Showing posts with label ವಿಹಂಗಗಮನ ದೇವ vijaya vittala ankita suladi ಹರಿಹರ ಕ್ಷೇತ್ರ ಸುಳಾದಿ VIHANGAMANA DEVA HARIHARA KSHETRA SULADI. Show all posts
Showing posts with label ವಿಹಂಗಗಮನ ದೇವ vijaya vittala ankita suladi ಹರಿಹರ ಕ್ಷೇತ್ರ ಸುಳಾದಿ VIHANGAMANA DEVA HARIHARA KSHETRA SULADI. Show all posts

Saturday, 1 May 2021

ವಿಹಂಗಗಮನ ದೇವ vijaya vittala ankita suladi ಹರಿಹರ ಕ್ಷೇತ್ರ ಸುಳಾದಿ VIHANGAMANA DEVA HARIHARA KSHETRA SULADI

 Audio by Vidwan Sumukh Moudgalya


 ಶ್ರೀ ವಿಜಯದಾಸಾರ್ಯ ವಿರಚಿತ 


 ಹರಿಹರ  ಕ್ಷೇತ್ರ ಸುಳಾದಿ 


 ರಾಗ : ಶಂಕರಾಭರಣ 


 ಧ್ರುವತಾಳ 


ವಿಹಂಗಗಮನ ದೇವ ವಿಶ್ವಸರ್ವದ ಕಾವ 

ಅಹಿಶಯ್ಯಾ ಕಾಮನಯ್ಯಾ ಭಕುತಪ್ರಿಯ 

ಬಹು ಕ್ರೂರ ರೂಪ ಭವದೂರ ಫಾಲಲೋಚನ ಚನ್ನ 

ಅಹಿಭೂಷಣಗೆ ಈಶ ಸತತ ದಯಾಸಾಗರ 

ಗಹನಮಹಿಮ ಸದ್ಗುಣಗಣ ಸಾಂದ್ರ ಸ-

ನ್ನಿಹಿತನಾಗಿಪ್ಪ ದೇವೋತ್ತುಂಗಾ ಸಂಗ 

ಮಹದೇವ ಜ್ಞಾನಾಕಾಯಾ ಶಿವಮೂರ್ತಿ ಶುದ್ಧಮೂರ್ತಿ 

ಬಹಿರಂತರ ನಿತ್ಯವ್ಯಾಪ್ತ ನಿತ್ಯ ತೃಪ್ತ 

ಮಹಿಯೊಳು ಈ ಕ್ರೇತ್ರ ಸುತ್ತು ಮೂರುಯೋಜನ 

ಸಹ ಜವೋ ಹರಿಹರವೆಂಬೋ ಪೆಸರೂ 

ಗುಹಶಯನನಾದ ನಮ್ಮ ವಿಜಯವಿಠಲ ರೇಯಾ 

ಮಹಿಧರನಂದನೆ ವಾಸವಿಲಾಸ ॥೧॥


 ಮಟ್ಟತಾಳ 


ಅಸುರ ಗುಹನಂದು ಪಸರಿಸಿ ತಪವನೊ 

ಅಸುವ ದಂಡಿಸಿ ಮಹ ಪೆಸರಾಗೆ ನಿರುತದಲಿ 

ಬಿಸಿಜ ಭವನು ಮೆಚ್ಚಿ ನಸುನಗುತ ಖಳಗೆ 

ಅಸುರಾರಿ ಹರನಿಂದ ಅಸುವಳಿಯಾದಂತೆ 

ಕುಶಲ ವರವನೀಯೆ ವಸುಧಿಯೊಳಗೆ ಇತ್ತಾ 

ಮಸದು ಮತ್ಸರಿಸಿ ಅಂಜಿಸಿದಾ ಲೋಕೇಶ್ವರರ 

ಅಸಮ ವೀರನಾಗಿ ವಶವಲ್ಲದ ಸುಮಾನ-

ಸಿರು ಮೊರೆ ಇಡಲು 

ಪಶುಪತಿ ಪ್ರೀಯಾ ಶ್ರೀ ವಿಜಯವಿಠಲರೇಯಾ 

ಬೆಸಸಿದ ಮಾತಿಗೆ ವಸುಧಿಯೊಳಗೆ ಮೆರೆದ ॥೨॥


 ತ್ರಿವಿಡಿತಾಳ 


ಮೂರು ಯೋಜನ ಉದ್ದ ಹರಿಹರ ರೂಪದಲಿ ತೋರಿ 

ಕ್ರೂರನ ಕೂಡ ಕಾಳಗವನು ಮಾಡಿ 

ಸಾರಿಸಾರಿಗೆ ನಾನಾ ಶಸ್ತ್ರದಲಿ ಕಾದಿ 

ಧಾರುಣಿಗೆ ಖಳನ ಬೀಳಗೆಡಹೀ 

ಕಾರುಣ್ಯದಲ್ಲಿ ಅವಗೆ ವರವಿತ್ತು ಕ್ಷೇತ್ರ ಗು-

ಹಾರಣ್ಯ ವೆನಿಸಿ ಕರಿಸಿತಿದೆಕೋ 

ವಾರಾಣಾಸಿ ಕ್ಷೇತ್ರಗಧಿಕ ವೆಂದೆನಿಸಿತು 

ನಾರಾಯಣಾ ಸರ್ವಗುಣ ಪೂರ್ಣನೂ 

ಚಾರುವಾದಾ ಗಿರಿ ಪೋಲ್ವಾತೈರಾವತ 

ಈರಾ ಎರಡು ಶೋಭಿಸುತಿರೆ ತೀರ್ಥ ಸಹಿತಾ 

ವಾರಾಣವಾದ ಭೃಕುಟಿ ಮುಚುಕುಂದ ಕ್ಷೇ-

ತುರದಲ್ಲಿ ಈಶಾ ಒಪ್ಪುತಿಹನೂ 

ಈ ರೀತಿಯಲಿ ಉಂಟು ಪೂರ್ವಾದಿ ದಿಕ್ಕಿಲಿ 

ಆರೈದು ಕೇಳ್ವುದು ಪುಣ್ಯಶ್ರವಣ 

ಭೋರುಗರೆವ ಸರಿತೆ ಹರಿದ್ರ ಕುಮದ್ವತಿ 

ವಾರಾಹಿಯೊಳಗೆ ಸಂಗಮವೆನ್ನಿರೋ 

ಕೋರಿದವರಿಗೆ ಆನಂದ ವರವ ನಿತ್ತು 

ತಾರಕಾ ಮಾಳ್ವರು ಭವಸಾಗರ 

ಕಾರುಣ್ಯನಿಧಿ ಹರಿಹರ ವಿಜಯವಿಠಲಾ 

ಆರಾಧಿಲು ಮುಕ್ತಿ ದಾರಿಯಾ ತೋರುವಾ ॥೩॥


 ಅಟ್ಟತಾಳ 


ಪರಮೇಷ್ಠಿ ಬಂದು ಹರಿಹರರೂಪವ 

ಧರಿಸಿದ ದೇವನ ವಿಶ್ವಕರ್ಮನಿಂದ 

ನಿರರ್ಮಾಣಗೈಸಿಪ ಶೂಲ ಅಭಯ ಹಸ್ತ 

ಅರಿಶಂಖದಿಂದ ಚತುರ ಹಸ್ತಾದಲ್ಲಿ 

ಹರುಷವ ತಾಳಿ ಕೊಂಡಾಡಿ ಧನ್ಯನಾಗಿ 

ಸುರರಿಗರುಹಿದ ಇದರ ಮಹಿಮೆಯನ್ನು 

ಮಿರುಗುವ ತೀರ್ಥಗಳಿಲ್ಲುಂಟು ಬಹು ಪೆ -

ಸರನು ಪೇಳುವೆ ಕೇಳುವದು ಸಜ್ಜನರು 

ಪರಮೇಷ್ಠಿ, ಭಾರ್ಗವ, ಛಾಯಾ, ಪಿತರ, ವೈಶ್ವಾ-

ನರ, ರುದ್ರಪಾಷಂಡ, ಶಿಲಿ, ಶಿಂಶುಮಾರ 

ಅರಿಪಿಶಾಚಿ, ವಿಶ್ವಾಮಿತ್ರ, ಗಾಲವ, ವಿ-

ಸ್ತರವಾದ ಸಂಗಮ, ಸರಸ್ವತಿ, ಭೈರವ 

ನರ ಋಣಮೋಚನ ಈ ಪರಿ ತೀರ್ಥವು 

ಪರಿಪರಿ ಉಂಟು ಪೆಸರು ಬಲ್ಲವರಾರು 

ನರನೊಮ್ಮೆ ಬಂದು ಸ್ನಾನ ಮಾಡೆ ಮತ್ತೆ ಕು-

ಳ್ಳಿರದೆ ವಟಾಶ್ವತ್ಥ ತರುವಿನ ನೆಳಲಲಿ 

ಕರವ ಮುಗಿದು ಮಾಡಿದಾ ನಿತ್ಯ ನೈಮಿತ್ಯ 

ಹರಿಹರಗರ್ಪಿತವೆಂದು ನುಡಿದರೆ 

ದುರಿತಗಳುದುರಿ ಪುಣ್ಯ ಶರಧಿಯೊಳು 

ತೆರಹಿಲ್ಲದೆ ಲೋಲಾಡುವರು 

ಧರಿಯೊಳಗಿದಕ್ಕೆಲ್ಲಿ ಎದುರುಗಾಣೆನು ಹರಿ 

ಹರರೂಪಾ ವಿಜಯವಿಠಲ ಪರಬೊಮ್ಮನು 

ಹರ ರೂಪಾ ತಾನೆ ಮತ್ತಾವನಾವನು ತಾಳಿದ ॥೪॥


 ಆದಿತಾಳ 


ಭೇದ ಜ್ಞಾನದಿಂದ ಆವರಿಸಿ ತಿಳಿದು 

ಸಾಧು ಗಳೊಡನೆ ಪ್ರಸಾದ ಮನಸಿನಲ್ಲಿ 

ಕ್ರೋಧವ ತೊರೆದು ಸಂಪಾದಿಸಿ ಭಕ್ತಿಪೂರ್ಣ 

ಬೋಧರ ಮತವಿಡಿದು ವೇದ ಶಾಸ್ತ್ರ ಸಮ್ಮತ 

ವಾದದ್ದೆ ಪತಿಕರಿಸಿ ಮೋದಾದಿಂದಲಿ ನಲಿದು 

ಗೋದಾವರಿ ಗಂಗೆ ಆದಿತ್ಯಸುತೆ ಮೊದ-

ಲಾದ ಕ್ಷೇತ್ರಕೆ ನಿಲ್ಲಾದೆ ನೂರುಸಾರಿ 

ಪೋದರೇನಯ್ಯಾ ಇಲ್ಲಿ ತಾ ಧರ್ಮಧರಿಸಿ, ಬಿಂ-

ದೋದಕ ದಿಂದ ಮಹತ್ತಾದ ಫಲವೀವದು 

ಮಾಧವ ಶಿರಿಧರ ವಿಜಯವಿಠಲ ವಿ -

ನೋದ ಮೂರುತಿ ಕ್ರೀಡೆ ಆದಿತ್ಯರು ಬಲ್ಲಾರೆ ॥೫॥


 ಜತೆ 


ಎಂತು ಗ್ರಹಿಸಾಲಾರದಂತೆ ತೋರುವ ಹರಿ 

ದಂತಿ ಚರ್ಮಾಂಬರ ವಿಜಯವಿಠಲರೇಯಾ ॥೬॥

*******

ಹರಿಹರ ಕ್ಷೇತ್ರದ ಪುರಾಣ : 

(ಸಂಗ್ರಹ)

 ಮುರಪುರಹರ ಲಕ್ಷ್ಮೀ ಪಾರ್ವತೀಕೇಲಿಲೋಲ 

 ಸ್ಫುರದಸಿತಸಿತಾಂಗಾಸಹ್ಯ ಚಕ್ರತ್ರಿಶೂಲ ।

 ಪರತರ ಗುರುಮೂರ್ತೆ ಪಾವನಾಪಾರಕೀರ್ತೇ 

 ಹರಿಹರ ತವ ಪಾದಾಂಭೋಜಯುಗ್ಮಂ ನತೋಸ್ಮಿ ॥

 

 ಅರ್ಥ :  ಮುರಹರನು , ಪುರಹರನೂ ಆದ ; ಲಕ್ಷ್ಮೀಯ ವಿಲಾಸದಲ್ಲೂ , ಪಾರ್ವತಿಯ ವಿಲಾಸದಲ್ಲೂ ಆಸಕ್ತನಾದ ಉಜ್ವಲವಾದ ಕಪ್ಪು ಬಿಳುಪು ಶರೀರವುಳ್ಳ , ಸಹಿಸಲಶಕ್ಯವಾದ ಚಕ್ರ , ತ್ರಿಶೂಲಗಳನ್ನುಳ್ಳ, ಸರ್ವೋತ್ತಮನೂ , ಉಪದೇಶಕನೂ ಆದ , ಪಾವನವೂ , ಅಪಾರವೂ ಆದ ಕೀರ್ತಿಯುಳ್ಳ, ಎಲೈ! ಹರಿ ಮತ್ತು ಹರನೇ ,ನಿನ್ನ ತಾವರೆಯಂತಹ ಎರಡು ಪಾದಗಳಿಗೆ ವಂದಿಸುವೆನು🙏.


 ವಿವರಣೆ : ಯಾವ ಒಬ್ಬ ದೇವತೆಯಿಂದಲೂ ತಾನು ಹತನಾಗದಂತೆ ಬ್ರಹ್ಮದೇವರಿಂದ ವರ ಪಡೆದ ' ಗುಹ ' ಎಂಬ ರಾಕ್ಷಸನನ್ನು ಸಂಹರಿಸಲು ಶ್ರೀ ವಿಷ್ಣುವು ಶಿವನ ಸಮೇತನಾಗಿ ಒಂದೇ ರೂಪದಲ್ಲಿ ಕಾಣಿಸಿಕೊಂಡು ಅವನನ್ನು ಸಂಹರಿಸಿದ ಸ್ಥಳವೆಂದು ಸ್ಕಾಂದಪುರಾಣೋಕ್ತ ' ಹರಿಹರ ' ಕ್ಷೇತ್ರದ ಮಹಾತ್ಮ್ಯದಲ್ಲಿ ಉಕ್ತವಾಗಿದೆ.


ಒಂದೇ ಮೂರುತಿಯಲ್ಲಿರುವ ಹರಿಹರರನ್ನು ಏಕಕಾಲಕ್ಕೆ ಸ್ತೋತ್ರಮಾಡಿರುವುದು ಶ್ರೀವಾದಿರಾಜರ ಅಪಾರ ಕೌಶಲಕ್ಕೆ ನಿದರ್ಶನವಾಗಿದೆ . ಹಿಂದೆ ' ಶಂಕರನಾರಾಯಣ' ಎಂಬ ಪದಕ್ಕೆ ಹೇಗೋ ಹಾಗೇ ಇಲ್ಲೂ ' ಹರಿಶ್ಚ ಹರಶ್ಚ ' ಎಂದು ದ್ವಂದ್ವಸಮಾಸ ಅಥವಾ ಹರಿಣಾ ಸಹಿತಃ ಹರಃ ಎಂಬ ಮಧ್ಯಮ ಪದ ಲೋಪೀ ತತ್ಪುರುಷ ಸಮಾಸವನ್ನಾಗಲೀ ಅರ್ಥಮಾಡಿಕೊಳ್ಳಬೇಕು. ಇಲ್ಲಿ ಇಬ್ಬರನ್ನೂ ಒಟ್ಟಾಗಿ ಸ್ತುತಿಸಿದರೂ ' ಅಭ್ಯರ್ಹಿತಂ ಪೂರ್ವಂ ' ಎಂಬ ನ್ಯಾಯದಿಂದ ಮೊದಲು ಉಲ್ಲೇಖಿತನಾಗಿರುವ ವಿಷ್ಣುವು ಸರ್ವೋತ್ತಮನೆಂದೂ , ಹರನು ತದಧೀನನೆಂದು ಭಾವ.


ಇನ್ನು ಈ ಕ್ಷೇತ್ರ ತುಂಗಭದ್ರಾನದಿಯ ತೀರದಲ್ಲಿದೆ. " ಗುಹಾರಣ್ಯ" ವೆಂದು ಇದರ ಪ್ರಾಚೀನ ಹೆಸರು ; ಒಂದೇ ಲಿಂಗದಲ್ಲಿ ಹರಿಹರರಿಬ್ಬರೂ ಪ್ರಕಟವಾಗಿದ್ದು , ಎಡಭಾಗ ವಿಷ್ಣು ರೂಪವೂ , ಬಲ ಭಾಗವು ಶಿವರೂಪವೂ ಆಗಿರುವ ಮೂರ್ತಿಯು ಇಲ್ಲಿದೆ. ಪರಶುರಾಮಕ್ಷೇತ್ರ ಶಂಕರನಾರಾಯಣದಂತೆ ಇದೂ ಹರಿಹರಾತ್ಮಕವಾದ ವಿಗ್ರಹ ; ಅಲ್ಲಿ ಲಿಂಗ ಮಾತ್ರವಿದ್ದರೆ , ಇಲ್ಲಿ ಮೂರ್ತಿಯೂ ಇರುವುದು ವಿಶೇಷ , 

ವಿಷ್ಣು ಭಾಗದಲ್ಲಿ ಮೇಲಿನ ಹಸ್ತದಲ್ಲಿ ಚಕ್ರವಿದ್ದೂ , ಕೆಳಗಿನ ಹಸ್ತದಲ್ಲಿ ತ್ರಿಶೂಲವಿದೆ . ಸ್ಕಾಂದಪುರಾಣದಲ್ಲಿ ಇದರ ಮಹಾತ್ಮ್ಯವು ಬಂದಿದ್ದು , ಅದರಂತೆ ಇಲ್ಲಿನ ನದಿಯಲ್ಲಿ ಬ್ರಹ್ಮಣ್ಯತೀರ್ಥ , ಭಾರ್ಗವತೀರ್ಥ , ನೃಸಿಂಹತೀರ್ಥ , ವಹ್ನಿತೀರ್ಥ , ಗಾಲವತೀರ್ಥ , ಚಕ್ರತೀರ್ಥ , ರುದ್ರಪಾದತೀರ್ಥ , ಪಾಪನಾಶನತೀರ್ಥ , ಪಿಶಾಚಮೋಚನಾತೀರ್ಥ , ಋಣಮೋಚನತೀರ್ಥ , ವಟಚ್ಛಾಯಾತೀರ್ಥ ಎಂಬ ಹನ್ನೊಂದು ತೀರ್ಥಗಳು ಇರುವಂತೆ ತಿಳಿಯುತ್ತದೆ .


ಶ್ರೀಹರಿಯು ಜಗತ್ಪಾಲಕ ಮತ್ತು ನಿರ್ದೋಷ , ಹರನು ಜಗತ್ಸಂಹಾರಕ ಎಂಬ ಲೋಕಪ್ರಸಿದ್ಧಿಯನ್ನು ಕಾಣಬಹುದು.


🙏 ಶ್ರೀಕೃಷ್ಣಾರ್ಪಣಮಸ್ತು 🙏

******