Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿ
ರಾಗ ಯದುಕುಲಕಾಂಬೋಧಿ
ಧ್ರುವತಾಳ
ಪೋಯಿತೆನ್ನ ಜನುಮ ವೃಥಾಯುವಾಗಿ ಇನ್ನು
ನ್ಯಾಯದ ಮಾರ್ಗವನು ಆಯ ವಳಿಯದೆ
ಬಾಯಿ ಮುಚ್ಚಿಕೊಂಡು ಬಹುಜನ್ಮದ ದುಷ್ಕೃತ
ಕಾಯದ ಸುಖಕ್ಕಾಗಿ ಕಂಡವರ ಹಾರೈಸಿ
ಛಾಯಗಾರಿಕೆ ತೋರಿ ಕ್ಷೇತ್ರ ವೃತ್ತಿ ಘಳಿಸಿ
ಮಾಯಾಪ್ರಪಂಚನಾಗಿ ಮದೋನ್ಮತ್ತ ದಿಂದಲಿನ್ನು
ಆಯುಷ್ಯವ ಕಳೆದೆ ಅಜ್ಞಾನ ತನದಲ್ಲಿ
ನಾಯಿ ಬದುಕಿನಂತೆ ಆಯಿತೆನ್ನದು ನೋಡು
ತಾಯಿಯ ಪಂಕ್ತಿಯಲ್ಲಿ ಪಾಯಿಸೂಟವ ಬಿಟ್ಟು
ದಾಯಿಗರ ಮನೆ ಪೀಯೂಷ ಉಂಡಂತೆ
ನಾಯಕನಿರಲು ಸತಿ ಅನ್ಯಾಯಕ್ಕೆ ಬಿದ್ದು ಪರ -
ನಾಯಕಗೆ ಬಲು ಸಾಯಸ ಬಟ್ಟಂತೆ
ನೋಯ ದಣಿದೆನಯ್ಯಾ ಸಹಾಯ ವಾಗುವರಿಲ್ಲ
ಕಾಯೊ ಲಕುಮಿರಮಣ ದಯದಿಂದಲಿ ಎನ್ನ
ಗಾಯತ್ರಿ ಪ್ರತಿಪಾದ್ಯ ಗೋಪಾಲವಿಟ್ಠಲ
ಮಾಯಾರಹಿತ ಸೂತ್ರಧಾರಕ ಜಯ ಜಯ ॥ 1 ॥
ಮಠ್ಯತಾಳ
ನಿನ್ನವ ನೆಂತಲೆ ಅನ್ಯರಿಗೆ ತೋರ್ವೆ
ನಿನ್ನ ಪ್ರೀತಿಯ ಧರ್ಮ ಎನ್ನೊಳೊಂದಿಲ್ಲ
ಅನ್ಯಕೆ ಮಾಡುವೆನೊ ಅರ್ಚನೆಗಳು ಎಲ್ಲ
ಪುಣ್ಯಾತುಮ ನಿನ್ನ ಪೂಜಿಸಲಿಲ್ಲಯ್ಯಾ
ಕಣ್ಣಿಗೆ ತೋರುವೆ ಹರಿಭಕ್ತನಂತೆ
ಕನ್ನಗಾರನಂತೆ ನಿನ್ನವರಲಿ ದೋಷ -
ವನ್ನು ನಾ ಎಣಿಸುವೆ ಬಣ್ಣಗೆಟ್ಟು ಬಲು
ಇನ್ನು ಇದರ ಮೇಲೆ ನಿನ್ನವನೆಂತಾಹೆ
ಅನ್ಯಾಯ ನ್ಯಾಯ ಇನ್ನೇನಿನ್ನೇನು
ಘನ್ನದಯಾನಿಧೆ ಗೋಪಾಲವಿಟ್ಠಲ
ಎನ್ನ ಗುಣ ದೋಷ ಎಣಿಸದೆ ಕಾಯಯ್ಯಾ ॥ 2 ॥
ರೂಪಕತಾಳ
ಅನ್ಯ ವಿಷಯಕೆ ಬಟ್ಟಂತಿನ್ನು ಧಾವತಿಗಳು
ನಿನ್ನ ಪರ ಆದರೆ ಎನಗೆಲ್ಲೆವ ದೋಷ
ಹೊನ್ನು ಹೆಣ್ಣು ಮಿಕ್ಕ ಅನ್ಯವಾರ್ತಿಗಳಲ್ಲಿ
ಎನ್ನ ಮನವು ಎಳೆದು ಪುಣ್ಯವ ಪೋಗಾಡಿ
ಹುಣ್ಣು ಆಗೋದಕಿಂನ್ನು ನಿನ್ನವರ ಬಾಗಿ -
ಲನ್ನು ಕಾದಿರುವಂತ ಕುನ್ನಿ ಎನಿಸು ಹರಿ
ಎನ್ನ ಮನೋವಾಕ್ಕಾಯದಿನ್ನು ಬಿಡದೆ ಮಾಳ್ಪ
ಚನ್ನ ಕರ್ಮಗಳೆಲ್ಲ ನಿನ್ನ ಪರವೆ ಮಾಡು
ಇನ್ನೇನು ನಿನ್ನ ನಾ ಘನ್ನ ಬೇಡುವದಿಲ್ಲ
ಮನ್ನಿಸಿ ಎನ್ನ ಮನ ಅಧೀನವ ಮಾಡು
ಪನ್ನಗಶಯನ ಗೋಪಾಲವಿಟ್ಠಲರೇಯಾ
ನಿನ್ನ ಹೊರತು ಎನಗನ್ಯಥಾ ಗತಿಯಿಲ್ಲ ॥ 3 ॥
ಝಂಪೆತಾಳ
ಗತಿ ಎಂಬುವದೆ ನಿನ್ನ ಸ್ಮರಣವೆ ಗತಿ ಅನ್ಯ -
ಗತಿ ಎಂಬುವದು ನಿನ್ನ ವಿಸ್ಮರಣೆ
ಹಿತ ಎಂಬುವದು ನಿನ್ನ ಅರ್ಚನೆ ಹಿತವು ಅ -
ಹಿತವೆಂಬುವದು ನೀನೆ ತಾನೆಂಬೋದು
ಮತಿ ಎಂಬುವದು ನಿನ್ನ ಮನದಲ್ಲಿ ತಿಳಿವದು ಮಂದ -
ಮತಿ ಎಂಬುವದು ನಿನ್ನನ್ನು ತಿಳಿಯದ್ದೆ
ಆತುಮ ಮೂರುತಿ ಅಂತರಾತುಮ ಮೂರುತಿಯಾಗಿ
ಸತತ ಮಾಡಿಸುವಿ ಸರ್ವ ಕರ್ಮವು
ಹಿತ ಕಾರ್ಯವೆಲ್ಲ ದೇವತೆಗಳ ದ್ವಾರ ಅ -
ಹಿತಕಾರ್ಯ ಅಸುರರ ದ್ವಾರದಿಂದ
ಜಿತವಾಗಿ ಮಾಡಿಸಿ ಜೀವರಿಗೆ ಕರ್ಮಫಲ
ಮಿತಿ ತಪ್ಪದೆ ಉಣಿಸುವಿಯಾ ಧೊರಿಯೆ
ಪತಿತಪಾವನ ರಂಗ ಗೋಪಾಲವಿಟ್ಠಲ
ಪತಿತನ್ನ ಪೊರಿಯಯ್ಯಾ ಹಿತದಿಂದಲಿ ॥ 4 ॥
ತ್ರಿಪುಟತಾಳ
ಅನಾದಿ ಕಾಲದಿಂದ ಆ ನಿನ್ನವನಾದಿನೆ
ಆನಾವದು ಮಾಡಿದ ಅಧರ್ಮವೆ ಧರ್ಮ
ಆನಾದರು ಇನ್ನು ಅನಂತ ಪಾತಕ್ಕೊಂದು
ಕಾಣಿಸುತದೆ ದೇವ ಕಾರುಣ್ಯಸಾಗರ
ಏನು ಸ್ವಭಾವವೊ ಎನಗೆ ಕಾಣೆ ನೀನೆ ಬಲ್ಲ್ಯೋ
ನೀನೆ ಗತಿ ಎಂಬೊ ದೃಢವನು ದೊರಕುತದೆ
ನೀನಿರು ಸ್ವಾತಂತ್ರಾ ಆನೇನು ಬಲ್ಲೆನೊ
ಏನಿದರ ಮೇಲೆ ನಾ ನಿನ್ನವನಾಹೆ ಹೇಗೆ
ಜ್ಞಾನಿಗಳು ಕಂಡರೆ ಹೀನನ ಮೇಲೆ ದಯ -
ವಾನು ಮಾಡುತಲಾರೆ ನ್ಯೂನಗಳೆಣಿಸಾದೆ
ನಾನಾದರು ಅವರ ಧೇನಿಸಿ ತಿಳಿಯಲರಿಯೆ
ತಾನಾಗೇವೆ ದಯವನು ಮಾಡುವರು ರಂಗಯ್ಯ
ನೀನೆ ಕಾರಣವಯ್ಯಾ ವಿಧಿ ನಿಷೇಧನೀಯಲಿ
ಆನೊಬ್ಬರರಿಯೆನು ಅನಿಮಿತ್ಯ ಬಂಧು ದೇವಾ
ದೀನರಕ್ಷಕ ಚೆಲುವ ಗೋಪಾಲವಿಟ್ಠಲ
ಮಾನಾಭಿಮಾನದೊಡಿಯಾ ನಾ ನಿನ್ನ ಬಿಡೆನಯ್ಯಾ ॥ 5 ॥
ಅಟ್ಟತಾಳ
ಕೆಟ್ಟದ್ದೆಲ್ಲ ಎನ್ನ ಕಾರ್ಯಗಳೇನು
ಕೊಟ್ಟದ್ದಿಲ್ಲ ನಿನ್ನ ಕೈಗೆ ನಾನೇನು
ಎಷ್ಟು ಕ್ಲಪ್ತದೊಳಿಟ್ಟಷ್ಟೆ ಮಾಡಿಸುವಿನ್ನು
ಘಟ್ಟ್ಯಾಗಿ ಕ್ಲಪ್ತ ಮೀರಿ ಪಾಪಪುಣ್ಯ
ಅಟ್ಟಹಾಸವಾಗೆ ನಷ್ಟ ಮಾಡಿಸಿ ಇನ್ನು
ಇಷ್ಟ ಮಾತ್ರಕೆ ನಾ ಕೆಟ್ಟದ್ದೇನು ಹರಿ
ನಷ್ಟ ಇಷ್ಟ ಇನ್ನು ಆರ ಭಾರಗಳೆಲ್ಲ
ಸೃಷ್ಟ್ಯಾದ್ಯಷ್ಟಕರ್ತ ಕೃಷ್ಣ ನಿನ್ನದಯ್ಯಾ
ಇಷ್ಟದೈವ ನಮ್ಮ ಗೋಪಾಲವಿಟ್ಠಲ
ಬಿಟ್ಟಿನೆಂದರ ಬಿಡಿ ಎಷ್ಟು ಸುಮ್ಮನಿರೆ ॥ 6 ॥
ಆದಿತಾಳ
ಕಾಲಕಾಲಕೆ ನಿನ್ನ ಕಾರ್ಯಗಳನ್ನು ತಿಳಿಯೆ
ಪಾಲಿಸ ಬೇಕಯ್ಯ ಪರಮಪುರುಷ ಹರಿ
ಬಾಳಿವೆಯ ಮಾಡಿಸು ವೇಳ್ಯ ವೇಳ್ಯಕೆ ನಿನ್ನ
ಊಳಿಗದೊಳಗಿಟ್ಟು ಕಾಲವ ಕಳೆಸೋದು
ತಾಳಿವಿಕಿಯ ಕೊಡು ಕೋಪಾಟೋಪಗಳಲ್ಲಿ
ಆಳರಿತು ಪೊರೆ ಕಂಡ್ಯಾ ಗೋಪಾಲವಿಟ್ಠಲ ॥ 7 ॥
ಜತೆ
ನಾ ಅಪರಾಧ್ಯೆಯ್ಯಾ ನೀ ಅಲ್ಲೆ ಪ್ರೇರಕಾಹೆ
ಅಹಲ್ಯಾ ಶಾಪವಿಮೋಚಾ ಗೋಪಾಲವಿಟ್ಠಲ ॥
******