ಶ್ರೀ ತುಪಾಕಿ ವೆಂಕಟರಮಣಾಚಾರ್ಯರ ಕೃತಿ
ರಾಗ – : ತಾಳ –
ಕರುಣಾಮೃತವ ಸಿರದಿ ಸುರಿಯೊ ವರದ ಧನ್ವಂತರಿಯೆ
ಚರಣಯುಗಳ ಕಮಲವನ್ನು ಕರುಣಿಸೆನಗೆ ದೊರೆಯೆ ll ಪ ll
ಶ್ರವಣ ನಯನ ಚಿತ್ತ ಜಿಹ್ವೆಗನುಕೂಲವಾಗಿರುವ ಲೀಲಾ
ಪ್ರವರ ಕಾಂತಿ ಸ್ಮರಣ ನಾಮಗಳನು ಪಾಲಿಸಿ
ಭವಜನೀತ ಭ್ರಮಣ ನಿಲಿಸಿ ಕುವರನಂತೆ ರಕ್ಷಿಸೆನ್ನ
ಕವಿಭಿರೀಡ್ಯ ಕಂಜಜಾತಶಿವರ ಸೌಖ್ಯಗೊಳಿಸಿದವನೆ ll 1 ll
ಕಲಿಕೃತ ಕಲ್ಮಶಗಳಿಂದ ಬಳಲುವಂಥ ಬಾಧೆಯನ್ನು
ನಿಲಿಸಿಕೊಳ್ಳಲು ಅನ್ಯಮಾರ್ಗಂಗಳನು ಕಾಣೆನು
ನಳಿನನಾಭ ನಿನ್ನ ಪಾದಗಳನೆ ನಂಬಿಕೊಂಡಿರುವೆನು
ಬಲಿಯ ಕಾಯ್ದ ಭೂಮಿಜೇಶ ಘಳಿರನೆ ಬಂದೊದಗಿ ಬೇಗ ll 2 ll
ವಾಗೀಶ್ವರನ ಕೂಡಿ ನಿಖಿಳ ಭೋಗಗಳನುಭವಿಸುತ
ಶ್ರೀಗುರು ಮಧ್ವಾಂತರಾತ್ಮ ನಾಗಗಿರಿನಾಥ
ರಾಗ ರೋಗ ದೋಷಗಳನು ನೀಗಿ ನಿನ್ನ ನಂಬಿ ಸ್ತುತಿಪ
ಭಾಗವತರ ಭಕ್ತನೆನಿಪ ಭಾಗ್ಯವಿರಿಸೋ ಭೀಮವರದ ll 3 ll
***