Showing posts with label ಬಂದು ನಿಲ್ಲಯ್ಯ ಭವದ gopala vittala ankita suladi ಪ್ರಾರ್ಥನಾ ಸುಳಾದಿ BANDU NILLAYYA BHAVADA PRARTHANA SULADI. Show all posts
Showing posts with label ಬಂದು ನಿಲ್ಲಯ್ಯ ಭವದ gopala vittala ankita suladi ಪ್ರಾರ್ಥನಾ ಸುಳಾದಿ BANDU NILLAYYA BHAVADA PRARTHANA SULADI. Show all posts

Thursday, 5 November 2020

ಬಂದು ನಿಲ್ಲಯ್ಯ ಭವದ gopala vittala ankita suladi ಪ್ರಾರ್ಥನಾ ಸುಳಾದಿ BANDU NILLAYYA BHAVADA PRARTHANA SULADI

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ  ಪ್ರಾರ್ಥನಾ ಸುಳಾದಿ 


 ರಾಗ ಶಂಕರಾಭರಣ 

 ಧ್ರುವತಾಳ 


ಬಂದು ನಿಲ್ಲಯ್ಯ ಭವದ ಸಿಂಧುವಿಗೆ ಅಗಸ್ತ್ಯ -

ನಂದದಿ ಸೆಳೆದು ಎನ್ನ ಮಂದಿರದೊಳಗಿನ್ನು

ಇಂದಿರೆಯಿಂದೊಪ್ಪುತ ಕಂದಕಂದ ಬೊಮ್ಮ ಮತ್ತ

ನಂದಿವಾಹನ ಸುರರಿಂದ ವಂದಿತನಾಗಿ

ಚೆಂದುಳ್ಳ ವಾಲಗ ಆನಂದದಿ ಕೊಳುತಲಿ

ಇಂದು ಬಾರಯ್ಯ ಬಲು ಸುಂದರ ವಿಗ್ರಹ

ಮಂದಮತಿ ನಾ ನಿನ್ನ ಮನದಣಿ ಬೇಡಿಕೊಂಬೆ

ಕಂದನ ಬಿನ್ನಪವ ತಂದೀಯೊ ತಾರೊ ಮನಕೆ

ಒಂದರಿತವನಲ್ಲ ಒಂದೆ ದೇವನೆ ಕೇಳು

ವಂದಿಸೊ ಬಗೆ ನಿನ್ನ ಒಂದಾದರು ಆನರಿಯೆ

ಕುಂದು ಮನುಜ ನಿನ್ನಾನಂದ ನೋಡೆನೆಂಬೊ

ಛಂದುಳ್ಳ ಬಹು ದಿವಸದಿಂದಲೆನ್ನ ಆಸೆಯ

ಮಂದರಧರ ಎನ್ನ ಮನದಭೀಷ್ಟೆ ಪೂರೈಸು

ಸಂದೇಹ ಮಾಡದಿರು ಸಾಧು ಜೀವರ ಪಾಲ

ವೃಂದಾವನದ ಗೋವಿಂದ ಸಿರಿ ಕೃಷ್ಣ

ಮಂದಾಕಿನಿಯ ಜನಕ ಗೋಪಾಲವಿಟ್ಠಲ 

ಬಂದೆನ್ನ ರಕ್ಷಿಸಯ್ಯ ಭಕುತವತ್ಸಲದೇವ ॥ 1 ॥


 ಮಠ್ಯತಾಳ 


ಕೊಡುವದು ಹಿಡಿವದು ಬಿಡುವದು ಇಡುವದು

ನಡೆವದು ನುಡಿವದು ಅಡಗೋದು ಮಡಗೋದು

ಒಡಲೊಳು ಪೋಗುವದು ತಡೆವದು ಅಲ್ಲಲ್ಲಿ

ಸಡಗರದಲಿ ತಿಳಿಸಿ ಕಡೆಹಾಯಿಸು ಭವದ -

ಕಡಲ ಎನ್ನನು ಬೇಗ ಮಡದಿಯರು ಮಕ್ಕಳು

ಒಡವೆಗಳಲಿ ಮನವು ಕಡಕವಿಲ್ಲದೆ ಎಳೆದು

ಪಡಬಾರದ ಭಂಗ ಬಡಿಸಿದ ಕಾಲಕ್ಕೂ

ದೃಢ ನಿನ್ನ ಜ್ಞಾನ ಕೊಡು ಎನಗೆಲ್ಲೆಲ್ಲಿ

ಮೃಡಸಖನೆ ಚಲ್ವ ಗೋಪಾಲವಿಟ್ಠಲ ಎನ್ನ

ಹಿಡಿದಾಡಿಸೊ ಧೊರಿಯೆ ಬಿಡದಿರು ಎನ್ನ ಕರವ ॥ 2 ॥


 ತ್ರಿಪುಟತಾಳ 


ಆನಂದ ಕೊಡುವದು ನಿನ್ನಂದ ಮಾತ್ರದಿ

ಆನಂದ ಕೊಡುವದು ನಾನಂದ ಮಾತ್ರದಿ

ಆನಂದವೆಂಬ ಸಥೆಯು ಆನಾಡಲಿಲ್ಲವೆಂದು

ಆನಂದಮೂರುತಿ ಹರಿ ಆಡಿಸಿದನೆಂತೆಂದು

ಆನಂದನಾಗಿ ಶ್ರೀಮದಾನಂದ ತೀರ್ಥರ

ಆನಂದ ಉಕ್ತಿಯ ಆನಂದದಲ್ಲಿದ್ದರೆ

ಆನಂದ ಕೊಡುವದು ಆನಂದಮೂರ್ತಿಯ

ಆನಂದವೆಂಬೋದು ನಿನ್ನ ನೋಳ್ಪುವದೆ

ಆನಂದವೆಂಬುದಿನ್ನೊಂದು ಅರಿಯೆನು

ಆನಂದಗುಣಪೂರ್ಣ ಗೋಪಾಲವಿಟ್ಠಲ 

ಈ ನಿಮಿಷವೆ ಸಾಕು ನಿನ್ನ ತಿಳಿವವ ಧನ್ಯ ॥ 3 ॥


 ಅಟ್ಟತಾಳ 


ದೋಷದೂರನೆ ನಿನ್ನ ಸ್ಮರಿಸುವರಿಗೆ ದೋಷದ

ರಾಸಿ ಇನ್ನಾಶ್ರೈಸಲಿ ಬೇಕೆ

ನಾಶ ಮಾಡೆನ್ನಘ ರಾಶಿಗಳೆಲ್ಲನು

ಮೋಸಗೊಳಿಸಬೇಡ ದಾಸರ ಪ್ರಿಯನೆ

ಹೇಸಿಗ್ಹುಟ್ಟಿಸು ದುರಾಸಿಗೆ ಮನವನು

ಆಸೆ ತೋರಿಸು ನಿನ್ನ ಪಾದಕಮಲಾನಂದ

ಈಷನ್ಮಾತ್ರವನ್ನು ದಾಸತ್ವ ಎನ್ನಲ್ಲಿ

ವಾಸವಾಗಿ ಇತ್ತೆ ಪೋಷಿಸು ಶ್ರೀಹರಿ

ಈಶ ನೀನೆಂಬೋದು ದಾಸ ನಾನೆಂಬಂಥ

ಈ ಸಮಯದಿ ಅಲ್ಲ ಅನಾದಿಕಾಲದಲಿಂದ

ಶ್ರೀಶ ಬಾ ಎನ್ನಯ್ಯ ಗೋಪಾಲವಿಟ್ಠಲ ಮಾ -

ನಿಸಾದೆ ಎನ್ನ ಮನದ ವಳಗೆ ನಿಲ್ಲು ॥ 4 ॥


 ಆದಿತಾಳ 


ಒಂದು ದಿನದ ಗೆಳೆಯ ತಾನು

ಹೊಂದಿದವನು ಅಂದು ಅವಗೆ ದುಃಖ

ಚಂದದಿ ತರಿವನು ಕುಂದು ನಿಂದೆ ಆದರೆ

ನೊಂದುಕೊಂಬೋನು ಮನದಿ 

ಒಂದಾಗುವರು ತಮ್ಮನಂದಾಗಲಿ

ಇಂದಿರೇಶನೆ ಎನಗೆ ನಿನಗೆ ಗೆಳೆಯತನ

ಇಂದಾದದಲ್ಲ ಅನಾದಿ ಕಾಲದಲಿಂದ

ಹೊಂದಿಕೊಂಡಿದ್ದ ಮೇಲೆ ಬಂದು ಎನಗೆ ದೋಷ

ನಿಂದಿರದಂತೆ ಮಾಡಬೇಕಲ್ಲದೆ ನೀ ಎನ್ನ

ಬಂಧನದೊಳಗ್ಹಾಕಿ ಬರಿದೆ ದಣಿಸುವರೆ

ತಂದಿಯ ಮೇಲೆ ಸ್ನೇಹ ಛಂದಾದುಂಟಾದದ್ದೆಮ್ಮ

ತಂದಿಯ ತಂದೆ ಕೇಳೊ ಬಂದೆ ನಾನದರೊಳು

ಹೊಂದಿದವ ನಿಮ್ಮ ಕಂದನ ಮತವನು

ಮಂದಮತಿಯ ಮಾತು ಮಾರಮಣ ಮನ್ನಿಸು

ವೃಂದಾರಕಪಾಲ ಗೋಪಾಲವಿಟ್ಠಲ 

ಬಂಧು ಎನಗೆ ಭವದಿಂ ದಾಟಿಸು ಜೀಯ ॥ 5 ॥


 ಜತೆ 


ಭಕುತಿಯ ನೀ ಎನಗೆ ಯುಕುತಿಯಿಂದಲಿ ನಿನ್ನ

ಉಕುತಿಲಿ ಪಾಡುವಂತೆ ಮಾಡು ಗೋಪಾಲವಿಟ್ಠಲ ॥

***********


ಈ ಸುಳಾದಿಯ ರಚನೆಯ ಸಂದರ್ಭ : 


ಶ್ರೀಭಾಗಣ್ಣದಾಸರು ಒಮ್ಮೆ ಹರಿಧ್ಯಾನಕ್ಕೆ ಕುಳಿತಿದ್ದಾರೆ . ಶ್ರೀಸ್ವಾಮಿ ಧ್ಯಾನಕ್ಕೆ ಒದಗಿದ್ದಾನೆ. ಶ್ರೀಹರಿಯ ದರ್ಶನದಿಂದ ಪುಳಕಾಂಕಿತರಾದ ಶ್ರೀದಾಸರು , ಅವನ ರೂಪಲಾವಣ್ಯಾದಿಗಳನ್ನು ಕಂಡು ಹಿಗ್ಗಿ ಆಪಾದಮೌಲಿಪರ್ಯಂತ ಅವನನ್ನು ತುತಿಸಲು ಮನಮಾಡಿ ಇನ್ನೇನು ಸ್ತೋತ್ರಕ್ಕೆ ಪ್ರಾರಂಭಿಸಬೇಕೆನ್ನುವಷ್ಟರಲ್ಲಿ , ನಿರಪರಾಧಿಗಳಾದ ಶ್ರೀದಾಸರೆದುರಿಗೆ ಶ್ರೀಸ್ವಾಮಿಯು , ತನ್ನಲ್ಲಿ ಶ್ರೀದಾಸರು ಏನೋ ಒಂದು ಅಪರಾಧ ಮಾಡಿದ್ದಂತೆಯೂ , ಶ್ರೀಹರಿಯು ಕ್ಷಮಾಸಮುದ್ರನಾದರೂ ಸಹಿಸಲು ಅವನಿಗೆ ಮನ ಒಪ್ಪುತ್ತಿಲ್ಲ ಎನ್ನುವ ಹಾಗೆ ಕಾಣುತ್ತಿದ್ದ ರೂಪವು , ಇದ್ದಕ್ಕಿದ್ದಂತೆ ಕೋಪೋದ್ರಿಕ್ತವಾಗಿ ಕಾಣತೊಡಗಿತು. ಆ ರೂಪವನ್ನು ದರ್ಶನ ಮಾಡಿ ಬೆಚ್ಚಿ ಬೆದರಿ ಕಂಗಾಲಾದರು ಶ್ರೀದಾಸರು. ತಟ್ಟನೆ ಧ್ಯಾನವು ವಿಚ್ಛಿತ್ತಿಗೊಂಡಿತು. ಆ ನಿಮಿಷದಿಂದ ಶ್ರೀದಾಸರು , ತಮ್ಮ ನಿತ್ಯ ಕರ್ಮಾನುಷ್ಠಾನವನ್ನು ಕಾಲಕಾಲಕ್ಕೆ ಮಾಡುತ್ತಿದ್ದರೂ , ಆ ಕೋಪದ ರೂಪ ದಾಸರ ಮನೋನಯನದಿಂದ ಮರೆಯಾಗಲಿಲ್ಲ. ನಿಂತಲ್ಲಿ ಕೂತಲ್ಲಿ ಮಲಗಿದಾಗ ಸಹ , ಶ್ರೀಹರಿಯಲ್ಲಿ ನಾನು ಮಾಡಿದ ಅಪರಾಧವಾದರೂ ಏನು ಎಂದು ಚಿಂತಿಸುವುದೊಂದೇ ಶ್ರೀದಾಸರಿಗೆ ಬೆನ್ಹತ್ತಿದ ಕ್ಲೇಶ. ಆ ಸಂದರ್ಭದಲ್ಲಿ , ನನ್ನ ಅಪರಾಧವೇನಿದ್ದರೂ ಕ್ಷಮಿಸಿ ಅಂದು ತೋರಿದ ಆ ಸುಂದರ ರೂಪವನ್ನು ತೋರು ಹರಿಯೇ - ಎಂದು ಮೊರೆಯಿಟ್ಟ ಸುಳಾದಿ ಇದು. 

 ವಿವರಣೆ : 

 ಹರಿದಾಸರತ್ನಂ ಶ್ರೀಗೋಪಾಲದಾಸರು

********