ಬಂದರೂ ಸಹಿಸಿ ದಾಸ್ಯಭಾವ ವೊಹಿಸು.) 


 ರಾಗ ಕಾಂಬೋಧಿ 


 ಧ್ರುವತಾಳ 


ದಾಸನಾಗುವುದು ಅಶೇಷ ಜನ್ಮದ ಪುಣ್ಯ -

ರಾಶಿ ಬಾರದಲೆ ಫಲಿಸೋದೇನೋ

ಸಾಸಿರ ಕೋಟಿ ಧನ ತಾ ಸೂರೆ ಬಿಟ್ಟರು

ಕಾಶಿ ರಾಮೇಶ್ವರ ತಿರುಗಿದರೂ

ಮಾಸ ಮಾಸ ಉಪವಾಸವನ್ನೆ ಮಾಡಿ

ದೇಶ ಪ್ರದೇಶವನ್ನು ಸುತ್ತಿದರೂ

ವಾಸರೋಸರ ಬಿಡದೆ ಶರೀರ ದಂಡಿಸಿ

ಘಾಸಿಯಾಗಿ ಪಲ್ಲು ಗರಿದರೇನು

ವಾಸುದೇವನ ಪಾದಸೇವೆ ದೊರಿಯದು

ಸಾಸಿವಿ ಕಾಳಿನಿತು ಸಂಶಯ ಯಾಕೋ

ಸಾಸಿರಾರ್ಚಿಸೆ ನಾಮ ವಿಜಯವಿಟ್ಠಲನ್ನ 

ದಾಸನಾಗುವ ಭಾಗ್ಯ ವಾಸುಕಿ ಎಣಿಸನು ॥ 1 ॥ 


 ಮಟ್ಟತಾಳ 


ಅಂದಣವನು ಏರಿ ಅರಸು ಎನಿಸಿಕೊಂಡು

ಹಿಂದೆ ಮುಂದೆ ಹಿತದ ಪರಿವಾರದವರ

ಸಂದಣಿ ಸಹಿತದಲಿ ಸಂತತದಲಿ ಮೆರೆದು

ಕುಂದದೋಲಗವನ್ನು ಕುಶಲದಿ ಕೊಳಬಹುದು

ಇಂದು ಮೋಹನ ಗುರು ವಿಜಯವಿಟ್ಠಲ 

ಎಂದಿಗೆಂದಿಗೆ ಭಕುತಿ ಈಯನೋ ಪರೀಕ್ಷಿಸದೇ ॥ 2 ॥ 


 ತ್ರಿವಿಡಿತಾಳ 


ಷಡುರಸಾನ್ನವ ಕೊಡುವ ಒಡವಿ ವಸ್ತು ಒಳ್ಳೆ

ಉಡಗಿ ವಸನಾಭರಣ ತಡಿಯದೆ ಕೊಡುವ

ಮಡದಿ ಮಕ್ಕಳು ತನ್ನ ಒಡನೊಡನೆ ಬಂದು ಸುಖ

ಬಡುವ ಬಾಂಧವರನ್ನ ಎಡೆಬಿಡದಲೆ ಕೊಡುವ

ಅಡಿ ತೊಲಗದಲೆ ಅನೇಕ ಕಡಿಯಲಿಂದ

ಕಡೆ ಇಲ್ಲದ ಭಾಗ್ಯ ಸಡಿಲಾದಂತೀವ

ಕಡು ಮುದ್ದು ಚತುರ್ಭಾವ ವಿಜಯವಿಟ್ಠಲ ರಂಗ

ದೃಢ ಭಕುತಿ ಕೊಡನಯ್ಯಾ ಅಡಿಮೇಲಾಗಳಲಿದರು ॥ 3 ॥ 


 ಅಟ್ಟತಾಳ 


ದಾಸನಾಗುವೆನೆಂದು ಆಶೆಯ ಮಾಡಲು 

ಕ್ಲೇಶವ ಬಡಿಸುವಾಭಾಸವ ಮಾಡಿಸುವಾ

ನಾಶನ ಮಾಡಿಸುವ ಸಕಲ ಐಶ್ವರ್ಯವ

ಗ್ರಾಸವಾಸಕೆ ತರಲೀಸನು ಪರರಿಂದ

ದ್ವೇಷವ ಮಾಡಿಸುವ ಮಾನಿಸರ ಕೈಯಿಂದ

ಮೋಸವಾದ ಭವಪಾಶದಲ್ಲಿ ಬಿಗಿವ

ಬೀಸಿ ಬೀಸಾಟುವ ಕಾಸಿನವನ ಮಾಡಿ

ಲೇಸು ಜೋತಿಷೆನಾಮ ವಿಜಯವಿಟ್ಠಲ ತನ್ನ

ದಾಸನಾಗುವನಿಗೆ ಕ್ಲೇಶ ಬಡಿಸದೆ ವಲಿಯನು ॥ 4 ॥ 


 ಆದಿತಾಳ 


ಏನು ಹೀನ ಹಾನಿ ಬರಲು ತಾನಳುಕಿ ಹಿಂದಾಗದಲೆ

ನೀನು ನೀನು ನಿನ್ನದೆಂದು ಮಾನ ಸ್ಥಾನ ಮೌನ ಧ್ಯಾನ ಜ್ಞಾನ

ನಾನೀಗ ನಿನ್ನವನೆ ಎಂದು ಮಾನಾನಂದ ನಾ

ಪ್ರಾಣ ಧಿಟ್ಟ ತ್ರಾಣನಾಗಿ ನೀನೆ ನೀನೆ ನೀನೆ ಎಂದು

ಆನಿಗಾನೆ ಪೊಸದಾಡಿ ಏನು ವಿಪರೀತದನ್ನ

ನಾನೆ ನಿನ್ನ ಬಿಡನೆಂಬೊ ಜಾಣತನವೊಂದಿರಲಿ

ತ್ರಾಣಗೆಡನೆಂದು ಪ್ರಮಾಣನಾಮ ವಿಜಯವಿಟ್ಠಲ 

ಗೇಣು ದೂರ ಪೋಗದಲ್ಲೆ ಪ್ರಾಣಪದಕವಾಗಿಪ್ಪ ॥ 5 ॥ 


 ಜತೆ 


ಶ್ರಮವೇನು ಬಂದರೆ ಬಿಡೆನೆಂಬೊ ದಾಸಗೆ

ಯಮನಾಮ ವಿಜಯವಿಟ್ಠಲನು ತೆತ್ತಿಗನೋ ॥

******