ರಾಗ: ಸಾವೇರಿ ತಾಳ: ಆದಿ
ಬಂದಿಹೆ ಗುರುರಾಜರೆಡೆ ಸಾಗಿ ಕುಂದಿದೆ ಭವದೊಳು ಬಹುವಾಗಿ ಪ
ಹೊಂದಿದೆ ದುಃಖವನತಿಯಾಗಿ ತಂದೆಯೆ ಕಾಯೊ ನೀ ಅನುವಾಗಿ ಅ.ಪ
ಹಳಸಿದಅನ್ನದತೆರನಾಗಿ ಗಳಿಸಿದೆ ಪಾಪವನತಿಯಾಗಿ
ಗಾಳಕೆಸಿಕ್ಕಿದಮೀನಾಗಿ ತೊಳಲಿದೆ ನಾನು ಬಹುವಾಗಿ 1
ಸಂಚಿತಕರ್ಮವು ಬಿಡದಾಗಿ ಚಿಂತೆಯೊಳ್ ತೊಳಲಿದೆ ಹೆಚ್ಚಾಗಿ
ವಂಚಿತನಾದೆನು ಚೆನ್ನಾಗಿ ನಿನ್ನ ಸಂತತ ಬೇಡುವೆ ಶಿರಬಾಗಿ 2
ಪ್ರಾರಬ್ಧಕರ್ಮದ ಫಲವಾಗಿ ಪರಹಿಂಸೆ ಮಾಡಿದೆ ಹುಲುಸಾಗಿ
ಯಾರನು ಕಾಣೆನು ಹಿತರಾಗಿ ಗುರುರಾಜನೊಬ್ಬನೆ ಅನುರಾಗಿ 3
ಭಯಶೋಕಮೋಹಕ್ಕೊಳಗಾಗಿ ಕಾಯವು ದಣಿಯಿತು ಬಹಳಾಗಿ
ಬಯಲಡಂಭಕೆ ಮರುಳಾಗಿ ಅನ್ಯಾಯಗೈದೆನು ಅತಿಯಾಗಿ 4
ಪರಿಪರಿಕಷ್ಟವ ತ್ವರೆಯಾಗಿ ಹರಿಸುವ ಗುರುರಾಜ ಅತಿತ್ಯಾಗಿ
ಸಿರಿಕೃಷ್ಣವಿಠಲನ ಮರೆಹೋಗಿ ಗುರು ಸೇವೆ ಮಾಡುವ ಅನುವಾಗಿ 5
***