Audio by Mrs. Nandini Sripad
ರಾಗ ಸಾರಂಗ
ಧ್ರುವತಾಳ
ಹರಿ ಚರಿತೆ ಶ್ರವಣ ದುರಿತ ಕುಚ್ಛಾಟನಂ
ಹರಿನಾಮ ಕೀರ್ತನೆ ಭವರೋಗಕ್ಕೆ ಸಿದ್ಧೌಷಧಂ
ಹರಿ ಚರಣ ಸ್ಮರಣ ಮುಕ್ತರೊಳಗರ್ಪಣಂ
ಇಂತು ಹರಿಪಾದ ಸೇವೆ ಅನಂತ ಫಲ ಸಾಧನ
ಇಂತೆಂಬದೊಂದು ಪೇರ್ಮೆಗೆ ಹರಿಸೇವೆ ಫಲರೂಪ
ಶ್ರವಣವೆ ಶುಭದ ಬೆಳಸು ಕೀರ್ತನೆಯ ಲೇಸಿನ ಹೆಚ್ಚಿಗೆ
ಸ್ಮರಣವಚ್ಚಸುಖವೆಂಬ ತೊಟ್ಟಲು
ಎಂಬವದನುಭವದಸಿದ್ಧಾ
ಸಿರಿಕೃಷ್ಣನ್ನ ಪಾದಸೇವೆ ಎಲ್ಲದಿಲ್ಲ
ಪಾದಮುಕ್ತಿ ಕನ್ನಿಕೆ ಸೇರುವೆ ॥ 1 ॥
ಮಠ್ಯತಾಳ
ನೆನಹಿನ ಲೇಶಮಾತುರದಿಂದ ಮಹಾ
ಘನಸುಖಮಯನಾಗಿ ಇಪ್ಪೇನಾವಾಗ
ತನು ಭಾವವಳಿದು ಮೌನಿಗಳಂತೆ ಮೈಮರೆದು ಕು -
ಜನಾಚಾರವಳಿದು ಸಲೆ ನಿನ ನನವರತ
ನೆನೆವ ಭಕುತರ ಸುಖವಿನ್ನೆಂತೊ ಸಿರಿಕೃಷ್ಣ ॥ 2 ॥
ತ್ರಿಪುಟತಾಳ
ಪುತ್ರ ಮಿತ್ರ ಕಳತ್ರ ವರ್ಗದಿಂದ
ದೇಹ ಕರ್ಮಜ್ಞಾನೇಂದ್ರಿಯಗಳಿಂದ
ಚಿತ್ತ ಬುದ್ಧಿ ಮನೋ ಹಮ್ಮುಗಳಿಂದ
ಪ್ರಾಣದಿಂದ ತನ್ನಾತ್ಮದಿಂದ
ನೀನೆ ಪ್ರಿಯನಾಗಿಹೆ ಶ್ರೀಕೃಷ್ಣ
ನಿನ್ನ ನೆನಹಿಗಿಂತ ಬೇರೆ ಪರಮಸುಖ ಉಂಟೆ ॥ 3 ॥
ಅಟ್ಟತಾಳ
ಆ ನಿನ್ನು ಧನ್ಯನಲ್ಲ ಮತ್ತೇನು ಕೊಂಡೆನು ಕೊಂ -
ಡೆನಗೆ ಆರೇನು ಕಾರಣವಯ್ಯಾ
ನಾನಾ ದುರಿತ ತನ್ನಿಂತಾನೆ ನೆನವಿಗೆ ಬಂದನಾಗಿ
ಶ್ರೀನಾಥಾ ಸಿರಿಕೃಷ್ಣ ತಾನೆ ನೆನವಿಗೆ ಬಂದನಾಗಿ
ನಾನಾ ದುರಿತ ತನ್ನಿಂತಾನೆ ಬೆಂದುದಲ್ಲಾ ॥ 4 ॥
ಆದಿತಾಳ
ಮರಹೆ ಎಡರು ಮರಹೆ ಬಡತನ
ಮರಹೆ ಅವಮಾನವು ಮರಹೆ ನಷ್ಟ
ಮರಹೆ ಮೋಸ ಮರಹೆ ಹೆಮ್ಮಾರಿ
ಮರಹೆ ಅಹಂಕಾರ ಮರಹೆ ನರಕ
ಮರಹೆ ಶತ್ರು ಮರಹೆ ಮೃತ್ಯು
ಮರಿಯದೆ ನಿನ್ನ ನೆನವಂತೆ ಮಾಡೋ ಸಿರಿಕೃಷ್ಣ ॥ 5 ॥
ಜತೆ
ಸಿರಿಕೃಷ್ಣ ನೆನಹಿನ ಸುಖವು ಲವಬೇ -
ಕೆಂಬವನೆ ಮುಕುತಿಯ ಸುಖವನೆಂತೇನು ॥
************