venkatesha stotra
ವಂದೇ ಶ್ರೀ ಕಮಲಜಾದಿ ವೃಂದ ಯತಿ ಗುರು
ವಂದಿತಾ ಚರಣಕಮಲ
ಸಿಂಧೂಜ ಶತರವಿತೇಜ ಸಿರಿಕರಿವರದಾ
ಪಾಲಿಸೈ ವೆಂಕಟೇಶ 1
ಮಾತಾಪಿತ್ವಾದಿ ಬಂಧು ಅನುಜ ತನುಜ ಸಖಾ
ದಾತ ಸರ್ವಾರ್ಥರೂಪ
ಜಾತಾದಿ ಅಂತ್ಯದೂರ ಸತತ ಕರುಣಿಸೀ
ಪಾಲಿಸೈ ವೆಂಕಟೇಶ 2
ಶ್ರೀಶಾ ಸರ್ವಾದ್ಯರೀಶಾ ಪರಿಹರಿಸು ಭವ
ಕ್ಲೇಶ ಸದ್ಭಕ್ತರಾಶಾ
ದಾಸಾದಿ ಜನರ ಪೋಷ ಸಿರಿ ಭೂ ಅರಸಾ
ಪಾಲಿಸೈ ವೆಂಕಟೇಶ 3
ನಂಬೀದ ಜನರಿಗೊಲಿದು ನವವಿಧ ಭಕುತೀ
ಬೆಂಬಿಡಾದಂತೆ ಇತ್ತು
ಅಂಬೂದಿಶಯನ ಕಾಯೊ ಅಜಸುತವರದ
ಪಾಲಿಸೈ ವೆಂಕಟೇಶ 4
ಭೋಗೀಶಶಯನ ಸ್ವಾಮಿ ನಾಲ್ಕು ಪೆಸರಿನಾ
ನಾಗಾದ್ರಿಯಲ್ಲಿ ನೆಲಸೀ
ಬಾಗೀದ ಭಕ್ತರೀಗೆ ಭವಹರಿಸುವನೇ
ಪಾಲಿಸೈ ವೆಂಕಟೇಶ 5
ತೋಂಡಾದಿ ನೃಪರ ವರದ ವರಹ ಗಿರಿಯಲಿ
ಭಾಂಡಕಾರನಿಗೆ ಒಲಿದು
ಚೆಂಡಾಡಿ ವೃಷಭಸುರನ ಶಿರವ ಮೆರೆದೆ ನೀ
ಪಾಲಿಸೈ ವೆಂಕಟೇಶ 6
ಸೌÀಂದರ್ಯ ಸಾರಭೋಕ್ತ ಶುಕಮುಖ ವಿನುತ
ಇಂದಿರಾರಾಧ್ಯ ಚರಿತ
ಬಂದಂತ ದುರಿತ ಹಂತ ಭಕುತರ ತಾತ
ಪಾಲಿಸೈ ವೆಂಕಟೇಶ 7
ಶ್ರೀ ಪದ್ಮಾವತಿಯ ರಮಣ ಸುರರಘಹರಣ
ವ್ಯಾಪಿ ಜಗದೇಕ ರಮಣ
ಆ ಪಾದಮೌಳಿ ಪೂರ್ಣ ಆನಂದಗುಣ
ಪಾಲಿಸೈ ವೆಂಕಟೇಶ 8
ನಿನ್ಹೊರತು ಕಾಯ್ವರಾರು ನಿಖಿಲ ಜಗದಲೀ
ಮನ್ನಿಸೀ ಮಮತೆಯಿಂದ
ಬೆನ್ಹತ್ತಿ ಇರುವ ಕರ್ಮ ಪರಿಹರಿಸುತಲಿ
ಪಾಲಿಸೈ ವೆಂಕಟೇಶ9
ಮಚ್ಛಾವತಾರ ಕೂರ್ಮ ವರಹ ನರಮೃಗಾ
ದಾಕ್ಷಿಣ್ಯರಹಿತ ವಟುವೇ
ಶಿಕ್ಷಾ ಕ್ಷತ್ರಿಯರ ಕುಲಕೆ ದಶಶಿರಹರಣ
ಪಾಲಿಸೈ ವೆಂಕಟೇಶ 10
ಗೋಪಿಯರ ಕಂದ ಬಾಲಾ ಗೋವ್ರಜ ಪಾಲಾ
ಭಾಪುರೇ ತ್ರಿಪುರ ಶೂಲ
ಪಾಪಿ ಕಲ್ಯಂತಕಾಲ ಕಲ್ಕಿ ನಿರ್ಮಲಾ
ಪಾಲಿಸೈ ವೆಂಕಟೇಶ 11
ಅನಿಮಿಷ ಅಮೃತಪೋಷ ಭೂಸತಿ ವಪುಷಾ
ಕನಕ ಕಶ್ಯಪನ ದ್ವೇಷಾ
ಅಣುವೇಷ ಅಗ್ನಿವಾಸ ವನಚರ ತೋಷ
ಪಾಲಿಸೈ ವೆಂಕಟೇಶ 12
ಕಂಸಾದಿ ದೈತ್ಯಹಂತ ಮುನಿನುತ ಚರಿತಾ
ವಂಶಜನ ಮೋಹದಾತ
ಹಿಂಸಾದಿ ಪಾಪ ಜನಿತಾ ನರರ ಛೇದಿತಾ
ಪಾಲಿಸೈ ವೆಂಕಟೇಶ 13
ಭವ್ಯಾಂಗ ಭಾಸುರಾಂಗ ಭವಗಜಸಿಂಗಾ
ಅವ್ಯಾಜಾಕರುಣಪಾಂಗ
ದ್ರವ್ಯಾದಿ ದೈತ್ಯಭಂಗ ಫಣಿ ಫಣ ಭಂಗ
ಪಾಲಿಸೈ ವೆಂಕಟೇಶ 14
ನಿತ್ಮಾತ್ಮ ಸತ್ಯಪಾಲಾ ಕಲಿಮಲಕಾಲ
ಸತ್ಯಾರುಕ್ಮಿಣಿಲೋಲ
ಹತ್ತಾವತಾರಜಾಲಾ ಕವಿಜನ ಲೀಲಾ
ಪಾಲಿಸೈ ವೆಂಕಟೇಶ 15
ಸೃಷ್ಟ್ಯಾದಿ ಅಷ್ಟಕರ್ತಾ ಸುಜನರ ಭರ್ತಾ
ವಿಷ್ಣುವೇ ಸರ್ವಶಕ್ತ
ಅಷ್ಟದಿಕ್ಪಾಲ ಸ್ತುತ್ಯಾ ಅಣು ಘನ ವ್ಯಾಪ್ತಾ
ಪಾಲಿಸೈ ವೆಂಕಟೇಶ 16
ನಾನರಿಯೆ ನಿನ್ನ ಮಾಯಾ ನವವಿಧ ಭಕುತಿ
ಸಾನುರಾಗದಲಿ ಜೀಯಾ
ನೀನಾಗಿ ಪಾಲಿಸೆಯ್ಯಾ ಮನುಮುನಿ ವಿನುತಾ
ಪಾಲಿಸೈ ವೆಂಕಟೇಶ 17
ಶಿರದಲ್ಲಿ ರತ್ನ ಮಕುಟಾ ವರಫಣಿ ತಿಲುಕಾ
ಕರ್ಣಕುಂಡಲದ ಮಾಟ
ವರನಯನಾ ಕರುಣ ನೋಟ ಮಗುಳು ನಗೆ ಮುಖಾ
ಪಾಲಿಸೈ ವೆಂಕಟೇಶ 18
ಗಳದೀ ಕೌಸ್ತುಭವು ಹಾರ ಸಿರಿವರವಕ್ಷ
ಎಳೆ ತುಳಸೀ ಮಾಲೆ ಧೀರಾ
ನಳಿತೋಳು ನಾಲ್ಕು ಚತುರ ದರ ಸುದರುಶನ
ಪಾಲಿಸೈ ವೆಂಕಟೇಶ 19
ಉಟ್ಟಾ ಪೀತಾಂಬ್ರವರ್ಣ ಪಟ್ಟಿ ನಡುವಿಲಿ
ದೃಷ್ಟಿಗೇ ಲೋಕ ಬೆಳಗೇ
ಶ್ರೇಷ್ಠ ಶ್ರೀ ಚರಣ ಕಮಲಾ ನಗೆಮೊಗ ಚಲುವಾ
ಪಾಲಿಸೈ ವೆಂಕಟೇಶ 20
ಆವಾವ ಜನ್ಮ ಫಲವೋ ಅವನಿಗಿಳಿದು ನೀ
ಕಾವೆಯೋ ದಾಸ ಜನರ
ದೇವಾದಿ ದೇವ ನಿನ್ನ ಭಜಿಪೆ ಭಕುತರ
ಪಾಲಿಸೈ ವೆಂಕಟೇಶ 21
ಮಧ್ವೇಶ ಆನಂದತೀರ್ಥ ಮುನಿನುತ ತಂದೆ
ಮುದ್ದುಮೋಹನ್ನರಾಧ್ಯ
ಉದ್ಧರಿಸೊ ನಿತ್ಯ ಜೀಯಾ ಕರುಣಿಸು ಸೇವಾ
ಪಾಲಿಸೈ ವೆಂಕಟೇಶ 22
ಧಾರ್ವಾಡಪುರದಿ ನಿಲಯಾ ಸಿರಿ ಮರುತ ಪ್ರಿಯಾ
ಪೂರಿಸೀ ಮನದ ಧ್ಯೇಯಾ
ನಿರ್ವಾಣ ಪಾಲಿಸೈಯ್ಯಾ ಇದ ನುತಿಪರಿಗೇ
ಪಾಲಿಸೈ ವೆಂಕಟೇಶ 23
ಆಪದ್ಭಾಂಧವನೆ ಶೀಲಾ ಗುರುಮನ ನಿಲಯಾ
ಗೋಪಿಕಾಲೋಲ ಜಾಲ
ಗೋಪಾಲಕೃಷ್ಣವಿಠ್ಠಲಾ ಸಲಿಸು ಮನಛಲಾ
ಪಾಲಿಸೈ ವೆಂಕಟೇಶ 24
*****