Audio by Mrs. Nandini Sripad
ಮೊದಲಕಲ್ಲು ಶ್ರೀಶೇಷದಾಸಾರ್ಯ ವಿರಚಿತ
ಶ್ರೀಹರಿಯ ಸ್ತೋತ್ರ ಸುಳಾದಿ
ರಾಗ ಅಠಾಣ
ಧ್ರುವತಾಳ
ಅರಹು ಮರುಹುಗಳಿಗೆ ಕಾರಣ ನೀನೆ ದೇವಾ
ನಿರುಪಮ ಮಹಿಮನೆ ನಿತ್ಯ ತೃಪ್ತ
ಪರಮಾಣುಗಳಿಗೆ ಕಾಲ ಕರ್ಮಾನುಸಾರದಿಂದ
ಎರಡು ದ್ವಾರದಿಂದ ಮುಖ್ಯ ನೀನೆ
ಅರಹು ಮರುಹು ಇತ್ತು ಜೀವರ್ಗೆ ಸುಖ ದುಃಖ
ಪರಿವ್ರಾತಗಳುಣಿಪ ನೇಮದಂತೆ
ಪರಮ ಸುಖಹೇತು ಅರುಹು ಎನ್ನಲಿ ಬೇಕು
ಪರಮ ದುಃಖಹೇತು ಮರಹು ಎನ್ನು ಈ
ತೆರವಾದ ಬಗೆಯಿಂದ ನಿನ್ನ ಹೊರತಾಗಿ
ಅರುಹು ಮರಹು ಎನ್ನ ಆಧೀನವೋ ?
ಅರುಹು ಮರಹು ಜೀವರಾಧೀನ ನೆಂದು ನುಡಿಯೆ
ಹರಿ ನಿನ್ನ ಕರ್ತೃತ್ವಕ್ಕೆ ಕೊರತೆ ಬಾಹದೆ
ವರಲುತಿವೆ ನೋಡು ಆ ವೇದ ಶಾಸ್ತ್ರಗಳು
ಸಿರಿಪತಿ ನಿನ್ನ ವ್ಯತಿರಿಕ್ತವಾಗಿ
ಹೊರಗೆ ಬಿಟ್ಟ ಶ್ವಾಸ ಒಳಗೆ ಕೊಂಬುವವರಿಲ್ಲ
ಸರಸಿಜ ಭವ ಹರ ಸುರರ ಮಧ್ಯ
ಸುರರಾದಿಗಳ ಧೊರಿಯೆ ಗುರುವಿಜಯವಿಠ್ಠಲರೇಯ
ಬರಿದೆ ಯಾತಕೆ ಎನ್ನ ದೂರುವದು ॥ 1 ॥
ಮಟ್ಟತಾಳ
ಹಿತಮಾಡಿ ನನಗೆ ಸಥಿಯಲಿ ಬೋಧಿಸಿದ
ಅತಿಶಯಗಳ ಸಕಲ ಮರದಿ ನೀನು ಎಂದು
ಮತಿವಂತನೆ ಎನ್ನ ಮೋಹಿಸಿದ್ಯೋ ನಿನ್ನ
ಚತುರತನಕೆ ನಾನು ನಮೊ ನಮೊ ನಮೊ ಎಂಬೆ ಯು -
ಕುತಿವಂತರ ಮಧ್ಯ ನಿನಗಿಂದಲಿ ಜಗದಿ
ಅತಿಶಯವಿಲ್ಲವೊ ಗುರುವಿಜಯವಿಠ್ಠಲ ನಿನ್ನ
ಯತಾರ್ಥವ ನಾನು ವರ್ಣಿಸಬಲ್ಲೆನೆ ॥ 2 ॥
ತ್ರಿವಿಡಿತಾಳ
ಒಳಗೊಂದು ಹೊರಗೊಂದು ನುಡಿವ ಜನರುಗಳ
ನೆಲಿಯಾದ ಪ್ರಿಯನೆಂದು ನುಡಿವರಯ್ಯಾ
ಇಳೆಯೊಳಗೀ ಮಾತು ಸಾಕ್ಷಿಯಾಗಿದೆ ನೋಡು
ಮಲಿನ ರಹಿತವಾದ ಕರುಣಿ ನೀನು
ಒಳಗೊಂದು ಹೊರಗೊಂದು ನುಡಿದು ಬರಿದೆ ಎನ್ನ
ಬಳಲಿಸಿ ನೋಡುವದು ಘನತೆ ಏನೋ
ಒಳಗೆ ವ್ಯಾಪಕನಾಗಿ ಸುರರಿಂದ ಪ್ರೇರಿಸದೆ
ಕಲಿಮುಖ ದನುಜರ ದ್ವಾರದಿಂದ
ಬಲವತ್ತರವಾದ ಅಜ್ಞಾನ ಪ್ರಕಟಿಸಿ ನೀ
ಮಲಿನ ಸಹಿತ ಕಾಮ ಕ್ರೋಧವಿತ್ತು ನಿ -
ರ್ಮಲವಾದ ಜ್ಞಾನವನ್ನು ತಿರೋಧಾನವ ಮಾಡಿ
ಜಲಜನಾಭನೆ ನೀನು ಸುಳಿಯದಲೇ
ನೆಲೆಯಾಗಿ ನಿಂದು ಕರ್ಮ ಕಾಲಾನುಸಾರವಾಗಿ
ನಳಿನನಾಭನೆ ಇನಿತು ನೀನೇ ಮಾಡಿ
ತಿಳಿಯದಾ ನರನಂತೆ ಮರದಿ ನೀನೆಂದು ಎನ್ನ
ಹಲವು ಪರಿಲಿ ನುಡಿದು ಹಂಗಿಸುವರೇ
ಶಿಲೆಯ ಪ್ರತಿಮೆಯಲ್ಲಿ ವರಶಾಪದ ಕೃತ್ಯ
ಶಿಲೆಯಾಧಿಷ್ಠಿತನಾದ ದೇವಗಲ್ಲದೆ
ಶಿಲೆಗೆ ಸಹಜವನ್ನು ಎಂದಿಗಾದರೂ ನೋಡ
ತಿಳಿವದು ಇದರಂತೆ ಎನ್ನ ಜ್ಞಾನ
ಚಲನ ಕೃತ್ಯವ ತೋರ್ಪ ಸೂತ್ರಧಾರನ ಕೈಯ್ಯ
ಚಲಿಸುವ ದಾರುಮಯ ಬೊಂಬೆಯನ್ನು
ತಿಳಿಯದ ನರನೊಬ್ಬ ಬರಿದೆ ದೂಷಿಸಲದಕೆ
ವಳಿತು ನಡತಿ ನಡಿಯಲೊಶವೆ ಹರಿಯೆ
ಚಲನಾದಿಗಳ ತೋರ್ಪ ಪುರುಷನಿಂದಲಿ ಅದಕ
ವಳಿತಾದ ಕೀರ್ತ್ಯಾಕೀರ್ತಿ ಬರುವದಯ್ಯಾ
ಒಳಗೆ ವ್ಯಾಪಕನಾಗಿ ದೈತ್ಯರಿಂದಲಿ ಎನಗೆ
ಮಲತ ಮರುಹು ಇತ್ತು ಯುಕುತಿಯಿಂದ
ಲೀಲೆ ಮಾಳ್ಪನಾಗಿ ನೀನೆ ಮರತೆ ಎಂದು
ಜಲಜ ನಯನ ಎನ್ನ ದೂರುವರೇ
ನಳಿನಸಂಭವಜನಕ ಗುರುವಿಜಯವಿಠ್ಠಲರೇಯ
ಮೂಲ ಕಾರಣ ನೀನೆ ಅರುಹು ಮರುಹುಗಳಿಗೆ ॥ 3 ॥
ಅಟ್ಟತಾಳ
ಲೋಕವತು ನೀನು ಲೌಕಿಕ ಮಾಳ್ಪದು ಥರವಲ್ಲ ಥರವಲ್ಲ
ಏಕಮೇವ ನಿನ್ನ ಮೋಹದ ಶಕುತಿಯು
ಲೋಕೇಶ ಮೊದಲಾದ ಸುರರು ಮೋಹಿಸುವರು
ಕಾಕು ನರನು ನಾನೆಂತು ದಾಟುವೆನು
ಗೋಕುಲಾಂಬುಧಿ ಚಂದ್ರ ಗುರುವಿಜಯವಿಠ್ಠಲರೇಯ
ಸಾಕಾರ ರೂಪನೇ ಸತತ ಮಂಗಳಕಾಯಾ ॥ 4 ॥
ಆದಿತಾಳ
ಪಾಹಿ ಪಾಹಿ ತವ ರೂಪಕ್ಕೆ ನಮೊ ನಮೊ
ಪಾಹಿ ಪಾಹಿ ತವ ಸುಗುಣಕ್ಕೆ ನಮೊ ನಮೊ
ಪಾಹಿ ಪಾಹಿ ತವ ಕ್ರೀಯಕ್ಕೆ ನಮೊ ನಮೊ
ಪಾಹಿ ಪಾಹಿ ತವ ಮೋಹಕ್ಕೆ ನಮೊ ನಮೊ
ಪಾಹಿ ಪಾಹಿ ಗುರುವಿಜಯವಿಠ್ಠಲರೇಯ
ಪಾಹಿ ಪಾಹಿ ಸದಾ ಅಪರಾಧವೆಣಿಸದೆ ॥ 5 ॥
ಜತೆ
ಭಕ್ತರ ವಿಷಯದಿ ಯುಕುತಿ ಮಾಡದಲಿರೊ
ಭಕ್ತವತ್ಸಲ ಗುರುವಿಜಯವಿಠ್ಠಲರೇಯ ॥
********